ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮಂತ್ರಿ ಮಂಡಲಕ್ಕೆ 25 ಸಚಿವರ ಸೇರ್ಪಡೆ
ಮೈಸೂರು

ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮಂತ್ರಿ ಮಂಡಲಕ್ಕೆ 25 ಸಚಿವರ ಸೇರ್ಪಡೆ

June 7, 2018
  •  ಜೆಡಿಎಸ್‍ನಿಂದ ಜಿ.ಟಿ. ದೇವೇಗೌಡ, ಸಿ.ಎಸ್. ಪುಟ್ಟರಾಜು, ಸಾರಾ ಮಹೇಶ್, ಡಿ.ಸಿ. ತಮ್ಮಣ್ಣ, ಹೆಚ್.ಡಿ. ರೇವಣ್ಣ, ಬಿಎಸ್‍ಪಿಯ ಎನ್. ಮಹೇಶ್ ಸೇರಿ 10, ಕಾಂಗ್ರೆಸ್‍ನಿಂದ ಪುಟ್ಟರಂಗಶೆಟ್ಟಿ, ಡಿ.ಕೆ. ಶಿವಕುಮಾರ್ ಸೇರಿ 15 ಮಂದಿ ಸಚಿವರು
  • ನೂತನ ಸಚಿವರಿಗೆ ರಾಜಭವನ ಗಾಜಿನ ಮನೆಯಲ್ಲಿ ಪ್ರಮಾಣ ವಚನ ಬೋಧಿಸಿದ ರಾಜ್ಯಪಾಲ ವಾಲಾ
  •  ಪ್ರಿಯಾಂಕ ಖರ್ಗೆ ಅತ್ಯಂತ ಕಿರಿಯ, ಮನಗೂಳಿ ಅತ್ಯಂತ ಹಿರಿಯ ಸಚಿವರು!
  • ಒಕ್ಕಲಿಗರ ಪ್ರಾಬಲ್ಯ ಉಳಿಸಿಕೊಂಡ ಜೆಡಿಎಸ್

ಬೆಂಗಳೂರು: ಭಿನ್ನ ಮತದ ಬೇಗುದಿ ನಡುವೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಇಂದು ತಮ್ಮ ಮಂತ್ರಿಮಂಡಲವನ್ನು ವಿಸ್ತರಿಸಿ ಕಾಂಗ್ರೆಸ್-ಜೆಡಿಎಸ್ ಪಕ್ಷಗಳಿಂದ 25 ಸದಸ್ಯರನ್ನು ಸೇರ್ಪಡೆ ಮಾಡಿಕೊಂಡಿದ್ದಾರೆ.

ರಾಜಭವನದ ಗಾಜಿನ ಮನೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯಪಾಲ ವಜೂಭಾಯ್ ವಾಲಾ, ನೂತನ ಸದಸ್ಯ ರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

ಜಾತ್ಯತೀತ ಜನತಾ ದಳದಿಂದ ಹೆಚ್.ಡಿ. ರೇವಣ್ಣ(ಹಾಸನ), ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್(ಮೈಸೂರು), ಸಿ.ಎಸ್. ಪುಟ್ಟರಾಜು, ಡಿ.ಸಿ.ತಮ್ಮಣ್ಣ(ಮಂಡ್ಯ), ಬಂಡೆಪ್ಪ ಕಾಶೆಂಪೂರ್(ಬೀದರ್), ವೆಂಕ ಟರಾವ್ ನಾಡಗೌಡ(ರಾಯಚೂರು), ಗುಬ್ಬಿ ಶ್ರೀನಿವಾಸ್ (ತುಮಕೂರು), ಎಂ.ಸಿ. ಮನಗೂಳಿ(ವಿಜಯಪುರ), ಬಿಎಸ್‍ಪಿಯ ಎನ್.ಮಹೇಶ್ (ಚಾಮರಾಜನಗರ), ಕಾಂಗ್ರೆಸ್‍ನಿಂದ ಆರ್.ವಿ.ದೇಶಪಾಂಡೆ (ಉತ್ತರ ಕನ್ನಡ), ಡಿ.ಕೆ.ಶಿವಕುಮಾರ್ (ರಾಮನಗರ), ಕೆ.ಜೆ.ಜಾರ್ಜ್, ಕೃಷ್ಣ ಭೈರೇಗೌಡ, ಜಮೀರ್ ಅಹಮದ್ ಖಾನ್ (ಬೆಂಗಳೂರು ನಗರ), ರಾಜಶೇಖರ್ ಪಾಟೀಲ್(ಬೀದರ್), ಶಿವಾನಂದ ಪಾಟೀಲ್ (ವಿಜಯಪುರ), ಪ್ರಿಯಾಂಕ ಖರ್ಗೆ(ಕಲ ಬುರಗಿ), ಯು.ಟಿ.ಖಾದರ್(ದಕ್ಷಿಣ ಕನ್ನಡ), ಪುಟ್ಟರಂಗಶೆಟ್ಟಿ (ಚಾಮರಾಜನಗರ), ಶಿವಶಂಕರ ರೆಡ್ಡಿ (ಚಿಕ್ಕಬಳ್ಳಾಪುರ), ರಮೇಶ್ ಜಾರಕಿ ಹೊಳಿ(ಬೆಳಗಾವಿ), ವೆಂಕಟರಮಣಪ್ಪ (ತುಮಕೂರು). ವಿಧಾನ ಪರಿಷತ್ ಸದಸ್ಯೆ ಹಾಗೂ ಸಂಪುಟದ ಏಕೈಕ ಮಹಿಳೆಯಾಗಿ ಚಿತ್ರನಟಿ ಜಯಮಾಲಾ(ಚಿಕ್ಕಮಗಳೂರು) ಹಾಗೂ ಪಕ್ಷೇತರ ಸದಸ್ಯ ಶಂಕರ್ (ಹಾವೇರಿ) ನೂತನ ಸಚಿವರಾಗಿ ಮಂತ್ರಿ ಮಂಡಲ ಸೇರ್ಪಡೆಗೊಂಡ ಹಿನ್ನೆಲೆಯಲ್ಲಿ ಸಂಪುಟ ಸಂಖ್ಯೆ ಈಗ 27ಕ್ಕೆ ತಲುಪಿದೆ. ಕಳೆದ 15 ದಿನಗಳ ಹಿಂದೆ ಸರ್ಕಾರ ರಚನೆಗೊಂಡ ಸಂದರ್ಭದಲ್ಲಿ ಕುಮಾರಸ್ವಾಮಿ ಹಾಗೂ ಡಾ. ಜಿ.ಪರಮೇಶ್ವರ್ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ರಾಜಕೀಯ ಕಾರಣ ಗಳಿಗಾಗಿ ಉಭಯ ಪಕ್ಷಗಳಿಂದ ಒಟ್ಟು 7 ಸ್ಥಾನಗಳನ್ನು ಖಾಲಿ ಉಳಿಸಲಾಗಿದೆ, ಇದರಲ್ಲಿ ಜೆಡಿಎಸ್‍ನದು ಒಂದು ಸ್ಥಾನ ವಿದ್ದು, ಕಾಂಗ್ರೆಸ್ 6 ಸ್ಥಾನ ಉಳಿಸಿಕೊಂಡಿದೆ.

ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಸಮಾರಂಭದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್‍ನ ಪ್ರಮುಖ ಮುಖಂಡರು, ಸಂಸದರು ಹಾಗೂ ಶಾಸಕರು ಭಾಗವಹಿ ಸಿದ್ದರು. ವೇದಿಕೆ ಮೇಲಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ಸಂಪುಟದ ನೂತನ ಸದಸ್ಯ ರಿಗೆ ಶುಭ ಹಾರೈಸಿದರು. ರಾಜಶೇಖರ್ ಪಾಟೀಲ್, ಶಿವಾನಂದ ಪಾಟೀಲ್, ಪುಟ್ಟ ರಂಗ ಶೆಟ್ಟಿ, ಶಿವಶಂಕರ ರೆಡ್ಡಿ, ಜಯ ಮಾಲಾ, ಆರ್.ಶಂಕರ್, ಸಿ.ಎಸ್.ಪುಟ್ಟರಾಜು, ವೆಂಕಟರಾವ್ ನಾಡಗೌಡ, ಸಾ.ರಾ.ಮಹೇಶ್, ಎನ್.ಮಹೇಶ್, ಡಿ.ಸಿ.ತಮ್ಮಣ್ಣ, ಗುಬ್ಬಿ ಶ್ರೀನಿವಾಸ್ ಇದೇ ಮೊದಲ ಬಾರಿಗೆ ಸಚಿವ ರಾಗಿದ್ದಾರೆ. ಶಿವಶಂಕರ ರೆಡ್ಡಿ ಮತ್ತು ಶಿವಾನಂದ ಪಾಟೀಲ್ ವಿಧಾನಸಭೆಗೆ ಐದಾರು ಬಾರಿ ಆಯ್ಕೆಯಾಗಿದ್ದರೂ ಮಂತ್ರಿಯಾಗುವ ಯೋಗ ಕೂಡಿ ಬಂದಿರಲಿಲ್ಲ. ಪ್ರಮಾಣ ವಚನ ಸ್ವೀಕಾರ ಸಮಾರಂಭ ಮಧ್ಯಾಹ್ನ 2-12ಕ್ಕೆ ನಿಗದಿಪಡಿಸಿದ್ದರೂ, ಕೆಲವು ನಿಮಿಷಗಳ ಕಾಲ ತಡವಾಗಿ ಆರಂಭವಾಯಿತು.

ಕಡೆ ಘಳಿಗೆಯಲ್ಲೂ ಕಾಂಗ್ರೆಸ್ ಮತ್ತು ಜೆಡಿಎಸ್ ತಮ್ಮ ಸದಸ್ಯರನ್ನು ಸೇರಿಸುವ ಮತ್ತು ಕೈಬಿಡುವ ಕಸರತ್ತು ಮುಂದುವರಿಸಿದ್ದರಿಂದ, ಸಮಾರಂಭ ತಡವಾಯಿತು.

ತಡರಾತ್ರಿ ಪ್ರಕಟಗೊಂಡ ಕಾಂಗ್ರೆಸ್ ಪಟ್ಟಿಯಲ್ಲಿ ಶಾಮನೂರು ಶಿವಶಂಕರಪ್ಪ, ಹೆಚ್.ಕೆ.ಪಾಟೀಲ್ ಅವರಿಗೆ ಅವಕಾಶ ಕಲ್ಪಿಸಲಾಗಿತ್ತು. ಅದೇ ರೀತಿ ಜೆಡಿಎಸ್‍ನಲ್ಲಿ ಹೆಚ್.ಕೆ.ಕುಮಾರಸ್ವಾಮಿ ಹೆಸರಿತ್ತು. ಆದರೆ, ಕೇಂದ್ರದ ರಾಜಕೀಯ ಒತ್ತಡಕ್ಕೆ ಮಣ ದು ಕಡೆ ಘಳಿಗೆಯಲ್ಲಿ ರಮೇಶ್ ಜಾರಕಿ ಹೊಳಿ ಮತ್ತು ವೆಂಕಟರಮಣಪ್ಪ ಅವರನ್ನು ಸೇರ್ಪಡೆಗೊಳಿಸಲಾಯಿತು. ಜೆಡಿಎಸ್‍ನಲ್ಲೂ ಇದೇ ಪರಿಸ್ಥಿತಿ ಉದ್ಭವಿಸಿ, ಕಡೆ ಘಳಿಗೆಯಲ್ಲಿ ಡಿ.ಸಿ.ತಮ್ಮಣ್ಣ, ಗುಬ್ಬಿ ಶ್ರೀನಿವಾಸ್, ಎಂ.ಸಿ.ಮನಗೂಳಿ ಸಚಿವರಾಗುವ ಭಾಗ್ಯ ಪಡೆದರು.

Translate »