2019ರ ಚುನಾವಣೆಗೂ ಕಾಂಗ್ರೆಸ್-ಜೆಡಿಎಸ್ ಮೈತ್ರಿ
ಮಂಡ್ಯ

2019ರ ಚುನಾವಣೆಗೂ ಕಾಂಗ್ರೆಸ್-ಜೆಡಿಎಸ್ ಮೈತ್ರಿ

October 25, 2018

ಮಂಡ್ಯ: ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರ ವಿಡುವ ಏಕೈಕ ಕಾರಣದಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಯಲ್ಲೇ 2019ರ ಸಾರ್ವತ್ರಿಕ ಲೋಕಸಭಾ ಚುನಾವಣೆ ಯನ್ನೂ ಎದುರಿಸಲು ನಿರ್ಧರಿಸಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ನಗರದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ವಾಗ್ದಾಳಿಗೆ ಇಳಿದಿದ್ದೆವು. ನಾವು ಅವರ ಮೇಲೆ, ಅವರು ನಮ್ಮ ಮೇಲೆ ಆರೋಪ, ಪ್ರತ್ಯಾರೋಪ ಮಾಡಿದ್ದು ನಿಜ. ಆದರೆ ಯಾವ ಪಕ್ಷಕ್ಕೂ ಬಹುಮತ ಬಂದಿಲ್ಲ. ಈ ಕಾರಣ ಮತ್ತು ಕೋಮುವಾದಿ ಪಕ್ಷ ಬಿಜೆಪಿ ಅಧಿಕಾರಕ್ಕೆ ಬರಬಾರದು ಅಂತಾ ಹೈಕ ಮಾಂಡ್ ಸಮ್ಮಿಶ್ರ ಸರ್ಕಾರ ರಚಿಸುವಂತೆ ಆದೇಶ ನೀಡಿತ್ತು. ಹೀಗಾಗಿ ಈ ಭಾರಿಯ ಉಪಚುನಾವಣೆಯಲ್ಲಿ ಮೈತ್ರಿ ಮಾಡಿ ಕೊಂಡಿದ್ದೇವೆ ಎಂದು ಹೇಳಿದರು.

ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ದೇಶದ ಆರ್ಥಿಕ ವ್ಯವಸ್ಥೆ ಹಾಳಾಗಿದೆ. ಅಹಿಂದಾ ವರ್ಗ ರಕ್ಷಣೆಯಿಲ್ಲದೆ ನರಳುವ ಸ್ಥಿತಿ ಎದುರಾಗಿದೆ. ಭ್ರಷ್ಟಾಚಾರ ತಾಂಡವವಾಡುತ್ತಿದೆ. ದೇಶದಲ್ಲಿ ಜಾತ್ಯಾತೀತ ಮತ ವಿಭಜನೆ ಆಗುತ್ತಿರುವುದರಿಂದ ಕೋಮುವಾದಿ ಬಿಜೆಪಿ ಅಧಿಕಾರಕ್ಕೆ ಬರುತ್ತಿದೆ. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಸಮಾಜದಲ್ಲಿ ನೆಮ್ಮದಿ ಯಿಲ್ಲ. ಪರಿಶಿಷ್ಟ ಜಾತಿ ಮತ್ತು ಪಂಗಡ ದವರು ಆತಂಕದಲ್ಲಿ ಕಾಲ ಕಳೆಯುತ್ತಿದ್ದಾರೆ. ಹೀಗಾಗಿ ಕೋಮುವಾದಿ ಪಕ್ಷ ಮತ್ತೆ ದೇಶ ದಲ್ಲಿ ಆಡಳಿತಕ್ಕೆ ಬರಬಾರದು. ಇದಕ್ಕೆ ಕರ್ನಾಟಕದಿಂದಲೇ ಉತ್ತರ ಕೊಡಲು ಉಪಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸ್ಥಾನ ಹಂಚಿಕೆ ಮಾಡಿಕೊಂಡಿ ದ್ದೇವೆ ರಾಜ್ಯದಲ್ಲಿ ಮೈತ್ರಿ ಚುನಾವಣೆ ದೇಶಕ್ಕೆ ಮಾದರಿ ಆಗಲಿದ್ದು, ಲೋಕಸಭಾ ಚುನಾವಣೆಯಲ್ಲಿ ಇದನ್ನೇ ಅಳವಡಿಸಿ ಕೊಳ್ಳುತ್ತೇವೆ ಎಂದು ತಿಳಿಸಿದರು.

ಹಿಂದಿ ಡೈಲಾಗ್ ಹೇಳಲು ತಡವರಿಸಿದ ಮಾಜಿ ಸಿಎಂ: ನಾ ಕಾವೋಂಗಾ, ನಾ ಕಾನೆ ದೋಂಗಾ, ಮೈ ಭಾರತ್ ಕಾ ಚೌಕಿದಾರ್ ಅಂತಾ ಹೇಳಲು ಸಿದ್ದರಾಮಯ್ಯ ತಡವರಿ ಸಿದರು. ಎಷ್ಟೇ ಯತ್ನಿಸಿದರೂ ಹೇಳಲು ಸಾಧ್ಯವಾಗಲಿಲ್ಲ. ಬಳಿಕ ಪಕ್ಕದಲ್ಲಿಯೇ ಸಚಿವ ಜಮೀರ್ ಅಹ್ಮದ್ ಅವರ ಸಹಾಯ ದಿಂದ ಕನ್ನಡಲ್ಲಿಯೇ, ನಾನು ತಿನ್ನಲ್ಲ ತಿನ್ನವುದಕ್ಕೂ ಬಿಡುವುದಿಲ್ಲ ಎನ್ನುತ್ತಿದ್ದ ಪ್ರಧಾನಿ ನರೇಂದ್ರ ಮೋದಿ, ಈಗ ಭ್ರಷ್ಟಾಚಾರಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ. ರಫೆಲ್‍ನಂತಹ ದೊಡ್ಡಹಗರಣ ಇನ್ನೊಂದಿಲ್ಲ, ನೋಟ್ ಬ್ಯಾನ್‍ನಿಂದಾಗಿ ಸಾಮಾನ್ಯರಿಗೆ ಕಷ್ಟವಾಯಿತೇ ವಿನಃ ಕಳ್ಳಕಾಕರೆಲ್ಲಾ ಆರಾಮಾ ಗಿದ್ದಾರೆ ಎಂದು ಪ್ರಧಾನಿಗೆ ಟಾಂಗ್ ಕೊಟ್ಟರು.

‘ಜೆಡಿಎಸ್‍ಗೆ ಸಪೋರ್ಟ್; ಸ್ವಾಭಿಮಾನ ಬಿಟ್ಟೆವು ಅಂತಲ್ಲ’: ಕಾಂಗ್ರೆಸ್ ಕಾರ್ಯ ಕರ್ತರು ಏನೇ ಭಿನ್ನಾಭಿಪ್ರಾಯವಿದ್ದರೂ ಬದಿಗೊತ್ತಿ ಜೆಡಿಎಸ್ ಗೆಲುವಿಗೆ ಸಹಕರಿಸ ಬೇಕು. ನಾವೆಲ್ಲಾ ಸ್ವಾಭಿಮಾನಿಗಳೇ, ಜೆಡಿಎಸ್‍ಗೆ ಸಪೋರ್ಟ್ ಮಾಡಿದ ತಕ್ಷಣ ಸ್ವಾಭಿಮಾನ ಬಿಟ್ಟೆವು ಅಂತಲ್ಲ. ಮಂಡ್ಯದ ಕಾಂಗ್ರೆಸ್ ಕಾರ್ಯಕರ್ತರು ಅಸ್ತಿತ್ವ ಕಳೆದು ಕೊಳ್ಳಲ್ಲ. ಕಾಂಗ್ರೆಸ್ ಮೈತ್ರಿ ಮಾಡಿಕೊಂಡ ತಕ್ಷಣ ನಿರ್ನಾಮ ಆಗುತ್ತೆ ಅನ್ನೋದು ಸುಳ್ಳು ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ದೇವೇಗೌಡ-ಸಿದ್ದರಾಮಯ್ಯರ ನಡುವಿನ ಆಲಿಂಗನ ಧೃತರಾಷ್ಠ ಪ್ರೇಮವೆಂದಿದ್ದ ಬಿಜೆಪಿಯ ಆರ್.ಅಶೋಕ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, 2013ರಲ್ಲಿ ಯಡಿಯೂರಪ್ಪ ನಮ್ಮಪ್ಪನಾಣೆ, ಬಿಜೆಪಿಗೆ ಹೋಗಲ್ಲ ಅಂದಿದ್ರು. 2013ರಲ್ಲಿ ಶ್ರೀರಾಮುಲು ಎಲ್ಲಿದ್ದ? ಯಡಿಯೂರಪ್ಪ ಬಿಜೆಪಿ ಬಿಟ್ಟ ಮೇಲೆ ಪಕ್ಷ ಶುದ್ಧವಾಗಿದೆ ಎಂದು ಈಶ್ವರಪ್ಪ ಹೇಳಿರಲಿಲ್ವಾ.? ಬಿಜೆಪಿ ಯಲ್ಲಿ ಯಾರಾದರೂ ಸರಿಯಾಗಿ ದ್ದಾರಾ? ಎಂದು ವಾಗ್ದಾಳಿ ನಡೆಸಿದರು.

ಅಂದು ಅಂಬಿ… ಇಂದು ಮಾಜಿ ಸಿಎಂ ಸಿದ್ದು ಕಾಲಿಗೆ ಬಿದ್ದ ಎಲ್‍ಆರ್‍ಎಸ್

ಇತ್ತೀಚೆಗಷ್ಟೇ ಮಾಜಿ ಸಂಸದ ಅಂಬರೀಶ್ ಕಾಲಿಗೆ ಬಿದ್ದು ತಮ್ಮ ಪರ ಪ್ರಚಾರ ಮಾಡುವಂತೆ ಮನವಿ ಮಾಡಿಕೊಂಡಿದ್ದ ಜೆಡಿಎಸ್ ಅಭ್ಯರ್ಥಿ ಶಿವರಾಮೇಗೌಡರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಪ್ರಸಂಗ ನಗರದಲ್ಲಿಂದು ನಡೆಯಿತು.

ಮಂಡ್ಯದಲ್ಲಿ ಲೋಕಸಭೆಯ ಉಪಚುನಾವಣೆ ಪ್ರಚಾರ ಗರಿಗೆದರಿದ್ದು, ಇಂದು ಜಿಲ್ಲೆಯ ಸುರಭಿ ಹೋಟೆಲಿನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಪತ್ರಿಕಾ ಗೋಷ್ಠಿಯನ್ನು ಆಯೋಜಿಸಿದ್ದರು.

ಈ ಪತ್ರಿಕಾಗೋಷ್ಠಿಗೆ ಸಿದ್ದರಾಮಯ್ಯ ಅವರು ಆಗಮಿಸುತ್ತಿದ್ದಂತೆ ಇಂಡುವಾಳು ಸಚ್ಚಿ ನೇತೃತ್ವದ ಕಾರ್ಯಕರ್ತರು ಬೃಹತ್ ಹೂವಿನ ಮಾಲಾರ್ಪಣೆ ಮಾಡಿ ಸ್ವಾಗತಿಸಿದರು. ಈ ವೇಳೆ ಜೆಡಿಎಸ್ ಅಭ್ಯರ್ಥಿ ಶಿವರಾಮೇಗೌಡ ಅವರು ಸಿದ್ದರಾಮಯ್ಯ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು.

ಇತ್ತೀಚೆಗೆ ಶಿವರಾಮೇಗೌಡರು ಬೆಂಗಳೂರಿನ ಅಪಾರ್ಟ್ ಮೆಂಟ್‍ನಲ್ಲಿ ಮಾಜಿ ಸಚಿವ ಅಂಬರೀಶ್ ಅವರನ್ನು ಭೇಟಿ ಮಾಡಿ ಚುನಾವಣೆಯಲ್ಲಿ ತಮಗೆ ಸಹಕಾರ ನೀಡುವಂತೆ ಹಾಗೂ ಮಂಡ್ಯಕ್ಕೆ ಆಗಮಿಸಿ ತಮ್ಮ ಪರ ಪ್ರಚಾರ ಮಾಡುವಂತೆ ಮನವಿ ಮಾಡಿದ್ದರು.

ಈ ವೇಳೆ ಶಿವರಾಮೇಗೌಡ ಅವರು ಅಂಬರೀಶ್ ಅವರಿಗೆ ಶಾಲು, ಹಾರ ಹಾಕಿ ಸನ್ಮಾನ ಮಾಡಿ ಅವರ ಕಾಲಿಗೆ ಬಿದ್ದು, ಆಶೀರ್ವಾದವನ್ನು ಪಡೆದುಕೊಂಡಿದ್ದರು.

ಬದ್ಧ ವೈರಿಗಳ ಸಮಾಗಮಕ್ಕೆ ಸಾಕ್ಷಿಯಾದ ಸುದ್ದಿಗೋಷ್ಠಿ

ಮಂಡ್ಯದಲ್ಲಿಂದು ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸುದ್ದಿಗೋಷ್ಠಿಯ ಬದ್ದವೈರಿಗಳ ಸಮಾಗಮಕ್ಕೆ ಸಾಕ್ಷಿಯಾಯಿತು. ಜೆಡಿಎಸ್ ಅಭ್ಯರ್ಥಿ ನಾಗಮಂಗಲದ ಬದ್ದವೈರಿಗಳಾದ ಎಲ್.ಆರ್.ಶಿವರಾಮೇಗೌಡ ಜೊತೆ ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಮಾತುಕತೆ ನಡೆಸುತ್ತಿದ್ದುದು ಕಂಡು ಬಂತು.

ಜೆಡಿಎಸ್‍ನೊಂದಿಗೆ ಮೈತ್ರಿಗೆ ಮತ್ತು ಎಲ್.ಆರ್.ಶಿವರಾಮೇಗೌಡರಿಗೆ ಟಿಕೆಟ್ ನೀಡಿದ್ದಕ್ಕೆ ಎನ್.ಚಲುವರಾಯಸ್ವಾಮಿ ಅಪಸ್ವರ ಎತ್ತಿದ್ದರು. ಆದರೆ, ಇಂದು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು.

Translate »