ಮೈಸೂರಲ್ಲಿ ಪೌರಕಾರ್ಮಿಕರ ಮುಷ್ಕರ ಮುಂದುವರಿಕೆ
ಮೈಸೂರು

ಮೈಸೂರಲ್ಲಿ ಪೌರಕಾರ್ಮಿಕರ ಮುಷ್ಕರ ಮುಂದುವರಿಕೆ

October 5, 2018

ಮೈಸೂರು: ಮೈಸೂರು ಮಹಾ ನಗರ ಪಾಲಿಕೆಯಲ್ಲಿ ಪೌರಕಾರ್ಮಿಕರ ಗುತ್ತಿಗೆ ಪದ್ಧತಿಯನ್ನು ರದ್ದುಗೊಳಿಸಬೇಕೆಂಬ ಪ್ರಮುಖ ಬೇಡಿಕೆಯೊಂದಿಗೆ ಇನ್ನಿತರ ಸೌಲಭ್ಯಕ್ಕಾಗಿ ಪಾಲಿಕೆಯ ಖಾಯಂ ಹಾಗೂ ಗುತ್ತಿಗೆ ಪೌರಕಾರ್ಮಿಕರು ಒಕ್ಕೊರಲಿನಿಂದ ನಡೆಸುತ್ತಿರುವ ಅನಿರ್ದಿಷ್ಟಾವಧಿ ಅಹೋ ರಾತ್ರಿ ಮುಷ್ಕರ ಎರಡನೇ ದಿನಕ್ಕೆ ಕಾಲಿಟ್ಟಿದೆ.

ಕರ್ನಾಟಕ ರಾಜ್ಯ ನಗರ ಪಾಲಿಕೆ, ನಗರಸಭೆ, ಪುರ ಸಭೆಗಳ ಪೌರಕಾರ್ಮಿಕರ ಮಹಾಸಂಘದ ರಾಜ್ಯಾಧ್ಯಕ್ಷ ನಾರಾಯಣ ನೇತೃತ್ವದಲ್ಲಿ ಬುಧವಾರ ನಗರದಾದ್ಯಂತ ಕೆಲಸ ಸ್ಥಗಿತಗೊಳಿಸಿ, ಮಹಾನಗರ ಪಾಲಿಕೆಯ ಮುಖ್ಯದ್ವಾರದ ಬಳಿ ಪಾಲಿಕೆ ಪೌರಕಾರ್ಮಿಕರು ಪ್ರತಿಭಟನೆ ಆರಂಭಿಸಿದ್ದರು. ಬೇಡಿಕೆಗಳು ಈಡೇರುವವರೆಗೂ ಸ್ಥಳದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದಿರುವ 2 ಸಾವಿರಕ್ಕೂ ಹೆಚ್ಚು ಪೌರಕಾರ್ಮಿಕರು ಗುರುವಾರವೂ ತಮ್ಮ ಹೋರಾಟ ನಡೆಸಿದರು.

ಸಯ್ಯಾಜಿರಾವ್ ರಸ್ತೆಯಲ್ಲಿರುವ ಪಾಲಿಕೆ ದ್ವಾರ ದಲ್ಲಿ ಶಾಮಿಯಾನ ಹಾಕಿಕೊಂಡು ಜಮಾಯಿಸಿರುವ ಪೌರ ಕಾರ್ಮಿಕರು ಇಂದು ಕ್ರಾಂತಿ ಗೀತೆಗಳನ್ನು ಹಾಡುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ತಮಟೆ ಭಾರಿಸಿ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ವಿರುದ್ಧ ವಿವಿಧ ಘೋಷಣೆಗಳನ್ನು ಕೂಗಿದರಲ್ಲದೆ, ಕಪ್ಪು ಬಾವುಟ ಪ್ರದರ್ಶಿಸಿ ತಮ್ಮ ಆಕ್ರೋಶ ಹೊರಹಾಕಿದರು.

2017ರ ಜು.12ರಂದು ಸ್ಥಳೀಯ ಸಂಸ್ಥೆಗಳಲ್ಲಿ ಗುತ್ತಿಗೆ ಪೌರಕಾರ್ಮಿಕ ಪದ್ಧತಿ ರದ್ದುಗೊಳಿಸುವ ಮಹತ್ವ ನಿರ್ಣಯ ಅಂದಿನ ರಾಜ್ಯ ಸರ್ಕಾರ ಕೈಗೊಂಡಿದೆ. ಆದರೆ ಆದೇಶವನ್ನು ಪಾಲಿಕೆಯಲ್ಲಿ ಇನ್ನು ಜಾರಿಗೊಳಿಸಿಲ್ಲ. ಈ ಸಂಬಂಧ ಸೆ.19ರಂದು ಪುರಭವನದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ಸಹ ನಡೆಸಲಾಗಿದೆ. ಹೀಗಿದ್ದರೂ ನಮ್ಮ ನ್ಯಾಯಯುತ ಬೇಡಿಕೆ ಈಡೇ ರಿಸುವಲ್ಲಿ ಆಡಳಿತ ವ್ಯವಸ್ಥೆ ವಿಫಲವಾಗಿದೆ ಎಂದು ಕಿಡಿಕಾರಿದರು.

ಇನ್ನಿತರ ಬೇಡಿಕೆಗಳು: ಒಳಚರಂಡಿ ವಿಭಾಗದಲ್ಲಿ ಕೆಲಸ ಮಾಡುವ ಕಾರ್ಮಿಕರನ್ನು ಪೌರ ಕಾರ್ಮಿ ಕರೆಂದೇ ಪರಿಗಣಿಸಬೇಕು, ಬೆಳಗಿನ ಉಪಹಾರ ಕ್ಕಾಗಿ 20 ರೂ. ನೀಡುವ ಆದೇಶ 3 ವರ್ಷಗಳ ಹಿಂದೆಯೇ ಆಗಿದ್ದರೂ ಇನ್ನೂ ಜಾರಿಗೊಳಿಸಿಲ್ಲ. ಇದನ್ನು ತಕ್ಷಣ ಜಾರಿಗೊಳಿಸಬೇಕು. ಹಬ್ಬ- ವಿಶೇಷ ದಿನಗಳಲ್ಲಿ ಕಾರ್ಯನಿರ್ವಹಿಸುವ ಸಂಬಂಧ ಪೌರಕಾರ್ಮಿಕರಿಗೆ 1 ವರ್ಷಕ್ಕೆ 21 ದಿನಗಳ ವೇತನ ನೀಡುತ್ತಿದ್ದು ಇದನ್ನು ಪೊಲೀಸ್ ಇಲಾಖೆಯಂತೆ 30 ದಿನಗಳಿಗೆ ವಿಸ್ತರಿಸಬೇಕು. 700 ಜನಕ್ಕೆ ಒಬ್ಬ ಪೌರಕಾರ್ಮಿಕರೆಂಬ ಅವೈಜ್ಞಾನಿಕ ಆದೇಶ ರದ್ದುಪಡಿಸಿ 500 ಜನರಿಗೆ ಒಬ್ಬರಂತೆ ಆದೇಶ ನೀಡಬೇಕು ಎಂದು ಒತ್ತಾಯಿಸಿದರು.

ಪೌರ ಕಾರ್ಮಿಕರ ಮಹಾಸಂಘದ ರಾಜ್ಯಾಧ್ಯಕ್ಷ ನಾರಾಯಣ, ಪೌರಕಾರ್ಮಿಕ ಮುಖಂಡರಾದ ಎನ್.ಮಾರ, ಮಂಚಯ್ಯ, ವೆಂಕಟೇಶ್ ಸೇರಿದಂತೆ ಬಹುತೇಕ ಎಲ್ಲಾ ಪಾಲಿಕೆ ಪೌರಕಾರ್ಮಿಕರು ಪಾಲ್ಗೊಂಡಿದ್ದರು.

Translate »