11 ಮಂದಿ ನೂತನ ವಿಧಾನ ಪರಿಷತ್ ಸದಸ್ಯರು ಪ್ರಮಾಣವಚನ ಸ್ವೀಕಾರ
ಮೈಸೂರು

11 ಮಂದಿ ನೂತನ ವಿಧಾನ ಪರಿಷತ್ ಸದಸ್ಯರು ಪ್ರಮಾಣವಚನ ಸ್ವೀಕಾರ

June 19, 2018

ಬೆಂಗಳೂರು:  ಕೇಂದ್ರದ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಸೇರಿದಂತೆ ಹನ್ನೊಂದು ಸದಸ್ಯರು ವಿಧಾನ ಪರಿಷತ್ ಸದಸ್ಯರಾಗಿ ಇಂದಿಲ್ಲಿ ಅಧಿಕಾರ ಸ್ವೀಕರಿಸಿದರು.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ನಡೆದ ಪ್ರಮಾಣ ವಚನ ಸ್ವೀಕಾರ ಮತ್ತು ನಿವೃತ್ತರಾಗುತ್ತಿರುವ ಸದಸ್ಯರಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಇಬ್ರಾಹಿಂ ಅಲ್ಲದೆ ಕಾಂಗ್ರೆಸ್‍ನ ಅರವಿಂದ ಕುಮಾರ್ ಅರಳಿ, ಕೆ.ಗೋವಿಂದರಾಜ್, ಹರೀಶ್‍ಕುಮಾರ್, ಬಿಜೆಪಿಯ ತೇಜಸ್ವಿನಿಗೌಡ, ಕೆ.ಪಿ.ನಂಜುಂಡಿ, ಎನ್.ರವಿಕುಮಾರ್, ರಘುನಾಥ್ ಮಲ್ಕಾಪುರೆ, ಎಸ್.ರುದ್ರೇಗೌಡ ಮತ್ತು ಜೆಡಿಎಸ್‍ನ ಬಿ.ಎಂ. ಫಾರೂಕ್, ಎಸ್.ಎಲ್.ಧರ್ಮೇಗೌಡ ಅವರುಗಳು ನೂತನ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಬಿ.ಎಂ.ಫಾರೂಕ್ ಅವರು ಅಲ್ಲಾಹುನ ಹೆಸರಿನ ಮೇಲೆ ಮತ್ತು ಉಳಿದ ಎಲ್ಲ ಸದಸ್ಯರು ಭಗವಂತನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ನಿವೃತ್ತಿಗೊಳ್ಳುತ್ತಿರುವ ಸದಸ್ಯರ ಪೈಕಿ ಮೋಟಮ್ಮ, ಡಿ.ಎಸ್.ವೀರಯ್ಯ, ಎಂ.ಡಿ.ಲಕ್ಷ್ಮೀನಾರಾಯಣ, ರಾಮಚಂದ್ರೇಗೌಡ, ಅಮರ್‍ನಾಥ್ ಪಾಟೀಲ್ ಅವರನ್ನು ಸನ್ಮಾನಿಸಲಾಯಿತು. ಎಂ.ಆರ್.ಸೀತಾರಾಮ್, ಭಾನುಪ್ರಕಾಶ್, ಬಿ.ಜೆ.ಪುಟ್ಟಸ್ವಾಮಿ, ಕ್ಯಾಪ್ಟನ್ ಗಣೇಶ್  ಕಾರ್ಣಿಕ್, ಸೋಮಣ್ಣ ಬೇವಿನಮರದ್ ಅವರು ಗೈರು ಆಗಿದ್ದರು. ಜೆಡಿಎಸ್‍ನ ರಮೇಶ್ ಬಾಬು ಆಗಮಿಸಿದರಾದರೂ ಅವರನ್ನು ಸನ್ಮಾನಕ್ಕೆ ಆರಂಭದಲ್ಲಿ ಆಹ್ವಾನಿಸಲಿಲ್ಲ. ಬಹುಶಃ ಅವರು ಬಂದಿಲ್ಲವೆಂದು ನಿರ್ಲಕ್ಷಿಸಿರಬಹುದೆಂದು ಭಾವಿಸಿದ್ದರು. ಆಗ ಸಭಾಂಗಣದಲ್ಲಿದ್ದ ಕೆಲವರು, ರಮೇಶ್ ಬಾಬು ಹಾಜರಾಗಿರುವುದನ್ನು ವಿಧಾನ ಪರಿಷತ್‍ನ ಸಚಿವಾಲಯದ ಅಧಿಕಾರಿಗಳ ಗಮನಕ್ಕೆ ತಂದರು. ನಂತರ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರು ರಮೇಶ್ ಬಾಬು ಅವರನ್ನು ವೇದಿಕೆಗೆ ಆಹ್ವಾನಿಸಿ, ಸನ್ಮಾನಿಸಿದರು.

ನೂತನ ಸದಸ್ಯರನ್ನು ಅಭಿನಂದಿಸಿದ ಸಭಾಪತಿ, ನಿವೃತ್ತರಾಗುತ್ತಿರುವವರಿಗೆ ಶುಭಹಾರೈಸಿ ಆತ್ಮೀಯವಾಗಿ ಬೀಳ್ಕೊಟ್ಟರು. ಉಪಮುಖ್ಯಮಂತ್ರಿ ಪರಮೇಶ್ವರ್, ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಕೃಷ್ಣಭೈರೇಗೌಡ, ವಿಧಾನಪರಿಷತ್‍ನ ಸಭಾನಾಯಕಿಯೂ ಆಗಿರುವ ಸಚಿವೆ ಜಯಮಾಲಾ ಮತ್ತಿತರರು ಕಾರ್ಯಕ್ರಮದಲ್ಲಿ ಇದ್ದರು.

Translate »