ಹುಣಸೂರು, ಜು.31- ಮಾಜಿ ಮುಖ್ಯ ಮಂತ್ರಿ ದಿವಂಗತ ಡಿ.ದೇವರಾಜ ಅರಸರ ಕರ್ಮಭೂಮಿ ಕಲ್ಲಳ್ಳಿ ಗ್ರಾಮ ರಾಷ್ಟ್ರೀಯ ಹೆದ್ದಾರಿ 175ಕ್ಕೆ ಹೊಂದಿಕೊಂಡಿದ್ದು, ಇದರ ಪಕ್ಕದಲ್ಲಿರುವ 2 ಎಕರೆ ಸರ್ಕಾರಿ ಭೂಮಿಯಲ್ಲಿ 2.5 ಕೋಟಿ ರೂ. ವೆಚ್ಚದಲ್ಲಿ ಅರಸರ ಪ್ರತಿಮೆ, ಕಾಂಪ್ಲೆಕ್ಸ್, ಮ್ಯೂಸಿಯಂ ಹಾಗೂ ಸ್ಟಡಿ ಸೆಂಟರ್ ನಿರ್ಮಾಣ ಮಾಡಿ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಶಾಸಕ ಹೆಚ್. ವಿಶ್ವನಾಥ್ ತಿಳಿಸಿದರು.
ಅಧಿಕಾರಿಗಳೊಂದಿಗೆ ಕಲ್ಲಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಕಾಮಗಾರಿಗಳನ್ನು ಪರಿಶೀಲಿಸಿದ ನಂತರ ಮಾತನಾಡಿದ ಅವರು, ಅರಸರ ಶತಮಾನೋತ್ಸವ ಅಂಗವಾಗಿ ಕಲ್ಲಳ್ಳಿ ಗ್ರಾಮವನ್ನು 100 ಕೋ. ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸುತ್ತಿದ್ದು, 25 ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಗ್ರಾಮದಲ್ಲಿ ಜೈನ ದೇವಾಲಯದ ಅಭಿ ವೃದ್ಧಿ, ರಾಜಕಾಲುವೆ, ಚದುರಂಗ ಭವನ ಗಳನ್ನು ವೀಕ್ಷಿಸಿ ಎಲ್ಲಾ ಕಾಮಗಾರಿಗಳು ಆದಷ್ಟು ಬೇಗ ಪೂರ್ಣಗೊಳಿಸಬೇಕು ಎಂದು ಇಂಜಿನಿಯರ್‌ಗಳಿಗೆ ಸೂಚಿಸಿದರು.
ಹುಣಸೂರು ನಗರದಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಅರಸರ ಭವನದ ಕಾಮಗಾರಿಯನ್ನೂ ವೀಕ್ಷಿಸಿದರು. ಈ ಭವನದಲ್ಲಿ ಧ್ವನಿ ವ್ಯವಸ್ಥೆ, ಪಾರ್ಕ್ ಮತ್ತು ವಾಹನ ನಿಲುಗಡೆ ವ್ಯವಸ್ಥೆ ಮಾಡಬೇಕು. ಜೊತೆಗೆ ಲೈಬ್ರರಿ, ಶಾಸಕರ ಕೊಠಡಿ, ಹಿಂದುಳಿದ ವರ್ಗಗಳ ಕಚೇರಿ ಹಾಗೂ ಸುತ್ತ ಕಾಂಪಾಂಡ್ ನಿರ್ಮಾಣ ಮಾಡಬೇಕು. ಈ ಕಾಮಗಾರಿಯನ್ನು 6 ತಿಂಗಳಲ್ಲಿ ಪೂರ್ಣಗೊಳಿಸಿಸಬೇಕು ಎಂದು ಇಂಜಿನಿಯರ್‍ಗಳಿಗೆ ತಾಕೀತು ಮಾಡಿದರು.
ಹುಣಸೂರಿನಲ್ಲಿ ನೂತನ ಆಸ್ಪತ್ರೆ ನಿರ್ಮಾಣಕ್ಕೆ 28 ಕೋಟಿ ಅನುದಾನ ಬಂದಿದ್ದು, ಜಾಗ ನಿಗದಿಯಾಗಬೇಕಾಗಿರುವ ಕಾರಣ ಅರಸು ಭವನದ ಪಕ್ಕದಲ್ಲಿರುವ ತೋಟಗಾರಿಕೆಯ 3 ಎಕರೆ ಜಾಗವನ್ನು ಆರೋಗ್ಯ ಇಲಾಖೆಗೆ ಜಾಗ ಹಸ್ತಾಂತರವಾಗ ಬೇಕಾಗಿದೆ. ಈ ಪ್ರಕ್ರಿಯೆ ತಡವಾಗುವುದ ರಿಂದ ಬಾಚಹಳ್ಳಿ ರಸ್ತೆಯಲ್ಲಿರುವ 8 ಎಕರೆ ಸರ್ಕಾರಿ ಜಾಗ ಮತ್ತು ಕೆಎಸ್‍ಆರ್‍ಟಿಸಿ ಬಸ್ ಡಿಪೋ ಹಿಂಭಾಗದಲ್ಲಿರುವ 5 ಎಕರೆ ಸರ್ಕಾರಿ ಜಾಗವನ್ನು ಗುರುತಿಸಲಾಗಿದೆ. ಯಾವ ಜಾಗ ಆರೋಗ್ಯ ಇಲಾಖೆಗೆ ಬೇಗ ಹಸ್ತಾಂತರವಾ ಗುತ್ತದೆಯೋ ಅಲ್ಲಿ ನೂತನ ಆಸ್ಪತ್ರೆ ನಿರ್ಮಾಣವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಪಿಡಬ್ಲ್ಯೂಡಿ ಇಂಜಿನಿಯರ್ ಕಿಶೋರ್ ಚಂದ್ರ, ನಿರ್ಮಿತಿ ಕೇಂದ್ರದ ಇಂಜಿನಿಯರ್‍ಗಳಾದ ಮಂಜುನಾಥ್, ರಕ್ಷಿತ್, ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಕೃಷ್ಣಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ರೇವಣ್ಣ, ತಹಸೀಲ್ದಾರ್ ಮೋಹನ್, ಉಪವಿಭಾಗಾಧಿಕಾರಿ ಕೆ. ನಿತೀಶ್, ಪುರಸಭಾ ಪೌರಾಯುಕ್ತ ಶಿವಪ್ಪ ನಾಯಕ್, ನಗರಸಭಾ ಅಧ್ಯಕ್ಷ ಶಿವ ಕುಮಾರ್, ನಗರಸಭಾ ಇಂಜಿನಿಯರ್ ಗಳಾದ ಪಾರ್ವತಿ ದೇವಿ, ಸದಾಶಿವಪ್ಪ, ಆರ್‍ಐ ಪ್ರಭಾಕರ್, ವಿಎ ಮಹೇಶ್, ಮುಖಂಡರಾದ ಪ್ರೇಮ ನಂಜಪ್ಪ, ಹರೀಶ್, ಗೋವಿಂದೇಗೌಡ, ಜೆಡಿಎಸ್ ಅಧ್ಯಕ್ಷ ಮಾದೇಗೌಡ ಉಪಸ್ಥಿತರಿದ್ದರು.