ನಮ್ಮ ಸರ್ಕಾರ ಸುಭದ್ರ, ಅಭಿವೃದ್ಧಿಗೆ ಆದ್ಯತೆ ನೀಡಿ
ಮೈಸೂರು

ನಮ್ಮ ಸರ್ಕಾರ ಸುಭದ್ರ, ಅಭಿವೃದ್ಧಿಗೆ ಆದ್ಯತೆ ನೀಡಿ

July 31, 2018
  • ಜಿಲ್ಲಾಧಿಕಾರಿಗಳು, ಜಿಪಂ ಸಿಇಓಗಳಿಗೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಸೂಚನೆ
  • ಮಾಧ್ಯಮಗಳ ವರದಿಗಳಿಗೆ ತಲೆ ಕೆಡಿಸಿಕೊಳ್ಳಬೇಡಿ

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಮಾಧ್ಯಮಗಳಲ್ಲಿ ಮೈತ್ರಿ ಸರ್ಕಾರ ಕುರಿತು ಏನೇನೊ ವರದಿಗಳು ಬರುತ್ತಿವೆ. ಅವರ ವರದಿ ನೋಡಿ, ಅಧಿಕಾರಿಗಳು ದಾರಿ ತಪ್ಪಬಾರದು. ಮಾಧ್ಯಮಗಳಿಗೆ ಪಾಪ, ಬೇರೆ ಸುದ್ದಿಗಳು ಸಿಕ್ತಿಲ್ಲವೇನೋ, ನಾನು ನಾಲ್ಕು ಜಿಲ್ಲೆಗಳ ಮುಖ್ಯಮಂತ್ರಿ ಅಂತ ವರದಿ ಮಾಡುತ್ತಾರೆ. 2.18 ಲಕ್ಷ ಕೋಟಿ ರೂ. ಮೊತ್ತದ ಬಜೆಟ್‍ನಲ್ಲಿ ಆ ನಾಲ್ಕು ಜಿಲ್ಲೆಗಳಿಗೆ ಕೇವಲ 558 ಕೋಟಿ ರೂ.ಗಳಷ್ಟೇ ನೀಡಿರುವುದು.

ನಾನು ಉತ್ತರ ಕರ್ನಾಟಕದ ವಿರೋಧಿ ಅಂತ ವರದಿ ಮಾಡುತ್ತಾರೆ. ಅಖಂಡ ಕರ್ನಾಟಕದ ಮುಖ್ಯಮಂತ್ರಿ ಎಲ್ಲಾ ಜಿಲ್ಲೆಗಳಲ್ಲೂ ಪ್ರತಿನಿಧಿ ಸುವ ಸಚಿವ ಸಂಪುಟವಿದೆ. ಹಣದ ಕೊರತೆ ಸರ್ಕಾರಕ್ಕಿಲ್ಲ. ಮಾಧ್ಯಮಗಳಲ್ಲಿ ಹಣದ ಕೊರತೆ ಇದೆ ಎಂದು ವರದಿ ಬರುತ್ತಿದೆ. ಅವರಿಗೆ ಯಾರು ಮಾಹಿತಿ ಕೊಡುತ್ತಾರೋ ಗೊತ್ತಿಲ್ಲ, ದಾರಿ ತಪ್ಪಿಸುವ ವರದಿ ಬಿತ್ತರ ಮಾಡುತ್ತಿದ್ದಾರೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿದೆ, ಆದಾಯ ಸಂಗ್ರಹದಲ್ಲಿ ಕೊರತೆಯಾಗಿಲ್ಲ. ಕೆಲವರಿಗೆ ಈ ಸರ್ಕಾರ ರಚನೆ ಆಗಿದ್ದಕ್ಕೆ ನೋವಿದೆ. ಯಾರೋ ಏನೋ ಹೇಳುತ್ತಾರೆ ಅಂತ ನೀವ್ಯಾಕೆ ದಾರಿ ತಪ್ಪುತ್ತೀರಿ.

ಒಂದು ಸಾವಿರ ಕೋಟಿ ರೂ. ತೆರಿಗೆ ಸಂಗ್ರಹ ಕಡಿಮೆ ಆಗಿದೆ ಅಂತ ವರದಿ ಬಂದಿದೆ. ಅವರಿಗೆ ಯಾರು ಸುದ್ದಿ ನೀಡಿದರೋ ತಿಳಿಯದು. ತೆರಿಗೆ ಸಂಗ್ರಹ ಉತ್ತಮವಾಗಿದ್ದು, ನಮ್ಮ ಗುರಿಯನ್ನು ಮುಟ್ಟುತ್ತೇವೆ.

ನೀವು ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಲು ಏನು ವ್ಯವಸ್ಥೆ ಬೇಕು ಹೇಳಿ, ಬೇಕಾದ ವ್ಯವಸ್ಥೆ ಮಾಡಿಕೊಡುತ್ತೇವೆ. ನಿಮಗೆ ಒಳ್ಳೆಯ ಟೀಮ್ ಲೀಡರ್ ಸಿಕ್ಕಿದ್ದಾರೆ, ಮುಖ್ಯ ಕಾರ್ಯದರ್ಶಿ ಪ್ರಾಮಾಣಿಕರಾಗಿದ್ದು, ಅವರ ಮಾರ್ಗದರ್ಶನದಲ್ಲಿ ಕೆಲಸ ಮಾಡಲು ನಿಮಗೂ ಹುರುಪು ಇರುತ್ತದೆ. ಏನೇ ಸಮಸ್ಯೆ ಇದ್ದರೂ ಮುಕ್ತವಾಗಿ ಚರ್ಚೆ ಮಾಡಿ, ಒಳ್ಳೆಯ ಕೆಲಸ ಮಾಡಿದರೆ, ನಿಮಗೆ ರಕ್ಷಣೆ ನೀಡಲು ನಾನು ಬದ್ಧ.

ಕಡತಗಳ ವಿಲೇವಾರಿ ಮಾಡಿ, ಅವುಗಳ ಗುಡ್ಡ ಬೆಳೆಸಬೇಡಿ. ಪ್ರಾಮಾಣಿಕ ಅಧಿಕಾರಿಗಳಿಗೆ ರಕ್ಷಣೆ ಇದ್ದೇ ಇರುತ್ತೆ. ನಾನು ಮುಖ್ಯಮಂತ್ರಿ ಅಂತ ನಿಮ್ಮ ಮೇಲೆ ಸವಾರಿ ಮಾಡಲ್ಲ. ನೀವು ಕೆಲಸ ಮಾಡುವ ಅಧಿಕಾರದ ಸ್ಥಳ ದೇವಸ್ಥಾನ ಇದ್ದಂಗೆ. ಜನರು ಮತ್ತು ಅಧಿಕಾರಿ ವರ್ಗದ ನಡುವೆ ಕಂದಕ ಸೃಷ್ಟಿ ಮಾಡಬೇಡಿ. ಜಿಲ್ಲಾಧಿಕಾರಿಗಳು, ಜಿಲ್ಲಾ ಕಚೇರಿಗಳಲ್ಲಿ ಕುಳಿತರೆ ಆಗಲ್ಲ, ತಿಂಗಳಿಗೆ ಒಂದು ಬಾರಿಯಾದರೂ ತಾಲೂಕುಗಳಿಗೆ ತೆರಳಿ, ಸಭೆ ನಡೆಸಿ. ಜನರ ಸಮಸ್ಯೆಗಳನ್ನು ಆಲಿಸಿ, ಬಗೆಹರಿಸಲು ಆದ್ಯತೆ ನೀಡಿ. ಪ್ರತೀ ತಿಂಗಳು ತಾಲೂಕುಗಳಿಗೆ ಭೇಟಿ ನೀಡಿ, ಜನರ ಸಮಸ್ಯೆಗಳನ್ನು ಆಲಿಸಿ ಕಡತಗಳನ್ನು ತ್ವರಿತ ವಿಲೇವಾರಿ ಮಾಡಿ ಎಂದು ಸಲಹೆ ಮಾಡಿದರು.

ಚುನಾವಣೆ ಹಿನ್ನೆಲೆಯಲ್ಲಿ ಅಭಿವೃದ್ಧಿ ಕುಂಠಿತವಾಗಿತ್ತು. ಈಗ ಅಧಿಕಾರಿಗಳು ಚುರುಕಾಗಿ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಒಳ್ಳೆ ಕೆಲಸ ಮಾಡಿ ಸರ್ಕಾರಕ್ಕೆ ಒಳ್ಳೆ ಹೆಸರು ತನ್ನಿ ಎಂದು ಹೇಳಿದರು. ನಿರುದ್ಯೋಗ ಸಮಸ್ಯೆ ನಿವಾರಿಸುವಲ್ಲಿ ಯುವಜನರಿಗೆ ಕೌಶಲ್ಯ ಅಭಿವೃದ್ಧಿ ತರಬೇತಿ ನೀಡಿ, ಸ್ಥಳೀಯ ಕಾರ್ಖಾನೆಗಳಲ್ಲಿ ಉದ್ಯೋಗ ಕೊಡಿಸಲು ಅವಕಾಶ ಕಲ್ಪಿಸಬೇಕು ಹಾಗೂ ಜನ ಸಾಮಾನ್ಯರನ್ನು ನೇರವಾಗಿ ಭೇಟಿ ಮಾಡ ಬೇಕು ಎಂದು ಸಿಎಂ ಸೂಚಿಸಿದರು. ಸರ್ಕಾರಿ ವಸತಿ ಶಾಲೆಗಳಿಗೆ ಭೇಟಿ ನೀಡಿ ಅಲ್ಲಿನ ಸ್ವಚ್ಛತೆ, ಮೂಲಸೌಕರ್ಯ, ಆಹಾರದ ಗುಣಮಟ್ಟ ಪರಿಶೀಲಿಸಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೂ ಭೇಟಿ ನೀಡಿ ಆಯಾ ಇಲಾಖಾ ಅಧಿಕಾರಿಗಳು, ಸಿಬ್ಬಂದಿ ದಕ್ಷತೆಯಿಂದ ಕಾರ್ಯ ನಿರ್ವಹಿಸಲು ಪ್ರೇರೇಪಿಸಿ ಎಂದು ಸಲಹೆ ನೀಡಿದರು.

ಶಾಲಾ-ಕಾಲೇಜುಗಳಿಗೆ ಸಾವಿರ ಕೋಟಿ ರೂ. ವೆಚ್ಚದಲ್ಲಿ ಕೊಠಡಿ, ಶೌಚಾಲಯ, ಪ್ರಯೋಗಾಲಯ ಮತ್ತಿತರ ಸೌಲಭ್ಯ ಒದಗಿಸಲು ಸರ್ಕಾರ ಉದ್ದೇಶಿಸಿದೆ. ನಾಲ್ಕು ಸಾವಿರ ಕಿ.ಮೀ.ಗೂ ಹೆಚ್ಚು ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸಲು ಅಗತ್ಯ ಭೂಸ್ವಾಧೀನ ಮತ್ತಿತರ  ಪ್ರಕ್ರಿಯೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು. ವಸತಿ ಯೋಜನೆಗಳಿಗೆ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಅಗತ್ಯ ಸರ್ಕಾರಿ ಜಮೀನು ಗುರುತಿಸಿ ವರದಿ ಸಲ್ಲಿಸುವಂತೆ ಸೂಚಿಸಿದರು. ವಸತಿ ಸೌಲಭ್ಯ ಕಲ್ಪಿಸಿ ಕೊಡುವ ದೊಡ್ಡ ಯೋಜನೆ ಹಾಕಿಕೊಂಡಿದ್ದೇನೆ. ಸರ್ಕಾರಿ ಭೂಮಿ ಮಾಹಿತಿ ಪಡೆದು ಸೂರಿಲ್ಲದವರಿಗೆ ಸೂರು ಕಲ್ಪಿಸುವ ಕೆಲಸ ಮಾಡಿ ಎಂದರು. ಎಂಟತ್ತು ದಿನಗಳ ನಂತರ ಪ್ರತಿ ಜಿಲ್ಲೆ ಪ್ರವಾಸ ಕೈಗೊಂಡು ಎರಡು ದಿನ ಆಯಾ ಜಿಲ್ಲೆಗಳಲ್ಲೇ ಇರುತ್ತೇನೆ, ಅಷ್ಟರೊಳಗೆ ಸಮಸ್ಯೆಗಳನ್ನು ಬಗೆಹರಿಸಿ. ಸರ್ಕಾರಿ ಆಸ್ಪತ್ರೆಗಳ ಸ್ಥಿತಿ ಹೇಗಿದೆ ಎಂಬುದನ್ನು ಗಮನಿಸಿದ್ದೀರಾ, ಅಲ್ಲಿ ಚಿಕಿತ್ಸೆ ಪಡೆಯಲು ಸಾಧ್ಯನಾ, ಎಷ್ಟು ಜನ ಜಿಲ್ಲಾಧಿಕಾರಿಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದೀರಿ. ನಾವೆಲ್ಲಾ ಒಂದು ಕುಟುಂಬ ಇದ್ದಂತೆ. ಸರ್ಕಾರದ ಯೋಜನೆಗಳನ್ನು ಪರಿಣಾಮಕಾರಿ ಯಾಗಿ ಜಾರಿಗೊಳಿಸಬೇಕು ಎಂದು ಸಿಎಂ ಕುಮಾರಸ್ವಾಮಿ ಕಿವಿಮಾತು ಹೇಳಿದರು.

Translate »