ಹಸುಗೂಸನ್ನು ನದಿಗೆ ಎಸೆದು ಕೊಂದ ನಿರ್ದಯಿ ತಾಯಿ
ಮೈಸೂರು

ಹಸುಗೂಸನ್ನು ನದಿಗೆ ಎಸೆದು ಕೊಂದ ನಿರ್ದಯಿ ತಾಯಿ

July 9, 2018

ತಿ.ನರಸೀಪುರ: ನಿರ್ದಯಿ ತಾಯಿಯೊಬ್ಬಳು ತನ್ನ ಹೆತ್ತ ಮಗುವನ್ನೇ ನದಿಗೆ ಎಸೆದು ಕೊಲೆ ಮಾಡಿರುವ ಹೃದಯ ವಿದ್ರಾವಕ ಘಟನೆ ತಾಲೂಕಿನ ತಲಕಾಡು ಹೋಬಳಿಯ ಮಾರನಪುರ ಗ್ರಾಮದಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಗ್ರಾಮದ ಮಹದೇವ ಎಂಬ ವರ ಪತ್ನಿ ಪ್ರಭಾಮಣ (25) ಎಂಬಾಕೆಯೇ ತನ್ನ ಹಸು ಗೂಸನ್ನು ಕೊಲೆ ಮಾಡಿದ ಪಾತಕಿಯಾಗಿದ್ದಾಳೆ. ಈಕೆ ಗ್ರಾಮದ ಅಂಗನವಾಡಿಯಲ್ಲಿ ಸಹಾಯಕಿ ಯಾಗಿ ಕೆಲಸ ಮಾಡುತ್ತಿದ್ದು, ಕಳೆದ 10 ವರ್ಷಗಳ ಹಿಂದೆ ಮಹದೇವನ ಜೊತೆ ವಿವಾಹವಾಗಿ ಈಗಾಗಲೇ 8 ವರ್ಷದ ಗಂಡು ಮಗು ಹೊಂದಿದ್ದಾಳೆ.

ಕೆಲ ದಿನಗಳ ಹಿಂದೆ ಎರಡನೇ ಹೆರಿಗೆಗಾಗಿ ಮೈಸೂರಿನ ಚೆಲುವಾಂಬ ಆಸ್ಪತ್ರೆಗೆ ದಾಖಲಾಗಿದ್ದ ಈಕೆಗೆ ಹೆಣ್ಣು ಮಗು ಜನಿಸಿದೆ. ಇದರಿಂದ ಬೇಸತ್ತ ಈಕೆ ಯಾವುದೇ ಕನಿಕರವೂ ಇಲ್ಲದೇ ಐಸಿಯುನಲ್ಲಿದ್ದ ಮಗು ವನ್ನು ಯಾರಿಗೂ ಹೇಳದೇ-ಕೇಳದೇ ಆಸ್ಪತ್ರೆಯಲ್ಲೇ ಬಿಟ್ಟು ಊರು ಸೇರಿಕೊಂಡಿದ್ದಳು ಎನ್ನಲಾಗಿದೆ. ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಈಕೆಯನ್ನು ಗ್ರಾಮದಲ್ಲಿ ಕಂಡ ಗ್ರಾಮಸ್ಥರು ಅನುಮಾನಗೊಂಡು ಪ್ರಶ್ನಿಸಲಾಗಿ ಹೆದರಿದ ಈಕೆ ಮತ್ತೆ ಆಸ್ಪತ್ರೆಗೆ ತೆರಳಿ ಮಗುವಿನ ಜೊತೆ ಗ್ರಾಮಕ್ಕೆ ಬಂದಿದ್ದಳು. ಹೆಣ್ಣು ಮಗು ಜನಿಸಿತೆಂಬ ಕಾರಣಕ್ಕಾಗಿ ಈಕೆ ಕಳೆದ 15 ದಿನಗಳ ಹಿಂದೆ ಗಂಡ ಮನೆಯಲ್ಲಿ ಇಲ್ಲದಿದ್ದಾಗ ಮಗುವನ್ನು ಎತ್ತಿಕೊಂಡು ನದಿ ಸಮೀಪಕ್ಕೆ ತೆರಳಿದ್ದಳು, ಈ ಸಂದರ್ಭ ಅಕ್ಕ-ಪಕ್ಕದ ಹೊಲ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಕೂಲಿಕಾರರು ಮಗು ಯಾಕೆ ಇಲ್ಲಿಗೆ ಕರೆ ತಂದೆ ಎಂದು ಪ್ರಶ್ನಿಸಲಾಗಿ ಮಗು ಸತ್ತಿದೆ ಎಂದು ಹೇಳಿ ಮಗುವನ್ನು ನದಿಗೆ ಎಸೆದು ಮನೆ ಸೇರಿಕೊಂಡಿದ್ದಾಳೆಂದು ಹೇಳಲಾಗಿದೆ.

ತದ ನಂತರ ನಾಲ್ಕೈದುದಿನದ ಬಳಿಕ ಶಿಶುವಿನ ಶವ ನದಿ ದಡಕ್ಕೆ ತೇಲಿ ಬಂದ ಹಿನ್ನೆಲೆಯಲ್ಲಿ ಗ್ರಾಮಸ್ಥರೇ ಸೇರಿ ಮಗುವಿನ ಅಂತ್ಯಸಂಸ್ಕಾರ ನೆರವೇರಿಸಿದ್ದು, ಘಟನೆಗೆ ಕಾರಣಳಾದ ಪ್ರಭಾಮಣಿಗೆ ಛೀಮಾರಿ ಹಾಕಿ ಅಂಗನವಾಡಿಯಲ್ಲಿ ಆಕೆ ಕೆಲಸ ಮಾಡುವುದನ್ನು ವಿರೋಧಿಸಿದ್ದಾರೆನ್ನಲಾಗಿದೆ. ಈ ಅಮಾನವೀಯ ಪ್ರಕರಣವನ್ನು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದ ನಾಗರಿಕರೊಬ್ಬರು ಇತ್ತೀಚೆಗೆ ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಅಪ್‍ಲೋಡ್ ಮಾಡಿದ ಹಿನ್ನೆಲೆಯಲ್ಲಿ ಪ್ರಕರಣ ಬೆಳಕಿಗೆ ಬಂದಿದೆ.

ಈ ಸಂಬಂಧ `ಮೈಸೂರು ಮಿತ್ರ’ನ ಜೊತೆ ಮಾತನಾಡಿರುವ ಸಿಡಿಪಿಓ ಬಸವರಾಜು, ನಿನ್ನೆಯಷ್ಟೇ ಪ್ರಕರಣದ ವಿಷಯ ನನ್ನ ಗಮನಕ್ಕೆ ಬಂದಿದ್ದು, ಆಕೆ ಹೆರಿಗೆ ರಜೆ ಮೇಲಿದ್ದಾಳೆ. ಈ ಸಂಬಂಧ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿ ನಂತರ ಪೊಲೀಸ್ ಠಾಣೆಗೆ ದೂರು ನೀಡಲಾಗುವುದೆಂದರು.

Translate »