ಸುತ್ತೂರು: ಸುತ್ತೂರು ಶ್ರೀ ಕ್ಷೇತ್ರದಲ್ಲಿ ನಡೆಯುತ್ತಿರುವ ಜಾತ್ರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಶ್ರೀ ಶಿವಯೋಗಿಗಳ ಉತ್ಸವ ಮೂರ್ತಿಯ ರಥೋತ್ಸವವು ಭಾನುವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆ ಯಿಂದ ನೆರವೇರಿತು. ರಥೋತ್ಸವವನ್ನು ಕಣ್ತುಂಬಿ ಕೊಳ್ಳಲು ಮೈಸೂರು ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಅಪಾರ ಸಂಖ್ಯೆಯ ಭಕ್ತರು ರಥಕ್ಕೆ ಹಣ್ಣು-ಜವನ ಎಸೆದು ಸಾಕ್ಷಿಯಾದರು.
ಬೆಳಗ್ಗೆ ರಥೋತ್ಸವಕ್ಕೂ ಮುನ್ನ ಗದ್ದುಗೆಯಿಂದ ಶ್ರೀ ಶಿವಯೋಗಿಗಳ ಉತ್ಸವ ಮೂರ್ತಿಯನ್ನು ರಥ ದಲ್ಲಿ ಪ್ರತಿಷ್ಠಾಪಿಸಲಾಯಿತು. ಬಳಿಕ ಬೆಳಗ್ಗೆ 10.50ಕ್ಕೆ ಸರಿಯಾಗಿ ಸುತ್ತೂರು ಶ್ರೀಗಳು, ಸಿದ್ಧಗಂಗಾ ಮಠದ ಶ್ರೀಸಿದ್ಧಲಿಂಗಸ್ವಾಮೀಜಿ, ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಸೇರಿದಂತೆ ಇನ್ನಿತರ ಗಣ್ಯರು ಹೂವಿ ನಿಂದ ಅಲಂಕೃತಗೊಳಿಸಿದ್ದ ರಥವನ್ನು ಎಳೆಯುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು. ಬಳಿಕ ಸುತ್ತೂರು ಮಠದ ಪ್ರಮುಖ ಬೀದಿಗಳಲ್ಲಿ ಉತ್ಸವ ಜರುಗಿತು. ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು ಹಾಗೂ ರಾಜ್ಯದ ವಿವಿಧೆಡೆಯಿಂದ ಬಂದಿದ್ದ 50ಕ್ಕೂ ಕಲಾ ತಂಡಗಳು ಸುತ್ತೂರು ಬೀದಿಯಲ್ಲಿ ತಮ್ಮ ಕಲಾ ಪ್ರದರ್ಶಿಸಿ ಗಮನ ಸೆಳೆದರು. ರಥೋತ್ಸವದಲ್ಲಿ ಮೆರವಣಿಗೆಯಲ್ಲಿ ಸಾಗಿದ ರಾಜ್ಯ ಹಾಗೂ ಅಂತ ರಾಜ್ಯ ಜಾನಪದ ಕಲಾತಂಡಗಳ ಕಲಾವಿದರು ಆಕರ್ಷಕ ನೃತ್ಯ ಪ್ರದರ್ಶಿಸಿ ಎಲ್ಲರ ಮೆಚ್ಚುಗೆ ಗಳಿಸಿ ದರು. ಸುತ್ತೂರು ಶಾಲೆಯ ಮಕ್ಕಳು ಆಕರ್ಷಕ ವೀರಗಾಸೆ ನೃತ್ಯ ಪ್ರದರ್ಶಿಸಿದರೆ, ಪೂಜಾ ಕುಣಿತ, ಗಾರುಡಿ ಗೊಂಬೆ ಕಲಾವಿದರು ಹೆಜ್ಜೆ ಹಾಕಿದರು. ಮತ್ತೊಂದು ತಂಡದ ಕಲಾವಿದರು ನಗಾರಿ ಮತ್ತು ತಮಟೆ ಬಾರಿಸುವ ಮೂಲಕ ಮತ್ತಷ್ಟು ಕಳೆತಂದರು.