ಮೈಸೂರು ಜಲದರ್ಶಿನಿ ಆವರಣದಲ್ಲಿ 13 ಕೋಟಿ ವೆಚ್ಚದ ಅಭಿವೃದ್ಧಿ
ಮೈಸೂರು

ಮೈಸೂರು ಜಲದರ್ಶಿನಿ ಆವರಣದಲ್ಲಿ 13 ಕೋಟಿ ವೆಚ್ಚದ ಅಭಿವೃದ್ಧಿ

February 26, 2019

ಬೆಂಗಳೂರು: ಮೈಸೂರಿನ ಜಲದರ್ಶಿನಿ ಸರ್ಕಾರಿ ಅತಿಥಿ ಗೃಹವನ್ನು 13 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ಹಸಿರು ನಿಶಾನೆ ತೋರಿದೆ.

ಅತಿಥಿ ಗೃಹಕ್ಕೆ ಹೊಂದಿಕೊಂಡಂತೆ ಹತ್ತು ಕೋಟಿ ರೂ. ವೆಚ್ಚದಲ್ಲಿ 500 ಆಸನವುಳ್ಳ ಅತ್ಯಾಧುನಿಕ ಸಭಾಂಗಣ ನಿರ್ಮಾಣಗೊಳ್ಳಲಿದೆ. ಜಿಲ್ಲಾ ಉಸ್ತುವಾರಿ ಹೊಣೆ ಹೊತ್ತ ಜಿ.ಟಿ. ದೇವೇಗೌಡ, ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ ಜೊತೆ ಇಂದು ಮಾತುಕತೆ ನಡೆಸಿದ ನಂತರ ಜಲದರ್ಶಿನಿಗೆ ಮೂಲ ಸೌಕರ್ಯ ಕಲ್ಪಿಸುವ ನಿರ್ಧಾರಕ್ಕೆ ಬಂದಿದ್ದಾರೆ.

ಲೋಕಸಭಾ ಚುನಾವಣೆಗೂ ಮುನ್ನವೆ ಸಭಾಂಗಣಕ್ಕೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯಿಂದ ಅಡಿಗಲ್ಲು ಹಾಕಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಇದಕ್ಕೆ ತಗಲುವ ಪೂರ್ಣ ವೆಚ್ಚವನ್ನು ಇಲಾಖೆ ಭರಿಸಲಿದ್ದು, ಜಲದರ್ಶಿನಿ ಮುಖಭಾಗವನ್ನು ಎರಡು ಕೋಟಿ ರೂ. ವೆಚ್ಚದಲ್ಲಿ ವಿಧಾನಸೌಧ-ವಿಕಾಸ ಸೌಧದ ನಡುವೆ ಮತ್ತು ಮುಂದೆ ಅಭಿವೃದ್ಧಿಪಡಿಸಲಾಗಿರುವ ಉದ್ಯಾನವನದಂತೆ ಅಲ್ಲಿಯೂ ಅಭಿವೃದ್ಧಿ ಪಡಿಸಲು ನಿರ್ಧರಿಸಲಾಗಿದೆ. ಒಂದು ಕೋಟಿ ರೂ. ವೆಚ್ಚದಲ್ಲಿ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗುವುದು. ಮುಖ್ಯಮಂತ್ರಿಯವರು ಸಭಾಂಗಣಕ್ಕೆ ಅಡಿಗಲ್ಲು ಹಾಕುವ ಸಂದರ್ಭದಲ್ಲಿ ಮೈಸೂರು ನಗರದ ಕೆಲವು ಅಭಿವೃದ್ಧಿ ಕಾರ್ಯಕ್ರಮಗಳಿಗೂ ಚಾಲನೆ ನೀಡಲಿದ್ದಾರೆ.

Translate »