ಅಗ್ರಿಗೋಲ್ಡ್ ಸಂಸ್ಥೆಯಿಂದ ವಂಚನೆ ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ
ಹಾಸನ

ಅಗ್ರಿಗೋಲ್ಡ್ ಸಂಸ್ಥೆಯಿಂದ ವಂಚನೆ ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ

February 2, 2019

ಹಾಸನ: ಅಗ್ರಿಗೋಲ್ಡ್ ಸಂಸ್ಥೆಯಿಂದ ವಂಚನೆಯಾದ ಗ್ರಾಹಕರಿಗೆ ಮತ್ತು ಏಜೆಂಟರಿಗೆ ಕೂಡಲೇ ಪರಿಹಾರ ನೀಡಬೇಕೆಂದು ಒತ್ತಾಯಿಸಿ ಅಗ್ರಿಗೋಲ್ಡ್ ಕಸ್ಟಮರ್ಸ್ ಮತ್ತು ಏಜೆಂಟ್ಸ್ ವಲ್‍ಫೇರ್ ಅಸೋಸಿಯೇಶನ್ ಜಿಲ್ಲಾ ಸಮಿತಿಯಿಂದ ಜಿಲ್ಲಾಧಿಕಾರಿ ಕಛೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.

ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಹೊರಟ ಪ್ರತಿಭಟನಾ ಮೆರವಣಿಗೆಯು ಎನ್.ಆರ್. ವೃತ್ತದ ಮೂಲಕ ಜಿಲ್ಲಾಧಿಕಾರಿ ಕಛೇರಿ ಆವರಣಕ್ಕೆ ಬಂದ ಪ್ರತಿಭಟನಾಕಾರರು, ಅಗ್ರಿಗೋಲ್ಡ್ ಸಂಸ್ಥೆಯು ಕರ್ನಾಟಕ ರಾಜ್ಯದಲ್ಲೇ ಸುಮಾರು 8.50 ಲಕ್ಷದಷ್ಟು ಗ್ರಾಹಕರನ್ನು ಪಡೆದು ಸುಮಾರು 2500 ಕೋಟಿ ಹಣವನ್ನು ಠೇವಣಿಯಾಗಿ ಸಂಗ್ರಹಿಸಿತ್ತು. ದೇಶದ ಎಂಟು ರಾಜ್ಯಗಳಲ್ಲಿ ವ್ಯವಹಾರ ಹೊಂದಿದ್ದ ಈ ಅಗ್ರಿಗೋಲ್ಡ್ ಸಂಸ್ಥೆಯಿಂದ ವಂಚನೆ ಪರಿಹಾರಕ್ಕಾಗಿ ಪ್ರತಿಭಟನೆ ನಡೆಸಲಾಗುತ್ತಿದೆ. ಸಂಸ್ಥೆಯು ಒಟ್ಟು 35 ಲಕ್ಷ ಖಾತೆಗಳನ್ನು ಹೊಂದಿದ್ದು, ಸುಮಾರು 7623 ಕೋಟಿ ಹಣ ಪಾವತಿಸಬೇಕಾಗಿದೆ ಎಂದರು. ಆದರೆ ಸಂಸ್ಥೆ ದಿವಾಳಿ ಎದ್ದಿರುವ ಹಿನ್ನೆಲೆಯಲ್ಲಿ ಲಕ್ಷಾಂತರ ಗ್ರಾಹಕರು ಮತ್ತು ಏಜೆಂಟರು ಹಣ ಕಳೆದುಕೊಂಡು 105 ಮಂದಿ ಆತ್ಮಹತ್ಯೆ ಶರಣಾಗಿದ್ದಾರೆ. ರಾಜ್ಯ ಸರ್ಕಾರ ಅಗ್ರಗೋಲ್ಡ್‍ಗೆ ಸೇರಿದ ಸ್ಥಿರಾಸ್ಥಿ ಯನ್ನು ವಶಪಡಿಸಿಕೊಂಡಿದೆ.ಈ ಆಸ್ತಿಯ ಬೆಲೆ 500 ಕೋಟಿ ಯಾಗಿದ್ದು, ಕರ್ನಾಟಕದ ಗ್ರಾಹಕರಿಗೆ ಸುಮಾರು 2500 ಕೋಟಿ ಹಣ ಸಂಸ್ಥೆಯಿಂದ ಸಿಗಬೇಕಾಗಿದೆ. ಆದರೆ ಪಕ್ಕದ ಆಂಧ್ರಪ್ರದೇಶದಲ್ಲಿ ಈ ಸಂಸ್ಥೆಯ ಆಸ್ತಿಗಳನ್ನು ಅಲ್ಲಿನ ಸರಕಾರ ಮುಟ್ಟುಗೋಲು ಹಾಕಿಕೊಂಡಿದ್ದು, ಅವುಗಳ ಬೆಲೆಯು ಲಕ್ಷ ಕೋಟಿಯಲ್ಲಿದೆ. ಈ ಆಸ್ತಿಗಳನ್ನು ಸಹ ಅಲ್ಲಿನ ಸರಕಾರ ಮಾರಾಟ ಮಾಡಬೇಕು. ಆದರಿಂದ ಬಂದ ಹಣವನ್ನು ಕರ್ನಾಟಕದಲ್ಲಿ ವಂಚನೆಗೊಳಗಾಗಿರುವ ಗ್ರಾಹಕರಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಅಗ್ರಿಗೋಲ್ಡ್ ಸಂಸ್ಥೆಯಿಂದ ವಂಚನೆಗೀಡಾಗಿರುವ ಗ್ರಾಹಕರಿಗೆ ಹಾಗೂ ಏಜೆಂಟರಿಗೆ ಆಂಧ್ರಪ್ರದೇಶದಲ್ಲಿ ಸಿಕ್ಕ ರೀತಿಯಲ್ಲಿಯೇ ಕರ್ನಾಟದಲ್ಲೂ ಸಿಗಬೇಕು ಎಂದು ಒತ್ತಾಯಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಅಗ್ರಿಗೋಲ್ಡ್ ಕಸ್ಟಮರ್ಸ್ ಮತ್ತು ಏಜೆಂಟ್ಸ್ ವಲ್‍ಫೇರ್ ಅಸೋಸಿಯೇಶನ್ ಜಿಲ್ಲಾ ಸಮಿತಿ ಗೌರವಾಧ್ಯಕ್ಷ ಎಂ.ಸಿ. ಡೋಂಗ್ರೆ, ಅಧ್ಯಕ್ಷ ಯೋಗೀಶ್, ಉಪಾಧ್ಯಕ್ಷ ಬಿ.ಎನ್. ಶಿವಪ್ಪ, ಪ್ರಧಾನ ಕಾರ್ಯದಶಿ ಸುದರ್ಶನ್, ಸಹ ಕಾರ್ಯದರ್ಶಿ ಎಂ.ಸಿ. ಮಂಜೇಗೌಡ, ಖಜಾಂಚಿ ಗಣೇಶ್, ಮಹಿಳಾ ಅಧ್ಯಕ್ಷೆ ಶಕುಂತಲಾ, ಕಾರ್ಯದರ್ಶಿ ಜೆ.ಕೆ. ಸುಜಾತ ಹಾಗೂ ಸದಸ್ಯರು ಮೋಹನ್ ಕುಮಾರ್, ಗಂಗಾಧರ್ ಇತರರು ಉಪಸ್ಥಿತರಿದ್ದರು.

Translate »