ಟಿ20: ಭಾರತಕ್ಕೆ 2-1ರಿಂದ ಸರಣ ಜಯ
ದೇಶ-ವಿದೇಶ

ಟಿ20: ಭಾರತಕ್ಕೆ 2-1ರಿಂದ ಸರಣ ಜಯ

July 9, 2018

ಬ್ರಿಸ್ಟೋಲ್: ಹಿಟ್‍ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಅವರ ಅಮೋಘ ಶತಕದ ನೆರವಿನಿಂದ ಇಂಗ್ಲೆಂಡ್ ವಿರುದ್ಧ ಭಾರತ 7ವಿಕೆಟ್‍ಗಳ ಭರ್ಜರಿ ಜಯ ಸಾಧಿಸಿತು. ಆ ಮೂಲಕ 3ಪಂದ್ಯಗಳ ಟಿ20 ಸರಣಿಯನ್ನು 2-1 ರಿಂದ ವಶಪಡಿಸಿಕೊಂಡಿತು.

ಇಲ್ಲಿನ ಕೌಂಟಿ ಮೈದಾನದಲ್ಲಿ ನಡೆದ ಭಾರತ-ಇಂಗ್ಲೆಂಡ್ ನಡುವಿನ ಟಿ20 ಪಂದ್ಯಾವಳಿಯ 3ನೇ ಪಂದ್ಯದಲ್ಲಿ ಇಂಗ್ಲೆಂಡ್ ನೀಡಿದ 199ರನ್‍ಗಳ ಬೃಹತ್ ಮೊತ್ತವನ್ನು ಬೆನ್ನತ್ತಿದ ಭಾರತ ಕೇವಲ 18.4 ಓವರ್‍ಗಳಲ್ಲಿ 3 ವಿಕೆಟ್ ಕಳೆದುಕೊಂಡು 201 ರನ್ ಗಳಿಸುವ ಮೂಲಕ ಗೆಲುವಿನ ನಗೆ ಬೀರಿ ಸರಣಿಯನ್ನು ತನ್ನದಾಗಿಸಿಕೊಂಡಿತು.

ಭಾರತದ ಪರ ಇನ್ನಿಂಗ್ಸ್ ಆರಂಭಿಸಿದ ಶಿಖರ್ ಧವನ್ ಕೇವಲ 5ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ಆಗ ತಂಡದ ಮೊತ್ತ 21 ಆಗಿತ್ತು. ಈ ವೇಳೆ ರೋಹಿತ್ ಶರ್ಮಾ ಜೊತೆಗೂಡಿದ ಕನ್ನಡಿಗ ಕೆ.ಎಲ್.ರಾಹುಲ್ ಉತ್ತಮ ಆಟವಾಡುವ ಭರವಸೆ ನೀಡಿದರಾದರೂ 10 ಎಸೆತಗಳಲ್ಲಿ 1ಬೌಂಡರಿ, 2ಸಿಕ್ಸರ್ ಒಳಗೊಂಡ 19ರನ್ ಗಳಿಸಿ ವಿಕೆಟ್ ಒಪ್ಪಿಸಿದರು.

ಈ ವೇಳೆ ಮೈದಾನಕ್ಕೆ ಆಗಮಿಸಿದ ನಾಯಕ ವಿರಾಟ್ ಕೊಹ್ಲಿ ರೋಹಿತ್ ಶರ್ಮಾಗೆ ಉತ್ತಮ ಸಾಥ್ ನೀಡಿದರು. ವಿರಾಟ್ ಹಾಗೂ ರೋಹಿತ್ ಶರ್ಮಾ ಜೋಡಿ ಪಂದ್ಯದಲ್ಲಿ 89 ರನ್‍ಗಳ ಜೊತೆಯಾಟವಾಡುವ ಮೂಲಕ ತಂಡವನ್ನು ಗೆಲುವಿನ ಹೊಸ್ತಿಲಿಗೆ ತಂದು ನಿಲ್ಲಿಸಿದರು. ಈ ವೇಳೆ ಉತ್ತಮವಾಗಿ ಆಡುತ್ತಿದ್ದ ನಾಯಕ ಕೊಹ್ಲಿ 29 ಎಸೆತಗಳಲ್ಲಿ ತಲಾ 2 ಬೌಂಡರಿ ಹಾಗೂ ಸಿಕ್ಸರ್ ಒಳಗೊಂಡ 43ರನ್ ಗಳಿಸಿ ಔಟಾದರು. ಒಂದೆಡೆ ವಿಕೆಟ್ ಬಿದ್ದರೂ, ಮತ್ತೊಂದೆಡೆ ಗೋಡೆಯಂತೆ ಕ್ರೀಸಿಗೆ ಅಂಟಿಕೊಂಡಿದ್ದ ರೋಹಿತ್ ಶರ್ಮಾ ಆರಂಭದಿಂದಲೂ ಬಿರುಸಿನ ಆಟವಾಡಿದರು. ಇಂಗ್ಲೆಂಡ್ ಬೌಲರ್‍ಗಳನ್ನು ಮನಬಂದಂತೆ ದಂಡಿಸಿದ ರೋಹಿತ್ 56ಎಸೆತಗಳಲ್ಲಿ 11ಬೌಂಡರಿ ಹಾಗೂ 5 ಸಿಕ್ಸರ್ ಒಳಗೊಂಡ 100 ಗಳಿಸುವ ಮೂಲಕ ಅಜೇಯರಾಗಿ ಉಳಿದರು. ಅಂತಿಮವಾಗಿ ಪಂದ್ಯದ ಕೊನೆಯಲ್ಲಿ ಸಿಡಿದ ಹಾರ್ದಿಕ್ ಪಾಂಡ್ಯ 14 ಎಸೆತಗಳಲ್ಲಿ 4 ಬೌಂಡರಿ, 2ಸಿಕ್ಸರ್ ಒಳಗೊಂಡ 33ರನ್ ಗಳಿಸಿದರು. ಇಂಗ್ಲೆಂಡ್ ಪರ ಬೌಲಿಂಗ್‍ನಲ್ಲಿ ಡೇವಿಡ್ ವಿಲ್ಲಿ, ಜೇಕ್ ಬಾಲ್ ಹಾಗೂ ಕ್ರೀಸ್ ಜೋರ್ಡಾನ್ ತಲಾ ಒಂದೊಂದು ವಿಕೆಟ್ ಉರುಳಿಸಿದರು.

ಇದಕ್ಕೂ ಮುನ್ನಾ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್‍ಗೆ ಆರಂಭಿಕರಾದ ಜೇಸನ್ ರಾಯ್ ಹಾಗೂ ಜೋಸ್ ಬಟ್ಲರ್ ಉತ್ತಮ ಆರಂಭ ಒದಗಿಸಿಕೊಟ್ಟರು. ಈ ಜೋಡಿ ಮೊದಲ ವಿಕೆಟ್‍ಗೆ 94ರನ್‍ಗಳ ಜೊತೆಯಾಟವಾಡಿತು. ಜೋಸ್ ಬಟ್ಲರ್ 37ರನ್ ಗಳಿಸಿದರೇ, ಜೇಸನ್ ರಾಯ್ 67ರನ್ ಗಳಿಸಿ ಔಟಾದರು. ಉಳಿದಂತೆ ಅಲೆಕ್ಸ್ ಹೇಲ್ಸ್ 30, ಜಾನಿ ಬೇರ್‍ಸ್ಟೋ 25, ಬೆನ್ ಸ್ಟೋಕ್ಸ್ 14ರನ್ ಗಳಿಸಿದರು. ಅಂತಿಮವಾಗಿ ಇಂಗ್ಲೆಂಡ್ ನಿಗದಿತ 20ಓವರ್‍ಗಳಲ್ಲಿ 9 ವಿಕೆಟ್ ನಷ್ಟಕ್ಕೆ 198ರನ್‍ಗಳ ಬೃಹತ್ ಮೊತ್ತ ಪೇರಿಸಿತು. ಭಾರತದ ಪರ ಬೌಲಿಂಗ್‍ನಲ್ಲಿ ಹಾರ್ದಿಕ್ ಪಾಂಡ್ಯ 4, ಸಿದ್ದಾರ್ಥ ಕೌಲ್ 2, ದೀಪಕ್ ಚಾಹರ್ ಹಾಗೂ ಉಮೇಶ್ ಯಾದವ್ ತಲಾ ಒಂದೊಂದು ವಿಕೆಟ್ ಉರುಳಿಸಿದರು. ಸರಣಿಯಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ರೋಹಿತ್ ಶರ್ಮಾ ಪಂದ್ಯಶ್ರೇಷ್ಠ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಧೋನಿ ವಿಶಿಷ್ಠ ದಾಖಲೆ

ಬ್ರಿಸ್ಟಲ್: ಇಲ್ಲಿನ ಕೌಂಟಿ ಮೈದಾನದಲ್ಲಿ ನಡೆದ ಇಂಗ್ಲೆಂಡ್ ಮತ್ತು ಭಾರತ ನಡುವಣ 3ನೇ ಟಿ20 ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ವಿಶಿಷ್ಠ ದಾಖಲೆ ನಿರ್ಮಿಸಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ಒಟ್ಟು 5 ಕ್ಯಾಚ್ ಹಿಡಿಯುವ ಮೂಲಕ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಧೋನಿ ಹೊರತು ಪಡಿಸಿ ಮತ್ಯಾವ ವಿಕೆಟ್ ಕೀಪರ್ ಟಿ20ಯಲ್ಲಿ ಐದು ಕ್ಯಾಚ್‍ಗಳನ್ನು ಪಡೆದಿಲ್ಲ. ಮಹೇಂದ್ರ ಸಿಂಗ್ ಧೋನಿ ಒಬ್ಬರೇ ಟಿ-20 ಪಂದ್ಯದಲ್ಲಿ ಈ ಸಾಧನೆ ಮಾಡಿದ ಮೊದಲಿಗರಾಗಿದ್ದಾರೆ.

Translate »