ಮೈಸೂರಲ್ಲಿ ನಾಳೆಯಿಂದ  `ಬಿಲ್ಡ್ ಟೆಕ್-2018’
ಮೈಸೂರು

ಮೈಸೂರಲ್ಲಿ ನಾಳೆಯಿಂದ `ಬಿಲ್ಡ್ ಟೆಕ್-2018’

November 22, 2018

18ನೇ ವಾರ್ಷಿಕ ರಾಷ್ಟ್ರೀಯ ವಿಚಾರ ಸಂಕಿರಣ
ಮೈಸೂರು: ಮೈಸೂರಿನಲ್ಲಿ ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾದ ಮೈಸೂರು ಘಟಕದ ಆಶ್ರಯದಲ್ಲಿ ನ.23 ಮತ್ತು 24ರಂದು ಮೈಸೂರಿನ ಮಾನಸಗಂಗೋತ್ರಿ ಸೆನೆಟ್ ಭವನದಲ್ಲಿ `ಬಿಲ್ಡ್ ಟೆಕ್-2018’ 18ನೇ ವಾರ್ಷಿಕ ರಾಷ್ಟ್ರೀಯ ವಿಚಾರ ಸಂಕಿರಣ ಆಯೋಜಿಸಲಾಗಿದೆ.

`ಸ್ಮಾರ್ಟ್ ಕನ್‍ಸ್ಟ್ರಕ್ಷನ್ ಅಂಡ್ ಎಫಿಷಿಯಂಟ್ ಬಿಲ್ಡಿಂಗ್ ಸರ್ವಿಸಸ್’ ಘೋಷ’ ವಾಕ್ಯದ ವಿಚಾರ ಸಂಕಿರಣದಲ್ಲಿ ಬಳಕೆಗೆ ಲಭ್ಯವಿರುವ ಆಧುನಿಕ ಉಪಕರಣಗಳು ಇನ್ನಿತರ ವಿಚಾರಗಳ ಕುರಿತಂತೆ ರಾಷ್ಟ್ರೀಯ ಮನ್ನಣೆ ಪಡೆದ 10 ಮಂದಿ ತಜ್ಞರು ಉಪನ್ಯಾಸ ನೀಡಲಿದ್ದಾರೆ ಎಂದು ಬಿಲ್ಡ್‍ಟೆಕ್ ಅಧ್ಯಕ್ಷ ವಿ.ಶ್ರೀನಾಥ್ ಬುಧವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ದೇಶದ ವಿವಿಧ ಕಡೆಗಳಿಂದ ಕಟ್ಟಡ ನಿರ್ಮಾತೃಗಳು, ಕಟ್ಟಡ ವಿನ್ಯಾಸಕರು, ಭೂ ವಿನ್ಯಾಸಗಾರರು, ಸಲಹೆಗಾರರು, ವಿದ್ಯಾರ್ಥಿಗಳು, ಸರ್ಕಾರಿ ಪ್ರತಿನಿಧಿಗಳು ಸೇರಿದಂತೆ 600ಕ್ಕೂ ಹೆಚ್ಚು ಮಂದಿ `ಬಿಲ್ಡ್ ಟೆಕ್’ ಸಮಾವೇಶದಲ್ಲಿ ಭಾಗವಹಿಸುತ್ತಿದ್ದಾರೆ. ಉನ್ನತ ಶಿಕ್ಷಣ ಸಚಿವರೂ ಆದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ ನ.23ರಂದು ಬೆಳಿಗ್ಗೆ 10 ಗಂಟೆಗೆ ಉದ್ಘಾಟನೆ ಮಾಡಲಿದ್ದಾರೆ. ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತಕುಮಾರ್, ಬಿಐಎ ರಾಜ್ಯ ಛೇರ್ಮನ್ ಕೆ.ಎಸ್. ಸೋಮೇಶ್ವರರೆಡ್ಡಿ, ಸ್ಟಾರ್ ವರ್ತ್ ಇನ್ಫ್ರಾ ಅಂಡ್ ಕನ್‍ಸ್ಟ್ರಕ್ಷನ್ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕ ರಾಜ್ ಪಿಳ್ಳೈ ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಐಎ ಮೈಸೂರು ಘಟಕದ ಅಧ್ಯಕ್ಷ ಕೆ.ಸುಬ್ರಹ್ಮಣ್ಯರಾವ್, ಗೌರವ ಕಾರ್ಯದರ್ಶಿ ಕೆ.ಅಜಿತ್ ಕುಮಾರ್, ಬಿಲ್ಡ್‍ಟೆಕ್ ಗೌರವ ಕಾರ್ಯದರ್ಶಿ ಸಿ.ಎಸ್.ಶ್ರೀಕಾಂತ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Translate »