ವಿಜ್ಞಾನ-ತಂತ್ರಜ್ಞಾನದಲ್ಲಿ ಸಾಧನೆ ಆಗಿದ್ದರೂ ಉನ್ನತ ಶಿಕ್ಷಣ ಪಡೆಯುವರ ಸಂಖ್ಯೆ ಕಡಿಮೆ ಉನ್ನತ ಶಿಕ್ಷಣ ಸಚಿವ ಜಿಟಿಡಿ ವಿಷಾದ
ಮೈಸೂರು

ವಿಜ್ಞಾನ-ತಂತ್ರಜ್ಞಾನದಲ್ಲಿ ಸಾಧನೆ ಆಗಿದ್ದರೂ ಉನ್ನತ ಶಿಕ್ಷಣ ಪಡೆಯುವರ ಸಂಖ್ಯೆ ಕಡಿಮೆ ಉನ್ನತ ಶಿಕ್ಷಣ ಸಚಿವ ಜಿಟಿಡಿ ವಿಷಾದ

June 30, 2018
  • ಬೆಳಗಾವಿ ವಿಟಿಯು ಸಂಸ್ಥಾಪನಾ ದಿನಾಚರಣೆ

ಬೆಳಗಾವಿ: ದೇಶದಲ್ಲಿ ವಿಜ್ಞಾನ-ತಂತ್ರಜ್ಞಾನ ಸಾಕಷ್ಟು ಅಭಿವೃದ್ಧಿಯಾಗಿದ್ದರೂ ಶೇ.25ರಷ್ಟು ವಿದ್ಯಾರ್ಥಿಗಳು ಮಾತ್ರ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರು, ಆಸಕ್ತ ಪ್ರತಿಯೊಬ್ಬ ವಿದ್ಯಾರ್ಥಿಗೂ ಉನ್ನತ ಶಿಕ್ಷಣ ಪಡೆಯುವ ಅವಕಾಶ ಕಲ್ಪಿಸಿಕೊಡುವುದು ಸರ್ಕಾರದ ಜವಾಬ್ದಾರಿಯಾಗಿದೆ. ಇದಕ್ಕೆ ಪ್ರಾಂಶುಪಾಲರು, ಪ್ರಾಧ್ಯಾಪಕರ ಸಹಕಾರವೂ ಬಹಳ ಮುಖ್ಯ ಎಂದು ಹೇಳಿದರು.

ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ(ವಿಟಿಯು)ದ 20ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಉನ್ನತ ಶಿಕ್ಷಣ ಸಚಿವನಾಗಿ ಜವಾಬ್ದಾರಿ ವಹಿಸಿಕೊಂಡ ನಂತರ ಭಾಗವಹಿಸುತ್ತಿರುವ ಮೊದಲ ಕಾರ್ಯಕ್ರಮ ಇದಾಗಿದೆ. ಅದರಲ್ಲೂ ವಿಶ್ವೇಶ್ವರಯ್ಯ ಅವರ ಹೆಸರಿನ ತಾಂತ್ರಿಕ ವಿಶವಿದ್ಯಾನಿಲಯದ ಸಮಾರಂಭದಲ್ಲಿ ಪಾಲ್ಗೊಂಡಿರುವುದು ಸಂತಸ ಹೆಚ್ಚಿಸಿದೆ. ಇಲ್ಲಿ ಮಾಜಿ ರಾಷ್ಟ್ರಪತಿ ದಿವಂಗತ ಕೆಪಿಜೆ ಅಬ್ದುಲ್ ಕಲಾಂ `ಜ್ಞಾನ ಸಂಗಮ’ ಎಂದು ನಾಮಕರಣ ಮಾಡಿರುವುದು ಸೂಕ್ತವಾಗಿದೆ. ಇಂತಹ ಮಹನೀಯರನ್ನು ಸ್ಮರಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.

ವಿಜ್ಞಾನ ಹಾಗೂ ತಂತ್ರಜ್ಞಾನದಲ್ಲಿ ದೇಶ ಸಾಕಷ್ಟು ಪ್ರಗತಿ ಸಾಧಿಸಿದೆ. ಆದರೆ ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಶೇ.25 ಮಾತ್ರ. ಈ ಬಗ್ಗೆ ವಿಶ್ಲೇಷಿಸಿದಾಗ ಉದ್ಯೋಗ ಸಿಗದಿರುವ ಕಾರಣ ಉನ್ನತ ಶಿಕ್ಷಣ ಪಡೆಯುವವರು ಕಡಿಮೆಯಾಗಿದ್ದಾರೆ ಎಂದು ತಿಳಿದುಬಂದಿದೆ. ವಿದೇಶಗಳಲ್ಲಿ ಶೇ.75ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ.

ಕರ್ನಾಟಕದಲ್ಲಿ 30 ವಿವಿ, 2431 ಕಾಲೇಜು ಸೇರಿದಂತೆ ದೇಶದಲ್ಲಿ ಒಟ್ಟು 799 ವಿವಿ ಹಾಗೂ 40 ಸಾವಿರಕ್ಕೂ ಹೆಚ್ಚು ಕಾಲೇಜುಗಳಿವೆ. ಆದರೂ ಜಾಗತಿಕ ಮಟ್ಟದಲ್ಲಿ ದೇಶ ಶಿಕ್ಷಣದಲ್ಲಿ ಹಿಂದುಳಿದಿದೆ. ಸರ್ಕಾರಿ ಕಾಲೇಜುಗಳಿಗೆ ಎಲ್ಲಾ ರೀತಿಯ ಸೌಲಭ್ಯವಿದ್ದರೂ ಶಿಕ್ಷಣ ಗುಣಮಟ್ಟದಲ್ಲಿ ಖಾಸಗಿ ಕಾಲೇಜುಗಳೇ ಮುಂದಿವೆ. ಈ ವೈಫಲ್ಯದ ಬಗ್ಗೆ ನಾವೆಲ್ಲಾ ಪರಾಮರ್ಶೆ ಮಾಡಿಕೊಳ್ಳಬೇಕೆಂದು ಅವರು ಹೇಳಿದರು.

ಪ್ರಾಂಶುಪಾಲರು, ಉಪನ್ಯಾಸಕರ ಹುದ್ದೆ ಭರ್ತಿ ಹಾಗೂ ಯುಜಿಸಿ 7ನೇ ವೇತನ ಆಯೋಗದ ವೇತನ ನೀಡುವ ನಿಟ್ಟಿನಲ್ಲಿ ಇಲಾಖೆಯ ಕಾರ್ಯದರ್ಶಿಗಳೊಂದಿಗೆ ಚರ್ಚಿಸಿದ್ದೇನೆ. ಉನ್ನತ ಶಿಕ್ಷಣದ ಅಭಿವೃದ್ಧಿಗಾಗಿ ಸರ್ಕಾರ ಎಲ್ಲಾ ರೀತಿಯ ಸೌಲಭ್ಯ ನೀಡಲು ಸಿದ್ದವಿದೆ. – ಜಿ.ಟಿ.ದೇವೇಗೌಡ, ಉನ್ನತ ಶಿಕ್ಷಣ ಸಚಿವ

ಹಿಂದೆ ಶಿಕ್ಷಕರು ನಡೆದುಕೊಂಡು ಅಥವಾ ಸೈಕಲ್‍ನಲ್ಲಿ ಶಾಲಾ-ಕಾಲೇಜುಗಳಿಗೆ ಬರುತ್ತಿದ್ದರು. ಯಾವುದೇ ರೀತಿಯ ಸೌಲಭ್ಯವಿಲ್ಲದಿದ್ದರೂ ಸೇವಾ ಮನೋಭಾವದಿಂದ ಕಲಿಸುತ್ತಿದ್ದರು. ಅಂತಹ ತ್ಯಾಗಜೀವಿಗಳ ನೆರಳಿನಲ್ಲಿ ಕಲಿತುಬಂದಿರುವ ನೀವೆಲ್ಲಾ ಒಂದು ಕ್ಷಣ ತಮ್ಮ ಗುರುಗಳನ್ನು ಸ್ಮರಿಸಿಕೊಂಡು, ಆತ್ಮಾವಲೋಕನ ಮಾಡಿಕೊಳ್ಳಬೇಕು. ತಮ್ಮ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಪ್ರಾಮಾಣ ಕವಾಗಿ ಶ್ರಮಿಸಬೇಕೆಂದು ತಿಳಿಹೇಳಿದ ಸಚಿವರು, ಶೈಕ್ಷಣ ಕ ಕ್ಷೇತ್ರದಲ್ಲಿರುವ ಸಮಸ್ಯೆಗಳ ಬಗ್ಗೆ ನನಗೆ ತಿಳಿದಿದೆ. ಉದ್ಯೋಗ ಸಿಗದ ಕಾರಣಕ್ಕೆ ಉನ್ನತ ಶಿಕ್ಷಣ ಪಡೆಯುವವರ ಸಂಖ್ಯೆ ಕಡಿಮೆಯಾಗಿದ್ದರೆ ಈ ಬಗ್ಗೆ ಚಿಂತನೆ ನಡೆಸಬೇಕು. ಪ್ರತಿಷ್ಟಿತ ಕಂಪನಿಗಳ ಉದ್ಯೋಗಿಗಳಿಗಿರುವ ಕೌಶಲ್ಯವನ್ನು ವಿದ್ಯಾರ್ಥಿಗಳಿಗೆ ಕಲಿಸುವ ಪ್ರಯತ್ನ ಮಾಡಬೇಕು. ತಜ್ಞರಿಂದ ಉಪನ್ಯಾಸ ಕೊಡಿಸಬೇಕು. ಜೊತೆಗೆ ಪ್ರಾಧ್ಯಾಪಕರಿಗೂ ಅವಶ್ಯವಾದ ತರಬೇತಿ ಕಲ್ಪಿಸಬೇಕು. ಗ್ರಾಮೀಣ ಭಾಗದವರು ಅದರಲ್ಲೂ ಹೆಣ್ಣು ಮಕ್ಕಳು ಹೆಚ್ಚಾಗಿ ಉನ್ನತ ಶಿಕ್ಷಣ ಪಡೆಯುವಂತಾಗಬೇಕು. ಯಾವುದೇ ಸರ್ಕಾರವಿರಲಿ ಶೈಕ್ಷಣ ಕ ಕ್ಷೇತ್ರದ ಅಭಿವೃದ್ಧಿಗೆ ನಿರ್ಲಕ್ಷ್ಯವಹಿಸುವುದಿಲ್ಲ. ಸರ್ಕಾರದೊಂದಿಗೆ ಗುರುವರ್ಗವೂ ಸಹಕರಿಸಬೇಕೆಂದು ತಿಳಿಸಿದರು.

ಬೆಳಗಾವಿಯೊಂದಿಗೆ ನಂಟಿದೆ: ನಾನು ಹಳ್ಳಿಗನಾದರೂ ಸುಮಾರು 20 ವರ್ಷಗಳ ಕಾಲ ಸಹಕಾರ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದೇನೆ. ಬೆಳಗಾವಿಯಲ್ಲಿ ಸಹಕಾರ ತರಬೇತಿ ಸೌಕರ್ಯವಿಲ್ಲ ಎಂದು ಡಾ.ನಂಜುಂಡಪ್ಪ ಅವರ ವರದಿಯಲ್ಲಿ ಉಲ್ಲೇಖವಾಗಿತ್ತು. ಹಾಗಾಗಿ ನಾನು ಸಹಕಾರ ಮಂಡಲದ ಅಧ್ಯಕ್ಷನಾಗಿದ್ದಾಗ ಬೆಳಗಾವಿಯಲ್ಲಿ ಸಹಕಾರ ತರಬೇತಿ ಆರಂಭಿಸಿ, ಒಂದು ಸುಂದರ ಕಟ್ಟಡವನ್ನೂ ನಿರ್ಮಿಸಲಾಯಿತು. ಆದ್ದರಿಂದ ನನಗೂ ಬೆಳಗಾವಿಗೂ ಹಳೆಯ ನಂಟಿದೆ ಎಂದು ಜಿಟಿಡಿ ಸ್ಮರಿಸಿಕೊಂಡರು.

ರಾಜ್ಯಪಾಲರಾದ ವಜುಬಾಯಿ ರೂಢಾಬಾಯಿ ವಾಲಾ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವಿವಿಯ ಕುಲಪತಿ ಪ್ರೊ.ಕರಿಸಿದ್ದಪ್ಪ, ವಿಶ್ರಾಂತ ಕುಲಪತಿಗಳು, ಪ್ರಾಧ್ಯಾಪಕರು ಮತ್ತಿತರರು ಉಪಸ್ಥಿತರಿದ್ದರು.

Translate »