ಕೊಲ್ಕತ್ತಾ ಪೊಲೀಸ್ ಆಯುಕ್ತರ ನಿವಾಸಕ್ಕೆ  ತೆರಳಿದ ಸಿಬಿಐ ಅಧಿಕಾರಿಗಳ ಬಂಧನ
ಮೈಸೂರು

ಕೊಲ್ಕತ್ತಾ ಪೊಲೀಸ್ ಆಯುಕ್ತರ ನಿವಾಸಕ್ಕೆ ತೆರಳಿದ ಸಿಬಿಐ ಅಧಿಕಾರಿಗಳ ಬಂಧನ

February 4, 2019

ಕೊಲ್ಕತ್ತಾ: ಶಾರದಾ ಚಿಟ್‍ಫಂಡ್ ಮತ್ತು ರೋಸ್ ವ್ಯಾಲಿ ಪಾಂಝಿ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ಕೊಲ್ಕತಾ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ಅವರ ಮನೆಗೆ ಮುತ್ತಿಗೆ ಹಾಕಿದ್ದ ಸಿಬಿಐ ಅಧಿಕಾರಿಗಳನ್ನು ಕೊಲ್ಕತ್ತಾ ಪೊಲೀ ಸರು ಬಂಧಿಸಿದ ಘಟನೆ ಇಂದು ಸಂಜೆ ನಡೆದಿದೆ.

ವಿಷಯ ತಿಳಿಯುತ್ತಿದ್ದಂತೆಯೇ ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರೇ ಸ್ವತಃ ಸ್ಥಳಕ್ಕೆ ಆಗಮಿಸಿದ್ದಾರೆ. ಅವರೊಂದಿಗೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರೂ ಕೂಡ ತೆರಳಿದ್ದು, ಕೊಲ್ಕತ್ತಾ ಪೊಲೀಸ್ ಮತ್ತು ಸಿಬಿಐ ನಡುವೆ ಹಣಾಹಣಿ ನಡೆದಿದೆ.

ಈ ಎರಡೂ ಹಗರಣಕ್ಕೆ ಸಂಬಂಧಿಸಿದಂತೆ ಕೊಲ್ಕತಾ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ಅವರನ್ನು ವಿಚಾರಣೆ ನಡೆಸಲು ಸುಮಾರು 40 ಸಿಬಿಐ ಅಧಿಕಾರಿ ಗಳ ತಂಡ ಇಂದು ಸಂಜೆ ತೆರಳಿತ್ತು. ಈ ವೇಳೆ ಐಪಿಎಸ್ ಅಧಿಕಾರಿ ರಾಜೀವ್‍ಕುಮಾರ್ ಅವರ ಮನೆಯ ಮುಂದೆ ಸಿಬಿಐ ಅಧಿಕಾರಿಗಳನ್ನು ತಡೆಯಲಾಗಿದೆ. ಬಳಿಕ, ಪೊಲೀಸರು ಮತ್ತು ಸಿಬಿಐ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆದಿದ್ದು, ಕೆಲವು ಸಿಬಿಐ ಅಧಿಕಾರಿ ಗಳನ್ನೇ ಬಂಧಿಸಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿರುವ ಹೈಡ್ರಾಮಕ್ಕೆ ಕೊಲ್ಕತ್ತಾ ಸಾಕ್ಷಿಯಾಗಿದೆ.

ಐಪಿಎಸ್ ಅಧಿಕಾರಿ ರಾಜೀವ್‍ಕುಮಾರ್ ನಾಪತ್ತೆಯಾಗಿದ್ದರು. ಅವರಿಗಾಗಿ ಹಲವು ದಿನಗಳಿಂದ ಹುಡು ಕಾಟ ನಡೆಸಲಾಗಿತ್ತು ಎಂದಿರುವ ಸಿಬಿಐ ಅಧಿಕಾರಿಗಳು ಇಂದು ಅವರ ವಿಚಾರಣೆಗಾಗಿ ದಿಢೀರ್ ಎಂದು ರಾಜೀವ್ ಕುಮಾರ್ ಅವರ ನಿವಾಸಕ್ಕೆ ಮುತ್ತಿಗೆ ಹಾಕಿ ದ್ದರು. ದೇಶದಲ್ಲೇ ಅತ್ಯಂತ ದೊಡ್ಡ ಪ್ರಮಾಣದ ಹಗರಣಗಳಲ್ಲಿ ಒಂದಾದ ರೋಸ್ ವ್ಯಾಲಿ ಹಗರಣದಲ್ಲಿ 15 ಸಾವಿರ ಕೋಟಿ ಲೂಟಿ ಮಾಡಲಾಗಿತ್ತು. ಶಾರದಾ ಚಿಟ್‍ಫಂಡ್ 2,500 ಕೋಟಿ ರೂ.ಗಳ ಹಗರಣವಾಗಿತ್ತು. ಈ ಎರಡೂ ಪ್ರಕರಣಗಳಲ್ಲಿ ಪಶ್ಚಿಮ ಬಂಗಾಳದ ಆಡಳಿತ ಪಕ್ಷವಾದ ತೃಣಮೂಲ ಕಾಂಗ್ರೆಸ್‍ನ ನಾಯಕರು ಶಾಮೀಲಾಗಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಈ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳ ಮುಖ್ಯ ಮಂತ್ರಿ ಮಮತಾ ಬ್ಯಾನರ್ಜಿ ಈ ಹಗರಣಗಳ ಆರೋಪಿಗಳ ಬೆನ್ನಿಗೆ ನಿಂತಿದ್ದಾರೆ ಎಂಬ ಆರೋಪವೂ ಕೇಳಿಬಂದಿತ್ತು.

ಈ ಮೊದಲು ಚಂದ್ರಬಾಬು ನಾಯ್ಡು ಆಂಧ್ರಪ್ರದೇಶದಲ್ಲಿ ಸಿಬಿಐ ಯಾವುದೇ ತನಿಖೆ ನಡೆಸಬೇಕಾದರೂ ರಾಜ್ಯ ಪೊಲೀಸ್ ಇಲಾಖೆಯ ಗಮನಕ್ಕೆ ತರಬೇಕು ಎಂಬ ನಿಯಮವನ್ನು ಜಾರಿಗೊಳಿಸಿದ್ದರು. ಅದಾದ ಬಳಿಕ, ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಕೂಡ ತಮ್ಮ ಅನುಮತಿ ಇಲ್ಲದೆ ಸಿಬಿಐ ಅಧಿಕಾರಿಗಳು ರಾಜ್ಯದಲ್ಲಿ ಯಾರ ವಿಚಾರಣೆಯನ್ನಾಗಲಿ, ದಾಳಿಯನ್ನಾಗಲಿ ನಡೆಸುವಂತಿಲ್ಲ ಎಂದು ಸೂಚನೆ ನೀಡಿದ್ದರು. ಆದರೆ, ಇಂದು ಇದ್ದಕ್ಕಿದ್ದಂತೆ ಪೊಲೀಸ್ ಆಯುಕ್ತರ ಮನೆ ಮೇಲೆ ಸಿಬಿಐ ಅಧಿಕಾರಿಗಳು ಮುತ್ತಿಗೆ ಹಾಕಿರುವುದರಿಂದ ಇದು ಕೇಂದ್ರ ಸರ್ಕಾರ ಮತ್ತು ದೀದಿ ಸರ್ಕಾರದ ನಡುವಿನ ರಾಜಕೀಯ ತಿಕ್ಕಾಟಕ್ಕೆ ಕಾರಣವಾಗುವ ಸಾಧ್ಯತೆಯಿದೆ. ಈಗಾಗಲೇ ಹಲವರು ಈ ನಿಟ್ಟಿನಲ್ಲಿ ಟ್ವೀಟ್ ಮೂಲಕ ಪ್ರಧಾನಿ ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

ಪ್ರಾಣಭೀತಿ ಕಾಡುತ್ತಿದೆ ಎಂದ ಸಿಬಿಐ ಮುಖ್ಯಸ್ಥ: ಕೊಲ್ಕತ್ತಾ ರಾಜ್ಯದ ಸಿಬಿಐ ಮುಖ್ಯಸ್ಥ ತನಗೆ ಪ್ರಾಣಭಯ ಇದೆ ಎಂದು ಹೇಳಿಕೊಂಡಿದ್ದು, ನನ್ನದೇ ಮನೆಯಲ್ಲಿ ನಾನು ಬಂಧಿ ಯಾಗಿದ್ದೇನೆ. ಸಿಬಿಐ ಮತ್ತು ಕೊಲ್ಕತಾ ಪೊಲೀಸರ ನಡುವೆ ನಡೆದ ಗಲಾಟೆಯಿಂದ ಯಾವಾಗ ಬೇಕಾದರೂ ನನ್ನನ್ನು ಬಂಧಿಸುವ ಸಾಧ್ಯತೆಯಿದೆ. ನನ್ನ ಪತ್ನಿ ಮತ್ತು 13 ವರ್ಷದ ಮಗಳು ಕೂಡ ನನ್ನ ಜೊತೆ ಇದ್ದಾರೆ. ಮನೆಯ ಹೊರಗಡೆ ಕೊಲ್ಕತಾದ 50-60 ಪೊಲೀಸರು ನಿಂತಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನೂ ಸ್ಥಳೀಯ ಪೊಲೀಸರು ನಾಶಪಡಿಸುವ ಸಾಧ್ಯತೆಯಿದೆ. ಈ ಪ್ರಕರಣದಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕು ಎಂದು ಕೊಲ್ಕತಾ ಸಿಬಿಐ ಮುಖ್ಯಸ್ಥ ಪಂಕಜ್ ಶ್ರೀವಾಸ್ತವ ತಿಳಿಸಿದ್ದಾರೆ.

Translate »