`ರೂಸ’ ಯೋಜನೆಗೆ ಪ್ರಧಾನಿ ಮೋದಿ ಚಾಲನೆ
ಮೈಸೂರು

`ರೂಸ’ ಯೋಜನೆಗೆ ಪ್ರಧಾನಿ ಮೋದಿ ಚಾಲನೆ

February 4, 2019

ಮೈಸೂರು: ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿ ಸಚಿವಾಲಯದ `ರೂಸ’ ಯೋಜನೆ(ರಾಷ್ಟ್ರೀಯ ಉಚ್ಛತರ್ ಶಿಕ್ಷಾ ಅಭಿಯಾನ) ಯಡಿ ಜಮ್ಮು ಮತ್ತು ಕಾಶ್ಮೀರದಿಂದ ದೇಶಾದ್ಯಂತ ನೂತನ 70 ಕೆರಿಯರ್ ಹಬ್ ಕೇಂದ್ರ ಗಳಿಗೆ ಪ್ರಧಾನಿ ನರೇಂದ್ರ ಮೋದಿ ವೀಡಿಯೋ ಕಾನ್ಫರೆನ್ಸ್ ಮೂಲಕ ಭಾನುವಾರ ಚಾಲನೆ ನೀಡಿದರು. ಕರ್ನಾಟಕದಿಂದ ಆಯ್ಕೆಯಾದ ಮೈಸೂರಿನ ಸೆಂಟ್ ಫಿಲೋ ಮಿನಾ ಕಾಲೇಜು, ಮೈಸೂರು ವಿವಿ, ಸರಸ್ವತಿಪುರಂ ಜೆಎಸ್‍ಎಸ್ ಮಹಿಳಾ ಕಾಲೇಜುಗಳಲ್ಲಿ ನೂತನವಾಗಿ ಆರಂಭವಾಗಿರುವ ಕೆರಿಯರ್ ಹಬ್ ಕೇಂದ್ರಗಳಿಗೆ ಚಾಲನೆ ಸಿಕ್ಕಿತು.

ಮೈಸೂರಿನ ರಾಣಿಬಹದ್ದೂರ್ ಸಭಾಂಗಣದಲ್ಲಿ ಮೈಸೂರು ವಿವಿಯ ಯೂನಿ ವರ್ಸಿಟಿ ಕೆರಿಯರ್ ಹಬ್‍ನ ಉದ್ಘಾಟನಾ ಸಮಾರಂಭದಲ್ಲಿ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ, ಸಂಸದ ಪ್ರತಾಪ್‍ಸಿಂಹ, ಶಾಸಕ ಎಲ್. ನಾಗೇಂದ್ರ ಹಾಗೂ ಮೈಸೂರು ವಿವಿ ಕುಲಪತಿ ಪ್ರೊ.ಹೇಮಂತ್‍ಕುಮಾರ್, ಕುಲಸಚಿವ ರಾದ ಪ್ರೊ.ಆರ್.ರಾಜಣ್ಣ, ಪ್ರೊ. ಜೆ.ಸೋಮಶೇಖರ್, ಸಿಂಡಿಕೇಟ್ ಸದಸ್ಯೆ ಸಹನಾ ಇತರರು ಉಪಸ್ಥಿತರಿದ್ದರು. ಸಂಸದ ಪ್ರತಾಪಸಿಂಹ ಮಾತನಾಡಿ, ರಾಜ್ಯದ ಎಲ್ಲಾ ವಿವಿಗಳಲ್ಲಿ ಬೋಧನೆಯಾಗುತ್ತಿರುವ ಓಬಿರಾಯನ ಕಾಲದ ಪಠ್ಯಕ್ರಮವನ್ನು ಬದಲಿಸುವ ಬಗ್ಗೆ ರಾಜ್ಯ ಉನ್ನತ ಶಿಕ್ಷಣ ಇಲಾಖೆ ಮುಂದಾಗಬೇಕು ಎಂದು ಆಗ್ರಹಿಸಿದರು. ಅಲ್ಲದೆ, ತಂತ್ರಜ್ಞಾನ ಎಷ್ಟು ಬದಲಾಗಿದೆ ಎಂದರೆ, ನಾನು ವಿದ್ಯಾರ್ಥಿಯಾಗಿದ್ದಾಗ ವೀಡಿಯೋ ಕ್ಯಾಸೆಟ್ ಮೂಲಕ ಚಲನಚಿತ್ರಗಳನ್ನು ನೋಡುತ್ತಿದ್ದವು. ನಂತರ ಸಿಡಿ, ಡಿವಿಡಿ ಬಂತು. ಇದೀಗ ಯೂಟ್ಯೂಬ್ ಮೂಲಕ ನಿಮಗೆ ಬೇಕಾದ ಸಿನಿಮಾಗಳನ್ನು ಡೌನ್‍ಲೋಡ್ ಮಾಡಿಕೊಂಡು ವೀಕ್ಷಣೆ ಮಾಡಬಹುದು. ಅದೇ ಪತ್ರಿಕೋದ್ಯಮದಲ್ಲೂ ತಂತ್ರಜ್ಞಾನ ಸಾಕಷ್ಟು ಬೆಳೆದಿದೆ. ಈ ಮೂಲಕ ಭಾರತದಲ್ಲಿ ತಂತ್ರಜ್ಞಾನ ಸಾಕಷ್ಟು ಎತ್ತರದ ಸಾಧನೆ ಮಾಡಿದೆ. ಆದರೂ, ನಮ್ಮ ವಿವಿಗಳಲ್ಲಿ ಹಳೆಯ ಕಾಲದ ಬೋಧನಾ ಕ್ರಮವನ್ನು ಅನುಸರಿ ಸುತ್ತಿರುವುದು ಬೇಸರದ ಸಂಗತಿ ಎಂದರು. ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ಕೆರಿಯರ್ ಹಬ್ ಕೇಂದ್ರಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು, ಜಮ್ಮು ಮತ್ತು ಕಾಶ್ಮೀರದಲ್ಲಿ ದೇಶದಾದ್ಯಂತ ಚಾಲನೆ ನೀಡಿದ್ದಾರೆ. ಅದರಂತೆ ಮೈಸೂರು ವಿವಿಯಲ್ಲೂ ಆರಂಭವಾಗಿದೆ.

ಆದ್ದರಿಂದ ವಿವಿಗಳಲ್ಲಿ ಹಳೆಯ ಕಾಲದ ಶೈಕ್ಷಣಿಕ ಪದ್ಧತಿಯಿಂದ ಹೊರಬಂದು ಆಧುನಿಕತೆ ಮತ್ತು ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸಬೇಕು. ಮೊದಲು ಫ್ಯಾಕ್ಸ್, ಪೇಜರ್, ಟೆಲಿಫೋನ್ ಬಳಸುತ್ತಿದ್ದೇವು. ಇದೀಗ ಡಿಜಿಟಲ್ ಯುಗದಲ್ಲಿದ್ದೇವೆ. ನಮ್ಮ ಬಳಿ ಇರುವ ಮೊಬೈಲ್ ಫೋನ್ ಜ್ಞಾನದ ಕೇಂದ್ರವಾಗಿದೆ. ಇದಕ್ಕೆ ಪೂರಕ ವಾಗಿ ಉನ್ನತ ಶಿಕ್ಷಣವು ಡಿಜಿಟಲೀಕರಣವಾಗಬೇಕಿದೆ ಎಂದು ಹೇಳಿದರು.

ಈ ಹಿಂದೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾಗಿದ್ದ ಬಿ.ಸೋಮಶೇಖರ್ ಅವರು ಶಿಕ್ಷಣ ಇಲಾಖೆಗೆ ಕಾಯಕಲ್ಪ ನೀಡಲು ಮುಂದಾಗಿ, ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಿಗೆ ತರಬೇತಿ ನೀಡುವ ಕಾಲೇಜುಗಳನ್ನು ತೆರೆದರು. ಅದರಂತೆ, ಆಧುನಿಕತೆಗೆ ತಕ್ಕಂತೆ ವಿಶ್ವವಿದ್ಯಾನಿಲಯಗಳಲ್ಲಿನ ಪ್ರಾಧ್ಯಾಪಕರು ತಮ್ಮ ಜ್ಞಾನಮಟ್ಟವನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸಬೇಕು ಎಂದು ಪ್ರತಾಪ ಸಿಂಹ ಸಲಹೆ ನೀಡಿದರು.

ಮೈಸೂರು ವಿವಿ ಕುಲಪತಿ ಪ್ರೊ. ಜಿ.ಹೇಮಂತಕುಮಾರ್ ಮಾತನಾಡಿ, ಡಿಜಿಟಲ್ ಇಂಡಿಯಾ ಯೋಜನೆಯು ಇಂದು ಪ್ರತಿಯೊಬ್ಬ ವಿದ್ಯಾರ್ಥಿಗೂ ಅಗತ್ಯವಿದೆ. ಎಷ್ಟು ಬೇಗ ಕಲಿಯುತ್ತೇವೆಯೋ ಮತ್ತು ಕಲಿಸುತ್ತೇವೆಯೋ ಅಷ್ಟೇ ವೇಗವಾಗಿ ವಿವಿ ದೊಡ್ಡಮಟ್ಟಕ್ಕೆ ಹೋಗುತ್ತದೆ. ವಿಜ್ಞಾನ ಎಂದರೆ ಡಿಜಿಟಲ್, ಡಿಜಿಟಲ್ ಎಂದರೆ ವಿಜ್ಞಾನ ಎಂಬುದನ್ನು ಪ್ರತಿಯೊಬ್ಬರು ಅರ್ಥಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಸಹಕಾರ ದೊಂದಿಗೆ ಮೈಸೂರು ವಿವಿ ಪೂರಕವಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.

Translate »