`ವುಮೆನ್ ಅಂಡ್ ಲಾ’ ಪುಸ್ತಕ ಬಿಡುಗಡೆ
ಮೈಸೂರು

`ವುಮೆನ್ ಅಂಡ್ ಲಾ’ ಪುಸ್ತಕ ಬಿಡುಗಡೆ

October 26, 2018

ಮೈಸೂರು:  ಎಸ್‍ಬಿಆರ್‍ಆರ್ ಮಹಾಜನ ಕಾನೂನು ಕಾಲೇಜಿನ ವಿದ್ಯಾರ್ಥಿ ಪರೀಕ್ಷಿತ್ ಕೆ.ನಾಯ್ಕ್ ಅವರ `ವುಮೆನ್ ಅಂಡ್ ಲಾ (ಮಹಿಳೆ ಮತ್ತು ಕಾನೂನು)’ ಪುಸ್ತಕ ವನ್ನು ಗುರುವಾರ ಬಿಡುಗಡೆ ಮಾಡಲಾಯಿತು.

ಎಸ್‍ಬಿಆರ್‍ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ `ವುಮೆನ್ ಅಂಡ್ ಲಾ’ ಎಂಬ ಆಂಗ್ಲಾ ಭಾಷಾ ಪುಸ್ತಕವನ್ನು ನಿವೃತ್ತ ಐಪಿಎಸ್ ಅಧಿಕಾರಿ ಕೆ.ಪಿ.ಪುಟ್ಟಸ್ವಾಮಿ ಬಿಡುಗಡೆ ಮಾಡಿದರು.
ಬಳಿಕ ಮಾತನಾಡಿದ ಅವರು, ಮಹಿಳಾ ಸಮುದಾಯ ಸಮಾಜ ದಲ್ಲಿ ಎದುರಿಸುವ ಸಮಸ್ಯೆಗಳು ಹಾಗೂ ಅದರ ನಿವಾರಣೆಗೆ ಇರುವ ಕಾನೂನು ಅವಕಾಶಗಳ ಮೇಲೆ ಪುಸ್ತಕ ಬೆಳಕು ಚೆಲ್ಲಿದೆ. ಮಹಿಳೆ ಕಾನೂನು ರಕ್ಷಣೆ ಪಡೆಯುವ ಜಾಗೃತಿ ಇಂತಹ ಕೃತಿಗಳಿಂದ ಮೂಡಲಿದೆ. ಇದೇ ರೀತಿ ಸಮಾಜದ ಹತ್ತುಹಲವು ಸಮಸ್ಯೆಗಳ ಕುರಿತಂತೆ ಲೇಖಕರು ಮುಂದಿನ ದಿನಗಳಲ್ಲಿ ಇನ್ನು ಉತ್ತಮ ಕೃತಿಗಳನ್ನು ಹೊರತರಲಿ ಎಂದು ಆಶಿಸಿದರು.

ಕೃತಿ ಕರ್ತೃವೂ ಆದ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿ ಪರೀಕ್ಷಿತ್ ಕೆ.ನಾಯ್ಕ್ ಮಾತನಾಡಿ, ದೌರ್ಜನ್ಯಕ್ಕೆ ಒಳಗಾಗುವ ಮಹಿಳೆಯರು ಮೌನಕ್ಕೆ ಶರಣಾಗದೇ ಪ್ರಬಲ ಪ್ರತಿರೋಧ ವ್ಯಕ್ತ ಪಡಿಸಬೇಕು. ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಹೋರಾಟಕ್ಕೂ ಮುಂದಾಗಬೇಕು ಎಂಬ ಜಾಗೃತಿ ಉಂಟು ಮಾಡುವ ಉದ್ದೇಶ ದಿಂದ ಈ ಕೃತಿ ರಚನೆ ಮಾಡಿದ್ದೇನೆ ಎಂದರು.
ಇದೊಂದೇ ಪುಸ್ತಕ ಮಹಿಳಾ ಸಬಲೀಕರಣಕ್ಕೆ ಉತ್ತೇಜನ ನೀಡುತ್ತದೆ ಎಂಬ ಭ್ರಮೆ ನನಗಿಲ್ಲ. ಮಹಿಳೆಗೆ ಸಂಬಂಧಿಸಿದಂತೆ ಹತ್ತುಹಲವು ಪುಸ್ತಕಗಳು ಬಂದಿವೆ. ಆದರೆ ಅವುಗಳು ಯಾವ ರೀತಿ ಉನ್ನತ ಪರಿವರ್ತನೆ ಉಂಟು ಮಾಡುತ್ತವೆ ಎಂಬುದು ಮುಖ್ಯ. 2012ರಲ್ಲಿ ನಡೆದ ನಿರ್ಭಯ ಪ್ರಕರಣ ದೇಶದಾದ್ಯಂತ ಭಾರೀ ಸಂಚಲನ ಮೂಡಿಸಿತು. ಸಾಮೂಹಿಕ ಅತ್ಯಾಚಾರದ ಈ ಪ್ರಕರಣದ ಬಳಿಕ ಕಾನೂನುಗಳಲ್ಲಿ ಅನೇಕ ಕಠಿಣ ನಿಲುವುಗಳನ್ನು ತರಲಾಯಿತು. ಇಂದು ಸಾಮಾಜಿಕ ಜಾಲತಾಣಗಳಲ್ಲಿನ ಸಂಗತಿಗಳು ಬಹುತೇಕ ಸುಳ್ಳಿನಿಂದ ಕೂಡಿದ್ದು, ಹೀಗೆ ಸುಳ್ಳು ಸಂಗತಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ತೂರಿ ಬಿಡುವವರು ಮೊದಲು ತಮ್ಮ ಸಾಮಾ ಜಿಕ ಜವಾಬ್ದಾರಿ ಅರಿತುಕೊಳ್ಳಬೇಕು ಎಂದು ಹೇಳಿದರು.

ಪ್ರಸ್ತುತ `ಮೀ ಟೂ’ ಅಭಿಯಾನ ಹಾಗೂ ಶಬರಿಮಲೆ ಅಯ್ಯಪ್ಪ ಸನ್ನಿಧಿಗೆ ಎಲ್ಲಾ ವಯೋಮಾನದ ಮಹಿಳೆಯರಿಗೂ ಪ್ರವೇಶ ನೀಡಬೇಕೆಂದು ಸುಪ್ರಿಂ ಕೋರ್ಟ್ ನೀಡಿರುವ ತೀರ್ಪಿನ ಬಗ್ಗೆ ಪರ-ವಿರೋಧ ಚರ್ಚೆಗಳು ವ್ಯಾಪಕಗೊಂಡಿವೆ. `ಮೀ ಟೂ’ ನೊಂದ ಮಹಿಳೆಯರಿಗೆ ನ್ಯಾಯಕೊಡಿಸಲು ಮುಂದುವರೆಯ ಬೇಕು. ಆದರೆ ಅದರ ಹೆಸರಿನಲ್ಲಿ ದುರ್ಬಳಕೆ ಆಗದಂತೆ ಎಚ್ಚರ ವಹಿಸಬೇಕು ಎಂದು ಸಲಹೆ ನೀಡಿದರು. ಮಾನವ ಹಕ್ಕುಗಳಿಗೆ ಸಂಬಂಧಿಸಿದಂತೆ 2013ರಲ್ಲಿ ನನ್ನ ಚೊಚ್ಚಲ ಪುಸ್ತಕ ಪ್ರಕಟಗೊಂಡಿತ್ತು. ಇಂದಿನ ನೂತನ ಪುಸ್ತಕ ಹೊರತರಲು 2014ರಲ್ಲಿ ಕಾರ್ಯಚಟುವಟಿಕೆ ಆರಂಭಿಸಿದ್ದು, ಇದೀಗ ಇಂದು ಪುಸ್ತಕ ಬಿಡುಗಡೆಗೊಂಡಿದೆ. ಈ ಪುಸ್ತಕ 150 ದೇಶಗಳಲ್ಲಿ ಆನ್‍ಲೈನ್‍ನಲ್ಲಿ ದೊರೆಯಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಹಾಸನದ ಕೆಎಸ್‍ಆರ್‍ಪಿ ಕಮಾಂಡೆಂಟ್ ಕೃಷ್ಣಪ್ಪ, ಸೇಂಟ್ ಫಿಲೋಮಿನ ಕಾಲೇಜಿನ ಪ್ರಾಂಶುಪಾಲರಾದ ಡಾ.ರುತ್ ಶಾಂತ ಕುಮಾರಿ, ಮಹಾಜನ ಎಜುಕೇಷನ್ ಸೊಸೈಟಿ (ಎಂಇಎಸ್) ಅಧ್ಯಕ್ಷ ಆರ್.ವಾಸುದೇವ ಮೂರ್ತಿ, ಕಾರ್ಯದರ್ಶಿ ಡಾ.ಟಿ.ವಿಜಯಲಕ್ಷ್ಮೀ ಮುರುಳೀಧರ್, ಮಹಾಜನ ಕಾನೂನು ಕಾಲೇಜಿನ ಪ್ರಾಂಶುಪಾಲ ರಾದ ಎ.ಪಿ.ಸವಿತಾ ಮತ್ತಿತರರು ಹಾಜರಿದ್ದರು.

Translate »