ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ಶೈಕ್ಷಣಿಕ ಪ್ರಗತಿ ಉತ್ತಮ
ಮೈಸೂರು

ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ಶೈಕ್ಷಣಿಕ ಪ್ರಗತಿ ಉತ್ತಮ

October 26, 2018

ಮೈಸೂರು: ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ಶೈಕ್ಷಣಿಕ ಪ್ರಗತಿ ಉತ್ತಮವಾಗಿದೆ ಎಂದು ಚಾಮರಾಜನಗರ ಸಂಸದ ಆರ್.ಧ್ರುವ ನಾರಾಯಣ್ ತಿಳಿಸಿದರು.

ಮೈಸೂರಿನ ಇಂಜಿನಿಯರುಗಳ ಸಂಸ್ಥೆ ಸಭಾಂಗಣದಲ್ಲಿ ಗುರುವಾರ ಆಯೋ ಜಿಸಿದ್ದ ಪೀಪಲ್ಸ್ ಪಾರ್ಕ್ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಆರ್.ಗೋವಿಂದ ಅವರ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಕೇವಲ ಶೇ.12ರಷ್ಟಿದ್ದ ಶೈಕ್ಷಣಿಕ ಪ್ರಗತಿ, ಪ್ರಸ್ತುತ ಶೇ.74ರಷ್ಟಿದೆ. ಕರ್ನಾಟಕ ರಾಜ್ಯದಲ್ಲಿ ಶೇ.75 ರಷ್ಟಿದ್ದು, ಇತರೆ ರಾಜ್ಯಗಳಿಗಿಂತ ಸಾಕಷ್ಟು ಉತ್ತಮವಾಗಿದೆ ಎಂದು ಹೇಳಿದರು.

ಇನ್ನೂ ಪ್ರಗತಿಯಾಗಬೇಕು: ಹಿಂದೆ ಶಾಲಾ-ಕಾಲೇಜುಗಳ ಸಂಖ್ಯೆ ಕಡಿಮೆ ಯಿತ್ತು. ಈಗ ಎಲ್ಲಾ ಭಾಗಗಳಲ್ಲೂ ಸರ್ಕಾರಿ ಶಾಲಾ-ಕಾಲೇಜುಗಳಿವೆ. ಚಾಮರಾಜ ನಗರದಲ್ಲಿ 5, ಗುಂಡ್ಲುಪೇಟೆಯಲ್ಲಿ 3 ಹೀಗೆ ಎಲ್ಲಾ ತಾಲೂಕುಗಳಲ್ಲೂ ಪದವಿ ಕಾಲೇಜುಗಳಿವೆ. ಆದರೆ ನಮ್ಮ ದೇಶದಲ್ಲಿ ಶಾಲಾ ಶಿಕ್ಷಣ ಪಡೆಯುವ ಶೇ.75ರಷ್ಟು ವಿದ್ಯಾರ್ಥಿಗಳಲ್ಲಿ ಪದವಿ ವ್ಯಾಸಂಗಕ್ಕೆ ದಾಖಲಾಗುವುದು ಕೇವಲ ಶೇ.24ರಷ್ಟು ಮಂದಿ ಮಾತ್ರ. ವಿದೇಶಗಳಲ್ಲಿ ಶೇ.87ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪದವಿ ಶಿಕ್ಷಣಕ್ಕೆ ದಾಖಲಾಗುತ್ತಾರೆ. ಹಾಗಾಗಿ ನಮ್ಮಲ್ಲೂ ಪದವಿ ಶಿಕ್ಷಣದ ಬಗ್ಗೆ ವಿದ್ಯಾರ್ಥಿಗಳಲ್ಲಿ ಆಸಕ್ತಿ ಬೆಳೆಯಬೇಕೆಂದು ಆಶಿಸಿದ ಅವರು, ನೂತನ ಕಾಲೇಜುಗಳನ್ನು ಆರಂಭಿಸುತ್ತೇವೆ. ಆದರೆ ಮೂಲ ಸೌಕರ್ಯಗಳ ಕೊರತೆ ಯಿಂದ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಸಾಧ್ಯ ವಾಗಿಲ್ಲ. ಮುಂಚಿತವಾಗಿಯೇ ಎಲ್ಲಾ ಮೂಲ ಸೌಕರ್ಯಗಳನ್ನು ಕಲ್ಪಿಸಿ, ಬಳಿಕ ಶೈಕ್ಷಣಿಕ ಕೇಂದ್ರಗಳನ್ನು ಆರಂಭಿಸಬೇಕು. ಇದರ ಜವಾಬ್ದಾರಿ ನಮ್ಮಂತಹ ಜನಪ್ರತಿನಿಧಿಗಳು ಹಾಗೂ ಸರ್ಕಾರದ್ದಾಗಿದೆ ಎಂದು ತಿಳಿಸಿ ದರು. ಸಮಾರಂಭದಲ್ಲಿ ಅಭಿನಂದನಾ ಸಮಿತಿ ವತಿಯಿಂದ ಧ್ರುವನಾರಾಯಣ್ ಅವರು, ಆರ್.ಗೋವಿಂದ ಹಾಗೂ ಟಿ.ಲಲಿತಾ ದಂಪತಿಯನ್ನು ಅಭಿನಂದಿಸಿದರು. ಹಿರಿಯ ಸಾಹಿತಿ ಪ್ರೊ.ಮಲೆಯೂರು ಗುರುಸ್ವಾಮಿ ಅಭಿನಂದನಾ ಭಾಷಣ ಮಾಡಿದರು.

Translate »