5 ವರ್ಷಗಳಲ್ಲಿ ಬಡತನ ಸಂಪೂರ್ಣ ನಿರ್ಮೂಲನೆ
ಮೈಸೂರು

5 ವರ್ಷಗಳಲ್ಲಿ ಬಡತನ ಸಂಪೂರ್ಣ ನಿರ್ಮೂಲನೆ

April 1, 2019

ಬೆಂಗಳೂರು: 2014ರ ಚುನಾವಣೆ ಮುನ್ನ ಪ್ರಧಾನಿ ಮೋದಿ ಎಲ್ಲರ ಖಾತೆಗೆ 15 ಲಕ್ಷ ನೀಡುತ್ತೇನೆ ಎಂದು ಸುಳ್ಳು ಆಶ್ವಾಸನೆ ನೀಡಿದರು. ಆದರೆ ಕಾಂಗ್ರೆಸ್ ನ್ಯಾಯ ಯೋಜನೆಯ ಮೂಲಕ ದೇಶದ ಶೇ.20 ಭಾಗವಿರುವ ಬಡವರಿಗೆ ವರ್ಷಕ್ಕೆ 72 ಸಾವಿರ ರೂ. ಹಣ ಹಾಕಲಿದೆ. ಈ ಯೋಜನೆ 5 ಕೋಟಿ ಫಲಾನುಭವಿಗಳಿಗೆ ಸಿಗಲಿದೆ. ಮುಂದಿನ ಐದು ವರ್ಷಗಳಲ್ಲಿ ಬಡತನವನ್ನು ಸಂಪೂರ್ಣವಾಗಿ ಹೋಗಲಾಡಿಸುವ ಕೆಲಸವನ್ನು ನಾವು ಮತ್ತು ನಮ್ಮ ಯೋಜನೆಗಳು ಮಾಡಲಿವೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಕಳೆದ ಐದು ವರ್ಷಗಳಲ್ಲಿ ದೇಶದ ಬಡವರು, ಸಣ್ಣ ವ್ಯಾಪಾರಿಗಳಿಗೆ ಮತ್ತು ರೈತರಿಗಾಗಿ ಯಾವ ಯೋಜನೆಯನ್ನು ನೀಡಲಿಲ್ಲ. ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಕೇವಲ 15 ಉದ್ಯಮಿಗಳ ಅಭಿ ವೃದ್ಧಿಗಾಗಿ ಕೆಲಸ ಮಾಡಿದೆ. ರಫೇಲ್ ಡೀಲ್ ಅನಿಲ್ ಅಂಬಾನಿ ನೀಡಲು ಎಲ್ಲ ಕಾನೂನುಗಳನ್ನು ಉಲ್ಲಂಘಿಸಿ 30 ಸಾವಿರ ಕೋಟಿ ಹಣವನ್ನು ಅವರ ಜೇಬಿನಲ್ಲಿ ಹಾಕಿದರು. 15 ಉದ್ಯಮಿಗಳ ಮೂರೂವರೆ ಲಕ್ಷ ಕೋಟಿ ಸಾಲವನ್ನು ಮನ್ನಾ ಮಾಡಿದರು. ರೈತರ ಸಾಲಮನ್ನಾ ಮಾಡಲು ಹಣ ಇಲ್ಲವೆಂದು ಮೋದಿ ಮತ್ತು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳುವ ಮೂಲಕ ಇಬ್ಬಗೆಯ ನೀತಿ ಯನ್ನು ಅನುಸರಿಸಲಾಗುತ್ತದೆ ಎಂದು ದೂರಿದರು.

ನೆಲಮಂಗಲ ಬಳಿ ಇರುವ ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಮೈದಾನದಲ್ಲಿ ನಡೆದ ಕಾಂಗ್ರೆಸ್-ಜೆಡಿಎಸ್ ಸಮಾವೇಶದಲ್ಲಿ ಕೈ ಅಧ್ಯಕ್ಷ ರಾಹುಲ್ ಗಾಂಧಿ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ, ಎರಡೂ ಪಕ್ಷಗಳ ಕಾರ್ಯಕರ್ತರಲ್ಲಿ ವಿಶೇಷ ಮನವಿ ಮಾಡಿಕೊಂಡರು. ಕಾರ್ಯಕ್ರಮಕ್ಕೆ ತಡವಾಗಿ ಬಂದಿದ್ದಕ್ಕೆ ಭಾಷಣದ ಆರಂಭದಲ್ಲಿಯೇ ಎಲ್ಲರಲ್ಲಿ ಕ್ಷಮೆ ಕೇಳಿ ತಮ್ಮ ಮಾತನ್ನು ಆರಂಭಿಸಿದ ರಾಹುಲ್, ರಾಜ್ಯದಲ್ಲಿ ಸ್ಪರ್ಧೆ ಮಾಡಿರುವ ಎಲ್ಲ ಜೆಡಿಎಸ್ ಅಭ್ಯರ್ಥಿಗಳ ಗೆಲುವಿಗಾಗಿ ಕಾಂಗ್ರೆಸ್ ಕಾರ್ಯಕರ್ತರು ಕೆಲಸ ಮಾಡಬೇಕು. ಅಂತೆಯೇ ಜೆಡಿಎಸ್ ನಾಯಕರು, ಕಾರ್ಯಕರ್ತರು ಕಾಂಗ್ರೆಸ್ ಅಭ್ಯರ್ಥಿಗಳಿಗೆ ಒಟ್ಟಾಗಿ ಕೆಲಸ ಮಾಡಬೇಕು ಎಂದು ಮನವಿ ಮಾಡಿಕೊಂಡರು. ದೇಶದಲ್ಲಿ ಯಾವುದೇ ಹಣದ ಕೊರತೆ ಇಲ್ಲ. ವಿಜಯ್ ಮಲ್ಯ, ನೀರವ್ ಮೋದಿ, ಚೋಕ್ಸಿ ಇಂತಹ ವ್ಯಕ್ತಿಗಳಿಗೆ ಹಣ ನೀಡಲು ಕೇಂದ್ರದ ಬಳಿ ಹಣವಿದೆ. ಆದರೆ ದೇಶದ ರೈತರಿಗೆ, ಕೂಲಿಕಾರರಿಗೆ, ಶಿಕ್ಷಣ, ಆಸ್ಪತ್ರೆಯ ಅಭಿವೃದ್ಧಿಗಳಿಗೆ ಇವರ ಬಳಿ ಹಣ ಇಲ್ಲ ಟೀಕಿಸಿದರು. ಬಿಜೆಪಿ ರಾಜ್ಯಾಧ್ಯಕ್ಷ ಯಡಿ ಯೂರಪ್ಪ ಕರ್ನಾಟಕದ ರೈತರು ಮತ್ತು ಸಾಮಾನ್ಯ ವರ್ಗದ ಜನರ ಜೇಬಿನಿಂದ ಹಣ ತೆಗೆದು ದೆಹಲಿಯ ಬಿಜೆಪಿ ನಾಯಕರಿಗೆ 1800 ಕೋಟಿ ನೀಡುತ್ತಾರೆ. ಈ ಎಲ್ಲವನ್ನು ನೀವೆಲ್ಲರೂ ಗಮನಿಸಬೇಕಿದೆ. ಕಾಂಗ್ರೆಸ್ ಅಧಿಕಾರ ಬಂದ ಬಳಿಕ ರೈತರ ಖಾತೆಗೆ ತಿಂಗಳಿಗೆ 6 ಸಾವಿರ ರೂ. ನೀಡಲು ಪಕ್ಷದಲ್ಲಿ ಚಿಂತನೆ ನಡೆಸಲಾಗಿದೆ ಎಂದರು.

ನೋಟುಗಳ ಅಮಾನ್ಯೀಕರಣ ಮಾಡುವ ಮೂಲಕ ದೇಶದ ಜನರ ಜೇಬಿನಿಂದ ಹಣ ತೆಗೆದುಕೊಂಡರು. ನೋಟ್ ಬ್ಯಾನ್ ನಿಂದ ಹೊರ ಉಳಿದವರಿಂದ ಹಣ ಪಡೆಯಲು ಗಬ್ಬರ್ ಸಿಂಗ್ ಟ್ಯಾಕ್ಸ್ ಜಾರಿಗೆ ತಂದರು. 2019ರಲ್ಲಿ ನಾವು ಅಧಿಕಾರಕ್ಕೆ ಹೊಸ ಸರಳವಾದ, ಅತ್ಯಂತ ಕಡಿಮೆ ತೆರಿಗೆ ನಿಯಮಗಳನ್ನು ಜಾರಿಗೆ ತರಲಿದ್ದೇವೆ. ಬ್ಯಾಂಕ್‍ನಲ್ಲಿದ್ದ ಬಹುತೇಕ ಹಣವನ್ನು ಮೋದಿ ತಮ್ಮ ಮಿತ್ರರಿಗೆ ನೀಡಿದರು. ಮೇಕ್ ಇನ್ ಇಂಡಿಯಾ, ಸ್ಟಾರ್ಟ್ ಅಪ್ ಇಂಡಿಯಾ ಸೇರಿದಂತೆ ಅನೇಕ ಯೋಜನೆ ಗಳನ್ನು ತಂದರೂ ದೇಶದಲ್ಲಿ ನಿರುದ್ಯೋಗ ತಾಂಡವಾಡುತ್ತಿದೆ. ದೇಶದ ಎಲ್ಲ ಬ್ಯಾಂಕ್‍ಗಳ ಕೀಲಿಯನ್ನು ತಮ್ಮ ಮಿತ್ರರಿಗೆ ನೀಡಿ ದೋಚಲು ಹೇಳಿದರು. ಕರ್ನಾಟಕ ಭಾರತದ ನವೋದ್ಯಮದ ರಾಜಧಾನಿಯಾಗಿದ್ದು, ನವ ಉದ್ಯಮ ಸ್ಥಾಪನೆಯ ನಿಯಮ ಗಳನ್ನು ಸರಳೀಕರಣಗೊಳಿಸಲಾವುದು. ರಾಜ್ಯದಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಮೂಲಕ ಬಿಜೆಪಿಯನ್ನು ದೂರವಿಟ್ಟಿದ್ದೇವೆ. ಅಂತೆಯೇ ದೆಹಲಿಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರು ಇಡಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕರ್ನಾಟಕದಲ್ಲಿ ಸೋಲಿಸುತ್ತೇವೆ, ಕೇಂದ್ರದಲ್ಲೂ ಬಿಜೆಪಿಯನ್ನು ಸೋಲಿಸುತ್ತೇವೆ. ಯಾವುದೇ ಅಭಿವೃದ್ಧಿ ಮಾಡದೇ ಮೋದಿ ದೇಶದಲ್ಲಿ ಸುಳ್ಳು ಹೇಳುತ್ತಿದ್ದಾರೆ ಹೀಗೆ ಹೇಳುವ ಮೂಲಕ ದೋಸ್ತಿ ನಾಯಕರು ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಕೋಮುವಾದಿ ಶಕ್ತಿಯನ್ನು ದೂರವಿಡಲು ಇಂದು ನಾವೆಲ್ಲ ಒಂದಾಗಿದ್ದೇವೆ. ಮತ್ತೊಮ್ಮೆ ಅಧಿಕಾರಕ್ಕೆ ಬರಲು ಪ್ರಧಾನಿ ಮೋದಿ ಕುತಂತ್ರಗಳನ್ನು ಮಾಡುತ್ತಿದ್ದಾರೆ. ಹಾಗಾಗಿ ಎಲ್ಲ ಜಾತ್ಯಾತೀ ತರು ಇಂದು ಒಂದಾಗಬೇಕಿದೆ. ಇಂದು ರೈತರು ಪ್ರತಿನಿತ್ಯ ಕಣ್ಣೀರು ಹಾಕುತ್ತಿದ್ದಾರೆ. ಮೋದಿ ಶ್ರೀಮಂತರಿಗಷ್ಟೇ ಚೌಕಿದಾರ. ದೇಶದಲ್ಲಿ ಉದ್ಯೋಗ ಪ್ರಮಾಣ ಹೆಚ್ಚಿಸುವಲ್ಲಿ ಬಿಜೆಪಿ ಸರ್ಕಾರ ವಿಫಲವಾಗಿದೆ. ನರೇಂದ್ರ ಮೋದಿ ತಮ್ಮ ಐದು ವರ್ಷದ ಆಡಳಿತಾವಧಿಯಲ್ಲಿ ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುತ್ತಿದ್ದಾರೆ. ಬಿಜೆಪಿ ಆಡಳಿತಾವಧಿಯಲ್ಲಿ ದಲಿತರು ಭಯದಿಂದ ಬದುಕುವಂತಾಗಿದೆ. ಹಾಗಾಗಿ ಈ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿಗೆ ಮತ ನೀಡಬೇಕೆಂದು ಮನವಿ ಮಾಡಿಕೊಂಡರು.

ಮೋದಿ ಮಹಾನ್ ಸುಳ್ಳುಗಾರ: ಲೋಕಸಭಾ ಚುನಾವಣೆ ಸಂಬಂಧ ದೇಶದ ಜನರಿಗೆ ಐಕ್ಯತೆ ಸಂದೇಶ ರವಾನೆ ಮಾಡಲು ಈ ಬೃಹತ್ ಸಮಾವೇಶ ಆಯೋಜನೆ ಮಾಡಲಾಗಿದೆ. ಕಾಂಗ್ರೆಸ್ ನಾಯಕತ್ವದಲ್ಲಿ ಮುಂದಿನ 5 ವರ್ಷ ಅಧಿಕಾರ ನೀಡುವ ಅಗತ್ಯವಿದೆ. ಹಾಗಾಗಿ ಕಾಂಗ್ರೆಸ್ ಬಲಪಡಿಸಲು ನಾಡಿನ ಸಮಗ್ರ ಜನತೆ ಸಹಕರಿಸ ಬೇಕು. ಮೋದಿ ಬಣ್ಣದ ಮಾತಿಗೆ ಬೆಲೆ ಕೊಡಬಾರದು. ಮೋದಿ ಮಹಾನ್ ಸುಳ್ಳುಗಾರ ಎಂದು ಸಿಎಂ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು. ಲೋಕಸಭೆಯ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂ ರಾವ್, ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಡಿಸಿಎಂ ಜಿ.ಪರಮೇಶ್ವರ್ ಸೇರಿದಂತೆ ಕಾಂಗ್ರೆಸ್-ಜೆಡಿಎಸ್ ಶಾಸಕರು, ನಾಯಕರು ಹಾಗು ಕಾರ್ಯಕರ್ತರು ಭಾಗಿಯಾಗಿದ್ದರು.

Translate »