ಚೀಟಿ ವ್ಯವಹಾರದಲ್ಲಿ ಲಕ್ಷಾಂತರ ರೂ. ವಂಚನೆ: ನೊಂದವರ ಅಳಲು
ಮೈಸೂರು

ಚೀಟಿ ವ್ಯವಹಾರದಲ್ಲಿ ಲಕ್ಷಾಂತರ ರೂ. ವಂಚನೆ: ನೊಂದವರ ಅಳಲು

October 11, 2018

ಮೈಸೂರು:  ಯಾವುದೇ ರಹದಾರಿ ಇಲ್ಲದೆ ಚೀಟಿ ವ್ಯವಹಾರ ನಡೆಸಿ, ಸಾಕಷ್ಟು ಜನರಿಗೆ ಲಕ್ಷಾಂತರ ರೂ. ವಂಚಿಸಿದ  ಮೈಸೂರಿನ ಶ್ರೀರಾಂಪುರದ ಎನ್.ಗುರುಮೂರ್ತಿ ಉರುಫ್ ರಾಜು, ಅವರ ಪತ್ನಿ ಪ್ರೀತಿ, ಬಾಮೈದ ಮಂಜು ಹಾಗೂ ಅಳಿಯ ಶಶಿಕುಮಾರ್ ವಿರುದ್ಧ ಅಶೋಕಪುರಂ ಪೊಲೀಸ್ ಠಾಣೆಗೆ ದೂರು ನೀಡಿರುವುದಾಗಿ ಚೀಟಿಯಿಂದ ಹಣ ಕಳೆದುಕೊಂಡು ನೊಂದ ಹಲವರು ಬುಧವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರೈಲ್ವೆ ಇಲಾಖೆಯ ನಿವೃತ್ತ ನೌಕರ ಶ್ರೀರಾಂಪುರದ ಟಿ.ಎಸ್.ಹನುಮಂತರಾಯಪ್ಪ, ಶ್ರೀರಾಂಪುರದ ಆನಂದ ಬಸವರಾಜು, ರುದ್ರಪ್ಪಸ್ವಾಮಿ, ವಿಜಯನಗರ 2ನೇ ಹಂತದ ಜೆ.ಪಿ.ಸ್ವಾಮಿ ಅವರು ಆರೋಪಿಯಿಂದ ತಮಗಾಗಿರುವ ವಂಚನೆ ಕುರಿತು ಸುದ್ದಿಗೋಷ್ಠಿ ಯಲ್ಲಿ ವಿವರಿಸಿದರು. 10 ವರ್ಷಗಳಿಂದ ಚೀಟಿ ವ್ಯವಹಾರ ನಡೆಸಿಕೊಂಡು ಬರುತ್ತಿದ್ದ. ಆತನನ್ನು ನಂಬಿ ನಾವೆಲ್ಲರೂ ಲಕ್ಷಾಂತರ ರೂ. ಹಣವನ್ನು ಚೀಟಿಯಲ್ಲಿ ತೊಡಗಿ ಸಿದೆವು. 8 ವರ್ಷಗಳ ಕಾಲ ಚೀಟಿಯನ್ನು ಸರಿಯಾಗಿ ನಡೆಸಿಕೊಂಡು ಬರುತ್ತಿದ್ದ ಗುರುಮೂರ್ತಿ, ಕಳೆದ ಫೆಬ್ರವರಿ ತಿಂಗಳಲ್ಲಿ ಏಕಾಏಕಿ ಚೀಟಿ ಸ್ಥಗಿತಗೊಳಿಸಿ, ಸದಸ್ಯರಿಗೆ ಚೀಟಿ ಹಣ ನೀಡದೆ ಪರಾರಿಯಾಗಿದ್ದಾರೆ. ಇವರ ವಿರುದ್ಧ ಮೈಸೂರಿನ 5ನೇ ಜೆಎಂಎಫ್‍ಸಿ ನ್ಯಾಯಾಲಯದಲ್ಲಿ ಪಿರ್ಯಾದು ಹೂಡಿದ್ದು, ನ್ಯಾಯಾಲಯದಿಂದ ಅಶೋಕಪುರಂ ಪೊಲೀಸ್ ಠಾಣೆಗೆ ಕಳುಹಿಸಿ ಠಾಣಾಧಿಕಾರಿಗಳು ಎಫ್‍ಐಆರ್ ಸಹ ಮಾಡಿದ್ದಾರೆ. ಆದರೆ ಗುರುಮೂರ್ತಿ ಮನೆಗೆ ಹೋಗಿ ವಿಚಾರಿಸಿದರೆ, ಚೀಟಿ ವ್ಯವಹಾರಕ್ಕೂ ತಮಗೂ ಸಂಬಂಧವಿಲ್ಲ ಎಂದು ಅವರ ಪತ್ನಿ ಹಾಗೂ ಇತರರು ಹಾರಿಕೆ ಉತ್ತರ ನೀಡುತ್ತಿದ್ದಾರೆ ಎಂದು ಅವರು ದೂರಿದರು. ನಾವೆಲ್ಲರೂ ನಿವೃತ್ತಿ ವೇತನದ ಹಣವನ್ನು ಚೀಟಿಗೆ ಕಟ್ಟಿದ್ದು, ಇದೇ ರೀತಿ ನೂರಾರು ಜನರು ಆತನ ವಂಚನೆಗೆ ಒಳಗಾಗಿದ್ದಾರೆ ಎಂದು ಅಳಲು ತೋಡಿಕೊಂಡರು. ಪೊಲೀಸರು ಆರೋಪಿಯನ್ನು ಬಂಧಿಸಿ, ನಮಗೆ ಬರಬೇಕಾದ ಚೀಟಿ ಹಣವನ್ನು ಕೊಡಿಸಿಕೊಡುವಂತೆ ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಇವರ ಪರ ವಕೀಲ ಎನ್.ಎಸ್.ಹರೀಶ್‍ಕುಮಾರ್ ಉಪಸ್ಥಿತರಿದ್ದರು.

 

Translate »