ಗೊಂದಲದ ಗೂಡಾದ ನಂಜನಗೂಡು ನಗರಸಭೆಯ ವಿಶೇಷ ಸಾಮಾನ್ಯ ಸಭೆ
ಮೈಸೂರು

ಗೊಂದಲದ ಗೂಡಾದ ನಂಜನಗೂಡು ನಗರಸಭೆಯ ವಿಶೇಷ ಸಾಮಾನ್ಯ ಸಭೆ

September 12, 2018

ನಾಲ್ವರು ಸದಸ್ಯರಿಂದ ಪ್ರತಿಭಟನೆ, 3 ಟೆಂಡರ್‍ಗೆ ಅನುಮೋದನೆ
ನಂಜನಗೂಡು: ನಗರಸಭೆಯಲ್ಲಿ ಇಂದು ವಿಶೇಷ ಸಾಮಾನ್ಯ ಸಭೆ ನಗರಸಭಾ ಅಧ್ಯಕ್ಷೆ ಪುಷ್ಪಲತಾ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಪ್ರಾರಂಭದಲ್ಲೇ ಸದಸ್ಯರ ಪರಸ್ಪರ ವಾಕ್ ಸಮರ ನಡೆದು 2 ತಾಸಿ ನವರೆಗೆ ನಾಲ್ವರು ಸದಸ್ಯರು ನಮ್ಮ ವಾರ್ಡ್‍ಗಳ ಅಭಿವೃದ್ಧಿಗೆ ನಗರೋತ್ಥಾನ ಯೋಜನೆಯಡಿಯಲ್ಲಿ ಕಾಮಗಾರಿ ಕೈಗೊಂಡಿಲ್ಲ ಎಂದು ಪ್ರತಿಭಟಿಸಿದರು.

ಇಂದು ಮಧ್ಯಾಹ್ನ ಸಾಮಾನ್ಯ ವಿಶೇಷ ಅಧಿವೇಶನ ಪ್ರಾರಂಭವಾಯಿತು. ಸದಸ್ಯರಾದ ನಿಂಗಪ್ಪ, ಖಾಲಿದ್, ಬಾಬು, ಇಂದ್ರಾಣಿ ಅವರು ತಮ್ಮ ಆಸನದಿಂದ ಎದ್ದು ನಗರ ಸಭಾ ಅಧ್ಯಕ್ಷರ ಬಳಿ ನಿಂತು ನಗರೋತ್ಥಾನ ಯೋಜನೆಯಡಿಯಲ್ಲಿ 17ಕೋಟಿ ರೂ. ಅಭಿವೃದ್ಧಿಗೆ ಮಂಜೂರಾಗಿದ್ದು, ಕೆಲವು ವಾರ್ಡ್‍ಗಳಿಗೆ ಹೆಚ್ಚು ಹಣವನ್ನು ನೀಡಿ ನಮ್ಮ ವಾರ್ಡ್‍ಗಳಿಗೆ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ. ನಗರಸಭಾ ಅಧ್ಯಕ್ಷರು ಮತ್ತು ಅಧಿಕಾರಿಗಳು ತಮ್ಮ ಪ್ರತಿಷ್ಠೆಯಿಂದ ಕೆಲವು ವಾರ್ಡ್‍ಗಳ ಸೌಲಭ್ಯ ವನ್ನು ಕೈಬಿಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇವರ ಪ್ರತಿಭಟನೆಗೆ ಅಧ್ಯಕ್ಷರು ಮೌನ ವಹಿಸಿದಾಗ, ನಗರಸಭಾ ಆಯುಕ್ತ ವಿಜಯ ಅವರು ಮಾತನಾಡಿ, ನಗರೋತ್ಥಾನ ಮೊದಲನೇ ಹಂತದ ಕಾಮಗಾರಿಯನ್ನು ಮಾಡುವಾಗ ಸದಸ್ಯರ ಒಪ್ಪಿಗೆಯನ್ನು ಪಡೆದು ಎಲ್ಲಾ ವಾರ್ಡ್‍ಗಳಲ್ಲೂ ಅಭಿವೃದ್ಧಿಪಡಿಸ ಬೇಕಾಗುತ್ತದೆ. ಎರಡನೇ ಮತ್ತು 3ನೇ ಹಂತ ಮಾಡುವಾಗ ಅಭಿವೃದ್ಧಿ ಕೆಲಸ ಗಳನ್ನು ಉಸ್ತುವಾರಿ ಸಚಿವರ ಅಧ್ಯಕ್ಷತೆ ಯಲ್ಲಿ ಉನ್ನತ ಸಮಿತಿ ತೀರ್ಮಾನ ಮಾಡಿ ರುತ್ತದೆ. ಇದನ್ನು ಪ್ರಶ್ನಿಸುವ ಹಕ್ಕು ಸದಸ್ಯ ರಿಗಿಲ್ಲ. ಸದಸ್ಯರು ತಮ್ಮ ಅಭಿಪ್ರಾಯವನ್ನು ಮಂಡಿಸಬಹುದು ಅಷ್ಟೆ ಎಂದರು.

ಆಯುಕ್ತರ ಸಮಜಾಯಿಷಿಗೆ ನಾಲ್ವರು ಸದಸ್ಯರು ಸಮಾಧಾನಗೊಳ್ಳದೇ ಇವರ ಪೈಕಿ ಇಂದ್ರಾಣಿ ಮತ್ತು ನಿಂಗಪ್ಪ ಸಭಾತ್ಯಾಗ ಮಾಡಿ ಹೊರ ನಡೆದರು. ಈ ಮಧ್ಯೆ ಹಿರಿಯ ಸದಸ್ಯ ಸಿ.ಎಂ.ಶಂಕರ್ ಮತ್ತು ಬಿಜೆಪಿಯ ಹೆಚ್.ಎಸ್.ಮಹದೇವಸ್ವಾಮಿ ನಡುವೆ ವಾಕ್ ಸಮರ ನಡೆಯಿತು.

ಇಷ್ಟೆಲ್ಲಾ ಗೊಂದಲದ ಮಧ್ಯೆಯು ಬೀದಿ ದೀಪಗಳ ನಿರ್ವಹಣೆ, ಡಾ.ಬಿ.ಆರ್. ಅಂಬೇಡ್ಕರ್ ಭವನಕ್ಕೆ ಅಡುಗೆ ಪಾತ್ರೆಗಳನ್ನು ಒದಗಿಸುವ ಟೆಂಡರ್, 13ನೇ ಮತ್ತು 14ನೇ ಹಣಕಾಸು ಯೋಜನೆಯಡಿಯಲ್ಲಿ ವಿವಿಧ ಅಭಿವೃದ್ಧಿ ಕೆಲಸಗಳಿಗೆ ಟೆಂಡರ್ ಕರೆಯಲು ಒಪ್ಪಿಗೆ ಸೂಚಿಸಿತು. ಸಭೆಯಲ್ಲಿ ನಗರಸಭಾ ಸದಸ್ಯರಾದ ಮಂಜುನಾಥ್, ಆನಂದ್, ಸುಂದರ್ ರಾಜ್, ರಾಜೇಶ, ಡಿ.ಆರ್.ರಾಜು, ವಿಜಯಾಂಭಿಕೆ, ನಟೇಶ್, ಆಯುಕ್ತ ವಿಜಯ್, ಉಪಾಧ್ಯಕ್ಷ ಪ್ರದೀಪ್, ಸ್ಥಾಯಿ ಸಮಿತಿ ಅಧ್ಯಕ್ಷ ರಾಮಕೃಷ್ಣ, ಇಂಜಿನಿಯರ್ ಭಾಸ್ಕರ್ ಉಪಸ್ಥಿತರಿದ್ದರು.

Translate »