ತಿ.ನರಸೀಪುರ: ವರುಣದ ಕೃಪೆಯಿಂದ ಧರೆಗಿಳಿದು ಹಚ್ಚ ಹಸುರಿನಲ್ಲಿ ಮೈತಳೆದ ಜೀವಗಂಗೆ ಕಾವೇರಿ ಮಾತೆಯನ್ನು ಪೂಜಿಸಿ ಗೌರವಿಸುವ ಕಾವೇರಿ ಸಂಭ್ರಮ ಎಂಬ ವಿಶಿಷ್ಟವಾದ ವಿನೂತನ ಕಾರ್ಯಕ್ರಮ ತಾಲೂಕಿನ ಯಾಚೇನಹಳ್ಳಿ ಗ್ರಾಮದಲ್ಲಿ ವಿಜೃಂಭಣೆಯಿಂದ ನಡೆಯಿತು.
ನೆರೆಯ ಮಂಡ್ಯ ಜಿಲ್ಲೆಯ ಗಡಿ ಭಾಗದಲ್ಲಿರುವಂತಹ ತಾಲ್ಲೂಕಿನ ಯಾಚೇನಹಳ್ಳಿ ಗ್ರಾಮ ಸೋಮವಾರ ಸಂಜೆ ಮಿನಿ ದಸರಾ ಮಾದರಿಯಲ್ಲಿ ನಡೆದಂತಹ ಕಾವೇರಿ ಸಂಭ್ರಮ ಸಡಗರದ ಹಬ್ಬಕ್ಕೆ ಸಾಕ್ಷಿಯಾಗಿತ್ತು. ಬೆಳ್ಳಿ ರಥದಲ್ಲಿ ವೀರಾಜಮಾನಳಾಗಿದ್ದ ಕಾವೇರಿ ಮಾತೆಯ ಉತ್ಸವದ ಮೆರವಣಿಗೆಗೆ ಸಾಂಸ್ಕೃತಿಕ ಕಲಾ ತಂಡಗಳು ಮೆರ ನೀಡಿದರೆ, ಹಳ್ಳಿ ಸೊಗಡಿನ ಎತ್ತಿನಗಾಡಿಗಳು, ನಾಡ ಎಮ್ಮೆಗಳು, ಯಂತ್ರೋಕರಣ ಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳ ವೇಷಭೂಷಣ ಗಳು ಮೆರವಣಿಗೆಗೆ ಕಳೆ ತಂದಿದ್ದವು.
ಸುಲ್ತಾನ್ ರೋಡ್ ವೃತ್ತದಿಂದ ವಿದ್ಯುಕ್ತವಾಗಿ ಆರಂಭಗೊಂಡ ಕಾವೇರಿ ಪ್ರತಿಮೆ ಮೆರವಣಿಗೆ ಗ್ರಾಮದ ಶ್ರೀ ಸಿದ್ದೇಶ್ವರ ದೇವಾಲಯ ಆವರಣವನ್ನು ತಲುಪಿತು. ಪೂರ್ಣಕುಂಭ ಸೇರಿದಂತೆ ಪೂಜಾ ಕುಣಿತ, ವೀರೆಗಾಸೆ, ಮಂಗಳವಾದ್ಯ, ವೀರಮಕ್ಕಳ ಕುಣಿತ, ತಮಟೆ ವಾದನ, ಚಿಲಿಪಿಲಿ ಗೊಂಬೆ, ಡೊಳ್ಳು ಕುಣಿತ, ಪಟಕುಣಿತ, ಕೋಲಾಟ, ಮಹಿಳೆಯರ ಸೋಬಾನೆಪದ, ಜೋಡಿ ಎತ್ತಿನ ಮೆರವಣಿಗೆ, ಎತ್ತಿನಗಾಡಿ ಪ್ರದರ್ಶನ, ಟ್ರ್ಯಾಕ್ಟರ್-ಕೃಷಿ ಪರಿಕರ ಪ್ರದರ್ಶನ ಹಾಗೂ ವಿವಿಧ ವೇಷಭೂಷಣಗಳ ಕಲಾಕೃತಿಗಳು ಸಾಥ್ ನೀಡಿದವು.
ನಂತರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾವರಣದಲ್ಲಿ ರಾಸಿ ಪೂಜೆಯನ್ನು ಮಾಡಲಾಯಿತು. ಕಾವೇರಿ ಸಂಭ್ರಮದ ಪ್ರಯುಕ್ತ ದೇವಾಲಯ ಆವರಣದಲ್ಲಿ ಆಯೋಜಿಸಲಾಗಿದ್ದ ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದ ಯುವತಿಯರು ಮತ್ತು ಮಹಿಳೆಯರಿಗೆ ಬಹುಮಾನ ವಿತರಿಸಲಾಯಿತು. ಉತ್ಸವದಲ್ಲಿ ಭಾಗಿಯಾಗಿದ್ದ ಕಲಾ ತಂಡಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ನಂತರ ಸಾರ್ವ ಜನಿಕರಿಗೆ ಉಪ ಹಾರವನ್ನು ವಿತರಿಸಲಾಯಿತು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ವೈ.ಡಿ.ರಾಜಣ್ಣ, ಶ್ರೀ ರಾಮಕೃಷ್ಣ ಸೇವಾಕೇಂದ್ರದ ನಾದನಂದನಾಥ ಸ್ವಾಮೀಜಿ, ನಾಡಗೌಡ ವೈ.ಹೆಚ್.ಹನುಮಂತೇಗೌಡ, ಗ್ರಾ.ಪಂ ಅಧ್ಯಕ್ಷೆ ಚನ್ನಮ್ಮ, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ವೈ.ಜಿ.ಪುಟ್ಟರಾಜು, ಉಪಾಧ್ಯಕ್ಷ ವೈ.ಎಂ.ಚಂದ್ರು, ಪಿಎಸಿಸಿಎಸ್ ನಿರ್ದೇಶಕ ವೈ.ಜಿ.ಮಹೇಂದ್ರ, ಕಾರ್ಯ ನಿರ್ವಹಕ ಅಧಿಕಾರಿ ವೈ.ಕೆ.ಕ್ಯಾತೇಗೌಡ, ನನ್ನವ್ವ ಕಲಾ ತಂಡದ ಅಧ್ಯಕ್ಷ ವೈ.ಜಿ.ಮಹದೇವ, ದಸಂಸ ಸಂಚಾಲಕ ಸೋಮಶೇಖರ್ ಗ್ರಾಮಸ್ಥರು ಹಾಜರಿದ್ದರು.