ಶ್ರೀರಂಗಪಟ್ಟಣ: ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯಕ್ಕೆ ಮಹಿಳೆಯರ ಪ್ರವೇಶ ಮಾಡಬಹುದು ಎನ್ನುವ ಸುಪ್ರೀಂ ಕೋರ್ಟ್‍ನ ತೀರ್ಪಿನಿಂದ ಹಿಂದೂಗಳ ಭಾವನೆ ಹಾಗೂ ಭಾವೈಕ್ಯತೆಗೆ ಧಕ್ಕೆಯಾಗಿದೆ ಎಂದು ಆರೋಪಿಸಿ ಪಟ್ಟಣದಲ್ಲಿ ಬುಧವಾರ ಹಲವು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಜ್ಯೋತಿಷಿ ಡಾ.ಭಾನುಪ್ರಕಾಶ್ ಶರ್ಮಾ ಅವರ ನೇತೃತ್ವದಲ್ಲಿ ತಹಶೀಲ್ದಾರ್‍ಗೆ ಮನವಿ ಸಲ್ಲಿಸಿದರು.
ಜ್ಯೋತಿಷಿ ಡಾ.ಭಾನುಪ್ರಕಾಶ್ ಶರ್ಮಾ ಮಾತನಾಡಿ, ಕೇರಳ ಸರ್ಕಾರ ಸುಪ್ರೀಂ ಕೋರ್ಟ್ ತೀರ್ಪಿನಾದೇಶದ ಪ್ರಕಾರ 10ರಿಂದ 50ವರ್ಷ ವಯಸ್ಸಿನ ಮಹಿಳೆಯರಿಗೆ ಪ್ರವೇಶಾವಕಾಶ ನೀಡುವ ಮೂಲಕ ಧಾರ್ಮಿಕ ಪರಂಪರೆಗೆ ಪೆಟ್ಟುನೀಡಿದೆ. ಸನಾತನ ಕಾಲದಿಂದ ಆಚರಣೆಯಲ್ಲಿರುವ ಪದ್ಧತಿಯನ್ನು ವಿರೋಧಿಸುವುದರಿಂದ ಧರ್ಮಕ್ಕೆ ಧಕ್ಕೆಯಾಗಿದೆ. ಕೂಡಲೇ ಕೇರಳ ಸರ್ಕಾರ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಬೇಕು. ಮರುಪರಿಶೀಲನೆ ಅರ್ಜಿ ಹಾಕಬೇಕು. ಮಹಿಳೆಯರ ಪ್ರವೇಶ ನಿಷೇಧ ಮುಂದುವರಿ ಸಬೇಕು ಎಂದು ಒತ್ತಾಯಿಸಿದರು. ನ್ಯಾಯಾಲಯದ ತೀರ್ಪಿನ ಹೆಸರಿಲ್ಲಿ ದೇವಾಲಯಕ್ಕೆ ಮುಸ್ಲಿಂ ಹಾಗೂ ಕೈಸ್ತ ಮಹಿಳೆಯರೂ ಪ್ರವೇಶಿಸಲು ಹೊರಟ್ಟಿದ್ದಾರೆ. ಇದರಿಂದ ಹಿಂದೂಗಳ ಭಾವನೆಗೆ ಧಕ್ಕೆಯಾಗುತ್ತಿದೆ ಎಂದು ದೂರಿದ ಅವರು, ಸನಾತನ ಕಾಲದಿಂದ ಆಚರಣೆಯ ಲ್ಲಿರುವ ಪದ್ಧತಿಯನ್ನು ಕೇರಳ ಸರ್ಕಾರ ಮುಂದುವರಿಸಬೇಕು ಎಂದು ಒತ್ತಾಯಿಸಿದರು.
ಬಳಿಕ, ತಹಶೀಲ್ದಾರ್ ಡಿ.ನಾಗೇಶ್ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಈ ವೇಳೆ ಮುಖಂಡರಾದ ಗಿರೀಶ್, ಮದನ್ ರಾವ್, ಮಂಡ್ಯ ಕರವೇ ಜಿಲ್ಲಾಧ್ಯಕ್ಷ ಶಂಕರ್‍ಬಾಬು, ಬಿ.ಸಿ.ರವಿ, ದೀಕ್ಷಿತ್ ಇದ್ದರು.