ಮೈಸೂರು: ಸಾಮಾಜಿಕ ಜಾಲತಾಣ ಫೇಸ್‍ಬುಕ್‍ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ತೇಜೋವಧೆ ಮಾಡುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮೈಸೂರು ನಗರದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮೈಸೂರಿನ ಮಂಡಿ ಮೊಹಲ್ಲಾ ನಿವಾಸಿಯೂ ಆದ ವಕೀಲ ಹಾಗೂ ಬಿಜೆಪಿ ಚಾಮರಾಜ ಕ್ಷೇತ್ರದ ಬಿಜೆಪಿ ಲೀಗಲ್ ಸೆಲ್‍ನ ಸಂಚಾಲಕ ಸತ್ಯಮೂರ್ತಿ ಎಂ.ಚೆಟ್ಟಿ ದೂರು ದಾಖಲಿಸಿ ದವರಾಗಿದ್ದು, ಪ್ರಕರಣ ನಡೆದ ಸ್ಥಳವನ್ನು ಮೈಸೂರು ನಗರ ಎಂದು ಇವರು ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಪ್ರಕರಣದ ಸಂಬಂಧ ಮಾತನಾಡಿದ ಸತ್ಯಮೂರ್ತಿ ಎಂ.ಚೆಟ್ಟಿ, ನರೇಂದ್ರ ಮೋದಿಯವರು ಭಾರತ ಸರ್ಕಾರದ ಮುಖ್ಯಸ್ಥರಾ ಗಿದ್ದು, ಇವರು ವಿಧಿ ಸಮ್ಮತ ರೀತಿಯಲ್ಲಿ ಸರ್ಕಾರದ ಯೋಜನೆಗಳನ್ನು ದೇಶದ ಜನತೆಗಾಗಿ ಜಾರಿ ಮಾಡಿರುತ್ತಾರೆ. ಇವರ ಯೋಜನೆಗಳು ಪ್ರಪಂಚದಾದ್ಯಂತ ಪ್ರಶಂಸೆಗೆ ಒಳಗಾಗಿವೆ. ಆದರೆ ಕಿಡಿಗೇಡಿಗಳು ಫೇಸ್‍ಬುಕ್ ಪೇಜ್‍ನಲ್ಲಿ ಈ ಯೋಜನೆಗಳ ಬಗ್ಗೆ ಟೀಕಿಸಿದ್ದಲ್ಲದೆ, ಪ್ರಧಾನ ಮಂತ್ರಿಗಳು ಹಾಗೂ ಅವರ ಸರ್ಕಾರದ ವಿರುದ್ಧ ನಾಗರಿಕರಲ್ಲಿ ದ್ವೇಷ, ತಿರಸ್ಕಾರ, ಅವಿಶ್ವಾಸ ಬರುವಂತೆ ಚಿತ್ರಿಸಿದ್ದಾರೆ. ಈ ಸಂಬಂಧ ಸೈಬರ್ ಕ್ರೈಂ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿ ದ್ದಾರೆ ಎಂದು ವಿವರಿಸಿದರು. ಜೋಕರ್ಸ್ ಆಫ್ ಬಿಜೆಪಿ ಎಂಬ ಫೇಸ್‍ಬುಕ್ ಪೇಜ್‍ನಲ್ಲಿ ಮೋದಿಯವರನ್ನು ಹಿಟ್ಲರ್ ಹಾಗೂ ಭಿಕ್ಷುಕರಿಗೆ ಹೋಲಿಕೆ ಮಾಡಲಾಗಿದೆ. ಜೊತೆಗೆ ಪ್ರಧಾನಿಗಳ ಫೋಟೋಗಳನ್ನು ಎಡಿಟ್ ಮಾಡಿ ಅನೇಕ ರೀತಿಯಲ್ಲಿ ತೇಜೋವಧೆ ಮಾಡಲಾಗಿದೆ ಎಂದು ಕಿಡಿಕಾರಿದರು.
ಹಿರಿಯ ವಕೀಲರು, ವಿಧಾನ ಪರಿಷತ್ ಮಾಜಿ ಸದಸ್ಯರು ಹಾಗೂ ಬಿಜೆಪಿ ಮುಖಂಡರೂ ಆದ ತೋಂಟದಾರ್ಯ ಮಾತನಾಡಿ, ಪ್ರಕರಣದ ಸಂಬಂಧ ಸತ್ಯಮೂರ್ತಿ ಎಂ.ಚೆಟ್ಟಿ ಅವರು ಒಂದು ತಿಂಗಳ ಕಾಲ ಶೋಧನಾ ಕಾರ್ಯ ನಡೆಸಿ, ದೂರು ನೀಡಿದ್ದಾರೆ. ಈ ರೀತಿ ಭಾರತ ಸರ್ಕಾರದ ಮುಖ್ಯಸ್ಥರ ವಿರುದ್ಧ ಅವಹೇಳನಕಾರಿಯಾಗಿ ಚಿತ್ರಿಸುವುದು ದೇಶಕ್ಕೆ ಗಂಡಾಂತರ ತರುವ ಸನ್ನಿವೇಶವಾಗಿದೆ. ಹೀಗಾಗಿ ಕೇಂದ್ರ ಗೃಹ ಸಚಿವಾಲಯ ಇದನ್ನು ಗಂಭೀರವಾಗಿ ಪರಿಗಣಿಸಿ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯ ಬಾರ್ ಕೌನ್ಸಿಲ್ ಸದಸ್ಯ ಹಾಗೂ ಮೈಸೂರು ಬಾರ್ ಅಸೋಸಿಯೇಷನ್ ಮಾಜಿ ಅಧ್ಯಕ್ಷ ಚಂದ್ರಮೌಳಿ ಮಾತನಾಡಿ, ಸಂವಿಧಾನದತ್ತ ಹುದ್ದೆ ಅಲಂಕರಿಸಿದವರಿಗೆ ಈ ರೀತಿ ಅಪಮಾನ ಮಾಡುವುದು ಅಪರಾಧ. ಯಾವುದೇ ಸರ್ಕಾರವಿರಲೀ ಅದರ ಯೋಜನೆಗಳ ಬಗ್ಗೆ ಲೋಪದೋಷ ಕಂಡುಬಂದರೆ ಅಭಿಪ್ರಾಯ ವ್ಯಕ್ತಪಡಿಸಿ ಸಲಹೆ ನೀಡಬೇಕು. ಆದರೆ ಈ ರೀತಿ ಕೀಳು ಮಟ್ಟದಲ್ಲಿ ಟೀಕೆ ಮಾಡುವುದು ಸರಿಯಲ್ಲ. ನಾವು ಒಂದು ಪಕ್ಷದ ಪರ ವಕಾಲತ್ತು ವಹಿಸಿ ಮಾತನಾಡುತ್ತಿಲ್ಲ. ಉನ್ನತ ಹುದ್ದೆಯಲ್ಲಿರುವವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಈ ರೀತಿ ಅವಹೇಳನಕಾರಿಯಾಗಿ ಮಾತನಾಡುವುದು ಸರಿಯಲ್ಲ ಎಂದು ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು.