ಬ್ಲಾಕ್‍ಮೇಲ್ ತಂತ್ರಕ್ಕೆ ಬಗ್ಗಲ್ಲ… ಶಿಸ್ತು ಉಲ್ಲಂಘನೆ ಸಹಿಸಲ್ಲ
ಮೈಸೂರು

ಬ್ಲಾಕ್‍ಮೇಲ್ ತಂತ್ರಕ್ಕೆ ಬಗ್ಗಲ್ಲ… ಶಿಸ್ತು ಉಲ್ಲಂಘನೆ ಸಹಿಸಲ್ಲ

September 24, 2018

ಬೆಂಗಳೂರು: ಬ್ಲಾಕ್‍ಮೇಲ್ ತಂತ್ರಕ್ಕೆ ಬಗ್ಗುವುದಿಲ್ಲ. ಪಕ್ಷದ ಸಿಸ್ಟಂ ಉಲ್ಲಂಘಿಸಿದರೆ ಸಹಿಸುವುದಿಲ್ಲ ಎಂದು ಕಾಂಗ್ರೆಸ್‍ನ ಕರ್ನಾಟಕ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅತೃಪ್ತ ಶಾಸಕರಿಗೆ ಖಡಕ್ ಎಚ್ಚರಿಕೆ ನೀಡಿದರು.

ಕೆಪಿಸಿಸಿ ಕಚೇರಿಯಲ್ಲಿ ಭಾನುವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪಕ್ಷದಲ್ಲಿದ್ದುಕೊಂಡೇ ಶಿಸ್ತನ್ನು ಉಲ್ಲಂಘನೆ ಮಾಡಿದರೆ ಸಹಿಸಲು ಸಾಧ್ಯವಿಲ್ಲ. ಯಾರೇ ಆಗಲೀ ಒತ್ತಡ ಹೇರುವ ಮೂಲಕ ಬ್ಲಾಕ್ ಮೇಲ್ ತಂತ್ರ ಉಪಯೋಗಿಸಿದರೆ ಅದಕ್ಕೆ ಪಕ್ಷ ಎಂದಿಗೂ ಮಣಿಯುವುದಿಲ್ಲ ಎಂದರು.

ಬಿಜೆಪಿಯವರು ಅತ್ಯಂತ ಕೆಟ್ಟ ರಾಜಕಾರಣ ಮಾಡುತ್ತಿದ್ದಾರೆ. ನಮ್ಮ ಶಾಸಕರಿಗೆ ಯಡಿಯೂರಪ್ಪನವರು ಹಣದ ಆಮಿಷ ಒಡ್ಡಿದ್ದಾರೆ. ಇಂತಹ ರಾಜಕಾರಣವನ್ನು ಕರ್ನಾಟಕದ ಜನರು ಒಪ್ಪುವುದಿಲ್ಲ. 2019ರಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಅದಕ್ಕೆ ಮತ ದಾರರು ತಕ್ಕ ಉತ್ತರ ನೀಡುತ್ತಾರೆ ಎಂದರು.

ಬಿಜೆಪಿ ಯಾವುದೇ ಆಮಿಷ ಒಡ್ಡಿದರೂ ಅದಕ್ಕೆ ಮಣಿದು ಕಾಂಗ್ರೆಸ್‍ನ ಯಾವ ಶಾಸಕರೂ ರಾಜೀನಾಮೆ ನೀಡಿ ಬಿಜೆಪಿ ಸೇರುವುದಿಲ್ಲ. ಕಾಂಗ್ರೆಸ್ ಶಾಸಕರು ಪಕ್ಷ ಬಿಡುತ್ತಾರೆ ಎಂಬುದು ಕೇವಲ ವದಂತಿ ಎಂದು ವೇಣುಗೋಪಾಲ್ ಅವರು ಹೇಳಿದರು.

ನಂತರ ಖಾಸಗಿ ಹೋಟೆಲ್‍ನಲ್ಲಿ ನಡೆದ ಕೆಪಿಸಿಸಿ ಪದಾಧಿಕಾರಿಗಳು ಹಾಗೂ ಜಿಲ್ಲಾ ಅಧ್ಯಕ್ಷರ ಸಭೆಗೆ ವೇಣುಗೋಪಾಲ್ ತೆರಳಿದರು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅನುಸರಿಸಬೇಕಾದ ಕಾರ್ಯತಂತ್ರಗಳ ಬಗ್ಗೆ ಈ ಸಭೆಯಲ್ಲಿ ಚರ್ಚಿಸಲಾಯಿತು.

ಶಾಸಕ ಸುಧಾಕರ್‌ಗೆ ಸಿದ್ದರಾಮಯ್ಯ ತರಾಟೆ: ತಮ್ಮ ನಿವಾಸ `ಕಾವೇರಿ’ಗೆ ಶಾಸಕ ಡಾ. ಸುಧಾಕರ್
ಅವರನ್ನು ಕರೆಸಿಕೊಂಡ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ತರಾಟೆಗೆ ತೆಗೆದುಕೊಂಡರು. `ಏನಯ್ಯಾ ನಿನ್ನ ಕಥೆ, ಪಕ್ಷದಲ್ಲಿದ್ದುಕೊಂಡು ಹೈಕಮಾಂಡ್ ತೀರ್ಮಾನದ ವಿರುದ್ಧ ಹೋದರೆ ಹೇಗೆ? ಸರ್ಕಾರ ಉಳಿಸುವ ಜವಾಬ್ದಾರಿ ನನ್ನ ಮೇಲಿದೆ. ನೀನು ನನ್ನ ಜೊತೆಗಿದ್ದವನು. ನೀನೇ ಹೀಗೆ ಮಾಡಿದರೆ ಹೇಗೆ? ನೀನು ಹೀಗೆ ಮಾಡಿದರೆ ಬೇರೆಯವರು ನನ್ನ ಬಗ್ಗೆ ಏನ್ ತಿಳ್ಕೋತಾರೆ. ನಿನ್ನ ಸಮಸ್ಯೆ ಏನಿದ್ದರೂ ನಾನಿಲ್ವಾ? ಪಕ್ಷದ ಹೈಕಮಾಂಡ್ ಇಲ್ವಾ? ನೀನ್ ಮಾಡ್ತಾ ಇರೋದೇನು ಅಂತಾ ನನಗೆ ಗೊತ್ತಲ್ಲ ಅನ್ಕೋಬೇಡ. ಮೀಡಿಯಾಗಳಿಗೆ ಇನ್‍ಫರ್ಮೇಷನ್ ಕೊಟ್ಟು, ತಮಿಳ್ನಾಡಿಗೆ ಯಾಕೆ ಹೋದೆ’ ಎಂದು ಗರಂ ಆಗೇ ಪ್ರಶ್ನಿಸಿದ ಸಿದ್ದರಾಮಯ್ಯ, ನಿಮ್ಮಂತಹವರಿಂದ ನನಗೆ ಕೆಟ್ಟ ಹೆಸರು ಬರ್ತಾ ಇದೆ. ಇನ್ಮುಂದೆ ಈ ರೀತಿ ಆಗಬಾರದು ಎಂದು ಹೇಳಿದರು.

Translate »