ಸೋಮವಾರಪೇಟೆ: ರಾಜ್ಯ ಸಚಿವ ಸಂಪುಟದಲ್ಲಿ ಭೋವಿ ಸಮುದಾಯದ ಶಾಸಕರಿಗೆ ಸ್ಥಾನ ನೀಡಬೇಕೆಂದು ಅಖಿಲ ಕರ್ನಾಟಕ ಭೋವಿ ಯುವ ವೇದಿಕೆ ಆಗ್ರಹಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಭೋವಿ ಯುವ ವೇದಿಕೆ ಜಿಲ್ಲಾಧ್ಯಕ್ಷ ಸುಜಿತ್, ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್‍ನಿಂದ ಭೋವಿ ಜನಾಂಗಕ್ಕೆ ಸೇರಿದ ವೆಂಕಟರಮಣಪ್ಪ ಹುಲಿಗೇರಿ ಮತ್ತು ಅಖಂಡ ಶ್ರೀನಿವಾಸ್ ಮೂರ್ತಿ ಅವರುಗಳು ಆಯ್ಕೆಯಾಗಿದ್ದು, ಇವರಲ್ಲಿ ವೆಂಕಟರ ಮಣಪ್ಪ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು. ಭೋವಿ ಸಮುದಾಯ ಸಾಮಾಜಿಕವಾಗಿ ಹಿಂದುಳಿದಿದ್ದು, ಶಾಸಕರಿಗೆ ಸಮಾಜ ಕಲ್ಯಾಣ ಇಲಾಖೆಯ ಜವಾಬ್ದಾರಿ ನೀಡಿದರೆ ಸೂಕ್ತ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ಗಮನ ಸೆಳೆಯಲಾಗುವುದು ಎಂದರು. ಈಗಾಗಲೇ ಸಮುದಾಯದ ಸ್ವಾಮೀಜಿಗಳಾದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಅವ ರೊಂದಿಗೆ ಮಾತುಕತೆ ನಡೆಸಲಾಗಿದೆ. ಶೀಘ್ರದಲ್ಲೇ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ತಮ್ಮ ಅಹವಾಲು ಸಲ್ಲಿಸುತ್ತೇವೆ. ಒಂದು ವೇಳೆ ನಮ್ಮ ಬೇಡಿಕೆ ಈಡೇರದಿದ್ದರೆ ಮುಂದಿನ ಹೋರಾ ಟದ ರೂಪುರೇಷೆಗಳನ್ನು ತಯಾರಿಸಲಾಗುವುದು ಎಂದರು. ಹಿರಿಯ ಶಾಸಕರಾದ ವೆಂಕಟರ ಮಣಪ್ಪ ಅವರಿಗೆ ಸಮುದಾಯದ ಮೇಲೆ ಅತೀವ ಕಾಳಜಿ ಇದೆ. ಉತ್ತರ ಕರ್ನಾಟಕ ಸೇರಿ ದಂತೆ ದಕ್ಷಿಣ ಕರ್ನಾಟಕದಲ್ಲೂ ಭೋವಿ ಸಮುದಾಯ ಅಧಿಕ ಸಂಖ್ಯೆಯಲ್ಲಿದ್ದು, ಇವರಿಗೆ ಸಮಾಜ ಕಲ್ಯಾಣ ಇಲಾಖಾ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ಅಖಿಲ ಕರ್ನಾಟಕ ಭೋವಿ ಯುವ ವೇದಿಕೆಯ ಸೋಮವಾರಪೇಟೆ ತಾಲೂಕು ಉಪಾಧ್ಯಕ್ಷ ಸುಬ್ರಮಣ್ಯ, ಕೊಡ್ಲಿಪೇಟೆ ಹೋಬಳಿ ಅಧ್ಯಕ್ಷ ಬಾಲಸುಬ್ರಮಣ್ಯ ಅವರುಗಳು ಉಪಸ್ಥಿತರಿದ್ದರು.