ಕಾವೇರಿ ಜಲಾನಯನ ಪ್ರದೇಶದ ಅಣೆಕಟ್ಟೆಗಳಿಗೆ  ಜು.19, 20ರಂದು ಸಿಎಂ ಬಾಗಿನ
ಮೈಸೂರು

ಕಾವೇರಿ ಜಲಾನಯನ ಪ್ರದೇಶದ ಅಣೆಕಟ್ಟೆಗಳಿಗೆ  ಜು.19, 20ರಂದು ಸಿಎಂ ಬಾಗಿನ

July 18, 2018

ಬೆಂಗಳೂರು: ರಾಜ್ಯ ಕಾವೇರಿ ಜಲಾನಯನ ಪ್ರದೇಶದ ಅಣೆಕಟ್ಟುಗಳು ತುಂಬಿ ಹರಿಯುತ್ತಿರುವ ಹಿನ್ನೆಲೆ ಯಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಇದೇ 19 ಮತ್ತು 20ರಂದು ಜಲಾಶಯಗಳಿಗೆ ಬಾಗಿನ ಅರ್ಪಿಸಲಿದ್ದಾರೆ.

ದೆಹಲಿ ಪ್ರವಾಸದಿಂದ ಹಿಂದಿರುಗುತ್ತಿ ದ್ದಂತೆ 19ರಂದು ಕೊಡಗು ಜಿಲ್ಲೆಯ ಹಾರಂಗಿ ಜಲಾಶಯದಲ್ಲಿ ಬಾಗಿನ ಅರ್ಪಿಸಿ, ಅಂದು ಸಂಜೆ ಜಿಲ್ಲೆಯ ಅಧಿಕಾರಿಗಳ ಜೊತೆ ಪರಿಶೀಲನಾ ಸಭೆ ನಡೆಸಲಿದ್ದಾರೆ.

ಇತ್ತೀಚೆಗೆ ಸುರಿದ ಭಾರೀ ಮಳೆ ಮತ್ತು ಪ್ರವಾಹದಿಂದ ಉಂಟಾಗಿರುವ ನಷ್ಟ ಮತ್ತು ಪರಿಹಾರ ಕಲ್ಪಿಸುವ ಸಂಬಂಧ ಸ್ಥಳದಲ್ಲೇ ನಿರ್ಧಾರ ಕೈಗೊಳ್ಳಲಿದ್ದಾರೆ. ಕೊಡಗಿನಲ್ಲಿನ ಸ್ಥಿತಿಗತಿಗಳ ಬಗ್ಗೆ ಬಾಲಕ ನೊಬ್ಬ ಸಾಮಾಜಿಕ ಜಾಲತಾಣದ ಮೂಲಕ ನೀಡಿದ ಸಂದೇಶವನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿಗಳು, ಆತನನ್ನು ಕರೆಸಿಕೊಂಡು ಸಮಸ್ಯೆ ಕುರಿತು ಮಾಹಿತಿ ಪಡೆಯಲಿದ್ದಾರೆ.

ಅಲ್ಲಿಯೇ ವಾಸ್ತವ ಹೂಡಲಿರುವ ಅವರು ಮರುದಿನ ಮುಂಜಾನೆ 5 ಗಂಟೆ 30 ನಿಮಿಷಕ್ಕೆ ಭಾಗಮಂಡಲದಲ್ಲಿರುವ ಭಗಂಡೇಶ್ವರ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ನಂತರ ಕಾವೇರಿಯ ಉಗಮ ಸ್ಥಾನ ತಲಕಾವೇರಿಗೆ ತೆರಳಿ ಕಾವೇರಿ ಮಾತೆಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಕಾವೇರಿ ಮಾತೆ ಪೂಜೆ ನಂತರ ಮೈಸೂರಿಗೆ ಪ್ರಯಾಣ ಬೆಳೆಸುವ ಮುಖ್ಯಮಂತ್ರಿಗಳು ಚಾಮುಂಡೇಶ್ವರಿ ಬೆಟ್ಟಕ್ಕೆ ತೆರಳಿ ದೇವಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಅಂದು ಮಧ್ಯಾಹ್ನ ಕಬಿನಿ ಜಲಾಶಯಕ್ಕೂ ಬಾಗಿನ ಅರ್ಪಿಸಲಿದ್ದಾರೆ. ನಂತರ ಮಂಡ್ಯ ಜಿಲ್ಲೆ ಕೃಷ್ಣರಾಜ ಸಾಗರ ಜಲಾಶಯದಲ್ಲಿ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಲಿದ್ದಾರೆ. ಸಂಜೆ ಮಂಡ್ಯ ಜಿಲ್ಲಾ ಜೆಡಿಎಸ್ ವತಿಯಿಂದ ಆಯೋಜಿಸಿರುವ ಕೃತಜ್ಞತಾ ಸಮಾವೇಶದಲ್ಲಿ ಪಾಲ್ಗೊಂಡು ಬೆಂಗಳೂರಿಗೆ ಮರಳಲಿದ್ದಾರೆ ಎಂದು ಮುಖ್ಯಮಂತ್ರಿ ಅವರ ಕಾರ್ಯಾಲಯ ತಿಳಿಸಿದೆ.

Translate »