ಸಂಭ್ರಮದ ಮಹಾವೀರ ಜಯಂತಿ ಆಚರಣೆ
ಹಾಸನ

ಸಂಭ್ರಮದ ಮಹಾವೀರ ಜಯಂತಿ ಆಚರಣೆ

April 17, 2019

ಶ್ರವಣಬೆಳಗೊಳ: ಪಾರಂ ಪರಿಕ ನಂಬಿಕೆಗಳನ್ನು ಇಟ್ಟುಕೊಂಡು, ತನ್ನ ಧರ್ಮದ ಸಿದ್ಧಾಂತಗಳನ್ನು ಚಾಚೂ ತಪ್ಪದೆ ಪರಿಪಾಲನೆ ಮಾಡುತ್ತ ವಿಶ್ವದ ಅನಂತ ಸತ್ಯಗಳನ್ನು ಪ್ರತಿಪಾದಿಸುತ್ತಿರುವ ಅಹಿಂಸಾ ಧರ್ಮವೇ ಜೈನ ಧರ್ಮ ಎಂದು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.

ಶ್ರವಣಬೆಳಗೊಳದ ಜೈನ ಮಠದ ಆವರಣದಲ್ಲಿರುವ ಮಠದ ಬಸದಿಯಲ್ಲಿ ಬುಧವಾರ ನಡೆದ ಮಹಾವೀರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜೈನ ಧರ್ಮದ 24ನೇ ತೀರ್ಥಂಕರರಾದ ಭಗವಾನ್ ಮಹಾವೀರರು ಮಹತ್ವದ ಸ್ಥಾನದಲ್ಲಿ ನಿಲ್ಲುತ್ತಾರೆ. ಇವರು ಗೌತಮ ಬುದ್ಧನ ಸಮಕಾಲೀನರಾಗಿದ್ದು, ‘ಬದುಕು-ಬದುಕಲು ಬಿಡು’ ಎಂಬ ಉಪ ದೇಶದೊಂದಿಗೆ ಸಧರ್ಮ ಪರಿಪಾಲಕ ರಾಗಿ ಇಡೀ ವಿಶ್ವಕ್ಕೆ ಶಾಂತಿ, ಅಹಿಂಸೆ, ಸತ್ಯ ಹಾಗೂ ಸನ್ಮಾರ್ಗದ ದಾರಿಯನ್ನು ತೋರಿದ ಮಹಾನ್ ವ್ಯಕ್ತಿ ಎಂದರು.

ಮಹಾವೀರರು ವೈಶಾಲಿ ನಗರದ ಬಳಿ ಇರುವ ಕುಂಡಲಿ ಗ್ರಾಮ ತಂದೆ ಸಿದ್ಧಾರ್ಥ ಹಾಗೂ ತಾಯಿ ಪ್ರಿಯಕಾರಿಣಿ ಪುತ್ರರಾಗಿ ಜನಿಸಿದರು. ಬಾಲ್ಯದಲ್ಲೇ ಧಾರ್ಮಿಕ ಪ್ರಭಾವನೆಗೆ ಮನಸೋತು ಬದುಕಿನ ಜಂಜಾಟಗಳಿಂದ ವೈರಾಗ್ಯ ಉಂಟಾಗಿ ಜೈನ ಧರ್ಮದ ಪ್ರಭಾವ ದಿಂದ ಭಗವಾನ್ ಮಹಾವೀರರಾದರು. ಇವರನ್ನು ವರ್ಧಮಾನ, ಸನ್ಮತಿನಾಯಕ, ವೀರ, ಅತಿವೀರ, ಶ್ರಮಣ ಎಂಬ ಹೆಸರಿನಿಂದ ಕರೆಯಲಾಗುತ್ತದೆ.

ತ್ಯಾಗ ಎಂಬ ಮೂಲ ಮಂತ್ರವನ್ನು ಉದ್ದೇಶವಾಗಿಟ್ಟುಕೊಂಡು ಮಹಾ ವೀರರು ಅವರ ತತ್ವಗಳನ್ನು ಅರ್ಧ ಮಾಗದಿ ಭಾಷೆಯಲ್ಲಿ ಉಪದೇಶಿಸಿದ್ದಾರೆ. ಭಗವಾನ್ ಮಹಾವೀರರು ಗೌತಮ ಬುದ್ದನನ್ನು ಭೇಟಿ ಮಾಡಿದ್ದರು ಎಂಬ ಐತಿಹ್ಯವಿದೆ ಎಂದು ವಿವರಿಸಿದರು.
ರಾಜವಂಶಸ್ಥರಾದ ಭಗವಾನ್ ಮಹಾವೀರರು ವೈಭೋಗದ ಆಸಕ್ತಿ ತೊರೆದು ಕಠೋರ ತಪಸ್ವಿಯಾಗಿ ತಮ್ಮ 72ನೇ ವಯಸ್ಸಿನಲ್ಲಿ ನಿರ್ವಾಣ ಹೊಂದಿ ದರು. ಅಹಿಂಸೆ, ಸತ್ಯ, ಅಚೌರ್ಯ, ಬ್ರಹ್ಮಚರ್ಯ ಹಾಗೂ ಅಪರಿಗ್ರಹ ಎಂಬ ಪಂಚಶೀಲ ತತ್ವಗಳನ್ನು ಮಾನವ ಕುಲಕ್ಕೆ ಬೋಧಿಸಿದರು ಎಂದರು.

ಸಣ್ಣ ಜೀವಿಗೂ ನೋವಾಗಬಾರದು ಎಂದು ಜೈನ ಸಾಧುಗಳು ಪಿಂಛಿ ಹಿಡಿದುಕೊಂಡು ತಿರುಗುತ್ತಾರೆ. ಇಂತಹ ಸೂಕ್ಷ್ಮ ಅಹಿಂಸೆಯ ಧರ್ಮ ಈ ಪ್ರಪಂಚ ದಲ್ಲಿ ಇರುವುದೇ ನಮ್ಮ ಭಾಗ್ಯ. ಲೋಕದ ಸರ್ವೊದಯಕ್ಕಾಗಿ ‘ಕ್ಷೇಮಂ ಸರ್ವ ಜೀವಾನಾಂ’ ಎಂಬ ಭಗವಾನ್ ಮಹಾ ವೀರ ಸ್ವಾಮಿಯವರ ಸರ್ವೋದಯ ತೀರ್ಥ ತತ್ವವನ್ನು ಎಲ್ಲರೂ ಅಳವಡಿಸಿ ಕೊಂಡು ಪ್ರತಿಯೊಬ್ಬರಿಗೂ ಆತ್ಮ ಕಲ್ಯಾಣ ಪ್ರಾಪ್ತವಾಗಲಿ ಎಂದು ತಿಳಿಸಿದರು.

ಮಹಾವೀರ ಜಯಂತಿ: ಮೆರವಣಿಗೆ
ಅರಸೀಕೆರೆ: ನಗರದಲ್ಲಿ ನಡೆದ ಮಹಾವೀರ ಜಯಂತಿ ಪ್ರಯುಕ್ತ ಜೈನ ಸಮುದಾಯದವರು ಬುಧವಾರ ನಗರದ ವಿವಿಧ ರಸ್ತೆಗಳಲ್ಲಿ ಮಹಾವೀರ ಸ್ವಾಮಿಯ ಪ್ರತಿಮೆ ಮೆರವಣಿಗೆ ನಡೆಸಿ ದರು. ಈ ಸಂದರ್ಭದಲ್ಲಿ ಸಾರ್ವಜನಿ ಕರಿಗೆ ಪ್ರಸಾದವನ್ನು ವಿತರಿಸಲಾಯಿತು. ಮೆರವಣಿಗೆಯಲ್ಲಿ ಜೈನ ಸಮಾಜದ ಅಧ್ಯಕ್ಷ ಮಹಾವೀರ ಚಂದ್ ಬೊಹರಾ, ಯುವಕ ಸಂಘದ ಅಧ್ಯಕ್ಷ ಪುನೀತ್, ಕಾರ್ಯದರ್ಶಿ ಚೇತನ್ ಬಲ್ಗಟ್, ಮುಖಂಡರಾದ ನಿರ್ಮಲ್ ಬೋಹರಾ, ಸೋಹನ್ ಲಾಲ್, ಮೋಹನ್ ಲಾಲ್, ನವರತನ್ ಜೈನ್, ಪ್ರೀತಮ್ ಮುಂತಾವರು ಉಪಸ್ಥಿತರಿದ್ದರು. ಇದಕ್ಕೂ ಮುನ್ನಾ ನಗರದಲ್ಲಿರುವ ತಾಲೂಕು ಕಚೇರಿಯಲ್ಲಿ ಮಹಾವೀರ ಜಯಂತಿಯನ್ನು ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಆಚರಿಸಲಾಯಿತು. ಈ ಸಂದರ್ಭದಲ್ಲಿ ತಹಸೀಲ್ದಾರ್ ಸಂತೋಷ್‍ಕುಮಾರ್, ಗುಮಾಸ್ತ ಮಂಜುನಾಥ್ ಮುಂತಾದವರು ಇದ್ದರು.

Translate »