ಬಜೆಟ್‍ನಲ್ಲಿ ಸಾಲ ಮನ್ನಾ ಪ್ರಕಟಿಸದಿದ್ದರೆ ರಾಜ್ಯಾದ್ಯಂತ ಹೋರಾಟ: ಬಿಎಸ್‍ವೈ
ಮೈಸೂರು

ಬಜೆಟ್‍ನಲ್ಲಿ ಸಾಲ ಮನ್ನಾ ಪ್ರಕಟಿಸದಿದ್ದರೆ ರಾಜ್ಯಾದ್ಯಂತ ಹೋರಾಟ: ಬಿಎಸ್‍ವೈ

June 19, 2018

ಬೆಂಗಳೂರು: ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮುಂಗಡ ಪತ್ರದಲ್ಲಿ ರೈತರ ಕೃಷಿ ಸಾಲ ಮನ್ನಾ ಮಾಡಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ, ತಾವು ಮುಖ್ಯಮಂತ್ರಿ ಯಾಗಿ 24 ಗಂಟೆಯೊಳಗಾಗಿ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದರು. ಈಗ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವಾಗಿದ್ದು, ಎಲ್ಲಾ ನಿರ್ಧಾರಕ್ಕೂ ಕಾಂಗ್ರೆಸ್ ಅನುಮತಿ ಅಗತ್ಯ ಎಂದು ಅಪ್ಪ-ಮಕ್ಕಳು ಕಾರಣ ಹೇಳುತ್ತಿದ್ದಾರೆ. ಕಾಂಗ್ರೆಸ್ ಬೆಂಬಲ ಪಡೆಯು ವುದಕ್ಕೂ ಮುನ್ನ ಜೆಡಿಎಸ್ ಪ್ರಣಾಳಿಕೆ ಭರವಸೆಗಳನ್ನು ಈಡೇರಿಸಲು ಒಪ್ಪಿದರೆ ಮಾತ್ರ ಮುಖ್ಯಮಂತ್ರಿಯಾಗುತ್ತೇನೆ ಎಂದು ಕುಮಾರ ಸ್ವಾಮಿ ಷರತ್ತು ವಿಧಿಸಬೇಕಿತ್ತು. ಆದರೆ, ಕುರ್ಚಿಯ ಆಸೆಗೆ ತರಾ ತುರಿಯಲ್ಲಿ ಮೈತ್ರಿ ಸರ್ಕಾರ ರಚನೆ ಮಾಡಿದರು. ಈಗ ಭರವಸೆಗಳನ್ನು ಈಡೇರಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದರು.

ಒಂದೆಡೆ ಸಿದ್ದರಾಮಯ್ಯ ಅವರು ಹೊಸ ಬಜೆಟ್ ಬೇಡ ಎನ್ನುತ್ತಾರೆ. ಕಾಂಗ್ರೆಸ್‍ನಲ್ಲಿ ಡಾ. ಪರಮೇಶ್ವರ್ ಮತ್ತಿತರರು ಬಜೆಟ್ ಮಂಡನೆಯಾಗಲೀ ಎನ್ನುತ್ತಾರೆ. ಈ ಗೊಂದಲದ ಸಂದರ್ಭ ದಲ್ಲಿ ಮುಂದಿನ ಬೆಳವಣಿಗೆ ಬಗ್ಗೆ ರಾಜ್ಯದ ಜನ ಕಾತುರತೆಯಿಂದ ಕಾಯುತ್ತಿದ್ದಾರೆ. ರೈತರು ತ್ರಿಶಂಕು ಸ್ಥಿತಿಯಲ್ಲಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಕುಮಾರಸ್ವಾಮಿ ಅವರು ಪ್ರಧಾನಮಂತ್ರಿ ಯವರನ್ನು ಭೇಟಿ ಮಾಡಿ ಸಾಲ ಮನ್ನಾದ ಶೇ.50ರಷ್ಟು ಹಣ ಭರಿಸುವಂತೆ ಬೇಡಿಕೆ ಮುಂದಿಟ್ಟಿರುವುದು ಸರಿಯಲ್ಲ. ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದ ಸರ್ಕಾರಗಳು ಕೇಂದ್ರದಿಂದ ಯಾವುದೇ ಅನುದಾನ ಪಡೆಯದೆ ಸಾಲ ಮನ್ನಾ ಮಾಡಿವೆ. ಕುಮಾರಸ್ವಾಮಿ ಅವರು ತಮ್ಮ ಆರ್ಥಿಕ ಇತಿಮಿತಿಯಲ್ಲಿ ರೈತರ ಸಾಲ ಮನ್ನಾ ಮಾಡದೆ ಕೇಂದ್ರದ ಮೇಲೆ ಜವಾಬ್ದಾರಿ ವಹಿಸುತ್ತಿರುವುದು ಖಂಡನೀಯ ಎಂದರು.

Translate »