ಪರಿಷತ್ ಸಭಾಪತಿ ಸ್ಥಾನಕ್ಕಾಗಿ ಕಾಂಗ್ರೆಸ್-ಜೆಡಿಎಸ್ ಜಂಗಿ ಕುಸ್ತಿ
ಮೈಸೂರು

ಪರಿಷತ್ ಸಭಾಪತಿ ಸ್ಥಾನಕ್ಕಾಗಿ ಕಾಂಗ್ರೆಸ್-ಜೆಡಿಎಸ್ ಜಂಗಿ ಕುಸ್ತಿ

July 9, 2018

ಬೆಂಗಳೂರು: ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕಾಗಿ ಮಿತ್ರ ಪಕ್ಷಗಳ ಕಾಂಗ್ರೆಸ್ ಮತ್ತು ಜೆಡಿಎಸ್ ಬಗ್ಗೆ ಜಂಗಿ ಕುಸ್ತಿ ಆರಂಭವಾಗಿದೆ.

ಪರಿಷತ್‍ನಲ್ಲಿ ಹಾಲಿ ಹಂಗಾಮಿ ಸಭಾಪತಿಗಳಾಗಿರುವ ಬಸವರಾಜ ಹೊರಟ್ಟಿ ಅವರನ್ನೇ ಖಾಯಂ ಸಭಾಪತಿ ಮಾಡಬೇಕೆಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪಟ್ಟು ಹಿಡಿದಿದ್ದರೆ, ತಮ್ಮ ಆಪ್ತರಾದ ಎಸ್.ಆರ್.ಪಾಟೀಲ್ ಅವರಿಗೆ ಆ ಸ್ಥಾನವನ್ನು ಬಿಟ್ಟುಕೊಡಬೇಕೆಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಗಿ ಪಟ್ಟು ಹಿಡಿದಿದ್ದಾರೆ.

ಪರಿಷತ್‍ನಲ್ಲಿ ಸಂಖ್ಯಾ ಬಲದ ಮೇಲೆ ಸಭಾಪತಿ ಸ್ಥಾನವನ್ನು ನೀಡಬೇಕೆಂದು ಕಾಂಗ್ರೆಸ್ ವಾದಿಸುತ್ತಿದೆ. 75 ಸ್ಥಾನಗಳ ಪೈಕಿ 35 ಸ್ಥಾನ ಹೊಂದಿರುವ ತಮಗೆ ಸಭಾಪತಿ ಸ್ಥಾನ ಬಿಟ್ಟುಕೊಡುವುದು ಸೂಕ್ತ. ಅಲ್ಲದೇ ಮುಖ್ಯಮಂತ್ರಿ ಸ್ಥಾನವನ್ನೇ ನಿಮಗೆ (ಜೆಡಿಎಸ್‍ಗೆ) ಬಿಟ್ಟುಕೊಟ್ಟಿರುವಾಗ ಸಂಖ್ಯಾ ಬಲದ ಆಧಾರದ ಮೇಲೆ ಪರಿಷತ್ ಸಭಾಪತಿ ಸ್ಥಾನ ಕಾಂಗ್ರೆಸ್‍ಗೆ ಇರಬೇಕು ಎಂಬುದು ಕಾಂಗ್ರೆಸ್ ಮುಖಂಡರ ವಾದ.

ವಿಧಾನಸಭಾ ಅಧ್ಯಕ್ಷ ಸ್ಥಾನವನ್ನು ಕಾಂಗ್ರೆಸ್‍ಗೆ ಬಿಟ್ಟುಕೊಡಲಾಗಿದೆ. ಆದ್ದರಿಂದ ವಿಧಾನ ಪರಿಷತ್ ಸಭಾಪತಿ ಸ್ಥಾನವನ್ನು ನಮಗೆ ಬಿಟ್ಟುಕೊಡಬೇಕು. ಬಸವರಾಜ ಹೊರಟ್ಟಿ ಅವರು ಅತ್ಯಂತ ಹಿರಿಯ ಸದಸ್ಯರಾಗಿರುವುದರಿಂದ ಅವರನ್ನೇ ಖಾಯಂ ಸಭಾಪತಿ ಮಾಡಬೇಕು ಎಂಬುದು ಜೆಡಿಎಸ್‍ನ ವಾದ.

ಈ ಸಮಸ್ಯೆ ಇತ್ಯರ್ಥಕ್ಕಾಗಿ ಮಾಜಿ ಪ್ರಧಾನಿಗಳೂ ಆದ ಹೆಚ್.ಡಿ.ದೇವೇಗೌಡರ ಮೊರೆ ಹೋಗಲು ಉಭಯ ಪಕ್ಷಗಳು ನಿರ್ಧರಿಸಿವೆ ಎನ್ನಲಾಗಿದ್ದು, ದೇವೇಗೌಡರು ಚರ್ಚೆಗಾಗಿ ಬಸವರಾಜ ಹೊರಟ್ಟಿ ಅವರನ್ನು ಕರೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

Translate »