ಡಬ್ಲಿನ್: ಡಬ್ಲಿನ್‍ನಲ್ಲಿ ನಡೆದ ಐರ್ಲೆಂಡ್ ವಿರುದ್ಧದ ದ್ವಿತೀಯ ಟಿ20 ಪಂದ್ಯದಲ್ಲಿ ಭಾರತ 143 ರನ್‍ಗಳ ಭರ್ಜರಿ ಜಯ ಗಳಿಸಿದೆ.
ಎರಡು ಟಿ20 ಪಂದ್ಯಗಳಲ್ಲಿ 2-0 ಯೊಂದಿಗೆ ಸರಣಿಯನ್ನು ತನ್ನದಾಗಿಸಿಕೊಂಡಿತು. ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ ಭಾರತ ನಿಗದಿತ 20 ಓವರ್‍ಗಳಲ್ಲಿ 4 ವಿಕೆಟ್ ನಷ್ಟಕ್ಕೆ 213 ರನ್ ಕಲೆ ಹಾಕಿತು. 214 ರನ್ ಟಾರ್ಗೆಟ್ ಬೆನ್ನತ್ತಿದ ಐರ್ಲೆಂಡ್ 12.3 ಓವರ್‍ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಕೇವಲ 70 ರನ್ ಕಲೆ ಹಾಕಲಷ್ಟೇ ಶಕ್ತವಾಯಿತು. ಟಾಸ್ ಸೋತು ಬ್ಯಾಟಿಂಗ್‍ಗೆ ಇಳಿದ ಭಾರತ, ಆರಂಭ ದಲ್ಲೇ ನಾಯಕ ವಿರಾಟ್ ಕೊಹ್ಲಿ ವಿಕೆಟ್ ಕಳೆದುಕೊಂಡಿತು. ಆದರೆ ಮೊದಲ ಟಿ20 ಪಂದ್ಯದಲ್ಲಿ ಅವಕಾಶ ವಂಚಿತರಾಗಿದ್ದ ಕೆ.ಎಲ್ ರಾಹುಲ್, ದ್ವಿತೀಯ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಸಿಡಿಸಿ ಸಂಭ್ರಮಿಸಿದರು. 36 ಎಸೆತಗಳನ್ನು ಎದುರಿಸಿದ ರಾಹುಲ್ 3 ಬೌಂಡರಿ ಮತ್ತು 6 ಸಿಕ್ಸರ್ ನೆರವಿನಿಂದ 70 ರನ್ ಸಿಡಿಸಿ ಔಟಾದರು. ರಾಹುಲ್ ಬೆನ್ನಲೇ ರೋಹಿತ್ ಶರ್ಮಾ ವಿಕೆಟ್ ಕೈ ಚೆಲ್ಲಿದರು. ನಂತರ ಬಂದ ಸುರೇಶ್ ರೈನಾ 45 ಎಸೆತಗಳಲ್ಲಿ 5 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಿಂದ 69ರನ್ ಗಳ ಅಮೂಲ್ಯ ಕಾಣ ಕೆ ನೀಡಿದರು. ಅಂತಿಮ ಹಂತದಲ್ಲಿ ಮನೀಶ್ ಪಾಂಡೆ ಜೊತೆಗೂಡಿದ ಹಾರ್ದಿಕ್ ಪಾಂಡ್ಯ ತಂಡದ ಮೊತ್ತ ಇನ್ನೂರರ ಗಡಿದಾಟಿಸಿದರು. ಬೃಹತ್ ಮೊತ್ತ ಬೆನ್ನು ಹತ್ತಿದ ಐರ್ಲೆಂಡ್ ಭಾರತ ಬೌಲಿಂಗ್ ದಾಳಿಗೆ ತತ್ತರಿಸಿತು. ಕುಲದೀಪ್ ಯಾದವ್ ಹಾಗೂ ಯಜುವೇಂದ್ರ ಚಹಾಲ್ ಸ್ಪಿನ್ ಮೋಡಿಗೆ ಐರ್ಲೆಂಡ್ ಬ್ಯಾಟ್ಸ್‍ಮನ್ ಗಳು ಪೆವಿಲಿಯನ್ ಪರೇಡ್ ನಡೆಸಿದರು.
ಕುಲದೀಪ್ ಯಾದವ್ ಮತ್ತು ಯಜುವೇಂದ್ರ ಚಹಾಲ್ ತಲಾ ಮೂರು ವಿಕೆಟ್ ಕಬಳಿಸಿದರೆ, ಉಮೇಶ್ ಯಾದವ್ 2 ವಿಕೆಟ್ ಪಡೆದು, ಮಿಂಚಿದರು.