ಇಂದಿನಿಂದ ಸಂಸತ್ತಿನ ಮುಂಗಾರು ಅಧಿವೇಶನ
ದೇಶ-ವಿದೇಶ

ಇಂದಿನಿಂದ ಸಂಸತ್ತಿನ ಮುಂಗಾರು ಅಧಿವೇಶನ

July 18, 2018

ನವದೆಹಲಿ: ನಾಳೆಯಿಂದ ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾಗಲಿದ್ದು, ಸುಗಮ ಕಲಾಪಕ್ಕೆ ಎಲ್ಲಾ ಪಕ್ಷಗಳು ಸಹಕರಿಸುವಂತೆ ಪ್ರಧಾನಿ ನರೇಂದ್ರಮೋದಿ ಮನವಿ ಮಾಡಿದ್ದಾರೆ. ಅಧಿವೇಶನ ಹಿನ್ನೆಲೆಯಲ್ಲಿ ಇಂದು ನಡೆದ ಸರ್ವಪಕ್ಷ ಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರಮೋದಿ, ಜನರು ತಮ್ಮಿಂದ ನಿರೀಕ್ಷಿಸುತ್ತಿರುವ ವಿಷಯಗಳನ್ನು ಸದನದಲ್ಲಿ ಚರ್ಚಿಸುವಂತೆ ಪ್ರಧಾನಿ ಎಲ್ಲಾ ನಾಯಕರಿಗೂ ಹೇಳಿದ್ದಾರೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಅನಂತ್ ಕುಮಾರ್ ಸಭೆಯ ಬಳಿಕ ಸುದ್ದಿಗಾರರೊಂದಿಗೆ ತಿಳಿಸಿದರು.

ಸುಗಮ ಕಲಾಪಕ್ಕೆ ಎಲ್ಲಾ ಪಕ್ಷಗಳಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಂದಿದೆ. ಕಲಾಪ ಸುಗಮವಾಗಿ ಸಾಗಲು ಬೆಂಬಲ ಕೋರು ವುದಾಗಿ ಎಲ್ಲಾ ಪಕ್ಷಗಳು ತಿಳಿಸಿವೆ. ಕಲಾಪಕ್ಕೆ ಪ್ರತಿಪಕ್ಷಗಳು ಬೆಂಬಲ ನೀಡುವ ಬಗ್ಗೆ ಸರ್ಕಾರ ವಿಶ್ವಾಸ ಇಟ್ಟುಕೊಂಡಿದೆ ಎಂದು ಅನಂತ್ ಕುಮಾರ್ ತಿಳಿಸಿದರು.

ಸಭೆಯಲ್ಲಿ ಉನ್ನತ ಶಿಕ್ಷಣದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಮೀಸಲಾತಿ ನೀಡದೆ ಇರುವ ವಿಷಯವನ್ನು ಪ್ರತಿಪಕ್ಷ ಗಳು ಪ್ರಸ್ತಾವಿಸಿದವು. ಉನ್ನತ ಶಿಕ್ಷಣದಲ್ಲಿ ಮೀಸಲಾತಿ ನೀಡುವ ಸಂಬಂಧ ಸದನದಲ್ಲಿ ಸರ್ಕಾರ ಸೂಕ್ತ ಭರವಸೆ ನೀಡುವವರೆಗೂ ಸುಗಮ ಕಲಾಪಕ್ಕೆ ಅವಕಾಶ ನೀಡುವುದಿಲ್ಲ ಎಂದು ಸಮಾಜವಾದಿ ಪಕ್ಷದ ಮುಖಂಡ ರಾಮ್ ಗೋಪಾಲ್ ಯಾದವ್ ಎಚ್ಚರಿಕೆ ನೀಡಿದರು. ದೆಹಲಿ ಸರ್ಕಾರದ ಕಾರ್ಯನಿರ್ವಹಣೆಯಲ್ಲಿ ಕೇಂದ್ರಸರ್ಕಾರದ ಹಸ್ತಕ್ಷೇಪದ ಬಗ್ಗೆ ಎಎಪಿ ಮುಖಂಡ ಸಂಜಯ್ ಸಿಂಗ್ ಸರ್ವಪಕ್ಷ ಸಭೆಯಲ್ಲಿ ಪ್ರಸ್ತಾಪಿಸಿದರು. ನಂತರ ಪ್ರಧಾನಿ ನರೇಂದ್ರಮೋದಿ ಎಲ್ಲಾ ವಿಷಯವನ್ನು ಮುಂಗಾರು ಅಧಿವೇಶನದಲ್ಲಿ ಚರ್ಚಿಸುವುದಾಗಿ ಹೇಳಿದ್ದಾರೆ ಎಂದು ತಿಳಿಸಿದರು.

ಅವಿಶ್ವಾಸ ನಿರ್ಣಯ ಸೂಚನೆಯನ್ನು ಕಾರ್ಯಕಲಾಪ ಪಟ್ಟಿಯಲ್ಲಿ ಸೇರಿಸುವಂತೆ ಟಿಡಿಪಿ ಸಂಸದ ಶ್ರೀನಿವಾಸ್ ಕೆಸಿನೆನಿ ಲೋಕಸಭಾ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಈ ಮಧ್ಯೆ ವಿತ್ತ ಸಚಿವ ಅರುಣ್ ಜೇಟ್ಲಿ ಮುಂಗಾರು ಅಧಿವೇಶನದಲ್ಲಿ ಪಾಲ್ಗೊಳ್ಳುತ್ತಿಲ್ಲ.ಮೇ 14 ರಂದು ಅವರು ಏಮ್ಸ್ ಆಸ್ಪತ್ರೆಯಲ್ಲಿ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿ ಗುಣಮುಖರಾಗಿದ್ದು, ವೈದ್ಯರ ಸೂಚನೆ ಮೇರೆಗೆ ಅಧಿವೇಶನದಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ಮೂಲಗಳಿಂದ ತಿಳಿದುಬಂದಿದೆ. ಗೃಹ ಸಚಿವ ರಾಜನಾಥ್ ಸಿಂಗ್, ಲೋಕಸಭೆಯಲ್ಲಿನ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತಿತರ ನಾಯಕರು ಸರ್ವಪಕ್ಷ ಸಭೆಯಲ್ಲಿ ಪಾಲ್ಗೊಂಡಿದ್ದರು.

Translate »