ಟಿಕೆಟ್ ಕೊಟ್ಟರೂ; `ಬಿ’ ಫಾರಂ ಮನೆಗೆ ತಲುಪಿಸುತ್ತೇವೆ ಎಂದರೂ ಶಮನವಾಗಿಲ್ಲ ಅಂಬರೀಶ್ ಮುನಿಸು
ಮೈಸೂರು

ಟಿಕೆಟ್ ಕೊಟ್ಟರೂ; `ಬಿ’ ಫಾರಂ ಮನೆಗೆ ತಲುಪಿಸುತ್ತೇವೆ ಎಂದರೂ ಶಮನವಾಗಿಲ್ಲ ಅಂಬರೀಶ್ ಮುನಿಸು

April 19, 2018

ಬೆಂಗಳೂರು: ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಮಾಜಿ ಸಚಿವ ಅಂಬರೀಶ್ ಮನೆ ಬಾಗಿಲಿಗೆ ಕಾಂಗ್ರೆಸ್ ಬಿಫಾರಂ ತಲುಪಲಿದೆ. ಪ್ರಸಕ್ತ ಚುನಾವಣೆಯಲ್ಲಿ ಕಣಕ್ಕಿಳಿಯುವ ಬಗ್ಗೆ ಯಾವುದೇ ನಿರ್ಧಾರವನ್ನು ಅಂಬರೀಶ್ ಪ್ರಕಟಿಸದಿದ್ದರೂ, ಕಾಂಗ್ರೆಸ್ ಮಾತ್ರ ಅವರನ್ನು ಆಯ್ಕೆ ಮಾಡಿ, ಚುನಾವಣಾ ಕಣಕ್ಕಿಳಿ ಸಲು ನಿರ್ಧರಿಸಿದೆ. ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ದೂರವಾಣಿ ಮೂಲಕ ನಿನ್ನೆ ಅಂಬರೀಶ್ ಅವರನ್ನು ಸಂಪರ್ಕಿಸಿ, ಬಿ ಫಾರಂ ಪಡೆದುಕೊಳ್ಳುವಂತೆ ಮನವಿ ಮಾಡಿದ್ದರು. ಪರಮೇಶ್ವರ್ ಮಾತಿಗೂ ಇದುವರೆಗೆ ಮನ್ನಣೆ ದೊರೆತಿಲ್ಲ. ಅಂಬರೀಶ್ ನಡೆ ಕಾಂಗ್ರೆಸ್ಗೆ ತಲೆನೋವಾಗಿ ಪರಿಣಮಿಸಿದೆ.

ಅವರಿಗೆ ಟಿಕೆಟ್ ನೀಡದಿದ್ದರೆ, ಸಾರ್ವಜನಿಕವಾಗಿ ಪಕ್ಷದ ವಿರುದ್ಧ ತಪ್ಪು ಸಂದೇಶ ಹೋಗುತ್ತದೆ. ನೀಡಿದರೆ, ಅದನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಹಿನ್ನೆಲೆಯಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಅವರನ್ನು ಅಂಬಿ ಮನೆಗೆ ಕಳುಹಿಸಿ ಅವರ ಮನವೊಲಿಸುವ ಪ್ರಯತ್ನ ಮಾಡಿದರು. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಜಾರ್ಜ್, ಅಂಬರೀಷ್ ಅವರ ಜೊತೆ ಮಾತನಾಡಿ, ಚುನಾವಣಾ ಕಣಕ್ಕಿಳಿಯಿರಿ. ಚುನಾವಣಾ ವೆಚ್ಚವನ್ನು ಪಕ್ಷವೇ ಭರಿಸಲಿದೆ. ನಿಮ್ಮನ್ನು ಪಕ್ಷ ಕಡೆಗಣಿಸಿಲ್ಲ. ಮಂಡ್ಯ ಜಿಲ್ಲೆಯಲ್ಲಿ ಟಿಕೆಟ್ ಆಯ್ಕೆ ಮಾಡುವ ಸಂದರ್ಭದಲ್ಲಿ ಪಕ್ಷ ನಿರ್ಧಾರ ಕೈಗೊಂಡಿದೆ. ಚುನಾವಣೆಗೆ ಸ್ಪರ್ಧಿಸಿ, ಬೇರೆ ಕ್ಷೇತ್ರಗಳಲ್ಲೂ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಮಾಡಿ ಎಂದು ಕೋರಿದ್ದಾರೆ. ಸಚಿವ ಸ್ಥಾನದಿಂದ ಕೈಬಿಟ್ಟ ಬಗ್ಗೆ, ಟಿಕೆಟ್ ಹಂಚಿಕೆ ವೇಳೆ ಪದೇ ಪದೆ ಆರೋಗ್ಯ ಸರಿ ಇಲ್ಲ ಎನ್ನುವ ಮುಖಂಡರ ಹೇಳಿಕೆಗಳಿಂದ ಮನ ನೊಂದಿರುವ ಅಂಬರೀಶ್ ತಟಸ್ಥವಾಗಿ ಉಳಿದಿದ್ದರು. ಅಂಬರೀಶ್ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಜಾರ್ಜ್, ಅಂಬರೀಶ್ ಸಿನಿಮಾ ಹೀರೋ. ಬಿ ಫಾರಂ ಮನೆಗೆ ಕೊಟ್ಟು ಕಳಿಸಬಹುದು. ಅದರಲ್ಲೇನು ತಪ್ಪಿಲ್ಲ ಎನ್ನುವ ಮೂಲಕ ಅಂಬಿ ಮನವೊಲಿಕೆ ಸಾಧ್ಯವಾಗಿಲ್ಲ ಎಂದು ಪರೋಕ್ಷ ಸುಳಿವು ನೀಡಿದರು.

 

Translate »