ಬೆಂಬಲ ಬೆಲೆಯಲ್ಲಿ ಮೆಕ್ಕೆ ಜೋಳ, ಅಕ್ಕಿ ಖರೀದಿ ಕೆಎಂಎಫ್ ಮೂಲಕ ಜೋಳ ಖರೀದಿಗೆ ಸೂಚನೆ
ಮೈಸೂರು

ಬೆಂಬಲ ಬೆಲೆಯಲ್ಲಿ ಮೆಕ್ಕೆ ಜೋಳ, ಅಕ್ಕಿ ಖರೀದಿ ಕೆಎಂಎಫ್ ಮೂಲಕ ಜೋಳ ಖರೀದಿಗೆ ಸೂಚನೆ

October 26, 2018

ಬೆಂಗಳೂರು: ಪ್ರತೀ ಕ್ವಿಂಟಾಲ್ ಮೆಕ್ಕೆ ಜೋಳಕ್ಕೆ 1300 ರೂ. ಹಾಗೂ ಅಕ್ಕಿಗೆ 1200 ರೂ. ಬೆಂಬಲ ನಿಗದಿಪಡಿಸಿದ್ದು, ಕರ್ನಾಟಕ ಹಾಲು ಒಕ್ಕೂಟದ ಮುಖಾಂತರ ಮೆಕ್ಕೆ ಜೋಳ ಮತ್ತು ಅಕ್ಕಿಯನ್ನು ನೇರವಾಗಿ ಖರೀದಿಸುವಂತೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದರು.

ಮೆಕ್ಕೆ ಜೋಳ ಮತ್ತು ಅಕ್ಕಿಗೆ ಬೆಂಬಲ ಬೆಲೆ ನಿಗದಿಪಡಿಸುವ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 2 ಲಕ್ಷ ಮೆಟ್ರಿಕ ಟನ್ ಮೆಕ್ಕೆ ಜೋಳವನ್ನು ಕ್ವಿಂಟಾಲ್‍ಗೆ 1300 ರೂ.ಗಳಂತೆ ರೈತರಿಂದ ಖರೀದಿಸಲು ಅಧಿಕಾರಿಗಳಿಗೆ ಸೂಚಿಸಿದರು. ಅಲ್ಲದೇ ಕ್ವಿಂಟಾಲ್‍ಗೆ 1200 ರೂ. ಗಳಂತೆ ಅಕ್ಕಿಯನ್ನೂ ಖರೀದಿಸಬೇಕು ಎಂದು ಸೂಚನೆ ನೀಡಿದ ಮುಖ್ಯಮಂತ್ರಿಗಳು, ಇದರಿಂದಾಗಿ ಮಧ್ಯವರ್ತಿಗಳ ಹಾವಳಿ ತಪ್ಪಿಸಬಹುದು ಎಂದರು. ಬೆಂಬಲ ಬೆಲೆಯಲ್ಲಿ ಇವುಗಳನ್ನು ಖರೀದಿಸಲು ಆರ್ಥಿಕ ಇಲಾಖೆಯಿಂದ 50 ಕೋಟಿ ರೂ.ಗಳನ್ನು ಪಡೆಯು ವಂತೆ ಅವರು ಸೂಚನೆ ನೀಡಿದರು.

ಸಭೆಯಲ್ಲಿ ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ, ಪಶು ಸಂಗೋಪನಾ ಇಲಾಖೆ ಸಚಿವ ವೆಂಕಟರಾಮ್ ನಾಡಗೌಡ, ಕರ್ನಾಟಕ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಸಿಂಗ್, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐಎನ್‍ಎಸ್ ಪ್ರಸಾದ್, ಮುಖ್ಯಮಂತ್ರಿಗಳ ಆರ್ಥಿಕ ಸಲಹೆ ಗಾರ ಸುಬ್ರಹ್ಮಣ್ಯಂ, ಪ್ರಧಾನ ಕಾರ್ಯದರ್ಶಿ ಡಾ. ಇ.ವಿ.ರಮಣರೆಡ್ಡಿ ಮತ್ತಿತರರಿದ್ದರು.

Translate »