ಲೋಕಸಭಾ ಚುನಾವಣೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ
ಮೈಸೂರು

ಲೋಕಸಭಾ ಚುನಾವಣೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ

July 27, 2018

ಬೆಂಗಳೂರು: ಮುಂಬರುವ ಲೋಕ ಸಭಾ ಚುನಾವಣೆಗೆ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಖಚಿತಗೊಂಡಿದ್ದು, ಚುನಾವಣಾ ಪೂರ್ವ ಹೊಂದಾಣಿಕೆ ಮಾಡಿಕೊಂಡು ಕಣಕ್ಕೆ ಇಳಿಯಲಿವೆ.

ಒಪ್ಪಂದದಂತೆ ರಾಜ್ಯದ ಒಟ್ಟು 28 ಲೋಕಸಭಾ ಕ್ಷೇತ್ರ ಗಳ ಪೈಕಿ ಕಾಂಗ್ರೆಸ್ 18 ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧಿಸಲಿದೆ.
ಉಳಿದ 10 ಕ್ಷೇತ್ರಗಳನ್ನು ಜೆಡಿಎಸ್‍ಗೆ ಬಿಟ್ಟು ಕೊಡಲಿದ್ದು, ಜೆಡಿಎಸ್ ಇದರಲ್ಲಿ ಒಂದು ಕ್ಷೇತ್ರವನ್ನು ತನ್ನ ಮೈತ್ರಿ ಪಕ್ಷವಾದ ಬಿಎಸ್‍ಪಿಗೆ ನೀಡಲಿದೆ. ಜೆಡಿಎಸ್ ತನ್ನ ಪ್ರಭಾವ ಇರುವ ಹಳೇ ಮೈಸೂರು ಭಾಗದಲ್ಲೇ ಹೆಚ್ಚಿನ ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಒಂದು ಇಲ್ಲವೆ, ಎರಡು ಕ್ಷೇತ್ರ ಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳಲಿದ್ದು, ಉಳಿದೆಲ್ಲವೂ ಈ ಭಾಗಕ್ಕೆ ಸೇರಿದವಾಗಿರುತ್ತವೆ. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಇತ್ತೀಚೆಗೆ ದೆಹಲಿ ಭೇಟಿ ಸಂದರ್ಭದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಚರ್ಚಿಸಿದ್ದು, ಚುನಾವಣಾ ಮೈತ್ರಿ ಅಂತಿಮಗೊಂಡಿದೆ. ಈ ಚರ್ಚೆ ನಂತರವೇ ಮುಖ್ಯಮಂತ್ರಿ ಅವರು ದೆಹಲಿಯ ಪ್ರಮುಖ ಆಂಗ್ಲ ಸುದ್ದಿ ವಾಹಿನಿಗಳಿಗೆ ಸಂದರ್ಶನ ನೀಡಿ, ರಾಹುಲ್ ಗಾಂಧಿ ಮುಂದಿನ ಪ್ರಧಾನಿ ಆಗಬೇಕು, ಅವರಿಗೆ ನಮ್ಮ ಸಂಪೂರ್ಣ ಬೆಂಬಲ ಎಂದು ಮೊದಲ ಬಾರಿಗೆ ಸಾರ್ವಜನಿಕವಾಗಿ ಘೋಷಿಸಿದರು.

ರಾಹುಲ್-ಕುಮಾರಸ್ವಾಮಿ ಅವರ ಈ ಒಪ್ಪಂದದಿಂದ ಹಾಲಿ ಕಾಂಗ್ರೆಸ್ ಸಂಸದರಾದ ಎಂ.ವೀರಪ್ಪ ಮೊಯಿಲಿ, ಧ್ರುವನಾರಾಯಣ್, ಮುದ್ದಹನುಮೇಗೌಡ ಸೇರಿದಂತೆ ಹಲವರಿಗೆ ಕ್ಷೇತ್ರಗಳು ಇಲ್ಲದಂತಾಗುತ್ತದೆ.

ಜೆಡಿಎಸ್ ತನಗೆ ದೊರೆತಿರುವ 10 ಕ್ಷೇತ್ರಗಳಲ್ಲಿ ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರವನ್ನು ಬಿಎಸ್‍ಪಿಗೆ ಬಿಟ್ಟುಕೊಡಲಿದೆ. ಇದರಿಂದ ಜೆಡಿಎಸ್‍ಗೂ ರಾಜಕೀಯ ಲಾಭ ತರಲಿದೆ, ಜೊತೆಗೆ ಮೈತ್ರಿ ಪಕ್ಷಗಳ ಪರವಾಗಿ ಬಿಎಸ್‍ಪಿಯ ಅಧಿನಾಯಕಿ ಮಾಯಾವತಿ ಚುನಾವಣಾ ಪ್ರಚಾರ ಕೈಗೊಳ್ಳಲು ಸಹಕಾರಿಯಾಗಲಿದೆ. ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಿಂದ ಬಿಎಸ್‍ಪಿ ಅಭ್ಯರ್ಥಿ ಇದೇ ಮೊದಲ ಬಾರಿಗೆ ಆಯ್ಕೆಗೊಂಡು ಸಚಿವರೂ ಆಗಿದ್ದಾರೆ. ಚಾಮರಾಜನಗರ ಹಾಗೂ ಕೋಲಾರ ಮೀಸಲು ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಸ್ವತಃ ಮಾಯಾವತಿ ಅವರೇ ಆಸಕ್ತಿ ಹೊಂದಿದ್ದಾರೆ. ಆದರೆ ಕೋಲಾರದಲ್ಲಿ ಅತ್ಯಂತ ಹಿರಿಯ ನಾಯಕ ಕಾಂಗ್ರೆಸ್‍ನ ಸಂಸದ ಕೆ.ಎಚ್. ಮುನಿಯಪ್ಪ ಸತತವಾಗಿ 7 ನೇ ಬಾರಿ ಲೋಕಸಭೆ ಪ್ರವೇಶಿಸಿದ್ದಾರೆ, ಇಂತಹ ಕ್ಷೇತ್ರವನ್ನು ನಾವು ಪಡೆಯುವುದು ಬೇಡ ಎಂದು ಜೆಡಿಎಸ್ ನಿರ್ಧರಿಸಿದೆ.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಸನ ಲೋಕಸಭಾ ಕ್ಷೇತ್ರ ದಿಂದಲೇ ಸ್ಪರ್ಧಿಸಲು ನಿರ್ಧರಿಸಿದ್ದು, ಅಲ್ಲಿಂದಲೇ ಪುನರಾಯ್ಕೆ ಬಯಸಿದ್ದಾರೆ. ಮೈಸೂರು, ಮಂಡ್ಯ ಕ್ಷೇತ್ರಗಳಿಂದ ಸ್ಪರ್ಧಿಸುತ್ತಾರೆ ಎನ್ನುವುದು ಕೇವಲ ಊಹಾ ಪೋಹ, ಪ್ರಸ್ತುತ ಸನ್ನಿವೇಶದಲ್ಲಿ ಮಂಡ್ಯ ಕ್ಷೇತ್ರದಿಂದ ಪಕ್ಷದ ಯಾವುದೇ ವ್ಯಕ್ತಿ ಕಣಕ್ಕಿಳಿದರೂ ಗೆಲುವು ನಿಶ್ಚಿತ ಎಂಬ ಭಾವನೆ ಈ ಪಕ್ಷದ ನಾಯಕರಲ್ಲಿದೆ. ಹೀಗಾಗಿ ದೇವೇಗೌಡರು ಅಂತಹ ಕ್ಷೇತ್ರದಲ್ಲಿ ಕಣಕ್ಕಿಳಿಯುವ ಮಾತೇ ಇಲ್ಲ, ಆದರೆ, ತಮ್ಮ ಮೊಮ್ಮಗ ಪ್ರಜ್ವಲ್ ರೇವಣ್ಣ ಅವರಿಗೆ ನೀಡಿರುವ ಮಾತನ್ನು ಉಳಿಸಿಕೊಳ್ಳಲು ಆತನನ್ನು ಮೈಸೂರು ಕ್ಷೇತ್ರದಿಂದ ಕಣಕ್ಕಿಳಿಸಿದರೂ ಆಶ್ಚರ್ಯಪಡಬೇಕಿಲ್ಲ.

Translate »