ಮಕ್ಕಳಿಗಿಲ್ಲ ಬಾಲಭವನದ ಪುಟಾಣಿ ರೈಲು
ಮೈಸೂರು

ಮಕ್ಕಳಿಗಿಲ್ಲ ಬಾಲಭವನದ ಪುಟಾಣಿ ರೈಲು

July 9, 2018
 • ಕೆಟ್ಟು ನಿಂತಿರುವ ಇಂಜಿನ್… ಕಳೆ ಬೆಳೆದು ಮುಚ್ಚಿ ಹೋಗಿರುವ ರೈಲು ಹಳಿ
 • ಹಾಳು ಕೊಂಪೆಯಂತಾಗಿರುವ ಜವಾಹರ್ ಬಾಲ ಭವನ ಆವರಣ

ಮೈಸೂರು: ಒಂದು ಕಾಲದಲ್ಲಿ ಮಕ್ಕಳ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದ ಮೈಸೂರಿನ ಬನ್ನಿಮಂಟಪದ ಜವಾಹರ್ ಬಾಲ ಭವನ ಇಂದು ಪಾಳು ಬಿದ್ದ ಕೊಂಪೆಯಾಗಿದೆ. ಮಕ್ಕಳನ್ನು ಹೊತ್ತೊಯ್ದು ಸಂತಸಗೊಳಿಸುತ್ತಿದ್ದ ಬಾಲ ಭವನದ ಪುಟಾಣಿ ರೈಲು ಕೆಟ್ಟು ನಿಂತಿದೆ.

ನ್ಯಾರೋ ಗೇಜ್ ರೈಲು ಹಳಿಗಳು ಕಳೆ ಬೆಳೆದು ಮುಚ್ಚಿಕೊಂಡಿವೆ. ಬಾಲ ಭವನದ ಇಡೀ ಆವರಣ ನಿರ್ವಹಣೆ ಇಲ್ಲದೆ ಪಾಳು ಬಿದ್ದಿರುವುದನ್ನು ನೋಡಿದರೆ ಇದರ ಅಭಿವೃದ್ಧಿ ಬಗ್ಗೆ ಯಾರಿಗೂ ಆಸಕ್ತಿ ಇದ್ದಂತೆ ಕಾಣುತ್ತಿಲ್ಲ. ಹೀಗಾಗಿ ಒಂದು ಕಾಲದಲ್ಲಿ ಪುಟಾಣಿ ರೈಲಿನ ಸೈರನ್ ಕೂಗಿನೊಂದಿಗೆ ಬೆರೆತು ಕೇಳಿಸುತ್ತಿದ್ದ ಮಕ್ಕಳ ಕಲರವ ಇಂದು ಕೇಳಿಸದಂತಾಗಿದೆ.

ವಾರದ ರಜೆ, ಹಬ್ಬಗಳ ರಜೆ ಮತ್ತು ಬೇಸಿಗೆ ರಜೆಗಳಲ್ಲಿ ಇಡೀ ಬಾಲ ಭವನ ಮಕ್ಕಳಿಂದ ತುಂಬಿ ತುಳುಕುತ್ತಿತ್ತು. ಪೋಷಕರೊಂದಿಗೆ ಮಕ್ಕಳು ಬಾಲ ಭವನಕ್ಕೆ ಭೇಟಿ ನೀಡಿ ಅಲ್ಲಿನ ಅಹ್ಲಾದಕರ ವಾತಾವರಣದಲ್ಲಿ ವಿಹರಿಸುತ್ತಿದ್ದ ಕಾಲವದು. ಮಕ್ಕಳ ಸಿನಿಮಾ ವೀಕ್ಷಣೆ, ಜಾರುಗುಪ್ಪೆ ಆಟ, ಕಥೆ ಮತ್ತು ಮಕ್ಕಳ ಪುಸ್ತಕಗಳನ್ನು ಮಕ್ಕಳು ಅಧ್ಯಯನ ಮಾಡುತ್ತಿದ್ದರು. ಆದರೆ ಇಂದು ಅವೆಲ್ಲವೂ ಮಕ್ಕಳ ಪಾಲಿಗೆ ಇಲ್ಲದಂತಾಗಿದೆ.

ಮಕ್ಕಳ ಮನರಂಜನೆಗಾಗಿಯೇ ಇದ್ದ ಪುಟಾಣಿ ರೈಲು ಬಾಲ ಭವನದ ಸುತ್ತ 1.1 ಕಿ.ಮೀ.ನಷ್ಟು ದೂರವನ್ನು ಕ್ರಮಿಸಿ ಮಕ್ಕಳ ಮನ ತಣಿಸುತ್ತಿತ್ತು. ಪ್ರತಿ ಶನಿವಾರ ಮತ್ತು ಭಾನುವಾರ ತಪ್ಪದೇ ರೈಲು ಭೋಗಿಗಳು ಮಕ್ಕಳಿಂದ ತುಂಬಿರುತ್ತಿದ್ದವು. ಮಕ್ಕಳಿಗೆ ರೂ.10, ದೊಡ್ಡವರಿಗೆ ರೂ. 20 ಟಿಕೆಟ್ ದರ ನಿಗದಿಯಾಗಿತ್ತು. ಬಾಲ ಭವನಕ್ಕೆ ಉತ್ತಮ ಆದಾಯವೂ ತರುತ್ತಿತ್ತು.

ಆದರೆ ಇಂದು ರೈಲಿನ ಇಂಜಿನ್ ಸೂಕ್ತ ನಿರ್ವಹಣೆ ಇಲ್ಲದೆ 3 ವರ್ಷದಿಂದ ಕೆಟ್ಟು ನಿಂತು ತುಕ್ಕು ಹಿಡಿಯುವ ಹಂತಕ್ಕೆ ತಲುಪಿದೆ. 60 ಮಕ್ಕಳು ಕುಳಿತುಕೊಳ್ಳಬಹುದಾದಷ್ಟು ಆಸನಗಳಿರುವ ಬೋಗಿಗಳು ಅದರ ಗೂಡಿನಲ್ಲಿ ಧೂಳು ತಿನ್ನುತ್ತಾ ಶಿಥಿಲ ಸ್ಥಿತಿಗೆ ತಲುಪಿವೆ. ನ್ಯಾರೋ ಗೇಜ್ ರೈಲು ಮಾರ್ಗದ ಹಳಿಗಳ ಕೆಳಗೆ ಹಾಕಿರುವ ಮರದ ಪಟ್ಟಿಗಳು ಗೆದ್ದಲು ತಿಂದು ಶಿಥಿಲವಾಗಿದೆ. ಇಲ್ಲಿದ್ದ ಮಕ್ಕಳ ಉದ್ಯಾನವನ ಸೇರಿದಂತೆ ಇಡೀ ಆವರಣ ಗಿಡ ಗಂಟೆಗಳಿಂದ ತುಂಬಿ ಬಾಲ ಭವನದ ಪಾಳು ಸ್ಥಿತಿಯನ್ನು ತೋರಿಸುತ್ತಿವೆ.
ಮಕ್ಕಳ ಉದ್ಯಾನದಲ್ಲಿದ್ದ ಜಾರುಗುಪ್ಪೆ ಇನ್ನಿತರ ಆಟದ ಕಬ್ಬಿಣದ ಪರಿಕರಗಳು ಮುರಿದು ಮೂಲೆ ಸೇರಿವೆ. ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಮಕ್ಕಳ ಮತ್ತು ಸಾರ್ವಜನಿಕ ಶೌಚಾಲಯದ ಬಾಗಿಲು, ಹೆಂಚುಗಳು ಮುರಿದಿದ್ದು, ಹೇಳುವವರು ಕೇಳುವವರೇ ಇಲ್ಲ ಎಂಬುದನ್ನು ಬೊಟ್ಟು ಮಾಡಿ ತೋರಿಸುತ್ತಿವೆ.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಬಾಲ ಭವನವನ್ನು ಸಂಪೂರ್ಣ ಅಭಿವೃದ್ಧಿಪಡಿಸಲೆಂದು ರೂ. 5 ಕೋಟಿ ಮಂಜೂರು ಮಾಡಿ ಬಾಲ ಭವನ ಆವರಣದಲ್ಲಿ ಎರಡು ಐಸ್‍ಕ್ರಿಂ ಪಾರ್ಲರ್ ಕಟ್ಟಡ, ಹೋಟೆಲ್ ಕಟ್ಟಡ, ಎರಡು ಕಡೆ ದುಂಡಾಕೃತಿಯ ಮಕ್ಕಳ ವಿಶ್ರಾಂತಿ ತಾಣ, ನಲ್ಲಿಗಳನ್ನು ಅಳವಡಿಸಿರುವ ಎರಡು ನೀರಿನ ದೊಡ್ಡ ತೊಟ್ಟಿಗಳು, ಶೌಚಾಲಯ ಕಟ್ಟಡ, ಮಕ್ಕಳ ವಿವಿಧ ಗೇಮಿಂಗ್ ಅಂಕಣದ ಬೃಹತ್ ಕಟ್ಟಡ, ಮಕ್ಕಳ ವಿವಿಧ ಚಟುವಟಿಕೆಗಳಿಗೆಂದೇ ನಿರ್ಮಿಸಿರುವ ಎರಡೂ ಪಾಶ್ರ್ವದಲ್ಲಿ ಮೇಕಪ್ ಕೋಠಡಿ, ಶೌಚಾಲಯ ಒಳಗೊಂಡಂತಿರುವ ದೊಡ್ಡ ಬಯಲು ರಂಗಮಂದಿರ, ರಂಗ ಮಂದಿರದ ಎದುರು ನೆಲವನ್ನೇ ಆಸನಗಳ ರೀತಿ ಮಾಡಿರುವುದು ಸೇರಿದಂತೆ ಅನೇಕ ಕೆಲಸಗಳನ್ನು ಮಾಡಿ ಇದ್ದಕ್ಕಿದ್ದಂತೆ ಕೈಬಿಟ್ಟಿದೆ. ಲಕ್ಷಾಂತರ ರೂ.ಗಳಲ್ಲಿ ನಿರ್ಮಿಸಿರುವ ಕಟ್ಟಡಗಳು ಪೂರ್ಣಗೊಂಡಿದ್ದರೂ ನಿರ್ವಹಣೆ ಇಲ್ಲದೆ ಪಾಳು ಬಿದ್ದಿವೆ.

ಸುಂದರವಾಗಿ ನಿರ್ಮಿಸಿದ್ದ ಉದ್ಯಾನವನ (ಲಾನ್) ಕೂಡ ನಿರ್ವಹಣೆಯಿಲ್ಲದೆ ಸಂಪೂರ್ಣ ಸೊರಗಿ ನಾನಾ ರೀತಿಯ ಗಿಡ ಗಂಟೆಗಳು, ಪಾರ್ಥೇನಿಯಂ ಗಿಡ ಬೆಳೆದು ಹಾಳು ಕೊಂಪೆಯಂತಿದೆ. ಹಾವು, ಚೇಳುಗಳ ಆವಾಸ ಸ್ಥಾನವಾಗಿದೆ.

ಯಾಕೆ ಹೀಗೆ?

ಇದಕ್ಕೆಲ್ಲ ಕಾರಣ ಏನೆಂದು ಹುಡುಕುತ್ತಾ ಹೋದಾಗ ತಿಳಿದು ಬಂದದ್ದಿಷ್ಟು. 1997ರಲ್ಲಿ ಖಾಲಿ ಬಿದ್ದಿದ್ದ 13 ಎಕರೆ ಮುಡಾ ನಿವೇಶನದಲ್ಲಿ ಮಕ್ಕಳಿಗಾಗಿ ಬಾಲ ಭವನ ಆರಂಭಿಸಲು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಡುವೆ 30 ವರ್ಷಗಳ ಅವಧಿಯ ಕರಾರು ಆಗಿತ್ತು. 2007ರಲ್ಲಿ ಕರಾರು ಅವಧಿ ಮುಗಿದಿದ್ದ ಹಿನ್ನೆಲೆಯಲ್ಲಿ ಅಂದಿನಿಂದಲೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಜಬಾಹರ್ ಬಾಲ ಭವನ ಸೊಸೈಟಿ ಕರಾರು ಅವಧಿಯ ಮುಂದುವರಿಕೆಗಾಗಿ ಸಾಕಷ್ಟು ಪ್ರಯತ್ನ ನಡೆಸಿತ್ತು,. ಆದರೆ ಮುಡಾ ಅಧಿಕಾರಿಗಳು ಕರಾರು ಅವಧಿಯನ್ನು ಮುಂದುವರಿಸುವುದಾಗಲೀ, ನವೀಕರಿಸುವುದಾಗಲೀ ಮಾಡಲು ಆಸಕ್ತಿ ತೋರಲಿಲ್ಲ ಎನ್ನಲಾಗಿದೆ.

ಈ ನಡುವೆ ಮುಡಾ ಕಳೆದ ಮೂರು ವರ್ಷಗಳ ಹಿಂದೆ ಬಾಲಭವನವನ್ನು ತಾನೇ ಅಭಿವೃದ್ಧಿಪಡಿಸಿಕೊಡುವುದಾಗಿ 5 ಕೋಟಿ ರೂ.ಗಳನ್ನು ಮಂಜೂರು ಮಾಡಿ ಸರ್ಕಾರದಿಂದ ಅನುಮತಿ ಪಡೆದು ಶಂಕುಸ್ಥಾಪನೆಯನ್ನು ನೆರವೇರಿಸಿ ವಿವಿಧ ಕಾಮಗಾರಿಗಳನ್ನು ಕೈಗೊಂಡಿತ್ತು.

ಮಕ್ಕಳ ಅಮ್ಯೂಸ್‍ಮೆಂಟ್ ಪಾರ್ಕ್, ಶೌಚಾಲಯ, ಮಕ್ಕಳ ಆಟದ ಪರಿಕರಗಳು, ಮಕ್ಕಳು ಕುಳಿತುಕೊಳ್ಳಲು ತಂಗುದಾಣ, ವಿಶಾಲವಾದ ಮಲ್ಟಿ ಪರ್ಪಸ್ ಕಟ್ಟಡ, ಎರಡು ಕಡೆ ಕ್ಯಾಂಟೀನ್ ಮತ್ತು ಐಸ್ ಕ್ರೀಂ ಪಾರ್ಲರ್, ನೀರಿನ ಟ್ಯಾಂಕ್, ಬನ್ನಿಮಂಟಪದ ಮುಖ್ಯ ರಸ್ತೆ ಕಡೆಯಿಂದ ಬೃಹತ್ ದ್ವಾರ ಇತ್ಯಾದಿ ನಿರ್ಮಿಸಿತ್ತು.

ಜೊತೆಗೆ ಗೆದ್ದಲು ಹಿಡಿದು ಹಾಳಾಗಿರುವ ನ್ಯಾರೋ ಗೇಜ್ ರೈಲು ಹಳಿಗಳ ಕೆಳಗಿನ ಮರದ ಪಟ್ಟಿಗಳನ್ನು ತೆಗೆದು ಕಾಂಕ್ರೀಟ್ ಪಟ್ಟಿಗಳನ್ನು ಹಾಕಿಕೊಡುವ ಜೊತೆಗೆ ಮಕ್ಕಳ ಪುಟಾಣಿ ರೈಲು ಎಂದಿನಂತೆ ಓಡಿಸುವುದು ಸೇರಿದಂತೆ ಯೋಜನೆಯಲ್ಲಿ ಸೇರಿಸಲಾಗಿತ್ತು ಎನ್ನಲಾಗಿದೆ.

ಆದರೆ ಬರೀ ಕಟ್ಟಡಗಳನ್ನು ಮಾತ್ರ ನಿರ್ಮಿಸಲಾಯಿತೇ ಹೊರತು ಇನ್ನುಳಿದ ಯಾವುದೇ ಕಾಮಗಾರಿಗಳು ಕೈಗೊಳ್ಳದೆ ಏಕಾಏಕಿ ಸ್ಥಗಿತಗೊಳಿಸಲಾಯಿತು. ಅಂದಿನಿಂದ ಮುಡಾದವರಾಗಲಿ, ಬಾಲ ಭವನದವರಾಗಲಿ ಯಾವುದೇ ನಿರ್ವಹಣೆ ಮಾಡಲು ಮುಂದಾಗಿಲ್ಲ. ಈ ಕಾರಣಕ್ಕಾಗಿ ಇಂದು ಜವಾಹರ್ ಬಾಲಭವನ ಪಾಳು ಬೀಳುವಂತಾಗಿದೆ.

ಬಾಲಭವನ ಸೊಸೈಟಿ ಮತ್ತು ಮುಡಾ ಅಧಿಕಾರಿಗಳು ಇದುವರೆಗಿನ ಅಸಡ್ಡೆ, ಅನಾಸಕ್ತಿಯಿಂದ ಸುಮ್ಮನೆ ಕಾಲಹರಣ ಮಾಡುವ ಬದಲು ಮಕ್ಕಳ ಬಾಲ ಭವನವನ್ನು ಮತ್ತೊಮ್ಮೆ ಮಕ್ಕಳಿಗಾಗಿ ಸಮರ್ಪಿಸಬೇಕಾಗಿದೆ. ಪುಟಾಣಿ ರೈಲು ಮತ್ತೊಮ್ಮೆ ಓಡುವಂತಾಗಿ ಮಕ್ಕಳ ಮನರಂಜನೆಗೆ ದೊರೆಯುವಂತಾಗಬೇಕಾಗಿದೆ. ಇಬ್ಬರೂ ಒಮ್ಮತದಿಂದ ಪ್ರಯತ್ನಿಸಿದರೆ ಮಕ್ಕಳ ಪುಟಾಣಿ ರೈಲು ಓಡುವಂತಾಗುತ್ತದೆ ಎಂಬುದು ಮೈಸೂರು ನಾಗರಿಕರ ಆಶಯವಾಗಿದೆ.

ಮುಡಾ ವಿರುದ್ಧ ಆರೋಪ

ಪುಟಾಣ ರೈಲಿನ ಇಂಜಿನ್ ಸಣ್ಣ ರಿಪೇರಿ ಆಗಬೇಕಿದೆ. ರಿಪೇರಿಯಾದರೂ, ಅದನ್ನು ಓಡಿಸಲು ರೈಲು ಹಳಿ ಸರಿಯಲ್ಲದಿದ್ದರಿಂದ ಓಡಿಸಲಾಗುವುದಿಲ್ಲ. ಹಳಿಗಳ ಕೆಳಗೆ ಹಾಕಲಾಗಿರುವ ಮರದ ಪಟ್ಟಿಗಳನ್ನು ಬದಲಿಸಿ, ಕಾಂಕ್ರಿಟ್ ಪಟ್ಟಿಗಳನ್ನು ಹಾಕಬೇಕಾಗಿದೆ. ಇದಕ್ಕೆ ಮುಡಾದವರಿಂದ ಸಹಕಾರವಿಲ್ಲ. – ಕೃಷ್ಣಮೂರ್ತಿ, ಪ್ರಧಾನ ಸಂಘಟಕ, ಜವಹರ್ ಬಾಲ ಭವನ.

ಮುಡಾ ಕಡೆಯಿಂದ ಪ್ರತಿಕ್ರಿಯೆ ಇಲ್ಲ
ಜವಾಹರ್ ಬಾಲ ಭವನ ಸಲಹಾ ಸಮಿತಿ ಅಧ್ಯಕ್ಷರೂ ಆಗಿರುವ ಜಿಲ್ಲಾ ಪಂಚಾಯತ್ ಸಿಇಓ ಪಿ.ಶಿವಶಂಕರ್ ಎರಡು ತಿಂಗಳ ಹಿಂದೆ ಸಭೆ ಕರೆದು ಈ ಕುರಿತು ಚರ್ಚಿಸಿದ್ದರು. ಬಾಲಭವನ ಮತ್ತು ಮುಡಾ ನಡುವೆ ಆಗಿದ್ದ ಲೀಸ್ ಕರಾರು ಅವಧಿ 2007ರಲ್ಲೇ ಮುಗಿದಿದೆ. ಆದರೂ ಮತ್ತೇ ನವೀಕರಣಗೊಳಿಸುವಂತೆ ಮುಡಾಗೆ ಹಲವು ಪತ್ರಗಳನ್ನು ಬರೆದರೂ ಮುಡಾ ಅದಿಕಾರಿಗಳು ಸ್ಪಂದಿಸುತ್ತಿಲ್ಲ. ಬೆಂಗಳೂರಿನ ಬಾಲಭವನ ಸೊಸೈಟಿ ಸಹ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಪತ್ರ ಬರೆದಿದೆ. ಇದೀಗ ಸಭೆ ನಂತರ ಮತ್ತೊಮ್ಮೆ ಮುಡಾಗೆ ಫೈಲ್‍ನ್ನು ಕಳಿಸಿದ್ದೇವೆ. ಅಲ್ಲಿಂದ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ. – ಪಿ.ಶಿವಶಂಕರ್, ಅಧ್ಯಕ್ಷ, ಬಾಲಭವನ ಸಲಹಾ ಸಮಿತಿ.

ಐಡೆಕ್ ವರದಿ ನಿರೀಕ್ಷೆಯಲ್ಲಿರುವ ಮುಡಾ

ಬಾಲಭವನದಲಿ ಮನರಂಜನೆಗಾಗಿ ಹಲವು ಹೊಸ ಯೋಜನೆಗಳನ್ನು ಹೊಂದಿದ್ದೇವೆ. ಹಿಂದೆ ಮಂಜೂರಾಗಿದ್ದ ರೂ. 5 ಕೋಟಿ ಖರ್ಚಾಗಿದೆ. ನಾವು `ಕರ್ನಾಟಕದ ಮೂಲ ಸೌಕರ್ಯ ಅಭಿವೃದ್ಧಿ ನಿಗಮ’ (ಐಡೆಕ್)ನಿಂದ ಹೊಸ ಯೋಜನೆಯ ವರದಿಯ ನಿರೀಕ್ಷೆಯಲ್ಲಿದ್ದೇವೆ. ಪುಟಾಣಿ ರೈಲು ಕಾರ್ಯ ಸಾಧ್ಯವೇ ಎಂಬ ವರದಿಯನ್ನು ಪಡೆಯಲಿದ್ದೇವೆ. ವರದಿ ಬಂದ ಬಳಿಕ ನಾವು ಮುಡಾ ಸಭೆಯಲ್ಲಿಟ್ಟು ಅನುಮೋದನೆ ಪಡೆದು ಕೆಲಸ ಪ್ರಾರಂಭಿಸಲಾಗುವುದು. ಅಷ್ಟರಲ್ಲಿ ಬನ್ನಿಮಂಟಪ ಕವಾಯತು ಮೈದಾನದ ಆಸನಗಳನ್ನು 22,000ದಿಂದ 32,000ಕ್ಕೆ ಹೆಚ್ಚಿಸುವ ಕೆಲಸ ಈ ವರ್ಷದ ದಸರಾ ಒಳಗಾಗಿ ಪೂರ್ಣಗೊಳ್ಳುವ ಸಾಧ್ಯತೆಯಿದೆ. – ಪಿ.ಎಸ್.ಕಾಂತರಾಜು, ಆಯುಕ್ತ, ಮುಡಾ

ಅರ್ಧಕ್ಕೆ ಸ್ಥಗಿತಗೊಂಡ ಮುಡಾ ಯೋಜನೆ

 • ಮಕ್ಕಳ ಮನರಂಜನೆಗಾಗಿ ಇ-ಪ್ಲಾನೆಟ್ ಮತ್ತು ವಿಡಿಯೋ ಗೇಮ್ ( ರೂ.70 ಲಕ್ಷ)
 • ಮಕ್ಕಳ ಹುಟ್ಟುಹಬ್ಬ ಮತ್ತು ಪಾರ್ಟಿ ಹಾಲ್ (ರೂ.20 ಲಕ್ಷ)
 • ನಾಟಕ ಇನ್ನಿತರ ಮಕ್ಕಳ ಕಾರ್ಯಕ್ರಮಗಳಿಗೆ ಬಯಲುರಂಗ ಮಂದಿರ (ರೂ.30 ಲಕ್ಷ)
 • ಮಕ್ಕಳು ಮತ್ತು ಇತರರಿಗಾಗಿ ಹೋಟೆಲ್ (ರೂ.42 ಲಕ್ಷ)
 • ಬರುವವರಿಗಾಗಿ ವಿಶ್ರಾಂತಿ ತಾಣ (ರೂ.34 ಲಕ್ಷ)
 •  ಮಕ್ಕಳಿಗೆ ರುಚಿಕರ ಐಸ್ ಕ್ರೀಂಗಾಗಿ ಐಸ್ ಕ್ರೀಮ್ ಪಾರ್ಲರ್ (ರೂ.16 ಲಕ್ಷ)
 • ಶುದ್ಧ ನೀರು ಪೂರೈಕೆಗೆ ಕುಡಿಯುವ ನೀರಿನ ವ್ಯವಸ್ಥೆ (ರೂ.6 ಲಕ್ಷ)
 • ಮಕ್ಕಳು ಮತ್ತು ಪೋಷಕರಿಗಾಗಿ ಶೌಚಾಲಯ ವ್ಯವಸ್ಥೆ (ರೂ.25 ಲಕ್ಷ)
 • ಮೂಲಸೌಕರ್ಯ ರಕ್ಷಣೆಗೆ ಕಾಂಪೌಂಡ್ ಗೋಡೆ (ರೂ.75 ಲಕ್ಷ)
 • ಕೆಟ್ಟು ನಿಂತಿರುವ ಪುಟಾಣಿ ರೈಲಿನ ನವೀಕರಣಕ್ಕೆ ಪುಟಾಣಿ ರೈಲು ಮೇಲ್ದರ್ಜೆಗೆ (ರೂ.63 ಲಕ್ಷ)

ಪ್ರವಾಸೋದ್ಯಮ ಸಚಿವರು ಇತ್ತ ಗಮನ ಹರಿಸಲಿ

ಮೈಸೂರು ಪ್ರವಾಸಿ ತಾಣ. ಈಗ ಪ್ರವಾಸೋದ್ಯಮ ಸಚಿವರಾಗಿರುವ ಸಾ.ರಾ.ಮಹೇಶ್ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುತ್ತಿದ್ದು, ಜವಾಹರ್ ಬಾಲ ಭವನದ ಪುನಾರಂಭಕ್ಕೂ ಗಮನ ಹರಿಸುತ್ತಾರೆಂದು ಮೈಸೂರು ನಗರದ ನಾಗರಿಕರು ನಂಬಿದ್ದಾರೆ.

Translate »