ದುನಿಯಾ ವಿಜಯ್ ಸೇರಿ ನಾಲ್ವರ ಬಂಧನ
ಮೈಸೂರು

ದುನಿಯಾ ವಿಜಯ್ ಸೇರಿ ನಾಲ್ವರ ಬಂಧನ

September 24, 2018

ಬೆಂಗಳೂರು: ಜಿಮ್ ಟ್ರೈನರ್ ಅನ್ನು ಅಪಹರಿಸಿ, ಹಲ್ಲೆ ನಡೆಸಿದ ಆರೋಪದ ಮೇರೆಗೆ ಚಿತ್ರನಟ ದುನಿಯಾ ವಿಜಯ್ ಸೇರಿದಂತೆ ನಾಲ್ವರನ್ನು ಹೈಗ್ರೌಂಡ್ ಪೊಲೀಸರು ಶನಿವಾರ ರಾತ್ರಿ ಬಂಧಿಸಿದ್ದಾರೆ.

ದುನಿಯಾ ವಿಜಯ್‍ನ ಹಿಂದಿನ ಸ್ನೇಹಿತ ಜಿಮ್ ಟ್ರೈನರ್ ಪಾನಿಪೂರಿ ಕಿಟ್ಟಿ ಅವರ ಅಣ್ಣನ ಮಗ ಜಿಮ್ ಟ್ರೈನರ್ ಮಾರುತಿ ಗೌಡ ಅವರನ್ನು ಶನಿವಾರ ರಾತ್ರಿ ದುನಿಯಾ ವಿಜಯ್, ಅವರ ಸ್ನೇಹಿತರಾದ ಜಿಮ್ ಮಾಲೀಕ ಪ್ರಸಾದ್, ಮಣಿ ಮತ್ತು ಚಾಲಕ ಪ್ರಸಾದ್ ಅವರು ಅಪಹರಣ ಮಾಡಿ, ಹಲ್ಲೆ ನಡೆಸಿದ್ದರು. ಈ ನಾಲ್ವರನ್ನೂ ಹೈಗ್ರೌಂಡ್ ಪೊಲೀಸರು ಬಂಧಿಸಿ, ಇಂದು ರಾತ್ರಿ 8ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾ ಧೀಶ ಮಹೇಶ್ ಬಾಬು ಅವರ ಕೋರ ಮಂಗಲ ನಿವಾಸದಲ್ಲಿ ಹಾಜರುಪಡಿಸಲಾಗಿ ಎಲ್ಲರನ್ನೂ 14 ದಿನ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ದುನಿಯಾ ವಿಜಯ್ ಮತ್ತು ಸ್ನೇಹಿತರು ಈಗ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಇವರ ಜಾಮೀನು ಅರ್ಜಿ ನಾಳೆ (ಸೆ.24) ವಿಚಾರಣೆಗೆ ಬರಲಿದೆ.

ವಿವರ: ಬೆಂಗಳೂರಿನ ವಸಂತ ನಗರ ದಲ್ಲಿರುವ ಅಂಬೇಡ್ಕರ್ ಭವನದಲ್ಲಿ ಶನಿವಾರ ರಾತ್ರಿ `ಮಿ|| ಬೆಂಗಳೂರ್’ ಬಾಡಿ ಬಿಲ್ಡಿಂಗ್ ಸ್ಪರ್ಧೆ ಏರ್ಪಡಿಸಲಾಗಿತ್ತು. ಈ ಸ್ಪರ್ಧೆಗೆ ದುನಿಯಾ ವಿಜಯ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಕಾರ್ಯಕ್ರಮ ಮುಗಿಸಿ ವೇದಿಕೆ ಯಿಂದ ಇಳಿದ ವಿಜಯ್, ಅಲ್ಲಿ ನಿಂತಿದ್ದ ಮಾರುತಿ ಗೌಡರನ್ನು ಉದ್ದೇಶಿಸಿ `ಎಲ್ಲೋ ಪಾನಿಪೂರಿ ಕಿಟ್ಟಿ’ ಎನ್ನುತ್ತಾ ಅವಾಚ್ಯ ಪದ ಗಳನ್ನು ಬಳಸಿದ್ದಾರೆ ಎನ್ನಲಾಗಿದ್ದು, ಅದಕ್ಕೆ ಮಾರುತಿ ಗೌಡ ಕೂಡ ಪ್ರತ್ಯುತ್ತರ ನೀಡಿ ದ್ದಾರೆ. ಆಗ ಸಭಾಂಗಣದಿಂದ ಹೊರ ಹೋದ ವಿಜಯ್, ತನ್ನ ಸ್ನೇಹಿತರೊಂದಿಗೆ ಮತ್ತೆ ಒಳಗೆ ಬಂದು ಮಾರುತಿ ಗೌಡನ ಮೇಲೆ ಹಲ್ಲೆ ನಡೆಸಿ ಎಳೆದೊಯ್ದು, ತಮ್ಮ ರೇಂಜ್ ರೋವರ್ ಕಾರಿನಲ್ಲಿ ಅಪಹರಿಸಿ ಕೊಂಡು ಹೋಗಿದ್ದಾರೆ. ಈ ವಿಷಯ ತಿಳಿ ಯುತ್ತಿದ್ದಂತೆಯೇ ಮಾರುತಿ ಗೌಡ ಅವರ ಸ್ನೇಹಿತರು ಮತ್ತು ಪಾನಿಪೂರಿ ಕಿಟ್ಟಿ ಹೈಗ್ರೌಂಡ್ ಪೊಲೀಸ್ ಠಾಣೆಗೆ ಬಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಕಾರ್ಯ ಪ್ರವೃತ್ತರಾದ ಪೊಲೀ ಸರು, ಮೊಬೈಲ್ ಮೂಲಕ ದುನಿಯಾ ವಿಜಯ್ ಅವರನ್ನು ಸಂಪರ್ಕಿಸಿ ಮಾರುತಿ ಗೌಡನನ್ನು ಕರೆತರು ವಂತೆ ತಿಳಿಸಿದ್ದಾರೆ. ಒಂದು ಗಂಟೆ ಕಳೆದರೂ ವಿಜಯ್ ಬಾರದೇ ಇದ್ದಾಗ ಠಾಣೆಗೆ ಬಂದ ಎಸಿಪಿ ರವಿಕುಮಾರ್ ಅವರು ಮತ್ತೆ ದುನಿಯಾ ವಿಜಯ್‍ಗೆ ಕರೆ ಮಾಡಿ 15 ನಿಮಿಷಗಳ ಒಳಗಾಗಿ ಠಾಣೆಗೆ ಮಾರುತಿ ಗೌಡನನ್ನು ಕರೆತರದಿದ್ದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂದು ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ದುನಿಯಾ ವಿಜಯ್ ಅವರು ಮಾರುತಿ ಗೌಡನನ್ನು ಠಾಣೆಗೆ ಕರೆತಂದಿದ್ದಾರೆ.

ಅಷ್ಟರಲ್ಲೇ ಪಾನಿಪೂರಿ ಕಿಟ್ಟಿ ಕಡೆಯ ವರು ಠಾಣೆ ಮುಂದೆ ಜಮಾಯಿಸಿದ್ದರು. ಆಗ ದುನಿಯಾ ವಿಜಯ್ ಮತ್ತು ಪಾನಿ ಪೂರಿ ಕಿಟ್ಟಿ ನಡುವೆ ವಾಗ್ವಾದ ಏರ್ಪಟ್ಟು ಕೈ-ಕೈ ಮಿಲಾಯಿಸುವ ಹಂತ ತಲುಪಿದಾಗ ಪೊಲೀಸರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಠಾಣೆಯ ಮುಂದೆ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾದ ಹಿನ್ನೆಲೆ ಯಲ್ಲಿ ಕೆಎಸ್‍ಆರ್‍ಪಿ ತುಕಡಿಯನ್ನು ನಿಯೋ ಜಿಸಲಾಯಿತು. ಅಂಬೇಡ್ಕರ್ ಭವನದಿಂದ ಅಪಹರಿಸಿದ್ದ ಮಾರುತಿ ಗೌಡನನ್ನು ಸುಮಾರು ಒಂದೂವರೆ ಗಂಟೆ ಕಾಲ ಕಾರಿನಲ್ಲೇ ಸುತ್ತಾಡಿಸಿ ತೀವ್ರವಾಗಿ ಹಲ್ಲೆ ನಡೆಸಲಾಯಿತು. ಪೊಲೀಸರಿಂದ ಕರೆ ಬರುತ್ತಿದ್ದಂತೆಯೇ ರಾಜರಾಜೇ ಶ್ವರಿ ನಗರದಲ್ಲಿ ಕಾರನ್ನು ನಿಲ್ಲಿಸಿ ಮಾರುತಿ ಗೌಡನನ್ನು ಕೆಳಗಿಳಿಸಿ ಕೊಲೆ ಬೆದರಿಕೆ ಹಾಕಿ `ನನ್ನನ್ನು ವಿಜಯ್ ಅವರ ಅಭಿಮಾನಿ ಸಂಘದವರು ಹೊಡೆದರು. ಆಗ ವಿಜಯ್ ಸರ್ ರಕ್ಷಣೆ ಮಾಡಿ ಕರೆತಂದರು’ ಎಂದು ಹೇಳಿಸಿ ಅದನ್ನು ಮೊಬೈಲ್‍ನಲ್ಲಿ ರೆಕಾರ್ಡ್ ಮಾಡಲಾಯಿತು ಎಂದು ಹೇಳಲಾಗಿದೆ. ತೀವ್ರವಾಗಿ ಗಾಯಗೊಂಡಿದ್ದ ಜಿಮ್ ಟ್ರೈನರ್ ಮಾರುತಿ ಗೌಡನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪಾನಿಪೂರಿ ಕಿಟ್ಟಿ ನೀಡಿದ ದೂರಿನನ್ವಯ ದುನಿಯಾ ವಿಜಯ್ ಮತ್ತು ಸ್ನೇಹಿತರ ವಿರುದ್ಧ ಭಾರತ ದಂಡ ಸಂಹಿತೆ 365, 342, 325 ಮತ್ತು 506ರಡಿ ಎಫ್‍ಐಆರ್ ದಾಖಲಿಸಲಾಗಿದೆ.

ದುನಿಯಾ ವಿಜಯ್ ಬಂಧನದ ಸುದ್ದಿ ಹರಡುತ್ತಿದ್ದಂತೆಯೇ ಹೈಗ್ರೌಂಡ್ ಪೊಲೀಸ್ ಠಾಣೆ ಮುಂದೆ ಇಂದು ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾದ ಹಿನ್ನೆಲೆಯಲ್ಲಿ ವಿಜಯ್ ಮತ್ತು ಸ್ನೇಹಿತರನ್ನು ಪೊಲೀಸರು ವಯ್ಯಾಲಿಕಾವಲ್ ಪೊಲೀಸ್ ಠಾಣೆಗೆ ಸ್ಥಳಾಂತರಿಸಿ ದರು. ಅಲ್ಲಿ ವಿಜಯ್‍ನ ಈ ಹಿಂದಿನ ಪ್ರಕರಣಗಳೂ ಸೇರಿದಂತೆ ಹಲವಾರು ವಿಚಾರಗಳ ಬಗ್ಗೆ ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದರು ಎನ್ನಲಾಗಿದೆ. ರಾತ್ರಿವರೆಗೂ ವಿಚಾರಣೆ ನಡೆಸಿದ ಪೊಲೀಸರು, ರಾತ್ರಿ 8.30ರಲ್ಲಿ ವಿಜಯ್ ಮತ್ತಿತರರನ್ನು ನ್ಯಾಯಾಧೀಶರ ಮನೆಗೆ ಹಾಜರುಪಡಿಸಿದರು. ದುನಿಯಾ ವಿಜಯ್ ಮತ್ತು ಪಾನಿಪೂರಿ ಕಿಟ್ಟಿ ಈ ಹಿಂದೆ ಸ್ನೇಹಿತರಾಗಿದ್ದು, ಪಾನಿಪೂರಿ ಕಿಟ್ಟಿ ಅವರು ವಿಜಯ್‍ನ ಜಿಮ್ ಟ್ರೈನರ್ ಆಗಿದ್ದರು. `ಮಾಸ್ತಿಗುಡಿ’ ಚಿತ್ರದ ಚಿತ್ರೀಕರಣದ ವೇಳೆ ಜಿಮ್ ಕಿಟ್ಟಿಯ ಶಿಷ್ಯಂದಿರೇ ಆದ ಉದಯ್ ಮತ್ತು ಅನಿಲ್ ಅವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆಯ ನಂತರ ಇವರಿಬ್ಬರ ಸಂಪರ್ಕ ಕಡಿತಗೊಂಡಿತ್ತು ಎಂದು ಹೇಳಲಾಗಿದೆ. ಇದೇ ದ್ವೇಷದಿಂದ ದುನಿಯಾ ವಿಜಯ್ ಅವರು ತಮ್ಮ ಸ್ನೇಹಿತರೊಡಗೂಡಿ ಪಾನಿಪೂರಿ ಕಿಟ್ಟಿಯ ಅಣ್ಣನ ಮಗ ಮಾರುತಿ ಗೌಡನನ್ನು ಅಪಹರಿಸಿ ಹಲ್ಲೆ ನಡೆಸಿದರು ಎಂದು ಹೇಳಲಾಗಿದೆ.

Translate »