ಬೇಲೂರು: ಕಾಫಿ ಬೀಜ ಮಾರಾಟ ಮಾಡುವ ವಿಚಾರಕ್ಕೆ ಸಂಬಂಧಿಸಿ ದಂತೆ ತಂದೆ ಮತ್ತು ಮಗನ ನಡುವೆ ನಡೆದ ಜಗಳ ವಿಕೋಪಕ್ಕೆ ತಿರುಗಿ ತಂದೆಯೇ ಮಗನನ್ನು ಗುಂಡಿಟ್ಟು ಕೊಂದ ಘಟನೆ ತಾಲೂಕಿನ ಅರೇಹಳ್ಳಿ ಹೋಬಳಿ ಸುಳು ಗಳಲೆ ಗ್ರಾಮದಲ್ಲಿ ಶನಿವಾರ ನಡೆದಿದೆ. ಉಮೇಶ್(42), ತನ್ನ ತಂದೆ ಬಸಪ್ಪಗೌಡ (60) ಅವರಿಂದ ಕೊಲೆಯಾದವರು. ಉಮೇಶ್ ಅವರಿಗೆ ಪತ್ನಿ ನಂದಿನಿ ಹಾಗೂ 7 ವರ್ಷದ ಪುತ್ರಿ ಇದ್ದಾರೆ. ಹತ್ಯೆ ಮಾಡಿರುವ ಆರೋಪಿ ಬಸಪ್ಪಗೌಡ ತಲೆಮರೆಸಿಕೊಂಡಿದ್ದಾರೆ.
ವಿವರ: ಆರೋಪಿ ಬಸಪ್ಪಗೌಡನಿಗೆ 10 ಎಕರೆಯಷ್ಟು ಕಾಫಿ ತೋಟವಿದ್ದು ಅವರಿಗೆ ಮೂವರು ಪುತ್ರರು ಹಾಗೂ ಓರ್ವ ಪುತ್ರಿ ಇದ್ದಾರೆ. ಬಸಪ್ಪಗೌಡ ಉಮೇಶನೊಂದಿಗೆ ವಾಸಿಸುತ್ತಿದ್ದರು.
ಶನಿವಾರ ಬೆಳಿಗ್ಗೆ ಸುಳುಗಳಲೆಯಲ್ಲಿರುವ ತಮ್ಮ ವಾಸದ ಮನೆಯ ಸಮೀಪ ಕಾಫಿ ಬೀಜ ತುಂಬುತ್ತಿದ್ದಾಗ ಕಾಫಿ ಬೀಜ ಮಾರಾಟ ಮಾಡುವ ಬಗ್ಗೆ ಉಮೇಶ್ ತಂದೆಯ ಬಳಿ ವಿಷಯ ಪ್ರಸ್ತಾಪಿಸಿದ್ದಾನೆ. ಕಾಫಿ ಬೀಜ ಮಾರುವುದನ್ನು ತಂದೆ ಬಸಪ್ಪಗೌಡ ವಿರೋಧಿಸಿದ್ದಾರೆ ಎನ್ನಲಾಗಿದೆ. ಇಬ್ಬರ ನಡುವೆ ಜಗಳ ನಡೆದು ವಿಕೋಪಕ್ಕೆ ತಿರು ಗಿದೆ. ಮಗನ ಮಾತಿಗೆ ಆಕ್ರೋಶಗೊಂಡ ತಂದೆ ಬಸಪ್ಪಗೌಡ ಮನೆಯಲ್ಲಿದ್ದ ಬಂದೂಕಿ ನಿಂದ ಮಗನ ಮೇಲೆ ಗುಂಡು ಹಾರಿಸಿದ್ದಾನೆ. ಗಾಯಗೊಂಡ ಉಮೇಶನನ್ನು ಹಾಸನ ಆಸ್ಪತ್ರೆಗೆ ತಂದರೂ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ.
ಮೃತನ ಪತ್ನಿ ನಂದಿನಿ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಸ್ಥಳಕ್ಕೆ ಸಿಪಿಐ ಲೋಕೇಶ್ ಹಾಗೂ ಅರೇಹಳ್ಳಿ ಎಸ್‍ಐ ಬಾಲು ಭೇಟಿ ನೀಡಿ ಪರಿಶೀಲಿಸಿ ಮಾಹಿತಿ ಪಡೆದುಕೊಂಡಿದ್ದಾರೆ. ಮೃತನ ಪತ್ನಿ ನಂದಿನಿ ನೀಡಿದ ದೂರು ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆರೋಪಿಯ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.