ಸೇವೆ ವಿಸ್ತರಣೆಗೆ ಒತ್ತಾಯಿಸಿ ಸಂಗೀತ ವಿವಿ ಬೋಧಕ, ಬೋಧಕೇತರ ಸಿಬ್ಬಂದಿ ಪ್ರತಿಭಟನೆ
ಮೈಸೂರು

ಸೇವೆ ವಿಸ್ತರಣೆಗೆ ಒತ್ತಾಯಿಸಿ ಸಂಗೀತ ವಿವಿ ಬೋಧಕ, ಬೋಧಕೇತರ ಸಿಬ್ಬಂದಿ ಪ್ರತಿಭಟನೆ

June 30, 2018

ಮೈಸೂರು:  ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯದ ತಾತ್ಕಾಲಿಕ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ತಮ್ಮ ಸೇವೆಯನ್ನು ಮುಂದುವರಿಸಬೇಕೆಂದು ಒತ್ತಾಯಿಸಿ, ಪ್ರತಿಭಟನೆ ನಡೆಸಿದರು.

ಮೈಸೂರಿನ ಜೆಎಲ್‍ಬಿ ರಸ್ತೆಯಲ್ಲಿರುವ ಸಂಗೀತ ವಿವಿ ಮುಂಭಾಗ ಶುಕ್ರವಾರ ಪ್ರತಿಭಟನೆ ನಡೆಸಿದ ತಾತ್ಕಾಲಿಕ ಬೋಧಕರು ಹಾಗೂ ಸಾಥಿದಾರರು, ಕಳೆದ 8 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ನಮಗೆ ಯಾವುದೇ ಮುನ್ಸೂಚನೆ ನೀಡದೆ, 2018-19ನೇ ಸಾಲಿಗೆ ಎಲ್ಲಾ ವಿಭಾಗಗಳ ಅಧ್ಯಾಪಕರು ಹಾಗೂ ಸಾಥಿದಾರರ ನೇಮಕಕ್ಕೆ ಪ್ರಕ್ರಿಯೆ ಆರಂಭಿಸುವ ಮೂಲಕ ನಮಗೆಲ್ಲಾ ಅನ್ಯಾಯ ಮಾಡುತ್ತಿದ್ದಾರೆಂದು ಆರೋಪಿಸಿ, ಘೋಷಣೆಗಳನ್ನು ಕೂಗಿದರು.

ಸದ್ಯ 23 ಬೋಧಕರು ಹಾಗೂ 7 ಮಂದಿ ಸಾಥಿದಾರರು ಕರ್ತವ್ಯ ನಿರ್ವಹಿಸುತ್ತಿದ್ದು, ಕೇವಲ 6 ತಿಂಗಳ ಕಾಲ ಸೇವೆಯನ್ನು ವಿಸ್ತರಿಸಿ, ಹೊಸದಾಗಿ ನೇಮಕಕ್ಕೆ ಪ್ರಕ್ರಿಯೆ ಕೈಗೊಳ್ಳಲಾಗಿದೆ. ಸರ್ವಮಂಗಳಬಾಯಿ ಅವರು ಕುಲಪತಿಯಾಗಿದ್ದ ಸಂದರ್ಭದಲ್ಲಿ ಸಿಂಡಿಕೇಟ್ ಸಭೆಯ ಮುಂದಿಟ್ಟು, ನಮ್ಮ ಸೇವೆಯನ್ನು ವಿಸ್ತರಿಸುತ್ತಿದ್ದರು. ಆದರೆ ಈಗಿರುವ ಪ್ರಭಾರ ಕುಲಪತಿ ಪ್ರೊ.ಆರ್.ರಾಜೇಶ್ ಅವರು ಯಾವುದೇ ಮುನ್ಸೂಚನೆ ನೀಡದೆ, ಆತುರದ ನಿರ್ಧಾರ ತೆಗೆದುಕೊಂಡಿದ್ದಾರೆ. 8 ವರ್ಷಗಳಿಂದ ಕಲಾ ಪ್ರದರ್ಶನಗಳನ್ನು ತೊರೆದು, ವಿವಿಯಲ್ಲಿ ದುಡಿರುವ ನಮಗೆ ಅನ್ಯಾಯವಾಗಿದೆ. ಹೊಸ ನೇಮಕಾತಿ ಪ್ರಕ್ರಿಯೆಯಲ್ಲಿ ಪ್ರಸ್ತುತ ಸೇವೆಯಲ್ಲಿರುವವರನ್ನು ಕೈಬಿಟ್ಟರೆ, ನಮ್ಮ ಬದುಕು ಬೀದಿಗೆ ಬೀಳಲಿದೆ. ಹೊಸಬರ ನೇಮಕ ಪ್ರಕ್ರಿಯೆ ಕೈಬಿಟ್ಟು, ನಮಗೆ ಸೇವೆ ಮುಂದುವರಿಸಲು ಅವಕಾಶ ನೀಡಬೇಕೆಂದು ಪ್ರತಿಭಟನಾನಿರತರು ಆಗ್ರಹಿಸಿದರು.

ಮನವಿ ಸ್ವೀಕರಿಸಿ ಪ್ರತಿಕ್ರಿಯಿಸಿದ ಸಂಗೀತ ವಿವಿ ಪ್ರಭಾರ ಕುಲಪತಿ ಪ್ರೊ.ಆರ್.ರಾಜೇಶ್, ವಿವಿ ನಿಯಮಾನುಸಾರ ಅತಿಥಿ ಉಪನ್ಯಾಸಕರನ್ನು ಪ್ರತಿವರ್ಷ ಹೊಸದಾಗಿ ನೇಮಕ ಮಾಡಿಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ಪ್ರಕಟಣೆ ಹೊರಡಿಸಿ, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹಾಗೆಯೇ ಪ್ರಸ್ತುತ ಸೇವೆಯಲ್ಲಿರುವವರೂ ಅರ್ಜಿ ಸಲ್ಲಿಸಿದ್ದಾರೆ. ಎಲ್ಲರೂ ಸಂದರ್ಶನದಲ್ಲಿ ಭಾಗವಹಿಸಲಿ, ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ತಬಲ ವಿಭಾಗದ ಸಹ ಪ್ರಾಧ್ಯಾಪಕ ಡಾ.ದುಂಡಯ್ಯ, ಉಪನ್ಯಾಸಕರಾದ ನಾರಾಯಣ, ಗಣೇಶ್, ವೈಷ್ಣವಿ ಹಾನಗಲ್(ಗಂಗೂಬಾಯಿ ಹಾನಗಲ್ ಅವರ ಮೊಮ್ಮಗಳು), ಡಾ.ಶಿವಲೀಲಾ ಸಿದ್ಧವೀರ್, ನಯನ, ಸುರಭಿ, ಡಾ.ಚೇತನ ರಾಧಕೃಷ್ಣ, ಪುಷ್ಪಾ, ಡಾ.ಭುವನೇಶ್ವರಿ, ಡಾ.ಸಂತೋಷಿ, ರಮೇಶ್ ಧನೂರ್ ಮತ್ತಿರರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಮೈಸೂರಿನಲ್ಲಿರುವ ಸಂಗೀತ ವಿವಿ ಮುಂಭಾಗ ತಾತ್ಕಾಲಿಕ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ತಮ್ಮ ಸೇವೆಯನ್ನು ಮುಂದುವರಿಸುವಂತೆ ಒತ್ತಾಯಿಸಿ, ಪ್ರತಿಭಟನೆ ನಡೆಸಿದರು.

Translate »