ದಂಗೆ ಏಳುವಂತೆ ಕರೆ ಕೊಡುತ್ತೇನೆ
ಮೈಸೂರು

ದಂಗೆ ಏಳುವಂತೆ ಕರೆ ಕೊಡುತ್ತೇನೆ

September 21, 2018

ಹಾಸನ/ಬೆಂಗಳೂರು: ‘ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರಕ್ಕೆ ತೊಂದರೆ ಕೊಟ್ಟರೆ ನಾನು ಸುಮ್ಮನಿರುವುದಿಲ್ಲ. ಬಿಜೆಪಿ ವಿರುದ್ಧ ದಂಗೆ ಏಳುವಂತೆ ರಾಜ್ಯದ ಜನರಿಗೆ ಕರೆ ಕೊಡುತ್ತೇನೆ’ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಎಚ್ಚರಿಕೆ ನೀಡಿದರು.

ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕು ಉದಯಪುರದಲ್ಲಿ ಗುರುವಾರ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು. ಯಡಿಯೂರಪ್ಪ ಅವರಿಗೆ ಬುದ್ಧಿ ಭ್ರಮಣೆಯಾಗಿದೆ. ಅವರು ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ಮುಂದು ವರೆಸಿದ್ದಾರೆ. ಪ್ರತಿನಿತ್ಯ ಪ್ರತಿಪಕ್ಷದವರ ಕಾಟ ಸಹಿಸಿಕೊಳ್ಳಬೇಕೋ ಅಥವಾ ನಾಡಿನ ಜನರ ಹಿತ ಕಾಯಬೇಕೋ ಹೇಳಿ? ಎಂದು ಪ್ರಶ್ನಿ ಸಿದ ಅವರು, ಸರ್ಕಾರದ ವಿರುದ್ಧ ಬಿಜೆಪಿ ಹುಡುಗಾಟ ಆಡೋದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ, ಬಿಜೆಪಿ ವಿರುದ್ಧ ದಂಗೆ ಏಳುವಂತೆ ನಾಡಿನ ಜನತೆಗೆ ಕರೆ ನೀಡುತ್ತೇನೆ ಎಂದು ಖಡಕ್ ಎಚ್ಚರಿಕೆ ನೀಡಿದರು.

ಯಡಿಯೂರಪ್ಪ ಅವರು ಸರ್ಕಾರ ಟೇಕಾಫ್ ಆಗಿಲ್ಲ ಎನ್ನುತ್ತಾರೆ. ಆ ಶಬ್ದದ ಅರ್ಥವಾದರೂ ಅವರಿಗೆ ಗೊತ್ತಿದೆಯಾ? ಯಡಿಯೂರಪ್ಪ ಅವರಿಗೆ ಎಲ್ಲೋ ಬುದ್ಧಿ ಭ್ರಮಣೆಯಾಗಿರಬೇಕು. ಯಾವುದೋ ಲೋಕದಲ್ಲಿ ಇದ್ದಾರೆ. ಅವರ ಶಿಷ್ಯನೊಬ್ಬ ಮೊನ್ನೆ ಮೊನ್ನೆ ರಾತ್ರೋರಾತ್ರಿ ಶ್ರೀಲಂಕಾಕ್ಕೆ ಓಡಿ ಹೋದನಲ್ಲ. ಸರ್ಕಾರ ಟೇಕಾಫ್ ಆಗಿರುವುದರಿಂದಲೇ ಇಂಥವರೆಲ್ಲ ಊರು ಬಿಟ್ಟು ಹೋಗುತ್ತಿರುವುದು ಎಂದರು. ಬಿಜೆಪಿಯವರು ಮಾತ್ರ ಅಧಿಕಾರದಲ್ಲಿ ಇರಬೇಕಾ? ಅವರು ಮಾತ್ರ ಆಡಳಿತ ನಡೆಸಬೇಕಾ? ಇನ್ನು ಕೆಲವೇ ದಿನಗಳಲ್ಲಿ ದಂಧೆಕೋರರ ಹೆಸರು ಬಯಲು ಮಾಡುತ್ತೇನೆ ಎಂದು ಗುಡುಗಿದರು.

ಬೆಂಗಳೂರಲ್ಲಿ ಗುಡುಗು: ಗಾಜಿನ ಮನೆಯಲ್ಲಿ ಕುಳಿತು ರಸ್ತೆಯಲ್ಲಿ ನಿಂತಿರುವ ನಮ್ಮ ಮೇಲೆ ಕಲ್ಲು ಎಸೆದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಪ್ರತಿಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಅವರಿಗೆ ಇಂದಿಲ್ಲಿ ಎಚ್ಚರಿಕೆ ನೀಡಿದ್ದಾರೆ. ಯಡಿಯೂರಪ್ಪನವರೇ ನಿಮ್ಮ ವಯಸ್ಸಿಗೆ ತಕ್ಕಂತೆ ನಡೆದುಕೊಳ್ಳಿ, ಅದನ್ನು ಬಿಟ್ಟು ಬೇರೆ ದಾರಿ ಹಿಡಿದರೆ ನಾವು ತಾಳ್ಮೆ ಕಳೆದುಕೊಳ್ಳ ಬೇಕಾಗುತ್ತದೆ, ತಾಳ್ಮೆ ಕಳೆದುಕೊಂಡರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ. ಅಪ್ಪ-ಮಕ್ಕಳು ಭ್ರಷ್ಟಾಚಾರ ಎಸಗಿ, ಲೂಟಿ ಮಾಡುತ್ತಿದ್ದಾರೆ ಎಂದು ಪದೇ ಪದೆ ಹೇಳುತ್ತಿದ್ದೀರಿ. ಇದನ್ನು ಸಹಿಸಲಾಗದು. ನಿಮಗೆ ತಾಕತ್ತಿದ್ದರೆ, ಆರೋಪಕ್ಕೆ ದಾಖಲೆ ಸಮೇತ ಪುರಾವೆ ನೀಡಿ. ನಿಮ್ಮ ಆಡಳಿತದಲ್ಲಿ ಲೂಟಿ ಮಾಡಿ ನಮ್ಮ ಮೂತಿಗೆ ಹಚ್ಚಲು ಹೋಗಬೇಡಿ. ಹೋದರೆ ನಿಮ್ಮ ಬಣ್ಣ ಬಯಲು ಮಾಡಬೇಕಾಗುತ್ತದೆ.

ಮುಖ್ಯಮಂತ್ರಿ ಆದ ನಂತರ ಕುಮಾರಸ್ವಾಮಿ, ಮೊದಲ ಬಾರಿಗೆ ಪ್ರತಿಪಕ್ಷದ ನಾಯಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರ ವಿರುದ್ಧ ಹರಿಹಾಯ್ದಿದ್ದಲ್ಲದೆ, ಇಲ್ಲಿವರೆಗೂ ತಾಳ್ಮೆಯಿಂದ ಎಲ್ಲ ಕೇಳಿಕೊಂಡು ಬಂದಿದ್ದೇನೆ, ಇನ್ನು ಸಹಿಸಲಾಗದು. ಸರ್ಕಾರ ನನ್ನ ಕೈಯ್ಯಲ್ಲಿದೆ. ನಾಳೆ ಬೆಳಗ್ಗೆಯೇ ನಾನು ಏನು ನಿರ್ಧಾರ ಕೈಗೊಳ್ಳಬೇಕೋ ಅದನ್ನು ಮಾಡುತ್ತೇನೆ. ನನಗೂ ಶಕ್ತಿ ಇದೆ ಎಂಬುದನ್ನು ತೋರಿಸುತ್ತೇನೆ ಎಂದು ಸವಾಲು ಹಾಕಿದರು. ಅನಾರೋಗ್ಯದಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರ ಆರೋಗ್ಯ ವಿಚಾರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೀವು ವಯಸ್ಸಿಗೆ ತಕ್ಕಂತೆ ಮಾತನಾಡುತ್ತಿಲ್ಲ, ನಿಮ್ಮ ನಡೆ-ನುಡಿಗಳು ಸಾರ್ವಜನಿಕವಾಗಿ ಗಾಂಭೀರ್ಯ ವನ್ನು ಕಳೆದುಕೊಳ್ಳುತ್ತಿವೆ. ನಿಮ್ಮ ಇತಿಹಾಸ ಬಿಚ್ಚಿದರೆ ಏನು ಗತಿಯಾಗುತ್ತದೆ ಎಂದು ಆತ್ಮಾವಲೋಕನ ಮಾಡಿಕೊಳ್ಳಿ, ಒಮ್ಮೆ ಜೈಲುವಾಸ ಅನುಭವಿಸಿದ್ದೀರಿ, ಅಂತಹ ಪರಿಸ್ಥಿತಿ ಮತ್ತೆ ಬರುವುದು ಬೇಡ ಎಂದು ಕಿವಿಮಾತು ಹೇಳಿದರು.

2007ರಲ್ಲಿ ಅಪ್ಪ-ಮಕ್ಕಳನ್ನು ಜೈಲಿಗೆ ಕಳುಹಿಸುತ್ತೇನೆ, ಕಳುಹಿಸುತ್ತೇನೆ ಎಂದು ನೀವೇ ಹೋಗಿಬಿಟ್ಟಿರಿ. ಈಗ ಶಿವಕುಮಾರ್ ಅವರನ್ನು ಇಂದು, ಇಲ್ಲವೆ ನಾಳೆ ಜೈಲಿಗೆ ಹಾಕಿಸುತ್ತೇನೆ ಎಂದು ಹೇಳಿಕೊಂಡು ತಿರುಗುತ್ತಿದ್ದೀರಿ. ಯಾರು ಜೈಲಿಗೆ ಹೋಗುತ್ತಾರೋ ನೋಡೋಣ. ನಾವು ಅಧಿಕಾರಕ್ಕೆ ಬಂದಾಗ ರಾಜ್ಯದ ಸಂಪತ್ತು ಉಳಿಸುವ ಕೆಲಸ ಮಾಡಿದ್ದೇವೆ. ನೀವು ಅಧಿಕಾರಕ್ಕೆ ಬಂದು ಲೂಟಿ ಮಾಡಿ, ಅದರ ಫಲವನ್ನೂ ಪಡೆದುಕೊಂಡಿದ್ದೀರಿ. ಏನ್ರೀ, 8ರಿಂದ 10 ಪರ್ಸೆಂಟ್ ಅಂತಾ ಹೇಳುತ್ತೀರಲ್ಲಾ, ಅದು ನಮ್ಮ ಕೂಸಲ್ಲ, ನೀವು ಮುಖ್ಯಮಂತ್ರಿ ಆಗಿದ್ದಾಗ, ಗುತ್ತಿಗೆದಾರರಿಗೆ ನಿಗದಿ ಮಾಡಿದ್ದ ಪರ್ಸೆಂಟೇಜ್. ನಿಮ್ಮ ಆಡಳಿತಕ್ಕೂ ಹಿಂದೆ ಕಾಂಗ್ರೆಸ್ ಆಡಳಿತದಲ್ಲೂ ಈ ಪರ್ಸೆಂಟೇಜ್ ನಿಗದಿ ಆಗಿರಲಿಲ್ಲ. ನೀವು ನಿಗದಿ ಮಾಡಿ ಅದರ ಲಾಭ ಪಡೆದು, ಅದು ಈಗಲೂ ಮುಂದುವರೆಯುತ್ತಿರಬಹುದೆಂಬ ಭ್ರಮೆಯಿಂದ ಇಲ್ಲ-ಸಲ್ಲದ ಆರೋಪ ಮಾಡುತ್ತಿದ್ದೀರಿ. ಪರ್ಸೆಂಟೇಜ್ ತೆಗೆದುಕೊಂಡಿರುವ ಬಗ್ಗೆ ದಾಖಲೆ ಇದ್ದರೆ ಬಹಿರಂಗಪಡಿಸಿ ಎಂದು ಸವಾಲು ಹಾಕಿದರು.

ಶಿವರಾಮ ಕಾರಂತ ಬಡಾವಣೆ ಡಿನೋಟಿಫಿಕೇಶನ್ ಪ್ರಕರಣ ಇನ್ನೂ ಸುಪ್ರೀಂಕೋರ್ಟ್‍ನಲ್ಲಿದೆ. ಅದನ್ನು ಮರೆಯಬೇಡಿ ಎಂದು ಪರೋಕ್ಷವಾಗಿ ಟಾಂಗ್ ನೀಡಿದರು. ಹದಿನೆಂಟು ಶಾಸಕರು ಮುಂಬೈಗೆ ಹೋಗಲು ಸಿದ್ಧರಾಗಿದ್ದಾರೆ. ನಾಳೆ ಬೆಳಿಗ್ಗೆಯೇ ವಿಮಾನದ ಮೂಲಕ ಪುಣೆ, ಮುಂಬೈಗೆ ಹೋಗುತ್ತಾರೆ ನೀವು ಬರುವುದಾದರೆ 5 ಕೋಟಿ ರೂ. ನೀಡುವುದಾಗಿ ಶಾಸಕ ಸುರೇಶ್ ಗೌಡ ಅವರನ್ನು ನೀವೇ ಸಂಪರ್ಕಿಸಿದ್ದೀರಿ.

ನಾವಾಗೇ ಸರ್ಕಾರ ಉರುಳಿಸುವುದಿಲ್ಲ, ಅದೇ ಬಿದ್ದು ಹೋದರೆ ನಾವೇನೂ ಮಾಡಲಾಗದು ಎಂದು ಸಾರ್ವಜನಿಕವಾಗಿ ಹೇಳಿಕೊಂಡು, ಶಾಸಕರ ಖರೀದಿಗೆ ನಿಂತಿದ್ದೀರಿ. ನನ್ನ ಪಕ್ಕದಲ್ಲೇ ಕಾಂಗ್ರೆಸ್ ಶಾಸಕ ಶಿವಳ್ಳಿ ಇದ್ದಾರೆ. ನಿನ್ನೆ ರಾತ್ರಿ ಅವರನ್ನು ಸಂಪರ್ಕಿಸಿ ಈಗಾಗಲೇ 18 ಶಾಸಕರು ಹೋಟೆಲ್‍ನಲ್ಲಿದ್ದಾರೆ, ಎಮರ್ಜೆನ್ಸಿಗೆ ಒಂದಿಬ್ಬರು ಬೇಕು, ಬಂದು ಬಿಡಿ ಎಂದಿದ್ದೀರಿ. ಐದು ಕೋಟಿ ರೂ.ಗಳನ್ನು ನಿಮ್ಮ ಮನೆಗೆ ತಲುಪಿಸುತ್ತಾರೆ ಮುಂದೆ ನೋಡೋಣ. ಬಾಂಬೆಯಿಂದ ನೇರವಾಗಿ ಮಿಲಿಟರಿ ರಕ್ಷಣೆಯಲ್ಲಿ ವಿಧಾನಸೌಧಕ್ಕೆ ಬರೋಣ. ನಿಮಗೆ ಬಂದೋಬಸ್ತ್ ಮಾಡುತ್ತೇವೆ ಎಂದು ಆಮಿಷ ಒಡ್ಡಿಲ್ಲವೆ? ಯಡಿಯೂರಪ್ಪನವರೇ. ಬೇಕಿದ್ದರೆ, ಪಕ್ಕದಲ್ಲೇ ಶಿವಳ್ಳಿ ಇದ್ದಾರೆ, ಅವರನ್ನೇ ಕೇಳಿ ಎಂದು ಪಕ್ಕದಲ್ಲೇ ಇದ್ದ ಮಾಧ್ಯಮದವರಿಗೆ ತೋರಿಸಿದಾಗ, ಅವರು ತಲೆಯಾಡಿಸಿ, ಯಡಿಯೂರಪ್ಪ ಹೇಳಿದ್ದನ್ನು ಬಿಡಿಸಿಟ್ಟರು. ಸರ್ಕಾರ ಬೀಳಿಸಲು ಬಿಜೆಪಿಯವರು ವ್ಯರ್ಥ ಕಸರತ್ತು ನಡೆಸುತ್ತಿದ್ದಾರೆ. ನೀವು ಏನೆಲ್ಲಾ ಮಾಡುತ್ತೀರೋ ಮಾಡಿ, ಯಡಿಯೂರಪ್ಪ ಅವರ ಇತಿಹಾಸ ಎಂಥಹದ್ದು ಎಂಬುದು ನನಗೆ ತಿಳಿದಿದೆ. ಶಿವಕುಮಾರ್ ಅವರ ಆರೋಗ್ಯ ವಿಚಾರಿಸಿದ್ದೇನೆ. ಅವರೊಂದಿಗೆ ಬಿಜೆಪಿ ಸ್ನೇಹಿತರ ರಾಜಕೀಯವನ್ನೂ ಚರ್ಚಿಸಿದ್ದೇನೆ ಎಂದು ಹೇಳಿದರು.

ಸಿಎಂ ಧಮ್ಕಿಗೆ ರಾಜ್ಯ ಬಿಜೆಪಿ ನಾಯಕರ ಕಿಡಿ ರಾಜ್ಯಪಾಲರ ಮಧ್ಯ ಪ್ರವೇಶಕ್ಕೆ ಒತ್ತಾಯ

ಬೆಂಗಳೂರು: ಪ್ರತಿಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ವಿರುದ್ಧ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಕಿರುವ ಧಮ್ಕಿಗೆ ಬಿಜೆಪಿ ರಾಜ್ಯ ನಾಯಕರು ತೀವ್ರ ಕಿಡಿಕಾರಿದ್ದಾರೆ. ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್, ಮಾಜಿ ಸಚಿವ ಗೋವಿಂದ ಕಾರಜೋಳ, ವಿಧಾನ ಪರಿಷತ್ತಿನ ಮಾಜಿ ಸದಸ್ಯ ಬಿ.ಜೆ. ಪುಟ್ಟಸ್ವಾಮಿ ಇಂದಿಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿ, ಸಾರ್ವಜನಿಕರು ದಂಗೆ ಏಳುವಂತಹ ಪ್ರಚೋದನೆ ನೀಡಿರುವ ಮುಖ್ಯಮಂತ್ರಿ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲು ಮಾಡಿಕೊಳ್ಳಬೇಕು. ರಾಜ್ಯಪಾಲರು ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡಬೇಕು ಎಂದು ಒತ್ತಾಯಿಸಿದರು.
ಅಷ್ಟೇ ಅಲ್ಲ ಬಿ.ಜೆ. ಪುಟ್ಟಸ್ವಾಮಿ, ಈ ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ, ದೇವೇಗೌಡ ಅವರ ಕುಟುಂಬ ಮಾಡಿದ ಅವ್ಯವಹಾರ ಮತ್ತು ಆಸ್ತಿ-ಪಾಸ್ತಿ ಆರೋಪಗಳ ಬಗ್ಗೆ ಮತ್ತೊಮ್ಮೆ ಇಂದು ಪುನರುಚ್ಛರಿಸಿದರು.

ಮುಂದುವರಿದು ಮಾತನಾಡಿದ ಅವರು, ಚಿತ್ರದುರ್ಗದಲ್ಲಿ 80 ಹೆಕ್ಟೇರ್ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆಗೆ ಅವಕಾಶ ನೀಡಿದ ಪ್ರಕರಣದಲ್ಲಿ ಕುಮಾರಸ್ವಾಮಿ ಜಾಮೀನು ಪಡೆದಿದ್ದಾರೆ. ಅದಿರು ಕಳ್ಳಸಾಗಾಣಿಕೆಗೆ ಭೂಗತ ಪಾತಕಿಯೊಂದಿಗೆ ನಂಟು ಹೊಂದಿ ದ್ದಾರೆ. ಥಣಿಸಂದ್ರ ಡಿನೋಟಿಫಿಕೇಷನ್ ಪ್ರಕರಣದಲ್ಲಿಹೈಕೋರ್ಟಿನಿಂದ ಜಾಮೀನು ಪಡೆದಿದ್ದಾರೆ. 460 ಹೆಕ್ಟೇರ್ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಕುಮಾರಸ್ವಾಮಿ ಜಾಮೀನು ಪಡೆದಿದ್ದಾರೆ. ಹಲವು ಆರೋಪಗಳು ಕುಮಾರಸ್ವಾಮಿ ಅವರ ಮೇಲಿವೆ ಎಂದು ನೆನಪಿಸಿ ಕೊಟ್ಟರು.

Translate »