ಲೋಕಸಭಾ ಚುನಾವಣೆಗೆ ದೋಸ್ತಿ ಹೊಂದಾಣಿಕೆ ಕಾಂಗ್ರೆಸ್ 18, ಜೆಡಿಎಸ್ 10
ಮೈಸೂರು

ಲೋಕಸಭಾ ಚುನಾವಣೆಗೆ ದೋಸ್ತಿ ಹೊಂದಾಣಿಕೆ ಕಾಂಗ್ರೆಸ್ 18, ಜೆಡಿಎಸ್ 10

February 26, 2019

ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಒಗ್ಗೂಡಿ ಹೋರಾಡಲು ಕಾಂಗ್ರೆಸ್-ಜೆಡಿಎಸ್ ನಿರ್ಧರಿಸಿದ್ದು, ಇಪ್ಪತ್ತೆಂಟು ಕ್ಷೇತ್ರಗಳ ಪೈಕಿ ಕಾಂಗ್ರೆಸ್ 18, ಜೆಡಿಎಸ್ 10 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿವೆ.

ಉಭಯ ಪಕ್ಷಗಳಿಗೆ ಯಾವ ಯಾವ ಕ್ಷೇತ್ರ ಎಂಬುದನ್ನು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್‍ಗಾಂಧಿ ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡ ದೆಹಲಿಯಲ್ಲಿ ಮಾರ್ಚ್ 5 ರಂದು ನಡೆಯಲಿರುವ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿ ಸಲಿದ್ದಾರೆ. ಮೈತ್ರಿ ಮೂಲಕ ಚುನಾವಣೆ ಎದುರಿಸಿದರೆ, ಕರ್ನಾಟಕ ವೊಂದರಲ್ಲೇ 22 ರಿಂದ 23 ಕ್ಷೇತ್ರಗಳನ್ನು ಬುಟ್ಟಿಗೆ ಹಾಕಿಕೊಳ್ಳ ಬಹುದು ಎಂಬ ಲೆಕ್ಕಾಚಾರಕ್ಕೆ ಎರಡೂ ಪಕ್ಷಗಳು ಬಂದಿವೆ.

ಕುಮಾರಕೃಪಾ ಅತಿಥಿ ಗೃಹದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್. ವಿಶ್ವನಾಥ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹಾಗೂ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ನಡೆಸಿದ ಉಭಯ ಪಕ್ಷಗಳ ನಾಯಕರ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಪ್ರತಿ ಲೋಕಸಭಾ ಕ್ಷೇತ್ರದ ಬಗ್ಗೆಯು ಈ ನಾಯಕರು ಪರಾಮರ್ಶೆ ಮಾಡಿ ಕಳೆದ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ ಉಭಯ ಪಕ್ಷಗಳು ಒಟ್ಟಿಗೆ ಪಡೆದಿರುವ ಮತಗಳು ಮತ್ತು ಬಿಜೆಪಿ ಪಡೆದಿರುವ ಮತಗಳನ್ನು ತಾಳೆ ಹಾಕಿದ್ದಾರೆ. ಒಟ್ಟಾಗಿ ಚುನಾವಣೆ ಎದುರಿಸುವುದರಿಂದ ಕನಿಷ್ಠ 22 ರಿಂದ 23 ಸ್ಥಾನಗಳನ್ನು ಗೆಲ್ಲಬಹು ದಾಗಿದೆ. ಇದಕ್ಕಾಗಿ ಕೊಂಡು ಕೊಳ್ಳುವ ನೀತಿ ಅನುಸರಿಸೋಣ ಎಂಬ ತೀರ್ಮಾನಕ್ಕೆ ನಾಯಕರು ಬಂದಿದ್ದಾರೆ. ಸೀಟುಗಳ ಹಂಚಿಕೆಯಾಗಿದೆ. ಆದರೆ ಎರಡೂ ಮೂರು ಕ್ಷೇತ್ರಗಳಿಗೆ ಉಭಯ ಪಕ್ಷದ ನಾಯಕರು ಒತ್ತು ಕೊಟ್ಟಿರುವುದರಿಂದ ಇದನ್ನು ರಾಷ್ಟ್ರೀಯ ನಾಯಕರೇ ತೀರ್ಮಾನ ಮಾಡಿಕೊಳ್ಳಲಿ ಎಂದು ಬಿಟ್ಟಿದ್ದಾರೆ.

ಅದರಲ್ಲೂ ಹಾಲಿ ಕಾಂಗ್ರೆಸ್ ಸಂಸದರ ಕ್ಷೇತ್ರಗಳೇ ಹಂಚಿಕೆ ವಿಷಯದಲ್ಲಿ ಕಬ್ಬಿಣದ ಕಡಲೆಯಾಗಿ ಪರಿಣಮಿಸಿದೆ. ನಮಗೆ ಸ್ಥಾನಗಳು ಮುಖ್ಯ. ಇದಕ್ಕಾಗಿ ಕಬ್ಬಿಣದ ಕಡಲೆಯನ್ನೂ ನುಣ್ಣಗೆ ಮಾಡೋಣ. ನಮ್ಮಿಂದ ಯಾವುದೇ ತೊಂದರೆಯಾಗುವುದಿಲ್ಲ ಎಂದು ಕಾಂಗ್ರೆಸ್ ನಾಯಕರು ಜೆಡಿಎಸ್ ಅಧ್ಯಕ್ಷರಿಗೆ ಭರವಸೆ ನೀಡಿದ್ದಾರೆ.

ಶನಿವಾರ ಇಲ್ಲವೆ ಭಾನುವಾರ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸಮನ್ವಯ ಸಮಿತಿ ಸಭೆ ಜರುಗಲಿದೆ. ಅಲ್ಲಿಯೂ ಒಂದು ಸುತ್ತಿನ ಮಾತುಕತೆ ನಡೆದು, ಅಲ್ಲಿ ತೆಗೆದುಕೊಂಡ ನಿರ್ಣಯಗಳನ್ನು ಉಭಯ ಪಕ್ಷಗಳ ರಾಷ್ಟ್ರೀಯ ನಾಯಕರಿಗೆ ರವಾನಿಸಲು ಇಂದಿನ ಸಭೆ ನಿರ್ಧರಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಕೋಮುವಾದಿ ಬಿಜೆಪಿಯನ್ನು ಬಗ್ಗು ಬಡಿಯುವುದನ್ನೇ ಮುಖ್ಯ ಗುರಿಯಾಗಿಸಿಕೊಂಡು ಮಾತುಕತೆ ನಡೆಸಲಾಗಿದೆ.

ತ್ರಿಕೋನ ಸ್ಪರ್ಧೆ ಏರ್ಪಟ್ಟರೆ ಬಿಜೆಪಿಗೆ ಲಾಭವಾಗುತ್ತದೆ.ಹೀಗಾಗಿ ಒಮ್ಮನಸ್ಸಿನಿಂದ ಬಿಜೆಪಿಯೇತರ ಮತಗಳನ್ನು ಸೆಳೆಯಬೇಕು. ಹಾಗೆ ಮಾಡಿದರೆ ಮೈತ್ರಿ ಪಕ್ಷಗಳು ದೊಡ್ಡ ಗೆಲುವು ಸಾಧಿಸಲಿವೆ ಎಂದು ಸಭೆ ಅಭಿಪ್ರಾಯಪಟ್ಟಿತು.

ಸಭೆಯ ನಂತರ ಸುದ್ದಿಗಾರರ ಜತೆ ಮಾತನಾಡಿದ ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್, ವರಿಷ್ಠರ ಆದೇಶದಂತೆ ನಾನು ಮತ್ತು ಕೆಪಿಸಿಸಿ ಅಧ್ಯಕ್ಷರು ಜೆಡಿಎಸ್ ನಾಯಕರ ಜೊತೆ ಸಮಾಲೋಚಿಸಿ, ಲೋಕಸಭಾ ಚುನಾವಣೆಯಲ್ಲಿ ಉಭಯ ಪಕ್ಷಗಳು ಸೇರಿ ಕನಿಷ್ಠ 25 ಕ್ಷೇತ್ರಗಳಲ್ಲಿ ಗೆಲ್ಲಬೇಕು ಎಂಬ ತೀರ್ಮಾನಕ್ಕೆ ಬಂದಿದ್ದೇವೆ.

ನಮಗೆ ಸೀಟುಗಳ ಸಂಖ್ಯೆ ಮುಖ್ಯವಲ್ಲ, ಬಿಜೆಪಿಯನ್ನು ಮಣಿಸಿ, ಉಭಯ ಪಕ್ಷದ
ಯಾವುದೇ ಅಭ್ಯರ್ಥಿಯಾದರೂ ಸರಿ, ಹೆಚ್ಚು ಸ್ಥಾನ ಗಳಿಸುವುದೇ ನಮ್ಮ ಗುರಿ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ಸೀಟು ಹಂಚಿಕೆಯ ವಿಷಯದಲ್ಲಿ ಉತ್ತಮ ರೀತಿಯ ಚರ್ಚೆಯಾಗಿದೆ. ನಮ್ಮಲ್ಲಿ ಯಾವುದೇ ಗೊಂದಲಗಳಿಲ್ಲ. ಅಂತಿಮವಾಗಿ ಕೋಮುವಾದಿ ಶಕ್ತಿಗಳನ್ನು ದೂರವಿಡಬೇಕು ಎಂಬುದೇ ನಮ್ಮ ಗುರಿ ಎಂದರು.

ಹೀಗಾಗಿ ಗೆಲ್ಲುವ ಅಭ್ಯರ್ಥಿಗಳು ಯಾರು ಎಂಬುದನ್ನು ಪ್ರಮುಖ ಮಾನದಂಡವಾಗಿ ಇರಿಸಿಕೊಳ್ಳಲಾಗಿದೆ.ಎಲ್ಲಿ ಯಾವ ಪಕ್ಷದ ಅಭ್ಯರ್ಥಿಗಳಿಗೆ ಗೆಲ್ಲಲು ಉತ್ತಮ ಅವಕಾಶವಿದೆ ಎಂಬುದನ್ನು ಗಮನಿಸಿದ್ದೇವೆ ಎಂದರು. ಉಭಯ ಪಕ್ಷಗಳಿಗೂ ಈ ವಿಷಯದಲ್ಲಿ ಸ್ವಪ್ರತಿಷ್ಟೆ ಇಲ್ಲ.ನಾವು ಗೆಲ್ಲುವ ಸಾಧ್ಯತೆ ಇರುವಲ್ಲಿ ನಮಗೆ,ಅವರು ಗೆಲ್ಲುವ ಜಾಗದಲ್ಲಿ ಅವರ ಅಭ್ಯರ್ಥಿಗಳಿಗೆ ಟಿಕೆಟ್ ನೀಡಬೇಕು ಎಂಬುದು ನಮ್ಮ ತೀರ್ಮಾನ ಎಂದು ಹೇಳಿದರು. ಮಂಡ್ಯದ ವಿಷಯವೇ ಇರಲಿ, ಬೇರೆ ಯಾವುದೇ ಕ್ಷೇತ್ರದ ವಿಷಯವೇ ಇರಲಿ, ಅಂತಿಮವಾಗಿ ಗೆಲ್ಲುವುದು ಮುಖ್ಯ. ಹೀಗಾಗಿ ಯಾವ ಕ್ಷೇತ್ರ,ಏನು ಸ್ಥಿತಿ ಅನ್ನುವ ಕುರಿತು ಇವತ್ತು ಹೆಚ್ಚು ಹೇಳುವುದಿಲ್ಲ ಎಂದು ನುಡಿದರು.

ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ಮಾತನಾಡಿ,ಗೆಲುವು ಮಾನದಂಡವಾದಾಗ ಉಭಯ ಪಕ್ಷಗಳು ಹೇಗೆ ನಡೆದುಕೊಳ್ಳಬೇಕೋ ನಾವೂ ಹಾಗೆಯೇ ನಡೆದುಕೊಳ್ಳುತ್ತಿದ್ದೇವೆ. ಮಾತುಕತೆ ಸೌಹಾರ್ದಯುತವಾಗಿ ಆಗಿದೆ ಎಂದರು.

ಯಾರಿಗೆ ಎಷ್ಟು ಸೀಟು ಅನ್ನುವ ಕುರಿತು ನಾವೇನೂ ಅಂತಿಮ ನಿರ್ಧಾರಕ್ಕೆ ಬಂದಿಲ್ಲ. ಅದನ್ನು ವರಿಷ್ಟರು ಅಂತಿಮಗೊಳಿಸುತ್ತಾರೆ.ಸಮನ್ವಯ ಸಮಿತಿ ಸಭೆಯಲ್ಲೂ ಈ ಕುರಿತು ವಿವರವಾಗಿ ಚರ್ಚಿಸುತ್ತೇವೆ ಎಂದು ಹೇಳಿದರು. ಮಾತುಕತೆ ನಡೆದಿರುವಾಗ ಉಭಯ ಪಕ್ಷಗಳ ನಡುವೆ ಭಿನ್ನಾಭಿಪ್ರಾಯ ಅಂತೆಲ್ಲ ಪುಕಾರು ಹಬ್ಬಿಸುವ ಕೆಲಸವಾಗುತ್ತಿದೆ. ಆದರೆ ಯಾವ ಭಿನ್ನಾಭಿಪ್ರಾಯವೂ ಇಲ್ಲ ಎಂದು ನುಡಿದರು. ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಮಾತನಾಡಿ, ಮುಂದಿಡಬೇಕಾದ ಹೆಜ್ಜೆಗಳ ಕುರಿತು ಸಮಗ್ರವಾಗಿ ಚರ್ಚಿಸಿದ್ದೇವೆ. ದೇವೇಗೌಡರು ಹಾಗೂ ಕುಮಾರಸ್ವಾಮಿಯವರ ಬಾವನೆಗಳೇನಿವೆ ಎಂದು ನಾನು ಸಭೆಗೆ ವಿವರಿಸಿದ್ದೇನೆ ಅದಕ್ಕೆ ಕಾಂಗ್ರೆಸ್ ನಾಯಕರು ಸ್ಪಂದಿಸಿದ್ದಾರೆ ಎಂದರು.

Translate »