ಬಿಜೆಪಿ ಸೇರುವುದಾದರೆ ಇಂದೇ ನಿರ್ಧಾರ ಕೈಗೊಳ್ಳಿ, ಇಲ್ಲ ನಾನೇ ಒಂದು ನಿರ್ಧಾರಕ್ಕೆ ಬರಬೇಕಾಗುತ್ತದೆ
ಮೈಸೂರು

ಬಿಜೆಪಿ ಸೇರುವುದಾದರೆ ಇಂದೇ ನಿರ್ಧಾರ ಕೈಗೊಳ್ಳಿ, ಇಲ್ಲ ನಾನೇ ಒಂದು ನಿರ್ಧಾರಕ್ಕೆ ಬರಬೇಕಾಗುತ್ತದೆ

September 20, 2018
  •  ಜಾರಕಿಹೊಳಿ ಸಹೋದರರಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಖಡಕ್ ನುಡಿ
  • ಮರು ಮಾತನಾಡದೇ ಬಂಡಾಯದಿಂದ ಹಿಂದೆ ಸರಿದ ಬೆಳಗಾವಿ ದೊರೆಗಳು

ಬೆಂಗಳೂರು: ವಿಧಾನಸಭಾ ಸದಸ್ಯತ್ವ ಮತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರುವುದಾದರೆ ಇಂದೇ ನಿರ್ಧಾರ ಕೈಗೊಳ್ಳಿ.ದಿನನಿತ್ಯ ನನಗೆ ನಿಮ್ಮಿಂದ ಒತ್ತಡ ಹೆಚ್ಚಾಗುತ್ತಿದೆ. ನೀವು ಇಂದು ನಿರ್ಧಾರ ಕೈಗೊಳ್ಳದಿದ್ದರೆ, ನಾನೇ ಒಂದು ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಸರ್ಕಾರದ ವಿರುದ್ಧ ಬಂಡಾಯ ಎದ್ದಿದ್ದ ಜಾರಕಿಹೊಳಿ ಕುಟುಂಬದವರಿಗೆ ಎಚ್ಚರಿಕೆ ನೀಡಿದ ವರಸೆ ಇದಾಗಿದೆ.

ಬಂಡಾಯದ ಮುಂಚೂಣಿಯಲ್ಲಿದ್ದ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಸತೀಶ್ ಜಾರಕಿಹೊಳಿ ಅವರನ್ನು ಪಂಚತಾರಾ ಹೊಟೇಲ್ ಒಂದಕ್ಕೆ ನಿನ್ನೆ ಕರೆಸಿಕೊಂಡ ಮುಖ್ಯಮಂತ್ರಿಯವರು ತಾವು ಅದುಮಿಟ್ಟುಕೊಂಡ ಬೇಸರವನ್ನು ಹೊರಹಾಕಿದ ಪರಿ ಇದಾಗಿದೆ.

ಮುಖ್ಯಮಂತ್ರಿಯವರು ಕಟುವಾಗಿ ಹೇಳಿದ ಮಾತುಗಳು ಬಂಡಾಯವನ್ನೇ ಶಮನ ಮಾಡಿದ್ದಲ್ಲದೆ, ಸರ್ಕಾರದ ಅತಂತ್ರ ಭೀತಿಗೂ ಕೊನೆ ಹಾಡಿದೆ. ಬೆಳಗಾವಿ ಜಿಲ್ಲಾಡಳಿತದಲ್ಲಿ ನಾನು ಹಸ್ತಕ್ಷೇಪ ಮಾಡೇ ಇಲ್ಲ. ನೀವು ಹೇಳಿದಂತೆ ಅಧಿಕಾರಿಗಳನ್ನು ನಿಯೋಜಿಸಿದ್ದೇನೆ. ವಿವಿಧ ಸಂಸ್ಥೆಗಳಿಗೆ ನಾಮಕರಣಗಳನ್ನು ಮಾಡಿಕೊಟ್ಟಿದ್ದೇನೆ. ಇನ್ನೂ ಕೆಲವು ಆಗಬೇಕೆಂದಿದ್ದೀರಿ. ಅವುಗಳನ್ನು ಮಾಡಿಕೊಡುತ್ತೇನೆ.

ನೀವು ನಮ್ಮ ಸರ್ಕಾರದ ಮೈತ್ರಿ ಪಾಲುದಾರರ ಪಕ್ಷದ ಸದಸ್ಯರು. ನಾನು ಆ ಪಕ್ಷದ ರಾಜಕೀಯ ವ್ಯವಹಾರದಲ್ಲಿ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ. ನಿಮ್ಮ ಬೇಡಿಕೆ ಏನಿದ್ದರೂ, ದೆಹಲಿ ಕಾಂಗ್ರೆಸ್ ನಾಯಕರಲ್ಲಿ ಬಗೆಹರಿಸಿಕೊಳ್ಳಬೇಕು. ಅದು ಸಾಧ್ಯವಾಗದೇ, ಸರ್ಕಾರ ಇಂದೇ ಬಿದ್ದು ಹೋಗುತ್ತದೆ. ನಾಳೆ ಬಿದ್ದು ಹೋಗಲಿದೆ. ನಾವು 18 ಶಾಸಕರು ರಾಜೀನಾಮೆ ನೀಡಿ, ಹೊರ ಹೋಗುತ್ತೇವೆ ಎಂಬ ನಿಮ್ಮ ದಿನ ನಿತ್ಯದ ಹೇಳಿಕೆಗಳು ನಮ್ಮ ಅಭಿವೃದ್ಧಿಯನ್ನೇ ಕುಂಠಿತಗೊಳಿಸಿರುವುದಲ್ಲದೆ, ಸಾರ್ವಜನಿಕರ ದಿಕ್ಕು ತಪ್ಪಿಸುತ್ತದೆ.

ಅಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಮುಖ್ಯಮಂತ್ರಿಯಾಗಲು ಹಾತೊರೆಯುತ್ತಿದ್ದಾರೆ. ಅವರು ಮುಖ್ಯಮಂತ್ರಿಯಾಗಲಿ, ತೊಂದರೆಯಿಲ್ಲ. ನೀವು ಅವರನ್ನು ಅಧಿಕಾರದಲ್ಲಿ ಕುಳ್ಳರಿಸಬೇಕಿದ್ದರೆ ಇಂದೇ, ಈ ಕ್ಷಣದಲ್ಲೇ ನಿರ್ಧಾರ ಕೈಗೊಳ್ಳಿ. ನನಗೂ ರಾಜಕೀಯ ಬರುತ್ತದೆ. ನಾನು ಮಾಡಿ ತೋರಿಸುತ್ತೇನೆ. ಆದರೆ ಮೊದಲು ನಿಮ್ಮ ನಿರ್ಧಾರ ಪ್ರಕಟಗೊಳ್ಳಬೇಕು.
ನೀವು ಇದನ್ನೇ ಮುಂದುವರಿಸಿದರೆ, ನಾನು ಮಾಧ್ಯಮದ ಮುಂದೆ ಹೋಗಿ ನಿಮ್ಮ ವರಿಷ್ಠರಿಗೆ ಒಂದು ಗಡುವು ನೀಡುತ್ತೇನೆ.
ಆ ಗಡುವಿನಲ್ಲಿ ನಿಮ್ಮ ವಿರುದ್ಧ ಅವರು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ, ನಾನು ನನ್ನ ದಾರಿ ನೋಡಿಕೊಳ್ಳುತ್ತೇನೆ ಎಂದು ಎಚ್ಚರಿಕೆ ನೀಡಬೇಕಾಗುತ್ತದೆ.

ನನಗೆ ದಿನನಿತ್ಯ ಒತ್ತಡ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಇದರಿಂದ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಳ್ಳುತ್ತಿವೆ. ಒಂದೆಡೆ ಬರವಾದರೆ, ಇನ್ನೊಂದೆಡೆ ಅತಿವೃಷ್ಟಿ. ಇದಕ್ಕೆ ಮಿಗಿಲಾಗಿ ಯಡಿಯೂರಪ್ಪ ಮತ್ತು ನಿಮ್ಮ ನಾಯಕರ ಕಾಟ. ನನಗೆ ಸಾಕಾಗಿ ಹೋಗಿದೆ. ನೀವು ಈ ಕೊಠಡಿ ಬಿಡುವ ಮೊದಲೇ ನಿರ್ಧಾರ ಪ್ರಕಟಿಸಿ, ಇಲ್ಲದಿದ್ದರೆ ನನ್ನ ನಿರ್ಧಾರ ಏನೆಂದು ಪರದೆ ಮೇಲೆ ನೋಡಿ ಎಂದು ಕಡ್ಡಿ ಮುರಿದಂತೆ ಸಹೋದರರಿಗೆ ತಿಳಿಸಿದ್ದಾರೆ.

ಮುಖ್ಯಮಂತ್ರಿಯವರ ಖಡಕ್ ನಿರ್ಧಾರದಿಂದ ವಿಚಲಿತರಾದ ಜಾರಕಿಹೊಳಿ ಸಹೋದರರು ನಾವು ಅಂತಹ ಯಾವುದೇ ನಿರ್ಧಾರ ಕೈಗೊಂಡಿಲ್ಲ. ನಮ್ಮ ಸಮಸ್ಯೆಗಳನ್ನು ವರಿಷ್ಠರಿಗೆ ಮನದಟ್ಟು ಮಾಡಿಕೊಡುವ ಉದ್ದೇಶದಿಂದ ಇಂತಹ ಒತ್ತಡ ಹೇರಬೇಕಾಯಿತು. ನಾವು ಬೆಳಗಾವಿ ಜಿಲ್ಲಾ ರಾಜಕೀಯ ಬಿಟ್ಟು ಹೊರಗೆಲ್ಲೂ ಬಂದಿಲ್ಲ. ನಮ್ಮ ಬುಡಕ್ಕೆ ಕೆಲವರು ಕೈ ಹಾಕಲು ಬಂದಿದ್ದಾರೆ. ಇದನ್ನು ಸಹಿಸಲು ಹೇಗೆ ಸಾಧ್ಯ? ಎಂದು ಮುಖ್ಯಮಂತ್ರಿಯವರನ್ನು ಪ್ರಶ್ನಿಸಿದ್ದಾರೆ.

ನಮ್ಮ ಸಮುದಾಯಕ್ಕೆ ಸಂಪುಟದಲ್ಲಿ ಇನ್ನಷ್ಟು ಪ್ರಾತಿನಿಧ್ಯ ಕಲ್ಪಿಸಬೇಕು. ನಿಗಮ ಮಂಡಳಿಗಳಲ್ಲೂ ಆದ್ಯತೆ ನೀಡಬೇಕು. ಜಿಲ್ಲೆಯ ಕೆಲ ಅಧಿಕಾರಿಗಳ ಬದಲಾವಣೆ ಮಾಡಿ, ಅಭಿವೃದ್ಧಿಗೆ ಸಂಪನ್ಮೂಲವನ್ನು ಒದಗಿಸಿ ಎಂದು ಮನವಿ ಮಾಡಿದ್ದಾರೆ.
ಆಡಳಿತ ಮಟ್ಟದಲ್ಲಿ ಏನು ಆಗಬೇಕೋ ಅದನ್ನು ಇಂದೇ ಮಾಡಿಕೊಡುತ್ತೇನೆ ಎಂದು ಭರವಸೆ ನೀಡಿದ ಮುಖ್ಯಮಂತ್ರಿಯವರು ಮಂತ್ರಿ ಮಂಡಲಕ್ಕೆ ಸತೀಶ್ ಅವರು ಸೇರ್ಪಡೆಗೊಳ್ಳಲಿ. ಅವರಿಗೇ ಉಪಮುಖ್ಯಮಂತ್ರಿ ಸ್ಥಾನವನ್ನು ನಿಮ್ಮ ಪಕ್ಷ ನೀಡಲಿ, ನನ್ನ ಅಭ್ಯಂತರವಿಲ್ಲ. ನಿಮ್ಮ ಪಕ್ಷಕ್ಕೆ ಲಭ್ಯವಿರುವ ಆರು ಸಚಿವ ಸ್ಥಾನಗಳನ್ನು ನಿಮ್ಮ ಸಮುದಾಯ (ವಾಲ್ಮೀಕಿ)ದವರಿಗೆ ನೀಡಲಿ. ಅದನ್ನು ನೀವು ಕಾಂಗ್ರೆಸ್ ವರಿಷ್ಠರಲ್ಲೇ ಬಗೆಹರಿಸಿಕೊಳ್ಳಬೇಕು.

ಅಲ್ಲಿಂದ ಒಂದು ಆದೇಶ ಬಂದರೆ ನಾನು ಬೇಕಾದರೆ ಇಂದೇ ಮಂತ್ರಿಮಂಡಲ ವಿಸ್ತರಿಸಿ ಅವರು ಸೂಚಿಸುವವರನ್ನು ಮಂತ್ರಿಯಾಗಿ ಮಾಡುತ್ತೇನೆ. ಇನ್ನು ನಿಗಮ ಮಂಡಳಿಗಳಿಗೆ ಪ್ರಸ್ತಾಪ ಮಾಡಿದ್ದೇನೆ. ನಾನು 85 ನಿಗಮಗಳನ್ನು ಗುರುತಿಸಿದ್ದೇನೆ. ನಿಮ್ಮ ಪಕ್ಷದ ಪಾಲು 55, ಉಳಿದವು ನಮ್ಮವು.

ಇದರಲ್ಲಿ ನಿಮಗೆ ಯಾವುದು ಬೇಕಾದರೂ ತೆಗೆದುಕೊಳ್ಳಿ ಮತ್ತು ಹೆಸರನ್ನು ಕೊಡಿ ನಾನು ನೇಮಕ ಮಾಡುತ್ತೇನೆ ಎಂದು ನಿಮ್ಮ ಪಕ್ಷದ ಮುಖಂಡರಿಗೆ ಹೇಳಿದ್ದೇನೆ. ಆದರೆ ಇದುವರೆಗೂ ಸಂಪುಟ ವಿಸ್ತರಣೆ ಮತ್ತು ನಿಗಮ ಮಂಡಳಿಗಳ ನೇಮಕಾತಿಗೆ ಅನುಮತಿ ನೀಡಿಲ್ಲ. ನೀವು ದೆಹಲಿ ಭೇಟಿ ಸಂದರ್ಭದಲ್ಲಿ ವರಿಷ್ಠರ ಮೇಲೆ ಒತ್ತಡ ತನ್ನಿ ನಿಮಗೆ ಬೇಕಾಗಿದ್ದನ್ನು ನೀವು ಮಾಡಿಕೊಳ್ಳಿ. ನಮ್ಮಿಂದ ಯಾವುದೇ ಅಭ್ಯಂತರವಿಲ್ಲ.

ಇದನ್ನು ಬಿಟ್ಟು ದಿನನಿತ್ಯ ನನ್ನ ಮತ್ತು ಸರ್ಕಾರದ ಮೇಲೆ ಒತ್ತಡ ಹೇರುವುದು ಮುಂದುವರಿಸಿದರೆ ನಾನು ಸಹಿಸುವುದಿಲ್ಲ. ನನ್ನ ದಾರಿ ನಾನು ನೋಡಿಕೊಳ್ಳಬೇಕಾಗುತ್ತದೆ ಎಂದು ಮತ್ತೊಮ್ಮೆ ಎಚ್ಚರಿಸಿದ್ದಾರೆ.

ಕುಮಾರಸ್ವಾಮಿ ನೇತೃತ್ವದ ಸರ್ಕಾರ ಉರುಳಿಸಿ, ಯಡಿಯೂರಪ್ಪ ನಾಯಕತ್ವದಲ್ಲಿ ಸರ್ಕಾರ ರಚನೆಗೆ ಬಿಜೆಪಿ ವರಿಷ್ಠರು ಆಸಕ್ತಿ ತೋರದ ಮಾಹಿತಿ ಜಾರಕಿಹೊಳಿ ಕುಟುಂಬಕ್ಕೆ ಲಭ್ಯವಾಗುತ್ತಿದ್ದಂತೆ ಇತ್ತ ಬಿಜೆಪಿಯು ಇಲ್ಲದೆ, ಇನ್ನು ಇರುವ ಪಕ್ಷವನ್ನು ಕಳೆದುಕೊಂಡು ಜಿಲ್ಲೆಯಲ್ಲಿ  ಏಕಾಂಗಿಯಾಗಿ ಬಿಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂಬ ಮುನ್ಸೂಚನೆ ದೊರೆಯುತ್ತಿದ್ದಂತೆ ಸಹೋದರರು ಮುಖ್ಯಮಂತ್ರಿಯವರ ಮಾತುಗಳಿಗೆ ಮನ್ನಣೆ ನೀಡಿ, ಅನಿವಾರ್ಯವಾಗಿ ತಮ್ಮ ಬಂಡಾಯ ಬಾವುಟ ಕೆಳಗಿಳಿಸಬೇಕಾಗಿ ಬಂದಿದೆ.

Translate »