ರಾಷ್ಟ್ರೀಯ ಯುದ್ಧ ಸ್ಮಾರಕ ಲೋಕಾರ್ಪಣೆ  ಯೋಧರ ಸ್ಮರಿಸಿದ ಮೋದಿ
ಮೈಸೂರು

ರಾಷ್ಟ್ರೀಯ ಯುದ್ಧ ಸ್ಮಾರಕ ಲೋಕಾರ್ಪಣೆ ಯೋಧರ ಸ್ಮರಿಸಿದ ಮೋದಿ

February 26, 2019

ನವದೆಹಲಿ: ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ವೀರ ಯೋಧರ ನೆನಪಿಗಾಗಿ ದೆಹಲಿಯ ಇಂಡಿಯಾ ಗೇಟ್ ಬಳಿ ನಿರ್ಮಿಸಿರುವ ಭಾರತದ ಮೊದಲ ರಾಷ್ಟ್ರೀಯ ಯುದ್ಧ ಸ್ಮಾರಕವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಲೋಕಾರ್ಪಣೆ ಮಾಡಿದರು.

ಸುಮಾರು 40 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿರುವ ರಾಷ್ಟ್ರೀಯ ಯುದ್ಧ ಸ್ಮಾರಕ ಲೋಕಾರ್ಪಣೆ ಮಾಡಿ, ನಿವೃತ್ತ ಯೋಧರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಇಷ್ಟು ವರ್ಷ ಗಳ ಕಾಲ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರ, ಯೋಧರನ್ನು ಕಡೆಗಣಿಸಿತ್ತು. ಆದರೆ 6 ದಶಕಗಳ ನಂತರ ಹುತಾತ್ಮ ಯೋಧರನ್ನು ಸ್ಮರಿಸುತ್ತಿದ್ದೇವೆ. ಪ್ರತಿಯೊಬ್ಬ ಯೋಧರ ಹೆಸರು ಈ ಸ್ಮಾರಕದಲ್ಲಿ ಕೆತ್ತಿಸಲಾಗಿದೆ ಎಂದರು. ಈ ಸ್ಮಾರಕ ಯುವಕರಿಗೆ ಸ್ಫೂರ್ತಿಯಾಗಲಿದೆ. ರಾಷ್ಟ್ರೀಯ ಯುದ್ಧ ಸ್ಮಾರಕ ಲೋಕಾರ್ಪಣೆಗೊಂಡ ನಂತರ ಸೇನೆಗೆ ಸೇರಲು ಯುವಕರು ಹೆಚ್ಚು ಒಲವು ತೋರಲಿದ್ದಾರೆ ಎಂದು ಪ್ರಧಾನಿ ಮೋದಿ ವಿಶ್ವಾಸ ವ್ಯಕ್ತಪಡಿಸಿದರು.

ನಮ್ಮ ಸರ್ಕಾರ ಯೋಧರಿಗೆ ಮೊದಲ ಆದ್ಯತೆ ನೀಡಿದೆ. ಹಲವು ದಶಕಗಳಿಂದಲೂ ನನೆಗುದಿಗೆ ಬಿದ್ದಿದ್ದ ಏಕ ಶ್ರೇಣಿ-ಏಕ ಪಿಂಚಣಿ ಯೋಜನೆಯನ್ನು ಜಾರಿಗೆ ತರುವ ಮೂಲಕ ಯೋಧರಿಗೆ ನೀಡಿದ್ದ ಭರವಸೆಯನ್ನು ಈಡೇರಿಸಿದ್ದೇವೆ ಎಂದರು. ಏಕ ಶ್ರೇಣಿ-ಏಕ ಪಿಂಚಣಿ ಯೋಜನೆಗೆ 53 ಸಾವಿರ ಕೋಟಿ ರೂಪಾಯಿ ನಿಗದಿಪಡಿಸಲಾಗಿದೆ ಎಂದ ಪ್ರಧಾನಿ ಸ್ಪಷ್ಟಪಡಿಸಿದರು.

ಮಹಿಳೆಯರನ್ನು ಸೇನೆಗೆ ಸೇರಿಸಿಕೊಳ್ಳುವ ಪ್ರಕ್ರಿಯೆಗೆ ಹೆಚ್ಚು ಒತ್ತು ನೀಡಲಾಗಿದೆ. ಈಗಾಗಲೇ ಸೇನೆಯಲ್ಲಿ ನಾರಿ ಶಕ್ತಿ ಜೋರಾಗಿದೆ. ಪುರುಷ ಸಿಬ್ಬಂದಿಯ ಸಮನಾಗಿ ಮಹಿಳೆಯರು ನಿಂತಿದ್ದಾರೆ ಎಂದರು. ಇತ್ತೀಚೆಗೆ ಪುಲ್ವಾಮಾದಲ್ಲಿ ಬಲಿಯಾದ ಯೋಧರನ್ನು ಪ್ರತಿ ಕ್ಷಣವೂ ಸ್ಮರಿಸುತ್ತಿದ್ದೇವೆ. ಆರು ದಶಕಗಳ ಯೋಧರ ಕೊರತೆಯನ್ನು ನಮ್ಮ ಸರ್ಕಾರದ ಮೂಲಕ ಪೂರೈಸಿದ್ದೇವೆ ಎಂದು ಮೋದಿ ತಿಳಿಸಿದರು. ಬೋಫೆÇೀರ್ಸ್‍ನಿಂದ ಹಿಡಿದು ಅಗಸ್ಟಾ ವೆಸ್ಟ್ ಲ್ಯಾಂಡ್ ಹೆಲಿಕಾಪ್ಟರ್ ಹಗರಣದ ಹಿಂದೆ ಒಂದೇ ಒಂದು ಕುಟುಂಬದ ಹೆಸರಿದೆ. ಈ ಹಿಂದಿನ ಸರ್ಕಾರಕ್ಕೆ ದೇಶಕ್ಕಿಂತ ಒಂದು ಕುಟುಂಬ ದೊಡ್ಡದಾಗಿತ್ತು. ಆದರೆ ನಮಗೆ ದೇಶ ಮೊದಲು ಎಂದು ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಕುತೂಹಲಕಾರಿ ಮಾಹಿತಿ!

  • ರಾಷ್ಟ್ರೀಯ ಯುದ್ಧ ಸ್ಮಾರಕ ಚಕ್ರವ್ಯೂಹ ಮಾದರಿಯಲ್ಲಿ ನಿರ್ಮಾಣವಾಗಿದೆ. ಸ್ಮಾರಕದ ಮಧ್ಯಭಾಗದಲ್ಲಿ ಜ್ಯೋತಿಯನ್ನು ಹೊತ್ತಿಸಲಾಗಿದ್ದು, ನಿರಂತರವಾಗಿ ಉರಿಯುತ್ತಿರುತ್ತದೆ.
  • ಸ್ಮಾರಕದ ಹದಿನಾರು ಗೋಡೆಗಳಲ್ಲಿ 25,942 ಯುದ್ಧ ಸೇನಾನಿಗಳ ಹೆಸರನ್ನು ಗ್ರಾನೈಟ್ ಕಲ್ಲಿನಲ್ಲಿ ಕೆತ್ತಲಾಗಿದೆ. ಎಲ್ಲ ಯೋಧರ ರ್ಯಾಂಕ್ ಹಾಗೂ ರೆಜಿಮೆಂಟ್ ಅನ್ನು ಹೆಸರಿಸಲಾಗಿದೆ.
  • ಇಂಡಿಯಾ ಗೇಟ್ ಹಿಂಭಾಗದಲ್ಲಿ ಈ ಸ್ಮಾರಕ ನಿರ್ಮಾಣವಾಗಿದ್ದು, ನಾಲ್ಕು ಭಾಗಗಳಾಗಿ ವಿಂಗಡಣೆ ಮಾಡಲಾಗಿದೆ. ಅಮರ್ ಚಕ್ರ, ವೀರತಾ ಚಕ್ರ, ತ್ಯಾಗ ಚಕ್ರ ಹಾಗೂ ರಕ್ಷಕ್ ಚಕ್ರ ಎಂದು ಹೆಸರನ್ನಿಡಲಾಗಿದೆ.
  • ಸ್ಮಾರಕದಲ್ಲಿ ಖ್ಯಾತ ಕವಿ ಜಗದಾಂಬ ಪ್ರಸಾದ್ ಮಿಶ್ರಾರ ಹಿತೈಶಿ ಕವನದ ಶಹೀದ್ ಕಿ ಮಜ್ರೋನ್ ಪರ್ ಎನ್ನುವ ಸಾಲನ್ನು ಕೆತ್ತಲಾಗಿದೆ.
  •  ದೇಶಕ್ಕಾಗಿ ವೀರ ಮರಣ ಹೊಂದಿದ ಪ್ರಮುಖ ಸೇನಾನಿಗಳ ಹೆಸರನ್ನು ಹೆಸರಿಗೆ ಚಿನ್ನದ ಲೇಪನ ನೀಡಲಾಗಿದೆ.
  •  ದೇಶವನ್ನು ಹಗಲಿರುಳುಲೆನ್ನದೇ ಕಾಯುತ್ತಿರುವ ಸೇನಾನಿಗಳಿಗೆ ಗೌರವ ನೀಡುವ ಸಲುವಾಗಿ ವಿಶೇಷವಾಗಿ 600 ಗಿಡಗಳನ್ನು ನೆಡಲಾಗಿದೆ.
  • ಭಾರತಕ್ಕೆ ಮಾತ್ರವಲ್ಲದೆ ದೇಶದ ಹೊರಗೂ ಭಾರತವನ್ನು ಪ್ರತಿನಿಧಿಸಿ ಪ್ರಾಣತ್ಯಾಗ ಮಾಡಿದ ಯೋಧರ ಹೆಸರನ್ನೂ ಸ್ಮಾರಕದಲ್ಲಿ ಕೆತ್ತಲಾಗಿದೆ.

ತನಿಖೆಯಿಂದ ಬಹಿರಂಗ: ಪುಲ್ವಾಮಾದಲ್ಲಿನ ಉಗ್ರರ ದಾಳಿಯ ತನಿಖೆ ಕೊನೆಯ ಹಂತಕ್ಕೆ ಬಂದಿದ್ದು ಕೆಲವೇ ದಿನಗಳಲ್ಲಿ ತನಿಖೆಯು ಪೂರ್ಣಗೊಳ್ಳಲಿದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ ಹೇಳಿದೆ. ತನಿಖೆಯ ಕೊನೆ ಹಂತದಲ್ಲಿರುವ ಸಂಸ್ಥೆ ಈ ಉಗ್ರ ದಾಳಿಯಲ್ಲಿ ಪಾಕಿಸ್ತಾನ ಕೈವಾಡ ಇರುವುದು ಸ್ಪಷ್ಟವಾಗಿದೆ ಎಂದು ಹೇಳಿದೆ. ಈ ಮೂಲಕ ಪಾಕಿಸ್ತಾನದ ಕಳ್ಳಾಟ ಜಗತ್ತಿನ ಮುಂದೆ ಬೆತ್ತಲಾಗಲಿದೆ.

ದಾಳಿಗೆ ಆತ್ಮಾಹುತಿ ಬಾಂಬರ್ ಆದಿಲ್ ಅಹಮದ್ ದರ್ ಬಳಕೆ ಮಾಡಿದ್ದ ಮಾರುತಿ ಇಕೋ ಕಾರಿನ ಮಾಲೀಕನ ಬಗ್ಗೆ ಮಾಹಿತಿಯನ್ನು ತನಿಖಾ ಸಂಸ್ಥೆ ಕಲೆ ಹಾಕಿದ್ದು, ಕಾರನ್ನು ಕಾಶ್ಮೀರದಲ್ಲಿ ಸುಮಾರು ಎಂಟು ವರ್ಷಗಳ ಹಿಂದೆ ರಿಜಿಸ್ಟರ್ ಮಾಡಲಾಗಿತ್ತು. ಸದ್ಯ ಈ ಕಾರಿನ ಮಾಲೀಕ ನಾಪತ್ತೆಯಾಗಿದ್ದಾನೆ ಎಂದು ತನಿಖಾ ಸಂಸ್ಥೆ ಹೇಳಿದೆ. ತನಿಖೆಯ ವೇಳೆ ಪಾಕಿಸ್ತಾನ ಈ ದಾಳಿಯಲ್ಲಿ ಭಾಗಿಯಾಗಿರುವುದು ಸ್ಪಷ್ಟವಾಗಿದೆ. ಆದರೆ, ಆರ್‍ಡಿಎಕ್ಸ್ ಹಾಗೂ ಇನ್ನಿತರ ಸ್ಫೋಟಕಗಳನ್ನು ಗಡಿಯ ಮೂಲಕ ಹೇಗೆ ತರಲಾಯಿತು ಎನ್ನುವುದನ್ನು ತನಿಖೆ ನಡೆಸುತ್ತಿದ್ದೇವೆ ಎಂದು ಸಂಸ್ಥೆ ಹೇಳಿದೆ.

Translate »