ಮೈಸೂರು: ರಾಜ್ಯ ವಿಧಾನಪರಿಷತ್‍ಗೆ ಪೌರ ಕಾರ್ಮಿಕರ ಪ್ರತಿನಿಧಿಯೊಬ್ಬರನ್ನು ನಾಮ ನಿರ್ದೇಶನ ಮಾಡುವ ಮೂಲಕ ಪೌರ ಕಾರ್ಮಿಕರಿಗೂ ರಾಜಕೀಯ ಪ್ರಾತಿನಿಧ್ಯ ನೀಡುವಂತೆ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಮಾಜಿ ಅಧ್ಯಕ್ಷ, ಕರ್ನಾಟಕ ಪೌರ ಕಾರ್ಮಿಕರ ಮಹಾಸಂಘದ ರಾಜ್ಯಾಧ್ಯಕ್ಷ ನಾರಾಯಣ ಇಂದಿಲ್ಲಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
ವಿಧಾನ ಪರಿಷತ್‍ಗೆ ಕನಿಷ್ಟ ಒಬ್ಬ ಪೌರ ಕಾರ್ಮಿಕ ಸದಸ್ಯರನ್ನು ನೇಮಕಗೊಳಿಸಿ, ಸಾಮಾಜಿಕ ನ್ಯಾಯ ಕಲ್ಪಿಸಬೇಕು. ಈ ನಿಟ್ಟಿನಲ್ಲಿ ಎಲ್ಲಾ ಪಕ್ಷಗಳು ಚಿಂತಿಸಿ ಕ್ರಮ ಕೈಗೊಳ್ಳಬೇಕು ಎಂದು ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೊಷ್ಠಿಯಲ್ಲಿ ಒತ್ತಾಯಿಸಿದರು.
ಗುತ್ತಿಗೆ ಪೌರ ಕಾರ್ಮಿಕರನ್ನು ಕಾಯಂ ಮಾಡುವ ಕುರಿತು ಕಳೆದ ಕಾಂಗ್ರೆಸ್ ಸರ್ಕಾರ ನೀಡಿದ್ದ ವಾಗ್ದಾನವನ್ನು ಈಗಿನ ಸಮ್ಮಿಶ್ರ ಸರ್ಕಾರ ಕೂಡಲೇ ಜಾರಿಗೊಳಿಸಬೇಕು ಎಂದು ಆಗ್ರಹಿಸಿದ ಅವರು, ಐಪಿಡಿ ಸಾಲಪ್ಪನವರ ವರದಿ ಜಾರಿ, ಹೊಸ ನೇಮಕಾತಿ ನಿಯಮ ಕೈ ಬಿಡುವುದು, ನಿಗದಿತ ವೇತನ ಜಾರಿ, 50 ವರ್ಷ ಮೇಲ್ಪಟ್ಟವರಿಗೆ ಕಡ್ಡಾಯ ಖಾಯಂ. ಒಳಚರಂಡಿ ಹಾಗೂ ಇತರೆ ಕಾರ್ಮಿಕರಿಗೆ ಉದ್ಯೊಗ ಭದ್ರತೆ ಇತ್ಯಾದಿ ಕುರಿತು ಭಾನುವಾರ ಮೈಸೂರಿನಲ್ಲಿ ನಡೆದ ರಾಜ್ಯ ಪೌರ ಕಾರ್ಮಿಕರ ಮಹಾಸಂಘದ ಸಭೆಯಲ್ಲಿ ಕೈಗೊಂಡ ನಿರ್ಣಯಗಳನ್ನು ಸರ್ಕಾರ ಚಾಚೂ ತಪ್ಪದೇ ಈಡೇರಿಸಬೇಕು ಎಂದು ಆಗ್ರಹಿಸಿದರು.
ಸುದ್ದಿಗೊಷ್ಠಿಯಲ್ಲಿ ಮುಖಂಡರಾದ ಎಂ.ಬಿ.ನಾಗನಗೌಡ, ಆರ್.ಶಿವ, ಎನ್.ಮಾರ, ಆರ್.ದಾಸು, ವಕೀಲ ಆರ್.ಲಕ್ಷ್ಮಣ್ ಉಪಸ್ಥಿತರಿದ್ದರು.