ನಾನು ಕೊಲೆ ಮಾಡಿಲ್ಲ, ರೇಪ್ ಮಾಡಿಲ್ಲ, ಯಾವ ಅಪರಾಧ ಮಾಡಿಲ್ಲ
ಮೈಸೂರು

ನಾನು ಕೊಲೆ ಮಾಡಿಲ್ಲ, ರೇಪ್ ಮಾಡಿಲ್ಲ, ಯಾವ ಅಪರಾಧ ಮಾಡಿಲ್ಲ

September 20, 2018

ಬೆಂಗಳೂರು: ನಾನು ಕೊಲೆ ಮಾಡಿಲ್ಲ, ರೇಪ್ ಮಾಡಿಲ್ಲ, ಬೇರೆ ಯಾವುದೇ ಅಪ ರಾಧ ಮಾಡಿಲ್ಲ. ಕೇಸ್‍ಗಳಿಗೆ ಹೆದರಿ ಓಡಿ ಹೋಗುವ ಹೇಡಿಯೂ ನಾನಲ್ಲ ಎಂದು ಜಲಸಂಪ ನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅಬ್ಬರಿಸಿದರು.

ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬೀತ್ ಪಾತ್ರಾ ಬುಧವಾರ ಬೆಳಿಗ್ಗೆ ದಿಲ್ಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಡಿ.ಕೆ. ಶಿವಕುಮಾರ್ ಹಾಗೂ ಕಾಂಗ್ರೆಸ್ ರಾಷ್ಟ್ರೀಯ ಮುಖಂಡರಾದ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ವಿರುದ್ಧ ಹವಾಲಾ ವ್ಯವಹಾರ ಆರೋಪ ಮಾಡಿ ದ್ದರು. ಇದರಿಂದ ಕೆರಳಿದ ಡಿ.ಕೆ.ಶಿವಕುಮಾರ್, ವಿಷ ಯುಕ್ತ ಆಹಾರ ಸೇವನೆಯಿಂದ ಅಸ್ವಸ್ಥರಾಗಿ ನಿನ್ನೆಯಿಂದ ಚಿಕಿತ್ಸೆ ಪಡೆಯುತ್ತಿದ್ದರೂ ಕೂಡಲೇ ಆಸ್ಪತ್ರೆಯಿಂದ ಗೃಹ ಕಚೇರಿಗೆ ಬಂದು ಪತ್ರಿಕಾಗೋಷ್ಠಿ ನಡೆಸಿ ದರು. ನಾನು ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದೆ. 40-50 ಬಾರಿ ವಾಂತಿಯಾಗಿದೆ. ಹಾಗಿದ್ದರೂ ವೈದ್ಯರ ಸಲಹೆಯನ್ನೂ ನಿರ್ಲಕ್ಷಿಸಿ ಪತ್ರಿಕಾಗೋಷ್ಠಿ ನಡೆಸಲು ಬಂದಿದ್ದೇನೆ. ನಾನು, ಆಸ್ಪತ್ರೆಯಲ್ಲಿದ್ದಾಗ ಅದನ್ನು ತಮಗೆ ಬೇಕಾದಂತೆ ಬಿಜೆಪಿಯವರು ಬಳಸಿಕೊಳ್ಳುತ್ತಿದ್ದಾರೆ. ಅದನ್ನು ಎದುರಿಸಲೇ ನಾನು ಬಂದಿದ್ದೇನೆ. ನಾನು ಹೆದರಿ ಓಡಿ ಹೋಗುವ ಹೇಡಿಯಲ್ಲ ಎಂದು ಅವರು ಸುದ್ದಿಗೋಷ್ಠಿ ಆರಂಭಿಸಿದರು. ದೆಹಲಿ ಬಿಜೆಪಿ ನಾಯಕರಿಗೆ ತಮ್ಮ ಸಂದೇಶ ಮುಟ್ಟಿಸಲೋ ಎಂಬಂತೆ ಸುದೀರ್ಘ 19 ನಿಮಿಷ ಇಂಗ್ಲೀಷ್‍ನಲ್ಲೇ ಮಾತನಾಡಿದರು.

ಕೇಂದ್ರೀಯ ಸ್ವಾಯತ್ತ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ನನ್ನನ್ನು ಜೈಲಿಗೆ ಕಳುಹಿಸಿ, ರಾಜ್ಯ ದಲ್ಲಿ ಸರಕಾರ ಮಾಡುತ್ತೇನೆ ಎಂದು ಬಿಜೆಪಿ ರಾಜ್ಯಾ ಧ್ಯಕ್ಷ ಯಡಿಯೂರಪ್ಪ ಹಗಲು ಕನಸು ಕಾಣುತ್ತಿದ್ದಾರೆ. ಅವರ ಕೀಳುಮಟ್ಟದ ರಾಜಕೀಯ ಫಲ ನೀಡಲು ನಾನು ಬಿಡುವುದಿಲ್ಲ, ಅವರು ಹೇಗೆ ಸರಕಾರ ಮಾಡುತ್ತಾರೋ ನಾನೂ ನೋಡುತ್ತೇನೆ ಎಂದು ಡಿ.ಕೆ.ಶಿವಕುಮಾರ್ ಗುಡುಗಿದರು.

ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನನ್ನ, ನನ್ನ ಕುಟುಂಬ ಸದಸ್ಯರು, ಸ್ನೇಹಿತರು, ಬಂಧು ಬಳಗದವರ ಮನೆ, ಕಚೇರಿ ಸೇರಿ ಒಟ್ಟು 82 ಕಡೆ ದಾಳಿ ನಡೆಸಿದ ಒಂದು ವರ್ಷ ಒಂದು ತಿಂಗಳ ನಂತರ ಜಾರಿ ನಿರ್ದೇಶನಾಲಯ (ಇಡಿ) ಪ್ರಕರಣ ಕೈಗೆತ್ತಿಕೊಂಡಿದೆ. ಅದೇ ಕಾಲಕ್ಕೆ ಯಡಿಯೂರಪ್ಪ ಸರಕಾರ ರಚನೆ ಬಗ್ಗೆ ಮಾತಾಡುತ್ತಿದ್ದಾರೆ. ಒಂದಕ್ಕೊಂದು ಹೇಗೆ ಬೆಸೆದುಕೊಂಡಿದೆ ಎಂಬುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕಿಲ್ಲ ಎಂದು ಪ್ರಶ್ನಿಸಿದರು.

ಬಿಜೆಪಿ ವಕ್ತಾರ ಸಂಬೀತ್ ಪಾತ್ರಾ ನನ್ನ ಪಕ್ಷದ ಮುಖಂಡರಾದ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅವರ ಹೆಸರು ಎಳೆದು ತಂದಿದ್ದಾರೆ. ಅವರ ವರ್ಚಸ್ಸಿಗೆ ಮಸಿ ಬಳಿಯಲು ಯತ್ನಿಸಿದ್ದಾರೆ. ಡೈರಿ ಯಲ್ಲಿ ಎಸ್.ಜಿ, ಆರ್‍ಜಿ ಅಂತ ಇದೆಯಂತೆ, ಯಾವ ಆರ್‍ಜಿ? ಯಾವ ಎಸ್‍ಜಿ? ರಾಹುಲ್ ಗಾಂಧಿ ಅವರಿಗೂ, ಸೋನೀಯಾ ಗಾಂಧಿ ಅವರಿಗೂ, ನನ್ನ ವಿರುದ್ಧದ ಪ್ರಕರಣಕ್ಕೂ ಯಾವುದೇ ಸಂಬಂಧ ಇಲ್ಲ. ಯಾವ ಹವಾಲಾ ನಡೆದಿದೆಯೋ, ಎಲ್ಲಿ ನಡೆದಿದೆಯೋ ಗೊತ್ತಿಲ್ಲ ಎಂದ ಅವರು, ಈ ಬಗ್ಗೆ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅವರು ಉತ್ತರ ಕೊಡಬೇಕು ಎಂದು ಸಂಬೀತ್ ಹೇಳಿದ್ದಾರೆ. ಅವರು ಉತ್ತರ ಕೊಡುವ ಅಗತ್ಯವಿಲ್ಲ. ಸಂಬೀತ್ ನನ್ನನ್ನು ಅರಗಿಸಿಕೊಳ್ಳಲಿ ಸಾಕು. ತನಿಖಾಧಿಕಾರಿಗಳಿಗೆ ನಾನೇನು ಮಾಹಿತಿ ನೀಡಿದ್ದೇನೆ ಎಂಬುದು ಸಂಬೀತ್ ಅವರಿಗೆ ಗೊತ್ತಿಲ್ಲ ಎಂದು ಕಾಣುತ್ತದೆ. ಹೋಗಿ ಮಾಹಿತಿ ಪಡೆದುಕೊಳ್ಳಲಿ ಎಂದರು.

ಐಟಿ ದಾಳಿಯಾದಾಗ ದಿಲ್ಲಿಯಲ್ಲಿ ಸಿಕ್ಕಿದ್ದು ನನಗೆ ಸೇರಿದ 41 ಲಕ್ಷ ರುಪಾಯಿಗಳು ಮಾತ್ರ. ಕೃಷಿ ಮತ್ತಿತರ ವ್ಯಾಪಾರ ವ್ಯವಹಾರಗಳಿಂದ ಸಾಕಷ್ಟು ಹಣ ಬರುತ್ತದೆ. ನಾನು ಮತ್ತು ನನ್ನ ಕುಟುಂಬದವರು ವರ್ಷಕ್ಕೆ 30 ಕೋಟಿ ರೂಪಾಯಿ ಆದಾಯ ತೆರಿಗೆ ಕಟ್ಟುತ್ತೇವೆ. 41 ಲಕ್ಷ ಎಲ್ಲಿಂದ ಬಂತು ಎಂದು ಐಟಿ ಇಲಾಖೆಗೆ ಲೆಕ್ಕ ಕೊಟ್ಟಿದ್ದೇನೆ. ನನಗೆ ಸೇರಿದ ಆರು ಕೋಟಿ ಸಿಕ್ಕಿತು, ಎಂಟು ಕೋಟಿ ಸಿಕ್ಕಿತು ಎಂಬುದೆಲ್ಲ ಸುಳ್ಳು. ಒಂದು ಕೋಟಿ ರೂಪಾಯಿ ತಮ್ಮದೆಂದು ವ್ಯಾಪಾರದ ಪಾಲುದಾರ ಶರ್ಮಾ ಹೇಳಿದ್ದಾರೆ. ಸಂಬೀತ್ ಪಾತ್ರ ಹೇಳಿರುವಂತೆ ಅಪಾರ ಹಣ ಎಲ್ಲಿ ಸಿಕ್ಕಿದೆಯೋ ನನಗೆ ಗೊತ್ತಿಲ್ಲ. ಕೇಂದ್ರ ತನಿಖಾ ಸಂಸ್ಥೆ ಗಳ ವಿಚಾರಣೆ ಮಾಹಿತಿಗಳು ಪಾತ್ರಾ ಅವರಂಥ ವರಿಗೆ ಸುಲಭವಾಗಿ ಸಿಗುವುದು, ನನ್ನ ಮನೆ ಮೇಲೆ ಐಟಿ ದಾಳಿಯಾದ ಹತ್ತೇ ನಿಮಿಷದಲ್ಲಿ ದಾಖಲೆ ಪ್ರತಿಗಳು ಲೋಕಸಭೆಯಲ್ಲಿ ಪ್ರದರ್ಶನ ಆಗುವುದು, ಐಟಿ ವಶದಲ್ಲಿದ್ದ ಗೋವಿಂದರಾಜ್ ಡೈರಿ ಮಾಹಿತಿಗಳನ್ನು ಯಡಿಯೂರಪ್ಪ ಪ್ರದರ್ಶಿಸುವುದು… ಇವೆಲ್ಲ ಬಿಜೆಪಿಗೂ, ಸ್ವಾಯತ್ತ ತನಿಖಾ ಸಂಸ್ಥೆಗಳಿಗೂ ಇರುವ ನಂಟಿನ ಪ್ರತೀಕ. ನನಗೆ ಈ ನೆಲದ ಕಾನೂನು. ನ್ಯಾಯಾಂಗ ವ್ಯವಸ್ಥೆ, ತನಿಖಾ ಸಂಸ್ಥೆಗಳ ಬಗ್ಗೆ ಅಪಾರ ಗೌರವವಿದೆ. ಆದರೆ ಸಂಬೀತ್ ಪಾತ್ರಾರಂಥವರು ಇಲ್ಲ-ಸಲ್ಲದ ಆರೋಪಗಳನ್ನು ಮಾಡುವ ಮೂಲಕ ನ್ಯಾಯದಾನ ವ್ಯವಸ್ಥೆ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.

ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ 2008-09 ರ ಹಣಕಾಸು ವರ್ಷದ ಆದಾಯ ತೆರಿಗೆ ವಿವರ ಸಲ್ಲಿಸಿದ ಸಂದರ್ಭದಲ್ಲಿ ಒಂದು ಕೋಟಿ ರುಪಾಯಿ ಯನ್ನು ಚೆಕ್ ಮೂಲಕ ಲಂಚ ಸ್ವರೂಪದಲ್ಲಿ ಸ್ವೀಕರಿಸಿ ದ್ದನ್ನು ಮುಚ್ಚಿಟ್ಟಿರುವುದು ಐಟಿ ಇಲಾಖೆ ದಾಖಲೆ ಗಳಲ್ಲಿ ನಮೂದಾಗಿದೆ. ಅಂತಹ ಅನೇಕ ದಾಖಲೆ ಗಳು ನನ್ನ ಬಳಿಯೂ ಇವೆ. ಸಮಯ ಬಂದಾಗ ಬಹಿರಂಗ ಮಾಡುತ್ತೇನೆ. ಸಹರಾ ಪ್ರಕರಣದಲ್ಲಿ ನರೇಂದ್ರ ಮೋದಿ ಹೆಸರು ಡೈರಿಯಲ್ಲಿ ದಾಖಲಾಗಿರಲಿಲ್ಲವೇ? ಜೈನ್ ಸಹೋದರರ ಡೈರಿಯಲ್ಲಿ ಮಾಜಿ ಉಪಪ್ರಧಾನಿ ಎಲ್.ಕೆ. ಆಡ್ವಾಣಿ ಅವರ ಹೆಸರು ಇರಲಿಲ್ಲವೇ? ಸಂಬೀತ್ ಪಾತ್ರಾ ಇದಕ್ಕೇನೆನ್ನನ್ನುತ್ತಾರೆ? ಇಷ್ಟಕ್ಕೂ ಈ ಪ್ರಕರಣಗಳ ಬಗ್ಗೆ ಸುಪ್ರೀಂ ಕೋರ್ಟ್ ಕೊಟ್ಟಿರುವ ತೀರ್ಪು ಏನು? ಡೈರಿಯಲ್ಲಿ ಸಿಕ್ಕ ಹೆಸರು, ಇನಿಷಿ ಯಲ್, ಮಾಹಿತಿಗಳನ್ನು ಸಾಕ್ಷಿಗಳೆಂದು ಪರಿಗಣಿ ಸಲು ಸಾಧ್ಯವಿಲ್ಲ ಎಂದು ಹೇಳಿರುವುದರ ಬಗ್ಗೆ ಸಂಬೀತ್ ಪಾತ್ರ ಅವರಿಗೆ ಅರಿವಿಲ್ಲ ಎಂದು ಕಾಣುತ್ತದೆ. ಬಿಜೆಪಿ ಮುಖಂಡರಿಗೆ ಒಂದು ನ್ಯಾಯ, ಕಾಂಗ್ರೆಸ್ ಮುಖಂಡರಿಗೆ ಮತ್ತೊಂದು ನ್ಯಾಯವೇ? ಎಂದು ಡಿ.ಕೆ. ಶಿವಕುಮಾರ್ ಪ್ರಶ್ನಿಸಿದರು.

ಇಡಿ ಎಫ್‍ಐಆರ್ ದಾಖಲಿಸಿದೆ ಎಂಬುದು ಮಾಧ್ಯಮ ವರದಿಗಳಿಂದ ಮಾತ್ರ ಗೊತ್ತಾಗಿದೆ. ಸ್ಪಷ್ಟವಾಗಿ ಹೇಳು ತ್ತಿದ್ದೇನೆ. ನನಗೆ ಯಾವುದೇ ನೋಟೀಸ್ ಬಂದಿಲ್ಲ. ಯಾರೂ ನನ್ನನ್ನು ಸಂಪರ್ಕಿಸಿಲ್ಲ. ನೋಟೀಸ್ ಕೊಟ್ಟರೆ ತೆಗೆದುಕೊಳ್ಳುತ್ತೇನೆ. ಗೌರವಯುತವಾಗಿ ಉತ್ತರ ಕೊಡುತ್ತೇನೆ. ಆದರೆ ಯಾವುದೇ ಒತ್ತಡಗಳಿಗೆ ಬಗ್ಗುವುದಿಲ್ಲ. ಮಂತ್ರಿ ಪದವಿಗೆ ರಾಜೀನಾಮೆ ಕೊಡುವುದಿಲ್ಲ.

ಚೆಕ್ಕಲ್ಲಿ ಲಂಚ ಪಡೆದು ಜೈಲಿಗೆ ಹೋಗಿ ಬಂದವರು ಒಂದು ಪಕ್ಷದ ರಾಜ್ಯಾಧ್ಯಕ್ಷರಾಗುತ್ತಾರೆ. ಜೈಲಲ್ಲಿದ್ದುಕೊಂಡು ಮುಖ್ಯಮಂತ್ರಿಯನ್ನು ಆಯ್ಕೆ ಮಾಡುತ್ತಾರೆ. ಜೈಲಿಗೆ ಹೋಗಿ ಬಂದವರು ಒಂದು ರಾಷ್ಡ್ರೀಯ ಪಕ್ಷದ ಅಧ್ಯಕ್ಷರೂ ಆಗುತ್ತಾರೆ. ಹೀಗಿರುವಾಗ ನಾನು ಯಾವ ತಪ್ಪು ಮಾಡಿದ್ದೇನೆ ಎಂದು ರಾಜೀನಾಮೆ ಕೊಡಲಿ? ನನ್ನ ವಿರುದ್ಧ ಪ್ರಕರಣ ಇದ್ದರೆ ತನಿಖೆಗೆ ಸಹಕರಿಸುತ್ತೇನೆ. ಕೇಳಿದ ವಿವರ ಕೊಡುತ್ತೇನೆ. ಅದನ್ನು ಬಿಟ್ಟು ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ ಎಂದರು.

ಕಳೆದ ವರ್ಷ ರಾಜ್ಯಸಭೆ ಚುನಾವಣೆ ಸಂದರ್ಭ ಗುಜರಾತ್ ಕಾಂಗ್ರೆಸ್ ಶಾಸಕರನ್ನು ರಕ್ಷಿಸಿಟ್ಟುಕೊಂಡ ನಂತರ ಬಿಜೆಪಿ ರಾಷ್ಟ್ರೀಯ ಹಾಗೂ ರಾಜ್ಯ ನಾಯಕರು ನನ್ನ ಬೆನ್ನು ಬಿದ್ದಿದ್ದಾರೆ. ನನ್ನ ರಕ್ತಕ್ಕಾಗಿ ಹಪಾ ಹಪಿಸುತ್ತಿದ್ದಾರೆ. ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ನನ್ನ ಮತ್ತು ನನ್ನ ಪಕ್ಷದ ವರ್ಚಸ್ಸಿಗೆ ಮಸಿ ಬಳಿಯಲು ಹೊರಟಿದ್ದಾರೆ. ಒತ್ತಡ ಹಾಕಿ ಐಟಿ ದಾಳಿಗಳನ್ನು ನಡೆಸಿದ್ದಾರೆ. ದಾಳಿಗೆ ಒಳಗಾದ ಬಂಧುಗಳು, ಸ್ನೇಹಿತರ ಮೇಲೆ ಒತ್ತಡ ಹಾಕಿ ಸಿಕ್ಕ ಹಣವೆಲ್ಲಾ ನನ್ನದೇ ಎಂದು ಹೇಳಿಸಿ ಸಹಿ ಮಾಡಿಸಿಕೊಂಡಿದ್ದಾರೆ. ಸಹಿ ಮಾಡದಿದ್ದರೆ ಬಂಧಿಸುವುದಾಗಿ, ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಪ್ರತಿಷ್ಠೆ ರಾಜಕಾರಣಕ್ಕೆ ನನ್ನನ್ನು ಬಲಿಪಶು ಮಾಡಲು ಹೊರಟಿದ್ದಾರೆ.

ಡಿಕೆಶಿ ವಿರುದ್ಧ ಎಫ್‍ಐಆರ್ ದಾಖಲಿಸಿದ ಇಡಿ

ಬೆಂಗಳೂರು: ರಾಜ್ಯ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ಅಕ್ರಮ ಹಣ ವರ್ಗಾವಣೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿದ್ದು, ಡಿಕೆಶಿಗೆ ಬಂಧನ ಭೀತಿ ಎದುರಾಗಿದೆ.

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್‍ಎ) ಅಡಿಯಲ್ಲಿ ಇಡಿ ಪ್ರಕರಣ ದಾಖಲಿಸಿಕೊಂಡಿದ್ದ ರಿಂದ ಡಿಕೆಶಿಗೆ ಬಂಧನದ ಭೀತಿ ಎದು ರಾಗಿದ್ದು, ಹಿರಿಯ ವಕೀಲರ ಜೊತೆ ಕಾನೂನು ಪ್ರಕ್ರಿಯೆಯ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಡಿ.ಕೆ. ಶಿವಕುಮಾರ್ ಸೇರಿದಂತೆ ಸಚಿನ್ ನಾರಾಯಣ್, ಶರ್ಮಾ ಟ್ರಾವೆಲ್ಸ್‍ನ ಸುನೀಲ್ ಕುಮಾರ್ ಶರ್ಮ, ದೆಹಲಿಯ ಕರ್ನಾಟಕ ಭವನದ ಸಿಬ್ಬಂದಿ ಆಂಜನೇಯ ಹನುಮಂತಯ್ಯ ಮತ್ತು ರಾಜ್ಯ ಸರ್ಕಾರದ ನಿವೃತ್ತ ಸಿಬ್ಬಂದಿ ರಾಜೇಂದ್ರ ಅವರನ್ನು ಆರೋಪಿಗಳನ್ನಾಗಿಸಿ ಪ್ರಕರಣ ದಾಖಲಿಸಲಾಗಿದೆ. ದೆಹಲಿಯ ನಿವಾಸದಲ್ಲಿ 8.5 ಕೋಟಿ ರೂ. ಹಣ ಸಿಕ್ಕಿದ್ದು ಈ ಸಂಬಂಧ ಆದಾಯ ತೆರಿಗೆ ಇಲಾಖೆ ಆರ್ಥಿಕ ಅಪರಾಧ ನ್ಯಾಯಾಲಯಕ್ಕೆ ದೂರು ನೀಡಿತ್ತು. ಆದಾಯ ತೆರಿಗೆ ಇಲಾಖೆಯ ದಾಳಿ ವೇಳೆ ಸಿಕ್ಕ ಮಾಹಿತಿ ಆಧರಿಸಿ ನೀಡಿರುವ ದೂರಿನಲ್ಲಿ ಹವಾಲ ಹಣದ ವಿವರವನ್ನು ಉಲ್ಲೇಖಿಸಿತ್ತು.

Translate »