ಮೈಸೂರಲ್ಲಿ ಸಾವಿರಾರು ಪೌರ ಕಾರ್ಮಿಕರ ಭಾರೀ ಮೆರವಣಿಗೆ
ಮೈಸೂರು

ಮೈಸೂರಲ್ಲಿ ಸಾವಿರಾರು ಪೌರ ಕಾರ್ಮಿಕರ ಭಾರೀ ಮೆರವಣಿಗೆ

September 20, 2018

ಮೈಸೂರು:  ಗುತ್ತಿಗೆ ಪದ್ಧತಿ ರದ್ದುಗೊಳಿಸಿ, ಸ್ಥಳೀಯ ಸಂಸ್ಥೆಯಿಂದ ನೇರವಾಗಿ ತಮಗೆ ವೇತನ ಪಾವತಿಸಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪಾಲಿಕೆ ಪೌರಕಾರ್ಮಿಕರು ಇಂದು ಮೈಸೂರಿನಲ್ಲಿ ಭಾರೀ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಕರ್ನಾಟಕ ರಾಜ್ಯ ನಗರ ಪಾಲಿಕೆ, ನಗರ ಸಭೆ, ಪುರಸಭೆಗಳ ಪೌರಕಾರ್ಮಿಕರ ಮಹಾ ಸಂಘದ ರಾಜ್ಯಾಧ್ಯಕ್ಷರಾದ ಮಾಜಿ ಮೇಯರ್ ನಾರಾಯಣ ನೇತೃತ್ವದಲ್ಲಿ ನಡೆದ ಪ್ರತಿ ಭಟನೆಯಲ್ಲಿ 1500ಕ್ಕೂ ಹೆಚ್ಚು ಪೌರ ಕಾರ್ಮಿಕರು ಪಾಲ್ಗೊಂಡಿದ್ದರು. ಪುರಭವನದಿಂದ ಆರಂಭವಾದ ಮೆರವಣಿಗೆಯು ಗಾಂಧಿಚೌಕ, ಮಕ್ಕಾಜಿ ಚೌಕ, ಕೆ.ಆರ್. ಸರ್ಕಲ್, ದೇವರಾಜ ಅರಸು ರಸ್ತೆ ಮೂಲಕ ಸಾಗಿ ಜಿಲ್ಲಾಧಿಕಾರಿ ಕಚೇರಿ ತಲುಪಿತು.

ತೋಳಿಗೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದ ಪೌರಕಾರ್ಮಿಕರು, ಸರ್ಕಾರ, ಮೈಸೂರು ಮಹಾನಗರ ಪಾಲಿಕೆ ವಿರುದ್ಧ ಘೋಷಣೆ ಕೂಗುತ್ತಿದ್ದರು. ಜಿಲ್ಲಾಧಿಕಾರಿ ಕಚೇರಿ ಬಳಿ ಸುಮಾರು ಒಂದು ತಾಸು ಪ್ರತಿಭಟನಾ ಧರಣಿ ನಡೆಸಿದ ನಂತರ ಅವರು ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ಸರ್ಕಾರ ಗುತ್ತಿಗೆ ಪದ್ಧತಿ ರದ್ದುಗೊಳಿಸಿ ನೇರವಾಗಿ ವೇತನ ನೀಡಬೇಕೆಂದು ಆದೇಶ ಮಾಡಿ ವರ್ಷ ಕಳೆದರೂ ಮೈಸೂರು ಮಹಾನಗರ ಪಾಲಿಕೆ ಜಾರಿಗೊಳಿಸಿಲ್ಲ. ಸಾಲಪ್ಪ ವರದಿಯನ್ವಯ 500 ಜನಸಂಖ್ಯೆಗೊಬ್ಬರಂತೆ ಪೌರಕಾರ್ಮಿಕರನ್ನು ನೇಮಿಸಬೇಕೆಂಬ ಆದೇಶವಿದ್ದರೂ, ಅದನ್ನೂ ಅನುಷ್ಠಾನ ಮಾಡಿಲ್ಲ ಎಂದು ಪ್ರತಿಭಟನಾನಿರತರು ಆರೋಪಿಸುತ್ತಿದ್ದರು.

ಪ್ರತಿಭಟನೆ ವೇಳೆ ಪೌರಕಾರ್ಮಿಕರನ್ನು ದ್ದೇಶಿಸಿ ಮಾತನಾಡಿದ ಪ್ರತಿಭಟನೆ ನೇತೃತ್ವ ವಹಿಸಿದ್ದ ಮಾಜಿ ಮೇಯರ್ ನಾರಾಯಣ, ಮೈಸೂರು ನಗರದಾದ್ಯಂತ ಸ್ವಚ್ಛತೆ, ಒಳ ಚರಂಡಿ ಕೆಲಸ ಮಾಡುತ್ತಿರುವ ಪೌರ ಕಾರ್ಮಿಕರು ತಮ್ಮ ಕುಟುಂಬವನ್ನೂ ನಿರ್ಲಕ್ಷಿಸಿ ಸಾರ್ವಜನಿಕರಸೇವೆಯಲ್ಲಿ ನಿರತರಾಗಿದ್ದಾರೆ. ಸೇವೆ ಪಡೆದ ಪಾಲಿಕೆ ಹಾಗೂ ಸರ್ಕಾರ ಪೌರಕಾರ್ಮಿಕರಿಗೆ ಮೂಲ ಸೌಲಭ್ಯ ನೀಡದೇ ನಿರ್ಲಕ್ಷಿಸುತ್ತಿರುವುದು ಸರಿಯಲ್ಲ ಎಂದರು.

ಗುತ್ತಿಗೆ ಪದ್ಧತಿಯಡಿ ಪೌರಕಾರ್ಮಿಕರಿಗೆ ನೀಡುವ ಸೌಲಭ್ಯಗಳನ್ನು ನೀಡದಿರುವುದರಿಂದ ಅವರು ವಂಚಿತರಾಗಿದ್ದಾರೆ ಎಂದ ಅವರು, ತಮ್ಮ ಬೇಡಿಕೆ ಈಡೇರಿಸದಿದ್ದಲ್ಲಿ ಅಕ್ಟೋಬರ್ 3 ರಿಂದ ಮೈಸೂರು ನಗರದಲ್ಲಿ ಸ್ವಚ್ಛತಾ ಕೆಲಸ ಸ್ಥಗಿತಗೊಳಿಸಿ ಪೌರಕಾರ್ಮಿಕರು ಪ್ರತಿಭಟನೆ ನಡೆಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.

ಸಂಘದ ಸಲಹಾ ಸಮಿತಿ ಅಧ್ಯಕ್ಷ ಆರ್. ನಾಗರಾಜು, ಉನ್ನತ ಸಮಿತಿ ಅಧ್ಯಕ್ಷ ಎನ್. ಮಾರ, ಮಂಚಯ್ಯ, ಆರ್. ಶಿವಣ್ಣ, ಎನ್. ರಾಜು, ಎನ್. ನರಸಿಂಹ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರಮುಖ ಬೇಡಿಕೆಗಳು: ಸರ್ಕಾರದ ಆದೇಶದಂತೆ ಕೂಡಲೇ ಗುತ್ತಿಗೆ ಪದ್ಧತಿ ರದ್ದುಗೊಳಿಸಬೇಕು. ಸ್ಥಳೀಯ ಸಂಸ್ಥೆಗಳಿಂದಲೇ ನೇರವಾಗಿ ವೇತನ ಪಾವತಿಸಬೇಕು. ಪೌರ ಕಾರ್ಮಿಕರಿಗೆ ಬೆಳಗಿನ ಉಪಹಾರ ನೀಡಬೇಕು. ಒಳಚರಂಡಿ ವಿಭಾಗದಲ್ಲಿ ಗುತ್ತಿಗೆ ಪದ್ಧತಿ ರದ್ದುಗೊಳಿಸಬೇಕು. ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಶೇ. 20 ರಷ್ಟು ಹಣ ಮೀಸಲಿರಿಸಬೇಕು. ಪೌರಕಾರ್ಮಿಕರಿಗೆ ಪ್ರತ್ಯೇಕ ಕಲ್ಯಾಣ ಮಂಟಪ ನಿರ್ಮಿಸಬೇಕು. ಬೆಂಗಳೂರು ಪಾಲಿಕೆಯಂತೆ ಮೈಸೂರು ಮಹಾನಗರ ಪಾಲಿಕೆ ಪೌರಕಾರ್ಮಿಕರಿಗೂ ಪ್ರತೀ ವರ್ಷ 20,000 ರೂ. ಬೋನಸ್ ನೀಡಬೇಕು.

Translate »