ಹಳೇ ಉಂಡವಾಡಿ ಯೋಜನೆಗೆ ತಿಂಗಳಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ಪೂರೈಸಿ: ಅಧಿಕಾರಿಗಳಿಗೆ ಸಚಿವ ಜಿಟಿಡಿ ಸೂಚನೆ
ಮೈಸೂರು

ಹಳೇ ಉಂಡವಾಡಿ ಯೋಜನೆಗೆ ತಿಂಗಳಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ಪೂರೈಸಿ: ಅಧಿಕಾರಿಗಳಿಗೆ ಸಚಿವ ಜಿಟಿಡಿ ಸೂಚನೆ

July 18, 2018

ಮೈಸೂರು:  ಅಂದಾಜು 545 ಕೋಟಿ ರೂ. ವೆಚ್ಚದ ಕೆಆರ್‌ಎಸ್‌ ಹಿನ್ನೀರಿನ ಹಳೇ ಉಂಡವಾಡಿ ಯೋಜನೆ ಅನುಷ್ಠಾನಕ್ಕೆ ಅಗತ್ಯವಿರುವ ಭೂಸ್ವಾಧೀನ ಪ್ರಕ್ರಿಯೆಯನ್ನು ಒಂದೇ ಹಂತದಲ್ಲಿ ತಿಂಗಳೊಳಗೆ ಪೂರ್ಣಗೊಳಿಸುವಂತೆ ಚಾಮುಂಡೇಶ್ವರಿ ಕ್ಷೇತ್ರದ ಶಾಸಕರೂ ಆದ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅಧಿಕಾರಿಗಳಿಗೆ ಸೂಚಿಸಿದರು.

ಮೈಸೂರಿನ ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ ಚಾಮುಂಡೇ ಶ್ವರಿ ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿ ಕುರಿತು ಮಂಗಳವಾರ ಹಮ್ಮಿಕೊಂಡಿದ್ದ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮೈಸೂರು ನಗರವೂ ಸೇರಿದಂತೆ ಚಾಮುಂಡೇಶ್ವರಿ ಹಾಗೂ ವರುಣಾ ವಿಧಾನಸಭಾ ಕ್ಷೇತ್ರಗಳ 103 ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಅಂದಾಜು 545 ಕೋಟಿ ರೂ. ವೆಚ್ಚದ ಕೆಆರ್‌ಎಸ್‌ ಹಿನ್ನೀರಿನ ಹಳೇ ಉಂಡವಾಡಿ ಯೋಜನೆಗೆ ರಾಜ್ಯ ಸರ್ಕಾರ ಬಜೆಟ್‍ನಲ್ಲಿ 50 ಕೋಟಿ ರೂ. ಮೀಸಲಿರಿಸಿದೆ ಎಂದು ತಿಳಿಸಿದರು.

ಯೋಜನೆಯನ್ನು ತ್ವರಿತವಾಗಿ ಅನುಷ್ಠಾನಕ್ಕೆ ತರಲು ಭೂಸ್ವಾಧೀನ ಪ್ರಕ್ರಿಯೆ ಅಗತ್ಯವಿದ್ದು, ಈ ಹಿನ್ನೆಲೆಯಲ್ಲಿ ಮಂಡ್ಯ, ಶ್ರೀರಂಗಪಟ್ಟಣ ಹಾಗೂ ಮೈಸೂರು ತಾಲೂಕುಗಳ ತಹಸೀಲ್ದಾರ್ ಗಳು ಸಮನ್ವಯತೆಯಿಂದ ಭೂ ಸ್ವಾಧೀನ ಪ್ರಕ್ರಿಯೆ ನಡೆಸಬೇಕು. ಈ ನಿಟ್ಟಿನಲ್ಲಿ ಸರ್ವೇ ನಡೆಸುವ ಕಾರ್ಯಸೇರಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಮೈಸೂರು ತಹಸೀಲ್ದಾರ್ ಟಿ.ರಮೇಶ್‍ಬಾಬುಗೆ ಸೂಚನೆ ನೀಡಿದರು.

ಕುಡಿಯುವ ನೀರಿಗೆ ಸಮಸ್ಯೆ ಆಗಬಾರದು: ಕ್ಷೇತ್ರದ ಹೊಸಕೋಟೆ ಭಾಗದಲ್ಲಿ ನೀರು ಬಂದು 5 ದಿನ ಆಗಿದೆ ಎಂದು ಅಲ್ಲಿನ ಸಾರ್ವಜನಿಕರು ದೂರುತ್ತಿ ದ್ದಾರೆ. ಇಲವಾಲದಲ್ಲಿ 4 ದಿನಕ್ಕೊಮ್ಮೆ ನೀರು ಬಿಡಲಾಗುತ್ತಿದೆ ಎಂಬ ದೂರುಗಳು ಕೇಳಿ ಬರುತ್ತಿವೆ.

ಅತ್ತ ಕೆಆರ್‌ಎಸ್‌ ಜಲಾಶಯ ತುಂಬಿ ಹರಿಯುತ್ತಿದ್ದರೂ ನಮ್ಮ ಗ್ರಾಮೀಣ ಭಾಗಕ್ಕೆ ನೀರು ಬರುತ್ತಿಲ್ಲ ಎಂದರೆ ಎಂತಹ ವಿಪರ್ಯಾಸ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಇದಕ್ಕೆ ಪ್ರತಿಕ್ರಿಯಿಸಿದ ವಾಣಿ ವಿಲಾಸ ನೀರು ಸರಬರಾಜು ಕಾರ್ಯಾಗಾರದ ಕಾರ್ಯಪಾಲಕ ಅಭಿಯಂತರ ಆನಂದ, ಬಡಾವಣೆಗಳು ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ಭಾಗಕ್ಕೂ ನೀರು ಸರಬರಾಜು ಕಷ್ಟವಾಗುತ್ತಿದೆ ಎಂದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಜಿಟಿಡಿ, ಪರ್ಯಾಯ ವ್ಯವಸ್ಥೆಗಳ ಮಾಡಿಕೊಂಡು ವಾರಕ್ಕೆ 2 ಬಾರಿಯಾದರೂ ನೀರು ಪೂರೈಸಲು ಕ್ರಮ ಕೈಗೊಳ್ಳಬೇಕು ಎಂದು ತಾಕೀತು ಮಾಡಿದರು.

ಸ್ಥಳಕ್ಕೆ ಹೋಗಿ ಸಮಸ್ಯೆ ಅರಿತು ಬಗೆಹರಿಸಿ: ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ನಾಗರಿಕರ ಕುಂದುಕೊರತೆ ನಿವಾರಿಸಲು ಸ್ಥಳಕ್ಕೆ ಹೋಗಿ ಸಮಸ್ಯೆ ಅರಿತು ಬಗೆಹರಿಸಿ ಎಂದು ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಕೆ.ಹೆಚ್.ಜಗದೀಶ್ ಅವರಿಗೆ ಸಲಹೆ ನೀಡಿದ ಶಾಸಕರು, ಚಾಮುಂಡೇಶ್ವರಿ ಕ್ಷೇತ್ರ ನಗರ ಮತ್ತು ಗ್ರಾಮೀಣ ಪ್ರದೇಶ ಎರಡನ್ನೂ ಒಳಗೊಂಡಿದೆ. ಎಸ್‍ಬಿಎಂ ಬಡಾವಣೆಯಲ್ಲಿ ಪಾಲಿಕೆ ವತಿಯಿಂದ ನೀರಿನ ಮೀಟರ್ ಅಳವಡಿಸಿ ನೇರವಾಗಿ ಶುಲ್ಕ ವಸೂಲಿಗೆ ಕ್ರಮ ಕೈಗೊಳ್ಳಿ ಎಂದು ತಿಳಿಸಿದರು.

ವಿಜಯನಗರ 4ನೇ ಹಂತ ದೊಡ್ಡ ಬಡಾವಣೆಯಾಗಿದ್ದು, ಇಲ್ಲಿಗೆ ನೀರು ಪೂರೈಸಲು ಹಿನಕಲ್ ಬಳಿ ಪಂಪ್‍ಹೌಸ್ ನಿರ್ಮಾಣ ಮಾಡಲಾಗಿದೆ. ಹೀಗಿ ದ್ದರೂ ನೀರು ಸಮರ್ಪಕವಾಗಿ ಸರಬರಾಜು ಆಗದಿರುವ ಬಗ್ಗೆ ದೂರು ಕೇಳಿ ಬಂದಿದೆ. ನೀರು ಸಮರ್ಪಕ ಪೂರೈಕೆ ಮಾಡದಿರಲು ಕಾರಣವೇನು ಎಂದು ಶಾಸಕರು ಪ್ರಶ್ನಿಸಿದಾಗ, ಹಳೇ ಪೈಪ್‍ಲೈನ್ ಹಿನ್ನೆಲೆಯಲ್ಲಿ ಈ ಸಮಸ್ಯೆ ಉದ್ಭವವಾಗಿದೆ. ಜೊತೆಗೆ ಇಲ್ಲಿಗೆ ನೀರು ಸಮರ್ಪಕ ವಾಗಿ ನೀಡಲು ಹೊರಟರೆ ನಗರದ ಹೃದಯಭಾಗ ದಲ್ಲಿ ನೀರಿಗೆ ಹಾಹಾಕಾರ ಉಂಟಾಗಲಿದೆ ಎಂದು ವಾಣಿವಿಲಾಸ ನೀರು ಸರಬರಾಜು ಕಾರ್ಯಾಗಾರದ ಇಇ ಆನಂದ ಉತ್ತರಿಸಿದರು. ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಆಗಿದ್ದರೆ ಸಮರ್ಥ ಪೈಪ್‍ಲೈನ್ ವ್ಯವಸ್ಥೆಯ ಮಾಡಿಕೊಳ್ಳದೇ ಟ್ಯಾಂಕ್ ನಿರ್ಮಿಸಲಾಗಿದೆಯೇ? ಈ ರೀತಿ ಮಾಡಿದರೆ ಏನು ಪ್ರಯೋಜನ? ಎಂದು ಕಿಡಿಕಾರಿದರಲ್ಲದೆ, ನಗರದ ಹೃದಯಭಾಗಕ್ಕೆ ನೀರು ಸಿಕ್ಕರೆ ಸಾಕೇ? ಮೊದಲು ತ್ವರಿತವಾಗಿ ಕುಡಿಯುವ ನೀರು ಪೂರೈಸಲು ಕ್ರಮ ವಹಿಸಿ ಎಂದು ತಾಕೀತು ಮಾಡಿದರು.

ಖಾತೆ ಮಾಡಲು ಅದಾಲತ್: ವಿಜಯನಗರ 3ನೇ ಹಂತದಲ್ಲಿ ನಿವೇಶನಗಳಿಗೆ ಖಾತೆ ಮಾಡಿಕೊಡುವುದನ್ನು ಪಾಲಿಕೆ ನಿಲ್ಲಿಸಿದೆ ಎಂಬ ದೂರುಗಳು ಕೇಳಿ ಬಂದಿವೆ. ಕೂಡಲೇ ಖಾತೆ ಮಾಡಲು ಕ್ರಮ ಕೈಗೊಳ್ಳ ಬೇಕು. ಇದಕ್ಕಾಗಿ ಅದಾಲತ್ ಹಮ್ಮಿಕೊಳ್ಳಬೇಕು. ಜೊತೆಗೆ ಮಳೆ ಚೆನ್ನಾಗಿ ಆಗಿರುವ ಹಿನ್ನೆಲೆಯಲ್ಲಿ ಉದ್ಯಾನವನದ ಹಸಿರೀಕರಣಕ್ಕೆ ಅಗತ್ಯ ಕಾರ್ಯಕ್ರಮ ಹಾಕಿಕೊಳ್ಳಿ ಎಂದು ಪಾಲಿಕೆ ಆಯುಕ್ತ ಜಗದೀಶ್ ಅವರಿಗೆ ಸಚಿವರು ಸೂಚನೆ ನೀಡಿದರು.

ನೀರು-ಬೆಳಕು ನೀಡಿ: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ (ಮುಡಾ) ನೂತನವಾಗಿ ನಿರ್ಮಾಣಗೊಂಡ ಬಡಾವಣೆಗಳನ್ನು ಪಾಲಿಕೆಗೆ ವಹಿಸಿದ ಬಳಿಕ ಸದರಿ ಬಡಾವಣೆಗಳಿಗೆ ಮೂಲಸೌಲಭ್ಯ ಒದಗಿಸುವುದು ಪಾಲಿಕೆ ಜವಾಬ್ದಾರಿ. ಮುಡಾ ಹಾಗೂ ಪಾಲಿಕೆ ಸಮನ್ವಯತೆ ಯಿಂದ ಸದರಿ ಬಡಾವಣೆಗಳಿಗೆ ಮೂಲಸೌಲಭ್ಯ ಕಲ್ಪಿಸಿ ಎಂದು ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮುಡಾ ಆಯುಕ್ತ ಕಾಂತರಾಜು, ಮುಡಾ ಹಾಗೂ ಖಾಸಗಿಯವರು ನಿರ್ಮಿಸಿರುವ ಬಡಾವಣೆಗಳು ಸೇರಿದಂತೆ 70ಕ್ಕೂ ಹೆಚ್ಚು ಬಡಾವಣೆಗಳನ್ನು ಪಾಲಿಕೆಗೆ ಸಂದಾಯವಾಗಬೇಕಿರುವ ಶುಲ್ಕ ದೊಂದಿಗೆ ಇತ್ತೀಚೆಗೆ ಹಸ್ತಾಂತರ ಮಾಡಲಾಗಿದೆ. ಖಾಸಗಿಯವರು ಸಮರ್ಪಕವಾಗಿ ಮೂಲಸೌಲಭ್ಯ ವ್ಯವಸ್ಥೆಯೊಂದಿಗೆ ಬಡಾವಣೆ ನಿರ್ಮಿಸಿದರೆ ಸಮಸ್ಯೆ ಉದ್ಭವಿಸುವುದಿಲ್ಲ. ಆದರೆ ಆ ರೀತಿಯಾಗುತ್ತಿಲ್ಲ. ಇದೇ ಕಾರಣಕ್ಕೆ ಖಾಸಗಿಯವರು ನಿರ್ಮಿಸುವ ಬಡಾವಣೆಗಳನ್ನು ಕನಿಷ್ಠ ಐದು ವರ್ಷಗಳವರೆಗೆ ಅವರೇ ನಿರ್ವಹಣೆ ಮಾಡಬೇಕೆಂಬ ರೀತಿಯಲ್ಲಿ ಸರ್ಕಾರ ಕಾನೂನು ರೂಪಿಸುತ್ತಿದೆ ಎಂದು ವಿವರಿಸಿದರು.

ಜಿಪಂ ಸದಸ್ಯರಾದ ಬೀರಿಹುಂಡಿ ಬಸವಣ್ಣ, ಮಾದೇಗೌಡ, ತಾಪಂ ಅಧ್ಯಕ್ಷೆ ಕಾಳಮ್ಮ ಕೆಂಪರಾಮಯ್ಯ, ಎನ್.ಪಿ. ಮಂಜು, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಜಿಪಂ ಸಿಇಓ ಪಿ.ಶಿವಶಂಕರ್, ತಾಪಂ ಇಓ ಲಿಂಗರಾಜಯ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ್‍ಸಿಂಗ್, ಮೈಸೂರು ನಗರ ಪೊಲೀಸ್ ಉಪ ಆಯುಕ್ತರಾದ ವಿಷ್ಣುವರ್ಧನ್ (ಕಾನೂನು ಸುವ್ಯವಸ್ಥೆ), ಡಾ.ವಿಕ್ರಂ ವಿ.ಅಮಟೆ (ಅಪರಾಧ) ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ಪ್ರತಿ ಸೋಮವಾರ ಗ್ರಾಪಂಗಳಲ್ಲಿ ಸಾರ್ವಜನಿಕರ ಕುಂದುಕೊರತೆ ಆಲಿಸಲು ಕ್ರಮಕೈಗೊಳ್ಳಿ

ಮೈಸೂರು:  ಚಾಮುಂಡೇಶ್ವರಿ ಕ್ಷೇತ್ರದ ಪ್ರತಿಯೊಂದು ಗ್ರಾಮ ಪಂಚಾಯತಿ ಕಚೇರಿಗಳಲ್ಲಿ ಪ್ರತಿ ಸೋಮವಾರ ಗ್ರಾಮ ಲೆಕ್ಕಿಗರು, ಕಂದಾಯ ಅಧಿಕಾರಿಗಳು, ಪಿಡಿಓಗಳು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಅಂದು ಸಾರ್ವಜನಿಕರ ಕುಂದುಕೊರತೆ ಆಲಿಸಲು ಆದೇಶ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಕ್ಷೇತ್ರದ ಶಾಸಕರೂ ಆದ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಸೂಚನೆ ನೀಡಿದರು.

ಮೈಸೂರು ವಿವಿ ಸೆನೆಟ್ ಭವನದಲ್ಲಿ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿ ಕುರಿತು ಮಂಗಳ ವಾರ ಹಮ್ಮಿಕೊಂಡಿದ್ದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಗ್ರಾಮ ಪಂಚಾಯಿತಿ ಕಚೇರಿಗಳಲ್ಲಿ ಗ್ರಾಮ ಲೆಕ್ಕಿಗರು, ಕಂದಾಯ ಅಧಿಕಾರಿಗಳು, ಪಿಡಿಓಗಳು, ಸರ್ವೇಯರ್ ಗಳು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದು, ಸಾರ್ವಜನಿಕರ ಕುಂದುಕೊರತೆ ಆಲಿಸಿ ಪರಿಹರಿಸಬೇಕು. ಈ ರೀತಿಯ ವ್ಯವಸ್ಥೆ ಜಾರಿಗೊಳಿಸಲು ಒಂದು ಆದೇಶ ಹೊರಡಿಸಿ ಎಂದು ಡಿಸಿ ಅಭಿರಾಮ್ ಜಿ.ಶಂಕರ್‍ಗೆ ನಿರ್ದೇಶನ ನೀಡಿದರು.

ಬೆಟ್ಟದಲ್ಲಿ ಸುವ್ಯವಸ್ಥೆ ಇರಬೇಕು: ಚಾಮುಂಡಿಬೆಟ್ಟದ ದೇವಸ್ಥಾನ ದಲ್ಲಿ ಸರತಿ ಸಾಲಿನಲ್ಲಿ ನಿಂತು ಹೋಗುವವರು ಒಂದೆಡೆಯಾದರೆ, ಕೆಲವು ಪ್ರಭಾವಿಗಳು ಸಾಲಿನಲ್ಲಿ ನಿಂತವರಿಗಿಂತ ಮೊದಲೇ ದೇವರ ದರ್ಶನ ಪಡೆಯುತ್ತಾರೆ. ಮೊನ್ನೆ ಹೋಗಿ ದ್ದಾಗ, ಇಲ್ಲಿ ಈ ರೀತಿಯ ಅನೇಕ ಅವ್ಯವಸ್ಥೆ ಕಂಡಿತು. ಪೊಲೀಸ್ ಇಲಾಖೆಯವರೇ ಪ್ರಭಾವ ಬಳಸಿ ದೇವರ ದರ್ಶನ ಪಡೆಯುತ್ತಿ ರುವುದು ಹೆಚ್ಚು ಎಂಬ ಆರೋಪ ಕೇಳಿ ಬಂದಿದೆ. ಈ ರೀತಿ ಯಾಗಬಾರದು. ಶಿಸ್ತು ಹಾಗೂ ಸುವ್ಯವಸ್ಥಿತವಾಗಿ ಭಕ್ತರು ದೇವಿ ದರ್ಶನ ಪಡೆಯಲು ಅಗತ್ಯ ಕ್ರಮ ಕೈಗೊಳ್ಳುವಂತೆ ಎಸ್‍ಪಿ ಅಮಿತ್‍ಸಿಂಗ್ ಅವರಿಗೆ ಸೂಚನೆ ನೀಡಿದ ಸಚಿವರು, ಜು.20ರ ಮೊದಲ ಆಷಾಢ ಶುಕ್ರವಾರ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಬೆಟ್ಟಕ್ಕೆ ಭೇಟಿ ನೀಡುತ್ತಿದ್ದು, ಸೂಕ್ತ ಭದ್ರತೆ ಸೇರಿದಂತೆ ಎಲ್ಲಾ ರೀತಿಯ ವ್ಯವಸ್ಥೆ ಕೈಗೊಳ್ಳಲು ತಿಳಿಸಿದರು.

ಸಿಮೆಂಟ್ ರಸ್ತೆ ವಿಭಜಕ ಹಾಕಿ: ಮೈಸೂರು ನಗರದ ಹೃದಯಭಾಗದ ಸಯ್ಯಾಜಿರಾವ್ ರಸ್ತೆಯಲ್ಲಿ ಕೆಆರ್ ವೃತ್ತ ದಿಂದ ಆಯುರ್ವೇದ ಕಾಲೇಜು ವೃತ್ತದವರೆಗೆ ಹಾಕಿರುವ ಬ್ಯಾರಿಕೇಡ್‍ಗಳು ರಸ್ತೆಯ ಚೆಂದವನ್ನೇ ಹದಗೆಡಿಸಿವೆ. ಸಿಮೆಂಟ್ ರಸ್ತೆ ವಿಭಜಕ ಹಾಕಲು ಕ್ರಮ ವಹಿಸುವಂತೆ ಪಾಲಿಕೆ ಆಯುಕ್ತರು ಹಾಗೂ ಡಿಸಿಪಿ ಡಾ.ವಿಕ್ರಂ ವಿ.ಅಮಟೆ ಅವರಿಗೆ ಸೂಚನೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಾ.ವಿಕ್ರಂ ವಿ.ಅಮಟೆ, ಈಗಾಗಲೇ ಈ ಸಂಬಂಧ ಪಾಲಿಕೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

Translate »