ಹಳೇ ಉಂಡವಾಡಿ ಯೋಜನೆಗೆ ಅಂತೂ ಆಡಳಿತಾತ್ಮಕ ಅನುಮೋದನೆ
ಮೈಸೂರು

ಹಳೇ ಉಂಡವಾಡಿ ಯೋಜನೆಗೆ ಅಂತೂ ಆಡಳಿತಾತ್ಮಕ ಅನುಮೋದನೆ

February 26, 2019

ಮೈಸೂರು: ಮೈಸೂರು ನಗರ ಮತ್ತು ಸುತ್ತಲಿನ 92 ಗ್ರಾಮಗಳಿಗೆ ಶಾಶ್ವತವಾಗಿ ಕಾವೇರಿ ಕುಡಿಯುವ ನೀರು ಪೂರೈಸುವ ಮಹತ್ವಪೂರ್ಣ ಹಳೆ ಉಂಡವಾಡಿ ಯೋಜನೆಗೆ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ.

ನಗರಾಭಿವೃದ್ಧಿ ಇಲಾಖೆ(ಎಂಎ-2 ಮತ್ತು ಮಂಡಳಿ) ಅಧೀನ ಕಾರ್ಯದರ್ಶಿ ಎಸ್.ವೀಣಾ ಅವರು 545 ಕೋಟಿ ರೂ. ಅಂದಾಜು ವೆಚ್ಚದ ಹಳೆ ಉಂಡವಾಡಿ ಕುಡಿಯುವ ನೀರು ಸರಬರಾಜು ಯೋಜ ನೆಗೆ ಆಡಳಿತಾತ್ಮಕ ಅನುಮೋದನೆ ನೀಡಿ ಫೆಬ್ರವರಿ 21 ರಂದು ಆದೇಶ ಹೊರಡಿಸಿದ್ದಾರೆ.

ಜನಪ್ರತಿನಿಧಿಗಳ ಶ್ರಮ: ಈ ಹಿಂದೆ ಚಾಮುಂಡೇಶ್ವರಿ ಕ್ಷೇತ್ರದ ಶಾಸಕರಾಗಿದ್ದ ಹಾಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರ ಮಹತ್ವಾಕಾಂಕ್ಷಿ ಯೋಜನೆಯಾದ ಕೃಷ್ಣರಾಜ ಸಾಗರ ಜಲಾಶಯದ ಹಿನ್ನೀರಿನಿಂದ ನೇರವಾಗಿ ಮೈಸೂರು ನಗರ ಹಾಗೂ ಸುತ್ತಲಿನ 92 ಗ್ರಾಮಗಳಿಗೆ ಕಾವೇರಿ ಕುಡಿಯುವ ನೀರು ಸರಬರಾಜು ಮಾಡುವ ಯೋಜನೆಗೆ ಈ ಹಿಂದೆ ಮಾಜಿ ಶಾಸಕ ವಾಸು ಸೇರಿದಂತೆ ಮಾಜಿ ಮೇಯರ್ ಗಳು ಹಾಗೂ ಅಧಿಕಾರಿಗಳು ಶ್ರಮ ವಹಿಸಿದ್ದರು.

ನೀರು ಸರಬರಾಜು ಮಂಡಳಿ ಪ್ರಸ್ತಾವನೆ: ಪಾರಂಪ ರಿಕ, ಯೋಗ ಹಾಗೂ ಅಂತಾರಾಷ್ಟ್ರ ಮಟ್ಟದಲ್ಲಿ ಪ್ರವಾಸಿ ತಾಣವೆಂದು ಖ್ಯಾತಿಯಾಗಿರುವ ಮೈಸೂರು ಶೈಕ್ಷಣಿಕ ಹಾಗೂ ಕೈಗಾರಿಕಾ ಕೇಂದ್ರವಾಗಿದ್ದು, ಉತ್ತಮವಾದ ಹೆದ್ದಾರಿ, ರೈಲ್ವೆ ಹಾಗೂ ವಿಮಾನ ಸಂಪರ್ಕ ಹೊಂದಿ ರುವ ನಗರವೂ ಆಗಿದೆ. ಇಲ್ಲಿನ ಜನಸಂಖ್ಯೆ ಪ್ರತೀ ವರ್ಷ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅಗತ್ಯಕ್ಕೆ ತಕ್ಕಂತೆ ಜನರಿಗೆ ನೀರು ಪೂರೈಸಲು 491 ಚದರ ಕಿ.ಮೀ ಸ್ಥಳೀಯ ಯೋಜನಾ ಪ್ರದೇಶ ಹೊಂದಿರುವ (ನಂಜನ ಗೂಡು ಪ್ರದೇಶ ಹೊರತುಪಡಿಸಿ) ನಗರಪಾಲಿಕೆ, ಮುಡಾ ವ್ಯಾಪ್ತಿ ಹಾಗೂ 92 ಹಳ್ಳಿಗಳಿಗೆ ನೀರು ಪೂರೈಸಲು ಹಳೆ ಉಂಡವಾಡಿ ಯೋಜನೆಯನ್ನು ಅನುಷ್ಠಾನಗೊಳಿಸ ಬೇಕೆಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಏUWS & Sಃ)ಯು ಸರ್ಕಾ ರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಪ್ರಸ್ತುತ 128 ಚದರ ಕಿ.ಮೀ. ನಷ್ಟು ವಿಸ್ತೀರ್ಣ ಹೊಂದಿರುವ ಮೈಸೂರು ನಗರಕ್ಕೆ ಬೆಳಗೊಳ, ಹೊಂಗಳ್ಳಿ 2 ಮತ್ತು 3ನೇ ಹಂತ, ವೇಳಾ ಪುರ ಹಾಗೂ ಕಬಿನಿ ನೀರು ಸರಬರಾಜು ಕೇಂದ್ರಗಳಿಂದ ಒಟ್ಟು 250 ಎಂಎಲ್‍ಡಿರಷ್ಟು ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆಯಾದರೂ, ಭವಿಷ್ಯತ್ತಿನ ಜನಸಂಖ್ಯೆಗನುಸಾರ ಸಗಟು ನೀರು ಪೂರೈಸಲು 300 ಎಂಎಲ್‍ಡಿ ಸಾಮಥ್ರ್ಯದ ಹಳೇ ಉಂಡವಾಡಿ ಯೋಜನೆ ಅನುಷ್ಠಾನಗೊಳಿಸಬೇಕೆಂದು ಮಂಡಳಿಯು ಸರ್ಕಾರಕ್ಕೆ ಡಿಪಿಆರ್ ಸಲ್ಲಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಏನೆಲ್ಲಾ ಬರಲಿದೆ: 545 ಕೋಟಿ ರೂ. ವೆಚ್ಚದ ಹಳೇ ಉಂಡವಾಡಿ ಯೋಜನೆಯಲ್ಲಿ ಜಾಕ್‍ವೆಲ್ ಪಂಪಿಂಗ್ ಸ್ಟೇಷನ್, ಡ್ರಾಟ್ ಕಾಲುವೆ, ಯಂತ್ರಾಗಾರ, ನೀರಿನ ಶುದ್ಧೀಕರಣ ಘಟಕ, 4.20 ಕಿ.ಮೀ. ಉದ್ದದ ಕಚ್ಚಾ ನೀರಿನ ಏರು ಕೊಳವೆ ಮಾರ್ಗ, ಬೀಚಿನ ಕುಪ್ಪೆ ಗ್ರಾಮದ ಬಳಿ 150 ಎಂಎಲ್‍ಡಿ ಸಾಮಥ್ರ್ಯದ ಜಲ ಶುದ್ಧೀಕರಣಗಾರದಿಂದ ವಿಜಯನಗರ 2ನೇ ಹಂತದ ಕೇಂದ್ರೀಯ ಜಲಸಂಗ್ರಹಾಗಾರ-ಕೂರ್ಗಳ್ಳಿ-ಕೆಎಐಡಿಬಿ ಜಲಸಂಗ್ರಹಾಗಾರ-ವಿಜಯನಗರ 4ನೇ ಹಂತದ ಜಲಸಂಗ್ರಹಾಗಾರ ಹಾಗೂ ಬೋಗಾದಿ ಟ್ಯಾಂಕ್ ವರೆಗೆ ಒಟ್ಟು 26.50 ಕಿ.ಮೀ ಕೊಳವೆ ಮಾರ್ಗವನ್ನು ಈ ಯೋಜನೆಯಲ್ಲಿ ಅಳವಡಿಸಲಾಗುವುದು.

ಅನುದಾನ ಪೂರೈಕೆ: ಈ ಬೃಹತ್ ಯೋಜನೆಗೆ ರಾಜ್ಯ ಸರ್ಕಾರದಿಂದ 218 ಕೋಟಿ ರೂ(ಶೇ.40), ಸ್ಥಳೀಯ ಸಂಸ್ಥೆಯಿಂದ 54.50(ಶೇ.10) ಕೋಟಿ ರೂ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಇಲಾಖೆಯಿಂದ 75 ಕೋಟಿ ರೂ ಹಾಗೂ ಆರ್ಥಿಕ ಸಂಸ್ಥೆಯಿಂದ 197.50 ಕೋಟಿ ರೂ. ಸಾಲ ಸೌಲಭ್ಯ ಪಡೆಯಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಹಳೆ ಉಂಡವಾಡಿ ಯೋಜನೆಯನ್ನು ಅನುಷ್ಠಾನಗೊಳಿಸಲಿದ್ದು, ಫೆಬ್ರವರಿ 14ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಸರ್ಕಾರ ಅನುಮೋದನೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಯೋಜನೆಗೆ ಬೇಕಾದ ಭೂಮಿಯನ್ನು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ(ಕೆಐಎಡಿಬಿ)ಯು ಒದಗಿಸಿದ್ದು, ಈಗ ಸರ್ಕಾರದ ಅಧಿಕೃತ ಆದೇಶ ಹೊರಬಿದ್ದಿರುವುದರಿಂದ ಟೆಂಡರ್ ಪ್ರಕ್ರಿಯೆಗೆ ಚಾಲನೆ ದೊರೆಯಲಿದೆ.

– ಎಸ್.ಟಿ.ರವಿಕುಮಾರ್

Translate »