ಬಾದಾಮಿಯಲ್ಲೂ ಸಿಎಂ ಸಿದ್ದರಾಮಯ್ಯ ಸ್ಪರ್ಧೆ?
ಮೈಸೂರು

ಬಾದಾಮಿಯಲ್ಲೂ ಸಿಎಂ ಸಿದ್ದರಾಮಯ್ಯ ಸ್ಪರ್ಧೆ?

April 19, 2018

ಮುನಿಸಿಕೊಂಡ ಸಿಎಂ ಜೊತೆ ಪರಮೇಶ್ವರ್, ವೇಣುಗೋಪಾಲ್ ಮಾತುಕತೆ

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಕ್ಷೇತ್ರದ ಜೊತೆ ಬಾದಾಮಿ ಯಲ್ಲೂ ಸ್ಪರ್ಧಿಸುವ ಸಾಧ್ಯತೆಗಳು ನಿಚ್ಚಳವಾಗಿ ಕಂಡುಬರುತ್ತಿದೆ. ಸಿದ್ದರಾಮಯ್ಯ ಅವರು ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಇಚ್ಛಿಸಿದ್ದರು. ಆದರೆ ಕಾಂಗ್ರೆಸ್ ಹೈಕಮಾಂಡ್ ಅದನ್ನು ಒಪ್ಪದೇ ಚಾಮುಂಡೇಶ್ವರಿ ಯಲ್ಲಿ ಮಾತ್ರ ಸ್ಪರ್ಧಿಸುವಂತೆ ತಿಳಿಸಿದ ಹಿನ್ನೆಲೆಯಲ್ಲಿ ಮುನಿಸಿಕೊಂಡಿದ್ದ ಮುಖ್ಯಮಂತ್ರಿಗಳು ನವದೆಹಲಿಯಲ್ಲಿ ಕಾಂಗ್ರೆಸ್ ಪಟ್ಟಿ ಬಿಡುಗಡೆಗೂ ಮುನ್ನವೇ ಬೆಂಗಳೂರಿಗೆ ಆಗಮಿಸಿದ್ದರು.  ಮರುದಿನವೇ ಮೈಸೂರಿಗೆ ಬಂದ ಮುಖ್ಯಮಂತ್ರಿಗಳು ಬೇರೆ ಯಾವುದರ ಬಗ್ಗೆಯೂ ತಲೆ ಕೆಡಿಸಿಕೊಳ್ಳದೇ ಕಳೆದ ಮೂರು ದಿನಗಳಿಂದ ತಾವು ಸ್ಪರ್ಧಿಸುತ್ತಿರುವ ಚಾಮುಂಡೇಶ್ವರಿ ಮತ್ತು ತಮ್ಮ ಪುತ್ರ ಸ್ಪರ್ಧಿಸುತ್ತಿರುವ ವರುಣಾ ಕ್ಷೇತ್ರದಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು.

ಮುಖ್ಯಮಂತ್ರಿಗಳ ಮುನಿಸಿನ ಹಿನ್ನೆಲೆಯಲ್ಲಿ ಬಾದಾಮಿ ಕ್ಷೇತ್ರದ ಅಭ್ಯರ್ಥಿ ಎಂದು ಘೋಷಿಸಲ್ಪಟ್ಟಿದ್ದ ಡಾ. ದೇವರಾಜ ಪಾಟೀಲ್ ಅವರಿಗೆ ಬಿಫಾರಂ ನೀಡುವುದನ್ನು ಕೆಪಿಸಿಸಿ ತಡೆ ಹಿಡಿದಿತ್ತು. ನಂತರ ಎಐಸಿಸಿ ವರಿಷ್ಠರ ಸೂಚನೆ ಮೇರೆಗೆ ಕೆಪಿಸಿಸಿ ಅಧ್ಯಕ್ಷ ಡಾ. ಜಿ.ಪರಮೇಶ್ವರ್ ಮತ್ತು ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಅವರು ಇಂದು ರಾತ್ರಿ ಮೈಸೂರಿಗೆ ಆಗಮಿಸಿ ಖಾಸಗಿ ಹೋಟೆಲ್ನಲ್ಲಿ ಮುಖ್ಯಮಂತ್ರಿಗಳನ್ನು ಸಮಾಧಾನಪಡಿಸುವ ಕಾರ್ಯ ನಡೆಸಿದರು.

`ನೀವು ನಿಮ್ಮ ಇಚ್ಛೆಯಂತೆ ಬಾದಾಮಿಯಲ್ಲೂ ಸ್ಪರ್ಧಿಸಬಹುದು ಎಂದು ಹೈಕಮಾಂಡ್ ಸೂಚಿಸಿದೆ. ಅಲ್ಲದೇ ಪ್ರಚಾರ ಮತ್ತು ಸಂಪನ್ಮೂಲ ಕ್ರೋಢೀಕರಣ ಎಲ್ಲದರ ಹೊಣೆಯನ್ನೂ ನೀವೇ ವಹಿಸಿಕೊಳ್ಳಬೇಕುಎಂದು ವೇಣುಗೋಪಾಲ್ ಮತ್ತು ಡಾ. ಜಿ.ಪರಮೇಶ್ವರ್ ತಿಳಿಸುವ ಮೂಲಕ ಮುಖ್ಯಮಂತ್ರಿಗಳು ಎರಡು ಕಡೆ ಸ್ಪರ್ಧಿಸಲು ಹೈಕಮಾಂಡ್ ಗ್ರೀನ್ ಸಿಗ್ನಲ್ ಕೊಟ್ಟಿದೆ ಎಂಬ ಸಂದೇಶವನ್ನು ತಲುಪಿಸಿದರು ಎಂದು ಹೇಳಲಾಗಿದೆ. ಸಭೆಯ ನಂತರ ಹೊರ ಬಂದ ಮುಖ್ಯಮಂತ್ರಿಗಳು ಬಾದಾಮಿ ಶಾಸಕ ಚಿಮ್ಮನಕಟ್ಟಿ ಅವರೊಂದಿಗೆ ತೆರಳಿದರು.

ಇದಕ್ಕೂ ಮುನ್ನ ಸಿದ್ದರಾಮಯ್ಯನವರು ಹೋಟೆಲ್ಗೆ ಬಂದಾಗ ಅದಾಗಲೇ ಬಂದಿದ್ದ ಬಾದಾಮಿ ಹಾಲಿ ಶಾಸಕ ಬಿ.ಬಿ.ಚಿಮ್ಮನಕಟ್ಟಿ ಅವರು ಮುಖ್ಯಮಂತ್ರಿಗಳೊಂದಿಗೆ ನನಗೇ ಟಿಕೆಟ್ ಕೊಡಿ. ಇಲ್ಲದಿದ್ದರೆ ನೀವೇ ಸ್ಪರ್ಧಿಸಿ ಎಂದರು. ಅದಕ್ಕೆ ಮುಖ್ಯಮಂತ್ರಿಗಳು ನಾನು ಸ್ಪರ್ಧಿಸಿದರೆ ನಿನಗೆ ಟಿಕೆಟ್ ಸಿಗುವುದಿಲ್ಲವಲ್ಲಾ ಎಂದಾಗ ನೀವು ನಿಲ್ಲುವುದಾದರೆ ನನ್ನದೇನೂ ಇಲ್ಲ. ನೀವು ನಿಲ್ಲದಿದ್ದರೆ ನನಗೇ ಟಿಕೆಟ್ ಕೊಡಿ ಎಂದು ಚಿಮ್ಮನಕಟ್ಟಿ ಹೇಳಿದರು. ಆಯ್ತು, ನಾನೇ ನಿಲ್ತೀನಿ, ನೀನು ಹೋಗು ಎಂದರು. ಚಿಮ್ಮನಕಟ್ಟಿ ಅವರು ತೆರಳುತ್ತಿದ್ದಂತೆಯೇ ಅವರನ್ನು ಕರೆದು ಮುಖ್ಯಮಂತ್ರಿಗಳು ಅರ್ಧ ಗಂಟೆ ಬಿಟ್ಟು ಬಾ ಎಂದು ಚಿಮ್ಮನಕಟ್ಟಿ ಅವರನ್ನು ಕಳುಹಿಸಿ ಸಿದ್ದರಾಮಯ್ಯ ಅವರು, ಪರಮೇಶ್ವರ್ ಮತ್ತು ವೇಣುಗೋಪಾಲ್ ಅವರ ಜೊತೆಗಿನ ಮಾತುಕತೆಗೆ ತೆರಳಿದರು.

Translate »