ಲೋಕಸಭಾ ಚುನಾವಣಾ ಕರ್ತವ್ಯದಿಂದ  ನುಣುಚಿಕೊಳ್ಳುವವರ ವಿರುದ್ಧ ಕಠಿಣ ಕ್ರಮ
ಮೈಸೂರು

ಲೋಕಸಭಾ ಚುನಾವಣಾ ಕರ್ತವ್ಯದಿಂದ ನುಣುಚಿಕೊಳ್ಳುವವರ ವಿರುದ್ಧ ಕಠಿಣ ಕ್ರಮ

March 25, 2019

ಮೈಸೂರು: ಸಾರ್ವತ್ರಿಕ ಚುನಾವಣೆಯ ಕರ್ತವ್ಯದಿಂದ ತಪ್ಪಿಸಿಕೊಳ್ಳಲು ಯತ್ನಿಸುವ ಸಿಬ್ಬಂದಿಗಳಿಗೆ ಬಿಸಿ ಮುಟ್ಟಿಸಲು ಚುನಾವಣಾ ಆಯೋಗ ಮುಂದಾಗಿದ್ದು, ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಸಿಬ್ಬಂದಿಗಳ ಮಾಹಿತಿ ಪಡೆದು ಟ್ರೈಸ್ ಸಾಫ್ಟ್‍ವೇರ್‍ನಲ್ಲಿ ಸಂಗ್ರಹಿಸಿಟ್ಟಿದೆ. ಆ ಮೂಲಕ ಸುಳ್ಳು ನೆಪ ಹೇಳಿ ಕರ್ತವ್ಯದಿಂದ ಮುಕ್ತಿ ಪಡೆಯಲು ಬರುವವರಿಗೆ ಬಿಸಿ ಮುಟ್ಟಿಸಲು ಸಜ್ಜಾಗಿದೆ.

ವಿಧಾನಸಭಾ, ಲೋಕಸಭಾ ಹಾಗೂ ವಿವಿಧ ಸ್ಥಳೀಯ ಸಂಸ್ಥೆಗಳಿಗೆ ನಡೆಯುವ ಚುನಾವಣೆಯಲ್ಲಿ ಕರ್ತವ್ಯಕ್ಕೆ ನಿಯೋ ಜನೆಗೊಂಡ ಸಿಬ್ಬಂದಿಗಳಲ್ಲಿ ಹಲವರು ವಿವಿಧ ಕಾರಣ ನೀಡಿ ಕರ್ತವ್ಯದಿಂದ ಮುಕ್ತಿ ನೀಡುವಂತೆ ದುಂಬಾಲು ಬೀಳುತ್ತಿದ್ದದ್ದು ಸಾಮಾನ್ಯವಾಗಿತ್ತು. ಮತ ಯಂತ್ರಗಳನ್ನು ಮತಗಟ್ಟೆಗೆ ಕೊಂಡೊಯ್ಯುವ ಸಂದರ್ಭದಲ್ಲಿಯೂ ಕರ್ತವ್ಯ ದಿಂದ ಬಿಡುಗಡೆ ಮಾಡುವಂತೆ ಸಿಬ್ಬಂದಿಗಳು ಗೋಗರೆ ಯುತ್ತಿದ್ದನ್ನು ಕಾಣಬಹುದಾಗಿತ್ತು. ಈ ಎಲ್ಲಾ ಅಂಶವನ್ನು ಮುಂದಿಟ್ಟುಕೊಂಡು ಈ ಬಾರಿ ಚುನಾವಣಾ ಆಯೋಗ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಸಿಬ್ಬಂದಿಗಳ ಮಾಹಿತಿ ಯನ್ನು ಆಯಾ ಇಲಾಖೆ ಉಸ್ತುವಾರಿ (ಡಿಡಿಓ)ಗಳಿಂದ ಪಡೆದಿದೆ. ಸಂಗ್ರಹಿಸಲಾದ ಸಿಬ್ಬಂದಿಗಳ ಮಾಹಿತಿಯನ್ನು ಟ್ರೈಸ್ ಸಾಫ್ಟ್‍ವೇರ್‍ನಲ್ಲಿ ದಾಖಲಿಸಲಾಗಿದ್ದು, ಕುಂಟು ನೆಪ ಹೇಳಿ ಕರ್ತವ್ಯದಿಂದ ಬಿಡುಗಡೆ ಮಾಡುವಂತೆ ಬರುವವರ ನಿಜ ಬಣ್ಣವನ್ನು ಈ ಅಂಶ ಬಯಲು ಮಾಡಲಿದೆ.

ಏನೇನು ಮಾಹಿತಿ: ಈ ವ್ಯವಸ್ಥೆಯಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಸಿಬ್ಬಂದಿಗಳ ವಿಳಾಸ, ಕರ್ತವ್ಯ ನಿರ್ವಹಿಸುತ್ತಿರುವ ಹುದ್ದೆ, ವಯಸ್ಸು, ನಿವೃತ್ತಿಯ ಅಂಚಿನಲ್ಲಿರುವರೇ, ದೀರ್ಘಕಾಲದ ಅನಾರೋಗ್ಯ ಕ್ಕೀಡಾಗಿದ್ದಾರೆಯೇ? ಗರ್ಬಿಣಿ, ಬಾಣಂತಿ, ಚಿಕ್ಕ ಮಕ್ಕಳಿ ದ್ದಾರೆಯೇ ಎಂಬ ಮಾಹಿತಿಯನ್ನು ಈಗಾಗಲೇ ಕಲೆ ಹಾಕಲಾಗಿದೆ. ಈ ಸಮಸ್ಯೆಯಿಂದ ಬಳಲುತ್ತಿರುವವರಿಗೆ ವಿನಾಯಿತಿ ನೀಡಲು ಆಯೋಗ ನಿರ್ಧರಿಸಿದೆ. ಉಳಿ ದಂತೆ ಯಾವುದೇ ಸಮಸ್ಯೆ ಇಲ್ಲದೇ ಇದ್ದರೂ ವಿವಿಧ ಕಾರಣ ನೀಡಿ ಕರ್ತವ್ಯದಿಂದ ಬಿಡುಗಡೆ ಮಾಡಿಸಿಕೊಳ್ಳಲು ಪ್ರಯತ್ನಿಸಿದರೆ ಶಿಸ್ತುಕ್ರಮಕ್ಕೆ ಒಳಗಾಗುತ್ತಾರೆ.
ಹೇಗೆ?: ಲೋಕಸಭಾ ಚುನಾವಣಾ ಕರ್ತವ್ಯಕ್ಕೆ ಸಾರ್ವ ಜನಿಕ ಶಿಕ್ಷಣ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ, ಕಂದಾಯ ಇಲಾಖೆ, ಪೊಲೀಸ್, ಹೋಮ್‍ಗಾರ್ಡ್ ಸಿಬ್ಬಂದಿ ಗಳನ್ನು ಬಳಸಿಕೊಳ್ಳಲಾಗುತ್ತಿದೆ. ಮೈಸೂರು ಜಿಲ್ಲೆ ವ್ಯಾಪ್ತಿಗೆ ಸೇರುವ ಮತಗಟ್ಟೆಯಲ್ಲಿ ಕರ್ತವ್ಯ ನಿರ್ವಹಿಸಲು 14 ಸಾವಿರ ಸಿಬ್ಬಂದಿ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಈ ಎಲ್ಲಾ ಇಲಾಖೆಗಳ ಮುಖ್ಯಸ್ಥರಿಂದ ನಿಯೋಜನೆಗೊಂಡಿರುವ ಸಿಬ್ಬಂದಿಗಳ ಮಾಹಿತಿ ಕಲೆ ಹಾಕಲಾಗಿದೆ. ಎಲ್ಲಾ ಮಾಹಿತಿಯನ್ನು ಸಂಗ್ರಹಿಸಿರುವುದು ಚುನಾವಣಾ ಆಯೋ ಗಕ್ಕೆ ಸಹಕಾರಿಯಾದರೆ, ಸಿಬ್ಬಂದಿಗಳಿಗೆ ಬಿಸಿ ತುಪ್ಪವಾಗಲಿದೆ.

ರ್ಯಾಂಡಮೈಸೇಷನ್: ಸಂಗ್ರಹಿಸಲಾದ ಎಲ್ಲಾ ಸಿಬ್ಬಂದಿಗಳ ಮಾಹಿತಿಯನ್ನು ಸಾಫ್ಟ್ ವೇರ್‍ನಲ್ಲಿ ರ್ಯಾಂಡಮ್ ಆಗಿ ಮಿಕ್ಸ್ ಮಾಡಲಾಗುತ್ತದೆ. ವಿವಿಧ ಕ್ಷೇತ್ರಗಳಲ್ಲಿ ಪ್ರಸ್ತುತ ಕೆಲಸ ಮಾಡುತ್ತಿರುವ ಸಿಬ್ಬಂದಿ ಆಯಾ ಕ್ಷೇತ್ರ ರಾಜಕಾರಣಿಗಳ, ಶಾಸಕರ ಒತ್ತಡಕ್ಕೆ ಒಳಗಾಗಿ ಚುನಾವಣೆಯಲ್ಲಿ ಮತದಾನದ ವೇಳೆ ಅಕ್ರಮಕ್ಕೆ ಸಹಕರಿಸಬಹುದೆಂಬ ಉದ್ದೇಶದಿಂದ ಇದೀಗ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗಳನ್ನು ಬೇರೆ ಬೇರೆ ಕ್ಷೇತ್ರಗಳಲ್ಲಿ ಕೆಲಸ ಮಾಡಲು ನಿಯೋಜಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳ ಲಾಗಿದೆ. ಎಲ್ಲಾ ಪ್ರಕ್ರಿಯೆಯೂ ಸೂಕ್ಷ್ಮವಾಗಿ ಜರುಗಲಿದ್ದು, ಯಾವ ಸಿಬ್ಬಂದಿ ಎಲ್ಲಿಗೆ ನಿಯೋಜಿಸಲಾಗುತ್ತದೆ ಎಂಬ ಮಾಹಿತಿ ಯಾರಿಗೂ ಸೋರಿಕೆಯಾಗುವುದಿಲ್ಲ. ಇದು ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆಗೆ ಆಯೋಗ ಇಟ್ಟಿರುವ ಮತ್ತೊಂದು ಕಟ್ಟುನಿಟ್ಟಿನ ಹೆಜ್ಜೆಯಾಗಿದೆ. ಅಲ್ಲದೇ ಸಾರ್ವಜನಿಕ ವಲಯದಿಂದ ಪ್ರಶಂಸೆಗೆ ಪಾತ್ರವಾಗಲಿದೆ.

ಚುನಾವಣೆ ಹಿನ್ನೆಲೆಯಲ್ಲಿ 14 ಸಾವಿರ ಸಿಬ್ಬಂದಿಗಳನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಇದರೊಂದಿಗೆ ಶೇ.10 ಕಾಯ್ದಿರಿಸಿದ ಸಿಬ್ಬಂದಿ, ಶೇ.10 ಬದಲಾವಣೆಗೆ ಬೇಕಾದ ಸಿಬ್ಬಂದಿ ಸೇರಿದಂತೆ ಒಟ್ಟು ಶೇ.12ರಷ್ಟು ಸಿಬ್ಬಂದಿ ನಿಯೋ ಜಿಸಲಾಗಿದೆ. ಈಗಾಗಲೇ ಹೆಚ್‍ಎಸ್‍ಆರ್‍ಎಂ ಮೂಲಕ ವಿವಿಧ ಇಲಾಖೆಯ ಡಿಡಿಓಗಳಿಂದ ಮಾಹಿತಿ ಪಡೆದು ಟ್ರೈಸ್ ಸಾಫ್ಟ್‍ವೇರ್‍ನಲ್ಲಿ ದಾಖಲಿಸಲಾಗಿದೆ. 3 ಹಂತ ದಲ್ಲಿ ರ್ಯಾಂಡಮೈಸೇಷನ್ ಮಾಡಲಾಗುತ್ತದೆ. ಮೊದಲನೆಯದು ಡಿಸಿ ನೇತೃತ್ವದಲ್ಲಿ ನಡೆದರೆ, ಎರಡನೆಯದು ವೀಕ್ಷಕರ ಸಮ್ಮುಖದಲ್ಲಿ ನಡೆಯಲಿದೆ. ಈ 2 ಹಂತದಲ್ಲಿ ಬೇರೆ ಬೇರೆ ಕ್ಷೇತ್ರದ ಸಿಬ್ಬಂದಿಗಳನ್ನು ಇತರೆ ಕ್ಷೇತ್ರದಲ್ಲಿ ಕೆಲಸ ಮಾಡಲು ನಿಯೋಜಿಸಲಾಗುತ್ತದೆ. 3ನೇ ಹಂತದ ರ್ಯಾಂಡಮೈಸೇ ಷನ್ ಚುನಾವಣೆಯ ಹಿಂದಿನ ದಿನ ವೀಕ್ಷಕರ ಸಮ್ಮುಖ ದಲ್ಲಿ ನಡೆಯಲಿದ್ದು, ಅಧಿಕಾರಿಗಳನ್ನು ಯಾವ ಕ್ಷೇತ್ರಕ್ಕೆ ಹೋಗಬೇಕೆಂಬುದನ್ನು ನಿರ್ಧರಿಸಲಾಗುತ್ತದೆ. ಗರ್ಭಿಣಿ, ದೀರ್ಘಕಾಲದ ಅನಾರೋಗ್ಯ, ನಿವೃತ್ತಿ ಅಂಚಿನಲ್ಲಿರು ವವರು, ಚಿಕ್ಕ ಮಗುವಿರುವವರಿಗೆ ವಿನಾಯಿತಿ ನೀಡಲಾಗು ತ್ತದೆ. ಅನಗತ್ಯವಾಗಿ ಜಿಲ್ಲಾಧಿಕಾರಿಗಳ ಕಚೇರಿಗೆ ಬಂದು ಚುನಾವಣಾ ಕರ್ತವ್ಯದಿಂದ ಮುಕ್ತಿಗೊಳಿಸುವಂತೆ ದುಂಬಾಲು ಬಿದ್ದರೆ ಶಿಸ್ತು ಕ್ರಮ ಜರುಗಿಸಲಾಗುವುದು. – ಜಿ.ಅನುರಾಧ, ಅಪರ ಜಿಲ್ಲಾಧಿಕಾರಿಗಳು

– ಎಂ.ಟಿ.ಯೋಗೇಶ್ ಕುಮಾರ್

Translate »