ಬಿಜೆಪಿ ಶಾಸಕರ ಸೆಳೆಯಲು ಸಿಎಂ ಕುಮಾರಸ್ವಾಮಿ ಯತ್ನ: ಬಿಎಸ್‍ವೈ ಆರೋಪ
ಮೈಸೂರು

 ಬಿಜೆಪಿ ಶಾಸಕರ ಸೆಳೆಯಲು ಸಿಎಂ ಕುಮಾರಸ್ವಾಮಿ ಯತ್ನ: ಬಿಎಸ್‍ವೈ ಆರೋಪ

September 20, 2018

ಬೆಂಗಳೂರು: ಸರ್ಕಾರಕ್ಕೆ ಒದಗಿ ಬಂದಿರುವ ಗಂಡಾಂತರದಿಂದ ಪಾರಾಗಲು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನಮ್ಮ ಪಕ್ಷದ ಶಾಸಕರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಇಂದಿಲ್ಲಿ ತಿಳಿಸಿದ್ದಾರೆ.

ಒಂದು ದಿನದ ಬಿಜೆಪಿ ವಿಶೇಷ ಸಭೆಗೆ ಚಾಲನೆ ನೀಡಿ ಮಾತನಾಡಿದ ಅವರು, ಯಾವ ಸಂದರ್ಭದಲ್ಲಿ ಸರ್ಕಾರ ಉರುಳಿ ಹೋಗುತ್ತದೋ ಎಂಬ ಭೀತಿ ಕುಮಾರಸ್ವಾಮಿ ಅವರಿಗೆ ಕಾಡುತ್ತಿದೆ. ಮೈತ್ರಿ ಪಕ್ಷದ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಎಲ್ಲಿ ಯಡಿಯೂರಪ್ಪನವರನ್ನು ಬೆಂಬಲಿಸುತ್ತಾರೋ ಎಂಬ ಕಾರಣಕ್ಕೆ ತಮ್ಮ ಅಧಿಕಾರವನ್ನು ಉಳಿಸಿಕೊಳ್ಳಲು ಆಪರೇಷನ್ ಜೆಡಿಎಸ್‍ಗೆ ಮುಂದಾಗಿದ್ದಾರೆ. ಕೊಟ್ಟಿರುವ ಅಧಿಕಾರವನ್ನು ಉಳಿಸಿಕೊಳ್ಳಲಾಗದೇ ಅಪ್ಪ ಮಕ್ಕಳು ಭ್ರಷ್ಟಾಚಾರದಲ್ಲಿ ತೊಡಗಿ ಬೊಕ್ಕಸವನ್ನು ಲೂಟಿ ಮಾಡಿ ಅದರಿಂದ ಬರುತ್ತಿರುವ ಹಣದಿಂದ ನಮ್ಮವರನ್ನು ಖರೀದಿ ಮಾಡಲು ಹೊರಟಿದ್ದಾರೆ.
ಕುಮಾರಸ್ವಾಮಿ ಆಪರೇಷನ್ ಕಮಲದ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ನಮ್ಮ  ಶಾಸಕ ಸುಭಾಷ್ ಗುತ್ತೆದಾರ್‍ಗೆ ಪಕ್ಷಕ್ಕೆ ಬರುವಂತೆ ಸ್ವತಃ ಮುಖ್ಯಮಂತ್ರಿಯವರು ಕಲಬುರಗಿಗೆ ಹೋದಾಗ ಒತ್ತಾಯ ಮಾಡಿದ್ದಾರೆ, ಇನ್ನು ಅನೇಕ ಬಿಜೆಪಿ ಶಾಸಕರ ಸಂಪರ್ಕಕ್ಕೆ ಯತ್ನಿಸಿದ್ದಾರೆ. 10 ಕ್ಕೂ ಹೆಚ್ಚು ಬಿಜೆಪಿ ಶಾಸಕರು ನಮ್ಮ ಜೊತೆ ಇದ್ದಾರೆ ಎಂದು ಹೇಳಿಕೆ ನೀಡಿರುವುದೇ ಸಿಎಂ ಯಾವ ಕೆಳಮಟ್ಟಕ್ಕೆ ಇಳಿದಿದ್ದಾರೆ ಎನ್ನುವುದಕ್ಕೆ ನಿದರ್ಶನ ಎಂದರು.

ಅಧಿಕಾರ ಹಿಡಿದು ನಾಲ್ಕು ತಿಂಗಳು ಕಳೆದರೂ, ಒಳ್ಳೆ ಆಡಳಿತ ಕೊಡಲು ಇವರಿಂದ ಸಾಧ್ಯವಾಗಿಲ್ಲ. ಇದ್ದ ದಿನದಷ್ಟು ದೋಚಬೇಕೆಂಬ ಪರಿಕಲ್ಪನೆಯನ್ನೇ ಇಟ್ಟುಕೊಂಡು ಅವರು ಬಂದಂತಿದೆ. ಅವರು ಹಾಸನದಲ್ಲಿ ನೂರಾರು ಕೋಟಿ ಬೆಲೆಬಾಳುವ ಸರ್ಕಾರಿ ಆಸ್ತಿಯನ್ನು ತಮ್ಮ ಕುಟುಂಬದ ಸದಸ್ಯರ ಹೆಸರಿಗೆ ಮಾಡಿಸುತ್ತಿದ್ದಾರೆ. ಇಂತಹ ಆರೋಪ ಮಾಡಿದವರು ನಾವಲ್ಲ. ಅವರ ಮೈತ್ರಿ ಪಕ್ಷದ ಮುಖಂಡರೇ.

ಇದು ಒಂದು ಸಣ್ಣ ಉದಾಹರಣೆ. ಕುಮಾರಸ್ವಾಮಿ ಆಡಳಿತದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಅಭಿವೃದ್ಧಿ ಶೂನ್ಯ.
ಕಾಂಗ್ರೆಸ್ ಮತ್ತು ಜೆಡಿಎಸ್‍ನಲ್ಲಿ ಒಳಜಗಳ ಶುರುವಾಗಿದೆ. ಇದರಿಂದ ಅಭಿವೃದ್ಧಿ ಕೆಲಸಗಳು ಸಂಪೂರ್ಣವಾಗಿ ಕುಸಿದಿದೆ. ಅಧಿಕಾರ ಉಳಿಸಿಕೊಳ್ಳುವುದರಲ್ಲೇ ಮುಖ್ಯಮಂತ್ರಿಯವರು ಕಾಲ ಕಳೆಯುತ್ತಿದ್ದಾರೆ.

ಭ್ರಷ್ಟ ಹಣದಿಂದ ನಮ್ಮವರನ್ನು ಕೊಳ್ಳುವ ಅವರ ಕನಸು ಸಾಧ್ಯವಿಲ್ಲ. ನಾವು 104 ಜನ ಒಟ್ಟಿಗೆ ಇದ್ದೇವೆ. ರಾಜ್ಯದ ಜನತೆ ನಮಗೆ ಇಂತಹ ದೊಡ್ಡ ಸಂಖ್ಯೆ ಕೊಟ್ಟಿದ್ದರೂ, 36 ರಿಂದ 37 ಸದಸ್ಯರಿರುವ ಜೆಡಿಎಸ್ ಅಧಿಕಾರದ ಚುಕ್ಕಾಣಿ ಹಿಡಿದು, ರಾಜ್ಯವನ್ನು ಲೂಟಿ ಮಾಡುತ್ತಿದೆ ಎಂದು ಕಿಡಿಕಾರಿದರು.

ಕಿಂಗ್‍ಪಿನ್‍ಗಳ ಮೂಲಕ ಬಿಜೆಪಿಯವರು ಸರ್ಕಾರ ಉರುಳಿಸಲು ಹೊರಟಿದ್ದಾರೆ ಎಂದು ಆರೋಪ ಮಾಡುತ್ತೀರಿ. ಅದನ್ನು ಸಾಬೀತು ಮಾಡಿ ಎಂದು ಯಡಿಯೂರಪ್ಪ, ಕುಮಾರಸ್ವಾಮಿ ಅವರಿಗೆ ಸವಾಲು ಹಾಕಿದರು.

ಬೇರೆಯವರ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಬದಲು ತಮ್ಮ ತಟ್ಟೆಯಲ್ಲಿ ಬಿದ್ದಿರುವ ಭ್ರಷ್ಟಾಚಾರದ ಕೋಣವನ್ನು ನೋಡಿಕೊಳ್ಳಲಿ. ಕಾಂಗ್ರೆಸ್- ಜೆಡಿಎಸ್‍ನಲ್ಲಿರುವ ಒಡಕನ್ನು ಬಂಡವಾಳವಾಗಿಟ್ಟುಕೊಂಡು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಾವು 24 ರಿಂದ 25 ಸ್ಥಾನ ಗೆಲ್ಲಲೇಬೇಕು. ಇದಕ್ಕಾಗಿ ಪಕ್ಷವನ್ನು ಮತ್ತಷ್ಟು ಸಂಘಟಿಸಿ, ಈ ಸರ್ಕಾರದ ಭ್ರಷ್ಟಾಚಾರವನ್ನು ಜನರ ಮುಂದಿಡುವ ಪ್ರಯತ್ನವನ್ನು ಇಂದಿನಿಂದಲೇ ಆರಂಭಿಸೋಣ ಎಂದು ಕಾರ್ಯಕರ್ತರಿಗೆ ಮತ್ತು ಮುಖಂಡರಿಗೆ ಕರೆ ನೀಡಿದರು.

Translate »